‘ಮಲೆನಾಡಿನ ರೋಚಕ ಕತೆಗಳು’ ಸರಣಿಯ ೧೪ನೇ ಪುಸ್ತಕ -’ಮೂರು ತಲೆಮಾರು’. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾಯರು ಹೊಸ ಕತೆಯೊಂದನ್ನು ಮಲೆನಾಡಿನ ಸುಂದರ ಪರಿಸರದ ಹಿನ್ನಲೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಈ ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರ ಕಾವೇರಿ ಎನ್ನುವ ಅಡುಗೆ ಕೆಲಸ ಮಾಡುವ ಮಹಿಳೆ. ಇಲ್ಲಿ ಆಕೆಯ ಮೂರು ತಲೆಮಾರಿನ ನೆನಪುಗಳನ್ನು ಬಹಳ ಸೊಗಸಾಗಿ ವರ್ಣನೆ ಮಾಡಿದ್ದಾರೆ. ಆಕೆಯ ಬಾಲ್ಯದ ಕಷ್ಟದ ದಿನಗಳು, ಸಣ್ಣ ಪ್ರಾಯದಲ್ಲಾದ ಮದುವೆ ನಂತರ ಮಗು, ಸಣ್ಣ ಪ್ರಾಯದಲ್ಲೇ ವಿಧವಾ ಯೋಗ, ಬೇರೆಯವರ ಮನೆಯಲ್ಲಿ ಅಡಿಗೆಯಾಳಾಗಿ ದುಡಿಮೆ… ಹೀಗೆ ಕಷ್ಟದ ದಿನಗಳನ್ನೇ ಕಂಡ ಕಾವೇರಿ ನಂತರ ಸ್ವ ಸಾಮರ್ಥ್ಯದಿಂದ ತನ್ನ ಮಗನನ್ನು ಬೆಳೆಸುತ್ತಾಳೆ. ಉತ್ತಮ ವಿದ್ಯಾಭ್ಯಾಸ ಪಡೆದು ಬೆಳೆದು ನಿಂತು ಉತ್ತಮ ಕೆಲಸವನ್ನು ಸಂಪಾದಿಸಿದ ಮಗನಿಂದಾದರೂ ನೆಮ್ಮದಿಯ ಬಾಳು ಪಡೆಯುತ್ತಾಳೆ ಎಂದು ಊಹಿಸಿದರೆ ಅದೂ ತಪ್ಪಾಗುತ್ತದೆ. ಮಗ ತನ್ನವನೇ ಅದರೂ ಬಂದ ಸೊಸೆ ತನ್ನನ್ನು ಅಮ್ಮನಂತೆ ಆದರಿಸದೇ ಇದ್ದಾಗ ಮೌನವಾಗಿ ಅಲ್ಲಿಂದ ಹೊರಬರುತ್ತಾಳೆ. ಮಗನ ಮಗಳು ಅಂದರೆ ಮೊಮ್ಮಗಳ ಪ್ರೀತಿಯನ್ನು ಗಳಿಸಲೂ ಸೊಸೆ ಬಿಡುವುದಿಲ್ಲ. ತನ್ನಷ್ಟಕ್ಕೇ ನಿರ್ಲಿಪ್ತವಾಗಿ ಬದುಕುವ ಕಾವೇರಿಗೆ ನೋವು, ಸಂಕಟ, ದುಃಖ ಯಾವುದೂ ಹೊಸತ್ತಾಗಿರುವುದಿಲ್ಲ. ನೊಂದ ಜೀವಕ್ಕೆ ಮತ್ತೊಂದು ಹೊಡೆತ ಎಂಬಂತೆ ಕಾವೇರಿಯ ಪ್ರೀತಿಯ ಮೊಮ್ಮಗಳು ಚೈತ್ರ ತಾನು ಪ್ರೀತಿಸಿದ ಅನ್ಯ ಧರ್ಮೀಯ ಯುವಕನನ್ನು ಮದುವೆಯಾಗಿ ಮನೆಯಿಂದ ಹೊರಗೆ ಬರುತ್ತಾಳೆ. ಆದರೆ ಆಕೆ ಮದುವೆಯಾದ ಮುಸ್ಲಿಂ ಮನೆಯ ಆಚಾರ ವಿಚಾರಗಳಿಂದ ವಿಚಲಿತಳಾಗಿ, ಅಲ್ಲಿ ಬಾಳು ಸಾಧ್ಯವಿಲ್ಲವೆಂದು ತಿಳಿದು ಆ ಯುವಕನಿಂದ ಡೈವೋರ್ಸ್ ಪಡೆದುಕೊಂಡು ಅಮೇರಿಕ ಹೋಗುತ್ತಾಳೆ. ಆರು ವರ್ಷಗಳ ನಂತರ ಹಿಂದೆ ಮರಳಿ ಬಂದಾಗ ಆಕೆಗೆ ಇದ್ದ ಒಂದೇ ನಂಬಿಕೆ ಎಂದರೆ ಅಪ್ಪ ಅಮ್ಮ ನನ್ನನ್ನು ಮನೆಯೊಳಗೆ ಕರೆಯದಿದ್ದರೂ ಅಜ್ಜಿ ಕರೆಯುತ್ತಾಳೆ ಎಂದು.
ತಮ್ಮ ‘ಮೂರು ತಲೆಮಾರು’ ಕಾದಂಬರಿಯ ಬಗ್ಗೆ ಮುನ್ನುಡಿಯಲ್ಲಿ ಗಿರಿಮನೆ ಶ್ಯಾಮರಾಯರು ಬಹಳ ಚೆನ್ನಾಗಿ ಬರೆದಿದ್ದಾರೆ. ಅವರು ಬರೆಯುತ್ತಾರೆ… “ತಲೆಮಾರು ಎಂದರೆ ಒಬ್ಬ ವ್ಯಕ್ತಿಯ ಜೀವಿತಾವಧಿಯ ಅಳತೆಗೋಲಲ್ಲ. ಒಂದು ಪೀಳಿಗೆ ಅಷ್ಟೆ ಸುಮಾರು ಒಂದೇ ವಯಸ್ಸಿನವರು ತಮ್ಮ ಮೂವತ್ತು ವರ್ಷದ ಆಸುಪಾಸಿನಲ್ಲಿ ಮಕ್ಕಳಿಗೆ ಜನ್ಮ ನೀಡಿದರೆ ನಂತರದ ಕಾಲವನ್ನು ಅವರ ಮಕ್ಕಳ ಪೀಳಿಗೆ ಎಂದು ಕರೆಯಬೇಕಾಗುತ್ತದೆ. ಒಬ್ಬ ವ್ಯಕ್ತಿ ತೊಂಭತ್ತು ವರ್ಷ ಬದುಕಿದರೆ ಅವನು ತನ್ನದೂ ಸೇರಿ ಮೂರು ತಲೆಮಾರನ್ನು ಕಂಡಿರುತ್ತಾನೆ. ಅದನ್ನೇ ಇಂಗ್ಲೀಷಿನಲ್ಲಿ ಜನರೇಷನ್ ಎನ್ನುವುದು. ಬದಲಾವಣೆಗಳನ್ನು ನೋಡುತ್ತಾ ವ್ಯಕ್ತಿ ಆಯಾಕಾಲಕ್ಕೆ ಹೊಂದಿಕೊಂಡರೆ ಪ್ರಬುದ್ಧತೆ ಮೂಡುತ್ತದೆ. ಅದಿಲ್ಲದೆ ಹೋದರೆ ತನ್ನ ಬದುಕಿನ ಕೊನೆಗಾಗುವಾಗ ತಾನೆಲ್ಲಿ ನಿಂತಿರುತ್ತಾನೋ ಅಲ್ಲೇ ಇದ್ದು 'ಜನರೇಷನ್ ಗ್ಯಾಪ್' ನಿರ್ಮಾಣವಾಗಿರುತ್ತದೆ. ಆಯಾಕಾಲಕ್ಕೆ ಹೊಂದಿಕೊಂಡರೆ ಗ್ಯಾಪ್ ಕಾಣಿಸದೆ ವ್ಯತ್ಯಾಸದೊಂದಿಗೇ ಮಿಳಿತವಾಗಿ ಬದುಕು ಸಾಗುತ್ತದೆ. ಅದಕ್ಕೆ ನಮ್ಮ ಸುತ್ತಲಿನ ವಾತಾವರಣ, ನಮಗೆ ಸಿಕ್ಕಿದ ಬದುಕು, ತಿಳಿಯಬೇಕೆಂಬ ನಮ್ಮ ಹಂಬಲ, ಅನಿವಾರ್ಯತೆ ಎಲ್ಲವೂ ಕಾರಣವಾಗಿರುತ್ತದೆ.
ಏರಿಳಿತಗಳ ಬದುಕು ನಮ್ಮದು. ಯಾರಿಗೆ, ಯಾವಾಗ ಏನಾಗುತ್ತದೋ ಎಂದು ಯಾವ ಜ್ಯೋತಿಷಿಗೂ ಹೇಳಲು ಸಾಧ್ಯವಿಲ್ಲ. ನಮಗೆ ಸಿಕ್ಕಿದ ಬದುಕನ್ನು ಹೇಗೆ ಸುಂದರವಾಗಿಸಬಹುದು ಎನ್ನುವುದನ್ನೇ ನಾವು ನೋಡಬೇಕಾದ್ದು. ೧೯೭೩-೭೪ರಲ್ಲಿ ಸರಕಾರ "ಉಳುವವನಿಗೇ ಭೂಮಿ' ಎಂಬ ಕಾನೂನು ಜಾರಿಗೆ ತಂದಾಗ ಬಹಳಷ್ಟು ಜನರ ಬದುಕು ಏರುಪೇರಾದವು. ಅದರ ಪರಿಣಾಮ ದ.ಕನ್ನಡದಲ್ಲೇ ಹೆಚ್ಚು. ಆಗೆಲ್ಲಾ ಅಲ್ಲಿ ಸಾವಿರ, ಒಂದೂವರೆ ಸಾವಿರ ಎಕರೆಯವರೆಗೆ ಕೆಲವೇ ಜಮೀನ್ದಾರರ ಒಡೆತನವಿತ್ತು. ಭತ್ತದ ಬೆಳೆಯೇ ಪ್ರಧಾನ.
ಕೆ.ಜಿ.ಲೆಕ್ಕ ಬರುವ ಮೊದಲು ಮುಡಿಲೆಕ್ಕದಲ್ಲಿ ಭತ್ತವನ್ನು ಅಳತೆ ಮಾಡಲಾಗುತ್ತಿತ್ತು. ಒಂದು ಮಟ್ಟಿಗೆ ಅದು ಆಗ ದ.ಕನ್ನಡದಲ್ಲಿ ನಡೆದ ಕ್ರಾಂತಿಯೇ. ಅಲ್ಲಿದ್ದ ದೊಡ್ಡ ಜಮೀನ್ದಾರಿಕೆ ಕೊನೆಗೊಂಡು ಜಮೀನು, ಗೇಣಿದಾರರಿಗೂ ಹಂಚಿಕೆಯಾಗಿ ದುರ್ಲಭವಾದ ಜಮೀನಿನ ಒಡೆತನ ಉಳುವವನಿಗೆ ಸುಲಭವಾಗಿ ಒದಗಿ ಬಂತು. ಆಕಾಶದಲ್ಲಿದ್ದವರು ತಳ ಸೇರಿದಾಗ ತಮಗಿನ್ನು ಬದುಕೇ ಇಲ್ಲ ಎಂದು ಕೆಲವರು ತಪ್ಪಾಗಿ ಭಾವಿಸಿದರೆ ಮತ್ತೆ ಕೆಲವರು ಹೊಸ ಬದುಕಿಗೆ ತಮ್ಮನ್ನು ತಾವು ತೆರೆದುಕೊಂಡರು. ಒಂದು ಮಟ್ಟಕ್ಕೆ ಸಮಾನತೆ ಎಲ್ಲರ ಮನಸ್ಸಿನಲ್ಲೂ ಮೂಡತೊಡಗಿ ಅಲ್ಲಿಂದ ಮುಂದೆ ಎಲ್ಲಾ ಜಾತಿಯ ಜನಗಳಿಗೂ ಬದುಕಿನ ಅವಕಾಶ ತೆರೆದುಕೊಂಡಿತು. ಆದರೂ ಅಲ್ಲಿನ ಮೂಲನಿವಾಸಿಗಳಾದ ಕೊರಗರಂಥಾ ಜನಾಂಗದವರಿಗೆ ಜಮೀನು ಸಿಗಲಿಲ್ಲ. ವ್ಯಾಪಾರ ವ್ಯವಹಾರದಲ್ಲೂ ಅವರಿಗೆ ತಮ್ಮನ್ನು ತೊಡಗಿಸಿಕೊಳ್ಳಲಾಗಲಿಲ್ಲ. ಕಷ್ಟಸಹಿಷ್ಣುಗಳಾದ ಅವರಲ್ಲಿ ಬಹಳಷ್ಟು ಜನ ಘಟ್ಟಹತ್ತಿ ಕೂಲಿಯನ್ನೇ ಗಟ್ಟಿಯಾಗಿ ಆರಿಸಿಕೊಂಡು ಬಿಟ್ಟರು. ಅವರು ಮೇಲೇಳುವ ಪ್ರಯತ್ನವನ್ನೇ ನಡೆಸಲಿಲ್ಲ. ಹಾಗಾಗಲು ಉಳಿದ ಜಾತಿಗಳವರು ಅವರನ್ನು ತಳ್ಳಲು ನೋಡಿದರು ಎನ್ನುವುದೂ ಒಂದು ಕಾರಣ ಅಷ್ಟೆ, ಅದರ ಜೊತೆಗೆ ಅವರ ಕುಡಿತದ ಚಟ ಮತ್ತು ತಲೆ ತಲಾಂತರದಿಂದಲೂ ತಾವು ಕೆಳಗಿನವರು ಎಂಬ ಮನಸ್ಸಿನೊಳಗೇ ಕುಳಿತ ಕೀಳರಿಮೆ ಭಾವವೇ ಕಾರಣ. ಅದು ಯಾವ ಪ್ರಯೋಜನಕ್ಕೂ ಬಾರದ ಆಮಿಷದ ಮತಾಂತರಕ್ಕೂ ಕಾರಣವಾಯಿತು. ಈಗಲೂ ಸರಕಾರದಿಂದ ಕೊಡುವ ಸವಲತ್ತುಗಳು ಕೆಲವರಲ್ಲಿ ಸ್ವಲ್ಪ ಚೈತನ್ಯ ತುಂಬಿ ಅಪರೂಪದಲ್ಲಿ ಕೆಲವರಿಗೆ ವಿದ್ಯೆ ಸಿಗುತ್ತಿದೆ. ಬುದ್ದಿ ಎಲ್ಲರಂತೆ ಇದ್ದರೂ ಮೇಲೇಳಲು ಸರಕಾರೀ ಸವಲತ್ತುಗಳಿಗಿಂತ ಕುಡಿತ ಬಿಡುವುದು ಮತ್ತು ವಿದ್ಯೆ ಎಂಬ ಅಮೂಲ್ಯ ಸಂಪತ್ತು ಗಳಿಸುವುದು ಅತಿ ಮುಖ್ಯವಾಗಿತ್ತು. ತಲೆಮಾರಿನ ಒಬ್ಬ ವಿದ್ಯೆ ಕಲಿತರೆ ಅವನ ಪೀಳಿಗೆಯೇ ಮತ್ತೆ ವಿದ್ಯಾವಂತರಾಗುತ್ತಾರೆ. ಆದರೆ ಬಂಧುಗಳೆಲ್ಲರೂ ವಿದ್ಯಾವಂತರಾಗುವುದಿಲ್ಲ. ಹಾಗಾಗಿ ಅದು ತುಂಬ ನಿಧಾನವಾಗುತ್ತಿದೆ. ಇತರ ಜಾತಿಗಳಲ್ಲಿ ಅವರಷ್ಟೇ ನಿರ್ಗತಿಕರಾಗಿದ್ದವರು ಕೂಡಾ ಕಷ್ಟಪಟ್ಟು ವಿದ್ಯೆ ಕಲಿತು ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರ ಬಲದಿಂದ ಮೇಲೇಳುವುದು ಕಣ್ಣಿಗೆ ಗೋಚರವಾಗುತ್ತದೆ.
ಇಲ್ಲಿ ಮೂರು ತಲೆಮಾರು ಎನ್ನುವುದು ಸುಮಾರಾಗಿ ಬರಹಗಾರನ ಗಮನಕ್ಕೆ ಬಂದ ಸಮಕಾಲೀನ ಸ್ಥಿತಿ. ಅದಕ್ಕೂ ಹಿಂದೆ ಹೇಗಿತ್ತು ಎಂದು ಕಲ್ಪಿಸಬಹುದಷ್ಟೆ. ಇದಕ್ಕಿಂತ ನೂರು ವರ್ಷಗಳ ಹಿಂದಿನ ಸ್ಥಿತಿಯನ್ನು ಮಾನ್ಯ ಶಿವರಾಮ ಕಾರಂತರ ಚೋಮನದುಡಿ ಕೃತಿಯಲ್ಲಿ ಕಾಣಬಹುದು. ಅಂದರೆ ಎಷ್ಟೋ ಸಾವಿರ ವರ್ಷಗಳಿಂದಲೂ ಕೊರಗರಂಥವರ ಬದುಕು ಹಾಗೇ ಇದೆ ಎಂದರೆ ಸರಕಾರ ಮತ್ತು ನಾಗರಿಕರ ಕರ್ತವ್ಯ ಏನು? ಅಂಥವರು ಸಿಕ್ಕಿದ ಬದುಕನ್ನು ಕೀಳರಿಮೆಯಿಂದ ಅಥವಾ ಕೂಲಿ ಕಾರ್ಮಿಕರಾಗಿಯೇ ಕಳೆದು ಸಾಯಬೇಕಾ? ಎನ್ನುವ ಪ್ರಶ್ನೆ ವಿಚಾರವಂತರಿಗೆ ನೋವು ಕೊಡುವಂಥದ್ದು. ಇಂದಿಗೂ ಶಾಲೆಗಳಲ್ಲಿ ಬಾಲ್ಯದಲ್ಲೇ ಮನಸ್ಸಿನ ಮೇಲೆ ಪರಿಣಾಮ ಬೀರುವ ಜಾತಿ ನಮೂದಿಸುವ ಪದ್ಧತಿಯನ್ನು ಸರಕಾರ ಕೈ ಬಿಟ್ಟಿಲ್ಲ. ಕಣ್ಣೆರೆಸುವ ಸವಲತ್ತು ನೀಡಿ ರಾಜಕಾರಣಿಗಳು ಜಾತಿಯ ಆಧಾರದ ಮೇಲೆ ಓಟು ಕೇಳುವುದು ನಿಂತಿಲ್ಲ. ಅವರಿಗಿಂತ ಮೇಲೆ ಎಂದುಕೊಂಡ ಎಲ್ಲ ವರ್ಗದವರೂ ಅವರನ್ನು ಕೆಳವರ್ಗ ಎಂದು ತಿರಸ್ಕಾರದಿಂದ ನೋಡುವುದನ್ನು ಬಿಟ್ಟಿಲ್ಲ. ಅಷ್ಟೇ ಅಲ್ಲ; ಈ ಜಾತಿಭೇದ ಎನ್ನುವುದು ಇನ್ನೂ ನಮ್ಮ ರಕ್ತದಿಂದಲೇ ಹೋಗಿಲ್ಲ! ಪರಿಣಾಮ; ಮತಾಂತರದ ಪಿಡುಗು!”
ಮುಖ್ಯ ಪಾತ್ರವಾದ ಕಾವೇರಿಯ ಕಥೆಯ ಜೊತೆ ಈ ಕೃತಿಗೆ ಇನ್ನೊಂದು ಮಗ್ಗಲು ಇದೆ. ಅದು ತನಿಯ ಎಂಬ ಕೊರಗ ಜಾತಿಯ ಯುವಕನ ಕಥೆ. ಕಾವೇರಿಯು ದ.ಕನ್ನಡದಲ್ಲಿರುವ ಶ್ರೀಮತಿ ಮತ್ತು ಶ್ರೀಪಾದ ಭಟ್ಟರ ಮನೆಯಲ್ಲಿ ಅಡಿಗೆಯ ಕೆಲಸ ಮಾಡುವ ಸಮಯದಲ್ಲಿ ‘ಉಳುವವನೇ ಒಡೆಯ’ ಎಂಬ ಕಾನೂನು ಬರುತ್ತದೆ. ಇದರಿಂದ ಗೇಣಿದಾರರು ಎಲ್ಲರೂ ಭೂಮಾಲೀಕರಾಗುತ್ತಾರೆ. ಶ್ರೀಪಾದ ಭಟ್ಟರು ತಮ್ಮ ಶ್ರೀಮಂತಿಕೆ ಕಳೆದುಕೊಂಡು ಬೀದಿಗೆ ಬರುತ್ತಾರೆ. ಮನೆಯಲ್ಲಿದ್ದ ಚಿನ್ನ ಕಳ್ಳರ ಪಾಲಾಗುತ್ತದೆ. ಅವರಿಗಿದ್ದ ಮೂರು ಮಕ್ಕಳಲ್ಲಿ ಹಿರಿಯ ಮಗಳನ್ನು ಶ್ರೀಮಂತಿಕೆ ಇರುವಾಗಲೇ ಉತ್ತಮ ಸಂಬಂಧ ನೋಡಿ ಮದುವೆ ಮಾಡಿಕೊಡಲಾಗಿತ್ತು. ಶ್ರೀಮಂತಿಕೆ ಕಳೆದುಕೊಂಡ ಬಳಿಕ ಮಗ ವಾಮನ ಮನೆ ಬಿಟ್ಟು ಬೊಂಬಾಯಿ ಸೇರುತ್ತಾನೆ. ಕೊನೆಯ ಮಗಳು ವಿದ್ಯಾ ಅಕ್ಕ ಶಾರದೆಯ ಮನೆಯಲ್ಲಿದ್ದು ತನ್ನ ವಿದ್ಯಾಭ್ಯಾಸ ಮುಂದುವರೆಸುತ್ತಾಳೆ. ಈ ನಡುವೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಭಟ್ಟರು ನಿಧನ ಹೊಂದುತ್ತಾರೆ. ಭಟ್ಟರ ತೋಟದಲ್ಲಿ ಅದೂ ಇದೂ ಅಂತ ಕೆಲಸ ಮಾಡಿಕೊಂಡಿದ್ದ ತನಿಯ ಕಾಫಿ ತೋಟದ ಕೆಲಸಕ್ಕೆಂದು ಘಟ್ಟ (ಸಕಲೇಶಪುರ) ಹತ್ತುತ್ತಾನೆ. ಅವನ ಜೊತೆ ಹೆಂಡತಿ ಕಾಳಿ ಸಹಾ ಘಟ್ಟಕ್ಕೆ ಹೋಗುತ್ತಾಳೆ. ಕಷ್ಟದ ಸಮಯದಲ್ಲಿ ಬೇರೆ ದಾರಿ ಕಾಣದೆ ತನಿಯನ ಮಕ್ಕಳು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಾರೆ. ಆದರೆ ತನಿಯನ ಒಬ್ಬ ಮಗ ಮಾತ್ರ ಮತಾಂತರವಾಗುವುದಿಲ್ಲ.
ಪಿ ಹೆಚ್ ಡಿ ಮಾಡುವ ಉದ್ದೇಶದಿಂದ ತನ್ನ ಕೆಲಸದಿಂದ ಒಂದು ವರ್ಷ ರಜೆ ತೆಗೆದುಕೊಳ್ಳುವ ಚೈತ್ರ, ತನ್ನ ಅಧ್ಯಯನಕ್ಕಾಗಿ ಮರಳಿ ಅಜ್ಜಿಯ ಊರಿಗೆ ಬರುತ್ತಾಳೆ. ಅಲ್ಲಿ ಸಮಾಜದಲ್ಲಿರುವ ವಿವಿಧ ಜಾತಿಯ ಕುರಿತಾದ ಅಧಿಕ ಮಾಹಿತಿಗಳು ಆಕೆಗೆ ದೊರೆಯುತ್ತಾ ಹೋಗುತ್ತದೆ. ಅಜ್ಜಿ ಮತ್ತು ಮೊಮ್ಮಗಳ ಸಂಭಾಷಣೆಗಳು ನಮ್ಮ ಸಮಾಜದಲ್ಲಿ ಬಲವಾಗಿ ಬೇರೂರಿರುವ ಜಾತಿ, ಧರ್ಮ, ಮೂಢನಂಬಿಕೆ ಮೊದಲಾದುವುಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಅಜ್ಜಿಯ ಮೇಲೆ ಚೈತ್ರಾ ಇಟ್ಟ ನಂಬಿಕೆಯನ್ನು ೮೦ರ ವಯಸ್ಸಿನ ಕಾವೇರಿ ಉಳಿಸಿಕೊಳ್ಳುತ್ತಾರಾ? ಡೈವೋರ್ಸ್ ಆಗಿ ಬಂದ ಮೊಮ್ಮಗಳಿಗೆ ಬೇರೆ ಮದುವೆಯಾಗುವಂತೆ ಹೇಳುತ್ತಾಳಾ? ಮೊಮ್ಮಗಳು ಕಾವೇರಿಯ ಮನೆಗೆ ಬಂದ ನಿಜವಾದ ಉದ್ದೇಶವಾದರೂ ಏನು? ಕಾವೇರಿಯ ಮಗ-ಸೊಸೆ ಮಗಳನ್ನು ಮನೆಗೆ ಸೇರಿಸಿಕೊಳ್ಳುತ್ತಾರಾ? ಕಾವೇರಿ ನೋಡಿದ ಹುಡುಗ ಚೈತ್ರಳಿಗೆ ಇಷ್ಟವಾಗುತ್ತಾ? ತನಿಯನ ಸಂಸಾರ ಮತ್ತೆ ಹಳಿಗೆ ಬರುತ್ತದೆಯಾ? ಶ್ರೀಮತಿಯವರ ಮಕ್ಕಳು ಏನಾಗುತ್ತಾರೆ? ಇಂತಹ ಹಲವಾರು ಪ್ರಶ್ನೆಗಳಿಗೆ ಈ ಕೃತಿ ಉತ್ತರ ನೀಡುತ್ತಾ ಹೋಗುತ್ತದೆ.
‘ಮೂರು ತಲೆಮಾರು’ ಕೃತಿಯನ್ನು ಕೈಯಲ್ಲಿ ಹಿಡಿದುಕೊಂಡಿರೆಂದಾದರೆ ೩೦೪ ಪುಟಗಳನ್ನು ಓದಿ ಮುಗಿಸಲು ಹೆಚ್ಚು ಸಮಯವೇನೂ ಬೇಕಾಗಲಿಕ್ಕಿಲ್ಲ. ಏಕೆಂದರೆ ಒಮ್ಮೆ ನೀವು ಮಲೆನಾಡಿನ ಒಳಗೆ ಪ್ರವೇಶಿಸಿದರೆ ಮುಂದೆ ರೋಚಕತೆ ತನ್ನಿಂದ ತಾನೇ ನಿಮ್ಮನ್ನು ಆವರಿಸಿ ಬಿಡುತ್ತದೆ. ಮಲೆನಾಡಿನ ರೋಚಕ ಕತೆಗಳ ಮುಂದಿನ ಭಾಗಗಳನ್ನೂ ಓದುವ ತವಕ ಇನ್ನೂ ಹೆಚ್ಚಾಗುತ್ತದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!