ಈಗ ಬಿರು ಬೇಸಿಗೆಯ ಸಮಯ. ಎಲ್ಲರಿಗೂ ನೀರಿನ ಅಗತ್ಯ ತುಂಬಾ ಇದೆ. ಕುಡಿಯಲು ಉಪಯೋಗಿಸುವ ನೀರು ಶುದ್ಧವಾಗಿದ್ದು, ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ಮನೆಯಿಂದ ಹೊರಗೆ ಹೋಗುವಾಗ ನೀರನ್ನು ತೆಗೆದುಕೊಂಡು ಹೋಗಲು ನಾವು ಹಲವು ಬಾರಿ ಯಾವುದೋ ತಂಪು ಪಾನೀಯಗಳ ಪ್ಲಾಸ್ಟಿಕ್ ಬಾಟಲಿ, ಹಳೆಯ ನೀರಿನ ಫ್ಲಾಸ್ಕ್ ಗಳು, ಹಳೆಯ ತಾಮ್ರದ ಬಾಟಲಿಗಳನ್ನು ಉಪಯೋಗಿಸುತ್ತೇವೆ. ಇವೆಲ್ಲಾ ಬಹಳ ಅಪಾಯಕಾರಿ.
ಶಾಲೆಗೆ ಹೋಗುವ ಮಕ್ಕಳು, ಆಫೀಸ್‌ಗೆ ಹೋಗುವ ಜನರು, ಹೊಲಗಳಿಗೆ ಹೋಗುವ ರೈತರು ಯಾರೇ ಆಗಲಿ ಜೊತೆಯಲ್ಲಿ ಒಂದು ನೀರಿನ ಬಾಟಲಿ ಹಿಡಿದುಕೊಂಡು ಹೋಗುವುದು ಸಾಮಾನ್ಯ. ಇವರೆಲ್ಲ ಯಾವ ಬಾಟಲಿಯಲ್ಲಿ ನೀರು ಕುಡಿಯುತ್ತಾರೆ ಎನ್ನುವುದು ಮುಖ್ಯ. ಏಕೆಂದರೆ ಕೆಲವೊಂದು ಬಾಟಲಿಗಳಲ್ಲಿ ಸಂಗ್ರಹಿಸಲಾದ ನೀರು ಕುಡಿಯಲು ಒಳ್ಳೆಯದಲ್ಲ, ಸ್ಟೀಲ್ ಅಥವಾ ಉಕ್ಕಿನ ಬಾಟಲಿನಲ್ಲಿ ನೀರು ಚೆನ್ನಾಗಿ ಹೆಚ್ಚು ಸಮಯ ಬಾಳಿಕೆ ಬರುತ್ತವೆ. ಇದರಲ್ಲಿ ನೀರು ಕುಡಿಯಲು ಯೋಗ್ಯವಾಗಿರುತ್ತದೆ. ದೀರ್ಘಕಾಲದವರೆಗೆ ನೀರನ್ನು ಬಿಸಿ ಹಾಗೂ ತಂಪಾಗಿ ಇಡುತ್ತದೆ. ಈ ಬಾಟಲಿಯನ್ನು ಗಾಜಿನ ಬಾಟಲಿಯಂತೆ ಸ್ವಚ್ಚ ಮಾಡುವುದು ಕಷ್ಟವಾಗಿದೆ. ಇವುಗಳನ್ನು ನಿಯಮಿತವಾಗಿ ಸ್ವಚ್ಛ ಮಾಡದಿದ್ದರೆ ನೀರಿಗೆ ಲೋಹದ ರುಚಿ, ವಾಸನೆ ಬರುತ್ತದೆ. ನಿತ್ಯದ ಬಳಕೆಗೆ ಉತ್ತಮ ಸ್ಟೀಲ್ ಬಾಟಲಿ ಎನ್ನಲಾಗಿದೆ.
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಏಕೆಂದರೆ ಪ್ಲಾಸ್ಟಿಕ್‌ನಲ್ಲಿ ಬೆರೆತಿರುವ ರಾಸಾಯನಿಕಗಳು ನೀರಿನೊಂದಿಗೆ ಬೆರೆಯುವ ಸಾಧ್ಯತೆ ಇದೆ. ಇದು ದೇಹವನ್ನು ಪ್ರವೇಶಿಸಿ ರಕ್ತದ ಸಂಚಲನದಲ್ಲಿ ಬೆರೆತು ನಮ್ಮ ಅಂಗಾಂಗಗಳನ್ನು ತಲುಪುತ್ತದೆ. ಇದು ಕ್ಯಾನ್ಸರ್, ಹೃದಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬ್ಯಾಕ್ಟಿರಿಯಾಗಳು ಸಂತಾನೋತ್ಪತ್ತಿ ಉಲ್ಬಣಗೊಳ್ಳುವುದು ಅಧಿಕ. ಹೀಗಾಗಿ ಈ ಇದನ್ನು ಬಳಸುವುದು ಮಾರಕವಾಗಿದೆ.
ತಾಮ್ರದ ಬಾಟಲಿಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತವೆ. ತಾಮ್ರ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಜೊತೆಗೆ ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ಮಾಡುತ್ತದೆ. ಇದರಿಂದ ಅನೇಕ ಆಯುರ್ವೇದ ಪ್ರಯೋಜನಗಳು ಇವೆ. ಆದರೆ ದೀರ್ಘಕಾಲದವರೆಗೆ ನೀರನ್ನು ಈ ಬಾಟಲಿಯಲ್ಲಿ ಇಟ್ಟರೆ ತಾಮ್ರ ವಿಷವಾಗುತ್ತದೆ. ಯಕೃತ್ತು, ಮೂತ್ರಪಿಂಡದ ಸಮಸ್ಯೆ ಹೆಚ್ಚಾಗುತ್ತದೆ.
ಗಾಜಿನ ಬಾಟಲಿಯಲ್ಲಿ ಯಾವುದೇ ರಾಸಾಯನಿಕ ಸೋರಿಕೆಯಾಗದ ಕಾರಣ ನೀರು ಬಹಳ ಸಮಯ ಕುಡಿಯಲು ಯೋಗ್ಯವಾಗಿಯೇ ಇರುತ್ತದೆ, ಅದೇ ರುಚಿ ಇರುತ್ತದೆ. ಬ್ಯಾಕ್ಟಿರಿಯಾಗಳ ತೊಂದರೆ ಇರಲ್ಲ, ಸುಲಭವಾಗಿ ಸ್ವಚ್ಛ ಮಾಡಬಹುದು. ಇದು ಬಿಪಿಎ ಮುಕ್ತವಾಗಿದೆ. ಆರೋಗ್ಯಕ್ಕೆ ಹಾಗೂ ಪರಿಸರಕ್ಕೂ ಈ ಬಾಟಲ್‌ಗಳು ಉತ್ತಮ, ಇವುಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಕೈ ಜಾರಿ ಕೆಳಗೆ ಬಿದ್ದರೆ ಬಾಟಲಿ ಒಡೆದು ಹೋಗುತ್ತದೆ. ಇದು ಗಾಜಿನ ಬಾಟಲಿಯ ಸಮಸ್ಯೆ. ಉಳಿದಂತೆ ಸ್ವಲ್ಪ ಜಾಗರೂಕತೆಯಿಂದ ಉಪಯೋಗಿಸಿದರೆ ಗಾಜಿನ ಬಾಟಲಿಯ ನೀರು ಅಮೃತವೆಂದೇ ಹೇಳಬಹುದು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!