“ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಇದು ಮಿಡಲ್ ಕ್ಲಾಸ್ ಜನರ ನೋವು-ನಲಿವು, ಆಸೆ-ಕನಸು, ಕಷ್ಟ-ಸುಖ, ಪ್ರತಿದಿನದ ಪರದಾಟ, ಜನರ ಜೀವನ ಶೈಲಿ, ನನಸಾಗದ ತಿರುಕನ ಕನಸಿನಂತಿರುವ ಆಸೆಗಳು, ಜನರ ಸ್ವಾಭಿಮಾನ, ನಿಸ್ವಾರ್ಥ ಹೃದಯ, ಮಿಡಲ್ ಕ್ಲಾಸ್ ಹುಡುಗ ಹುಡುಗಿಯರ ಪ್ರೀತಿಯ ವ್ಯಥೆ, ಕನಸು ಆಸೆಗಳು ಸೇರಿದಂತೆ ಅನೇಕ ವಿಚಾರಗಳು 'ಮಿಡಲ್ ಕ್ಲಾಸ್' ಜನರ ಬದುಕಿನ ಸುತ್ತ ಹೆಣದಿರುವ ಸುಂದರ ಲೇಖನಗಳ ಸಂಗ್ರಹವೇ ಈ ಪುಸ್ತಕ.
ಪುಸ್ತಕದ ಪ್ರತಿಪುಟವನ್ನು ತಿರುವಿದಾಗ ಲೇಖಕ ರಂಗನಾಥ್ ಚಿತ್ರದುರ್ಗ ತಮ್ಮ ಸಹಜ ಬರವಣಿಗೆ, ಸರಳ ಭಾಷೆ ಅದ್ಭುತ ವಿವರಣಾ ಶೈಲಿ, ವಿಚಾರ, ಅನುಭವದ ಮಾತುಗಳ ಮೂಲಕ ಪ್ರತಿ ಓದುಗನ ಬದುಕಿಗೆ ಬಹಳ ಬೇಗ ಹತ್ತಿರವಾಗಿ ಬಿಡುತ್ತಾರೆ. ಬದುಕಿನಲ್ಲಿ ನೀವು ಕುಗ್ಗಿ ಕೂತಾಗ ಸಂತೈಸುವ ಸ್ನೇಹಿತನಾಗಿ, ಮೊಗದಲ್ಲಿ ಕಿರುನಗೆಯನ್ನು ತರಿಸುವ ಆಪ್ತನಾಗಿ, ಜೀವನದ ಮೋಟಿವೇಟರ್ , ಗೆಳೆಯ, ಮತ್ತು ಆತ್ಮೀಯನಾಗಿ ಉದಾಹರಣೆಗಳ ಸಹಿತವಾಗಿ ವಿವರಣೆ ಮತ್ತು ವಿಶಿಷ್ಟ ಬರವಣಿಗೆ , ಲೇಖನಗಳ ಮೂಲಕ ಅತಿ ಬೇಗನೆ ನಿಮ್ಮ ಮನಸ್ಸಿಗೆ ಮತ್ತು ಬದುಕಿಗೆ ಹತ್ತಿರವಾಗುತ್ತಾರೆ.
ಈ ಪುಸ್ತಕದಲ್ಲಿ ಎಲ್ಲಾ ಲೇಖನಗಳು ಒಂದನ್ನು ಮತ್ತೊಂದು ಮೀರಿಸುವಂತೆ ಇದೆ. ಅದರಲ್ಲೂ 'ಒಂದೇ ಲುಕ್ಕಿಗೆ ಬಿದ್ದರೆ ಹೇಗೆ'.?, 'ಡೆಡ್ ಲವ್', 'ತಿಥಿ ಊಟ ಮತ್ತು ಅವಳು', 'ಹಣೆ ಬರಹದ ಮೇಲೆ ಭಾರ ಹಾಕಬೇಡಿ' ಮತ್ತು ' 'ಲೈಫ್ ನಲ್ಲಿ ರಿಸ್ಕ್ ತಗೋಬೇಕು' ಎನ್ನುವ ಈ ಐದು ಲೇಖನಗಳು ವಿಶೇಷವಾಗಿ ಓದುಗನ ಮನಸಿನ ಕದವನ್ನು ಕಡಲ ಅಲೆಯಂತೆ ತಟ್ಟುತ್ತವೆ.
ಈ ಪುಸ್ತಕದಲ್ಲಿ ಬಂದು ಹೋಗುವ ವೆಂಕಟ್ ಸುಬ್ಬಿ, ಚರಣ್, ಪಾಪಣ್ಣ, ಕುಶಾಲ್, ಮನೋಜ, ಕೃಷ್ಣ, ಸಣ್ಣಜ್ಜಿ, ನಿವೇದಿತಾ, ನವೀನ, ಸಮೀರ್ ಈ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕವೋ ಅಥವಾ ನಿಜವೋ ಗೊತ್ತಿಲ್ಲ! ಆದರೆ ಈ ಪ್ರತಿ ಪಾತ್ರಗಳು ಬದುಕಿಗೊಂದು ಹೊಸ ಪಾಠವನ್ನು ಕಲಿಸಿಕೊಡುತ್ತೆ. ನಮ್ಮ ಸುತ್ತಮುತ್ತಲಿನ ನೋವುಗಳನ್ನು, ನೈಜತೆಯನ್ನು ಸಾರುತ್ತದೆ. ಮುಖ್ಯವಾಗಿ ಪಾತ್ರಗಳು ನಮ್ಮ ಸುತ್ತಮುತ್ತಲೇ ಇರುವಂತೆ ಖಂಡಿತವಾಗಿಯೂ ನಿಮಗೆ ಭಾಸವಾಗುತ್ತದೆ ಎಂದರೆ ತಪ್ಪಾಗಲಾರದು. ಪುಸ್ತಕದಲ್ಲಿ ಲೇಖಕರು ವಿವರಿಸಿರುವ ಕೆಲವು ಘಟನೆಗಳು ನಿಮ್ಮನ್ನ ನಗಿಸಿ ಮತ್ತೊಮ್ಮೆ ಮೌನವಾಗಿಸಿ ಹಾಗೂ ನಮ್ಮ ಬದುಕಿನ ಕಹಿ ವಾಸ್ತವವನ್ನು ಹೊರ ಹಾಕುತ್ತಾ ಮೊದಲ ಪುಟದಿಂದ ಕೊನೆತನಕ ಓದಿಸಿಕೊಂಡು ಹೋಗುತ್ತದೆ.
ಪುಸ್ತಕವನ್ನು ಓದುತ್ತಿರುವಾಗ ಯಾರೋ ನಮ್ಮದೇ ಬದುಕಿನ ಕಥೆಗಳಿಗೆ ಅಕ್ಷರ ರೂಪ ನೀಡಿ ಬರೆದಿದ್ದಾರೆ, ಲೇಖಕರು ನಮ್ಮ ಬದುಕಿನ ಕಥೆಯನ್ನೇ ಪುಸ್ತಕದ ಮೂಲಕ ವಿವರಿಸಿದ್ದಾರೆ ಅನಿಸುತ್ತದೆ. ಆದ್ದರಿಂದ ನಿಮ್ಮ ಬದುಕಿನ ಕಥೆಯನ್ನ ನೀವೇ ಓದುವುದಕ್ಕೆ ಸಿದ್ಧವಿದ್ದರೆ,ನೀವು ಕೂಡ ಮಿಡಲ್ ಕ್ಲಾಸ್ ಬದುಕಿನಲ್ಲಿ ಜೀವಿಸುತ್ತಿದ್ದರೆ ''ಮಿಡಲ್ ಕ್ಲಾಸ್ ಮೇನಿಯಾ '' ಈ ಪುಸ್ತಕ ನಿಮಗಾಗಿ!” ಈ ಮುನ್ನುಡಿಯನ್ನು ಬರೆದದ್ದು ಕವನಾ ಚಾರ್ಮಾಡಿ. ೧೨೨ ಪುಟಗಳ ಈ ಪುಸ್ತಕವು ಸೊಗಸಾದ ಸಣ್ಣ ಓದಿಗೆ ಸಹಕಾರಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!