ಸಹನೆ ಮತ್ತು ಮೌನ ಎಂಬಿವು ನಮ್ಮ ಮನಸ್ಸಿನೊಳಗಿನ ಎರಡು ಅತ್ಯಂತ ಪ್ರಬಲ ಶಕ್ತಿಗಳು. ಸಹನೆಯು ನಮ್ಮನ್ನು ಮಾನಸಿಕವಾಗಿ ಬಲಗೊಳಿಸಿದರೆ… ಮೌನವು ನಮ್ಮನ್ನು ಭಾವನಾತ್ಮಕವಾಗಿ ಬಲಶಾಲಿಯನ್ನಾಗಿ ಮಾಡುತ್ತದೆ. ಎಲ್ಲಾ ಕಾಲದಲ್ಲೂ ತಾಳ್ಮೆಯಿಂದ(ಸಹನೆಯಿಂದ) ಇರುವುದು ಅಷ್ಟೊಂದು ಸುಲಭವಲ್ಲ. ಸಹನೆ ಎನ್ನುವುದು ನಿರಂತರ ಪ್ರಯತ್ನದ ಮೂಲಕ ದೀರ್ಘಕಾಲದಲ್ಲಿ ಬೆಳೆಸಿಕೊಳ್ಳಬೇಕಾದ ಒಂದು ಸದ್ಗುಣ.
ಹಾಗೆಯೇ, ನಮ್ಮಲ್ಲಿ ಅನೇಕರಿಗೆ ಯಾವಾಗಲೂ ಮೌನವಾಗಿರುವುದು ಕೂಡ ಅಷ್ಟು ಸುಲಭವಲ್ಲ. ಏಕೆಂದರೆ ನಮ್ಮ ಸ್ವಭಾವವೇ ಮಾತನಾಡುವ ಪ್ರವೃತ್ತಿಯದ್ದು, ಹಾಗೂ ನಾವು ಮಾತನಾಡುತ್ತಲೇ ಇರುತ್ತೇವೆ. ನಮ್ಮೊಂದಿಗೆ ಸಂಭಾಷಣೆಯಲ್ಲಿರುವ ಮತ್ತೊಬ್ಬ ವ್ಯಕ್ತಿಗೆ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವನ್ನೇ ನೀಡುವುದಿಲ್ಲ.
ನಾವು ಸತತವಾಗಿ ಬಹಳ ಸಮಯದವರೆಗೆ (ಅಂದರೆ ಸಂಭಾಷಣೆಯ ಸಮಯದ ಶೇ. ೬೫ ರಿಂದ ೭೫ ರಷ್ಟು ಭಾಗ) ಮಾತನಾಡುತ್ತಾ ಹೋದರೆ, ಎದುರಿರುವ ವ್ಯಕ್ತಿಯಿಂದ ಹೊಸ ವಿಚಾರಗಳನ್ನು ಮತ್ತು ಹೊಸ ದೃಷ್ಟಿಕೋನಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ನಾವು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.
ಆದ್ದರಿಂದ, ನಾವು ಸಂಭಾಷಣೆ ನಡೆಸುವಾಗ ಕನಿಷ್ಠ ಶೇ. ೭೫ ರಷ್ಟು ಸಮಯ ಆಲಿಸುವುದು (ಕೇಳಿಸಿಕೊಳ್ಳುವುದು) ಮತ್ತು ಉಳಿದ ಶೇ. ೨೫ ರಷ್ಟು ಸಮಯ ಮಾತ್ರ ಉತ್ತರಿಸುವುದು (ಮಾತನಾಡುವುದು) ಅತ್ಯಂತ ಸೂಕ್ತ ಎಂಬುದು ನನ್ನ ಅನಿಸಿಕೆ .
ಜೀವನದಲ್ಲಿ ಕೆಲವೇ ಕೆಲವು ವ್ಯಕ್ತಿಗಳನ್ನು ನಾವು ಕಾಣಬಹುದು, ಅವರು ಸಂಭಾಷಣೆಯ ಶೇ. ೯೭ ರಿಂದ ೯೮ ರಷ್ಟು ಭಾಗ ಸಂಪೂರ್ಣವಾಗಿ ಮೌನವಾಗಿರುತ್ತಾರೆ. ಹಾಗೆಂದು, ಸಂಪೂರ್ಣವಾಗಿ ಮೌನವಾಗಿರುವುದು ಕೂಡ ಪರಿಣಾಮಕಾರಿ ಸಂವಹನದ ಉತ್ತಮ ಗುಣವಲ್ಲ. ಕೆಲವರು ಹುಟ್ಟಿನಿಂದಲೇ ಈ ಸಹನೆ ಮತ್ತು ಮೌನದ ಗುಣಗಳನ್ನು ತಮ್ಮ ಸಂಭಾಷಣೆಯ ಬಹುಪಾಲು ಭಾಗದಲ್ಲಿ ರೂಢಿಸಿ ಕೊಂಡಿರುತ್ತಾರೆ.
ಆದರೆ ನಮ್ಮಲ್ಲಿ ಹೆಚ್ಚಿನವರು ಈ ಒಳ್ಳೆಯ ಗುಣಗಳನ್ನು ಶ್ರಮಪಟ್ಟು ಬೆಳೆಸಿಕೊಳ್ಳಬೇಕಾಗಿದೆ. ಯಾವಾಗಲೂ ಸಂಪೂರ್ಣ ಮೌನವಾಗಿರುವುದು ಎಲ್ಲ ಸಂದರ್ಭಗಳಲ್ಲೂ ಪರಿಣಾಮಕಾರಿಯಾಗಲಾರದು. ಆದ್ದರಿಂದ, ಸಂದರ್ಭಕ್ಕೆ ತಕ್ಕಂತೆ ನಮ್ಮ ನಡವಳಿಕೆಯಲ್ಲಿ ದೃಢತೆಯನ್ನು (Assertiveness) ತೋರುವುದು ಕೂಡ ಅತ್ಯಗತ್ಯ. ಸಂದರ್ಭ ಬಂದಾಗ "ಇಲ್ಲ" (ಬೇಡ) ಎಂದು ಖಡಾಖಂಡಿತವಾಗಿ ಹೇಳುವ ಕಲೆಯನ್ನು ಕರಗತ ಮಾಡಿಕೊಳ್ಳಲು ಈ ದೃಢತೆ ಬಹಳಷ್ಟು ಅವಶ್ಯಕವಾಗಿದೆ.
ಬನ್ನಿ, ಇಂದಿನಿಂದಲೇ ಈ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಒಂದು ಸಣ್ಣ ಮುನ್ನುಡಿಯನ್ನು ಬರೆಯೋಣ.
ಸಹನೆ, ಛಲ / ಪರಿಶ್ರಮ, ಭಾಗಶಃ ಮೌನ
(ನಿಮ್ಮ ಸಂವಹನದಲ್ಲಿ ಸಂಪೂರ್ಣ ಮೌನವಲ್ಲ, ಬದಲಿಗೆ ನಿಯಂತ್ರಿತ ಮೌನವಿರಬೇಕು...ಆಗಲೇ ನಿಮ್ಮ ಮಾತು ಮುತ್ತಾಗುವುದು ಹಾಗೂ ನಿಯಂತ್ರಿತ ಮೌನವೇ ಬಂಗಾರ, ನನ್ನ ಪ್ರಕಾರ )
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!