ಮೂರನೇ ಬೋಗಿ

ವಿದುಷಿ, ಲೇಖಕಿ ರಂಜಿನೀ ಕೀರ್ತಿ ಅವರು ಬರೆದ ʻಮೂರನೇ ಬೋಗಿʼ ಕಥಾ ಸಂಕಲನವು ಸರಳ ಭಾಷೆ, ವಿಶಿಷ್ಟ ಕಥಾವಸ್ತು ಹಾಗೂ ಹಿನ್ನಲೆಯೊಂದಿಗೆ ಗಮನ ಸೆಳೆದಿದೆ. ಇಲ್ಲಿನ ಅವರ ಕಥೆಗಳಲ್ಲಿ ಸಂಗೀತವಿಲ್ಲದಿದ್ದರೂ ಎಲ್ಲೂ ಶೃತಿ ತಪ್ಪದಂತೆ ಕಥೆ ಬರೆವ ಕೌಶಲ್ಯ ಅವರಿಗೆ ಸಿದ್ಧಿಸಿರುವುದನ್ನು ಸಾಬೀತುಪಡಿಸುತ್ತವೆ ಎನ್ನುತ್ತಾರೆ ಖ್ಯಾತ ಗೀತ ರಚನೆಕಾರ ಕವಿರಾಜ್. ಅವರು ಕೃತಿಗೆ ಬರೆದ ಮುನ್ನುಡಿ ಸಾಲುಗಳು ನಿಮ್ಮ ಓದಿಗಾಗಿ ಹೀಗಿದೆ:

“ಕಥೆಗಾರ್ತಿ ರಂಜನಿ ಕೀರ್ತಿ ಅವರು ನನಗೆ ತಿಳಿದಂತೆ ಸಂಗೀತ ವಿದುಷಿ. ಅವರ ಹಿಂದಿನ ಕಾದಂಬರಿ 'ಪಸಾ' ನನಗೆ ಅಚ್ಚರಿಯ ಜೊತೆ ಮೆಚ್ಚುಗೆಯಾದ ತುಂಬಾ ವಿಶಿಷ್ಟ ಪ್ರಯತ್ನ. ಸಂಗೀತವನ್ನೇ ಹಿನ್ನೆಲೆಯಾಗಿಟ್ಟು, ಅದರ ಸ್ವರ, ರಾಗಗಳನ್ನೇ ಕ್ಯೂ ಆಗಿಟ್ಟುಕೊಂಡು ಸಸ್ಪೆನ್ಸ್ ಭೇದಿಸುತ್ತಾ ಹೋಗುವ ಕಥೆ. ಅಲ್ಲಿ ಅವರಿಗಿದ್ದ ಅದ್ಭುತ ಸಂಗೀತ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಕಥೆ ಹೆಣೆದ ಪರಿ ನಿಜಕ್ಕೂ ಅನನ್ಯ.

ಇಲ್ಲಿನ ಅವರ ಕಥೆಗಳಲ್ಲಿ ಸಂಗೀತವಿಲ್ಲದಿದ್ದರೂ ಎಲ್ಲೂ ಶೃತಿ ತಪ್ಪದಂತೆ ಕಥೆ ಬರೆವ ಕೌಶಲ್ಯ ಅವರಿಗೆ ಸಿದ್ಧಿಸಿರುವುದನ್ನು ಸಾಬೀತುಪಡಿಸುತ್ತವೆ. ಇವರ ಕಥೆಗಳು ಕೆಲವೊಮ್ಮೆ ಸಂಜೆಯ ಏಕಾಂತದಲ್ಲಿ ಕೂತು ಕೇಳಿದ ಘಜಲ್ ಹಾಗೇ, ಧ್ಯಾನಕ್ಕೆ ಕೂತು ತನ್ಮಯತೆಯಿಂದ ಕೇಳಿದ ಕೀರ್ತನೆಯ ಹಾಗೇ, ಮನಮುಟ್ಟೋ ಪ್ರೇಮಗೀತೆಯಂತಾ ಅನುಭವ ನೀಡುತ್ತವೆ.

ಏನೇ ಕೆಲಸ ಮಾಡೋರಾಗಲಿ ಒಬ್ಬೊಬ್ಬರಿಗೆ ಅವರದೇ ಆದ ಒಂದು ಶೈಲಿ ಇರುತ್ತೆ. ಬಹುಶಃ ರಂಜನಿ ಕೀರ್ತಿ ಅವರ ಶೈಲಿಯೆಂದರೆ; ಎಲ್ಲೆಲ್ಲೋ ಏರಿಳಿದು, ಏನೇನೋ ಭಾವಗಳ ಅಲೆಯ ಮೇಲೆ ತೇಲಾಡಿಸಿ ಬರುವ ಕಥೆಯ ಕೊನೆಯಲ್ಲೊಂದು ವಾಕ್ಯವಿರುತ್ತದೆ. ಬಹುತೇಕ ಅದು ಎರಡು ಮೂರು ಪದಗಳಷ್ಟೇ ಇರುವ ಪುಟ್ಟ ಸಾಲು, ಕೆಲವೊಮ್ಮೆ ಅದು ಸಾಲು ಕೂಡಾ ಅಲ್ಲಾ, ಕೇವಲ ಒಂದೇ ಪದ. ಆದರೆ ಇಡೀ ಕಥೆಯ ನೂರಾರು ಸಾಲುಗಳ ಆತ್ಮ ಅಲ್ಲೇ ಅಡಗಿರುತ್ತದೆ. ಕಡೆಯ ಅದೊಂದು ಪುಟ್ಟ ಸಾಲು ಅಥವಾ ಪದ ಇಡೀ ಕತೆಯನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದುಬಿಡುತ್ತದೆ.

...... ರಾಜಮ್ಮ ನಡೆಯುತ್ತಿದ್ದರು ಒಬ್ಬರೇ.

ಮರುದಿನದಿಂದ ಇಬ್ಬರಿಗಾಗಿ ಕಾದಳು

ದೂರ ಬಲು ದೂರ

ಅದು.. ಶುಭಕರ ಹದಿನಾರು ಅಂದಳು

ಹತ್ತು ಕೊಡುವೆ ಅಂದೆ

ನಿರುದ್ವಿಗ್ನನಾಗಿ ಕೂಗಿದ ಕೇದಾರ್

ಈ ಮೇಲಿನ ಒಂದೊಂದು ಸಾಲು, ಇಲ್ಲಿನ ಬೇರೆ ಬೇರೆ ಕಥೆಯ ಕೊನೆ ಸಾಲುಗಳು. ಇಲ್ಲಿ ಸಾಮಾನ್ಯ ಸಾಲುಗಳು ಅನಿಸಿದರೂ ಕಥೆಯ ಕೊನೆಯಲ್ಲಿ ಅಗಾಧ ವಿಷಾದ, ಅಚ್ಚರಿ, ಪ್ರೀತಿಯಂತಹ ಹಲವು ಭಾವಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡು ಧೀರ್ಘ ನಿಟ್ಟುಸಿರು ತರಿಸುವಂತ ಭಾವಕೋಶಗಳು. ಪುಟ್ಟ ಸಾಲುಗಳ ಅಗಾಧ ಭಾವಸ್ಪೋಟವನ್ನು ಇಡೀ ಕಥೆ ಓದಿಯೇ ಸವಿಯಬೇಕು.

`ಎಲ್ಲ ಕೇಳಲಿ ಎಂದು' ಕಥೆಯ ಕರ್ಣ, ನಿರಂಜನ, 'ಚುಕ್ಕಾಪಿಲ್ಲ' ಕಥೆಯ ಚಂದದ ಹುಡುಗ ವಿಕ್ಟರ್, 'ಸಂಜೆ ನಡಿಗೆ'ಯ ರಾಜಮ್ಮ, 'ಬಹುಪrock' ಸುಬ್ಬಣ್ಣ, ತುರ್ತು ನಿಗಾದ ಗೋಪಣ್ಣ, ಮೂರನೇ ನಂಬರ್ ಬೋಗಿಯ ಹೆಸರಿಲ್ಲದ ಹುಡುಗ ಹುಡುಗಿ, 'ಫ್ಲೋರ್ ನಂಬರ್ ಹದಿನಾರ'ರ ಸಾಮಂತ ಪಾತ್ರಗಳು ಕಥೆ ಓದಿ ಮುಗಿದ ಮೇಲೂ ಮನಸಲ್ಲಿ ಉಳಿದು ಕಾಡುತ್ತವೆ.

'ಆಕೂ ವಾಕೂ' ಕಥೆಯ ವಾಣಿ ತೊಳಲಾಟಗಳಿಂದ ಹೊರಬಂದು ತೋರುವ ಇನ್ನೊಂದು ಮುಖ ಖುಷಿ ಕೊಟ್ಟರೆ, ಚುಕ್ಕಾ ಪಿಲ್ಲದ ವರಮೂ ಹಾಗೆ ಮಾಡಬಾರದಿತ್ತು ಅನಿಸುತ್ತೆ.

ಯಾರಿಗೂ ಗೊತ್ತಿಲ್ಲದೆ ನಶಿಸಿ ಹೋದ 'ಸುವರ್ಣಗಂಧ' ವೆಂಬ ಸಾಮ್ರಾಜ್ಯ, ಹಾಡುವ ಕಲ್ಲು ಮುಂತಾದ ವಿಶೇಷ ಟಿಪ್ಪಣಿಗಳು ಅಚ್ಚರಿ ಹುಟ್ಟಿಸುತ್ತವೆ.

ತಾನು ಹೇಳ ಹೊರಟಿರುವ ಕಥೆಯ ಹಾದಿಯ ಬಗ್ಗೆ ರಂಜನಿ ಅವರಿಗೆ ನಿಖರತೆ ಇದೆ. ಪುಟ್ಟ ಪುಟ್ಟ ವಿವರಗಳನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಾ ಅದನ್ನು ಓದುಗನ ಮನದ ಪರದೆಯಲ್ಲಿ ದೃಶ್ಯವಾಗಿಸಿಕೊಳ್ಳಲು ಇಂಬು ನೀಡುತ್ತಾರೆ. ಇವರು ಕಟ್ಟಿಕೊಡುವ ರೂ ಸೇಂಟ್ ಅವೆನ್ಯೂ ರಸ್ತೆಯ ಚಿತ್ರಣದ ಮೇಲೆ ನಮಗೂ ಲವ್ ಆಗಿ ಒಮ್ಮೆಯಾದರೂ ಅಲ್ಲಿ ಅಲೆದಾಡಬೇಕು ಎನಿಸುತ್ತದೆ.

ಸಂಗ್ರಹಾಲಯದಲ್ಲಿ ತನ್ನಿಡೀ ಜೀವನ ಪ್ರವಾಸಿಗಳಿಗೆ ಹಾಡುವ ಕಲ್ಲಿನ ಬಗ್ಗೆ ತಾನು ಹೇಳಿದ್ದರ ಸತ್ಯಾಸತ್ಯತೆ ಅರಿವಾದಾಗ ಅಪರಾಧಿ ಮನೋಭಾವದಲ್ಲಿ ತೊಳಲಾಡುವ ಗೈಡ್‌ ಸುಬ್ಬಣ್ಣನ ನೈತಿಕತೆ, ಹೊಣೆಗಾರಿಕೆ ಮನ ಮುಟ್ಟುತ್ತದೆ. ಸಮಾಜದಲ್ಲಿ ಈಗಲೂ ಇಂತಾ ಕೋಟ್ಯಾಂತರ ಕಟ್ಟು ಕಥೆಗಳನ್ನು ಕಟ್ಟಿಯೇ, ವಂಚಿಸಿಯೇ ಬದುಕುವವರ ಆತ್ಮಸಾಕ್ಷಿ ಯಾವತ್ತಾದರೂ ಹೀಗೆ ಜಾಗೃತಗೊಂಡು ಪರಿವರ್ತನೆಯೆಡೆಗೆ ಸಾಗಬಾರದೇ ಎಂಬ ಆಶಯ ಕುಡಿಯೊಡೆಸುವುದು ಕಥೆ ಮತ್ತು ಕಥೆಗಾತಿಯ ಸಾರ್ಥಕತೆ.

ಒಟ್ಟಾರೆ ಒಂದೊಂದು ಕಥೆಯೂ ವಿಭಿನ್ನ. ವಿಶಿಷ್ಟ ಕಥಾವಸ್ತು ಮತ್ತು ಹಿನ್ನೆಲೆಯೊಂದಿಗೆ ಗಮನ ಸೆಳೆಯುತ್ತವೆ. ಸರಳ ಭಾಷೆ, ಚಂದದ ವಿವರಣೆಯೊಂದಿಗಿನ ಕಥೆಗಳ ಓಘ, ತಣ್ಣಗೆ ಹರಿವ ನದಿಯಷ್ಟೇ ಚೇತೋಹಾರಿಯಾದ ಬರಹದ ಶೈಲಿಯ ರಂಜನಿ ಕೀರ್ತಿ ಅವರ ಈ ಪುಸ್ತಕದ ಓದು ಅಪ್ಯಾಯಮಾನ ಎನಿಸುವುದು ಖಚಿತ."