ಪ್ರಸ್ತುತ ಗೇರು ಬೀಜಕ್ಕಿರುವಷ್ಟು ಮಾರುಕಟ್ಟೆ ದರ ಬೇರೆ ಯಾವುದಕ್ಕೂ ಇರಲಿಕ್ಕಿಲ್ಲ. ಒಣ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುವ ಮಾತುಗಳನ್ನು ಕೇಳಿಸಿಕೊಂಡು ಬಹುತೇಕರು ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಬೀಜಗಳನ್ನು ತಮ್ಮ ನಿತ್ಯದ ಆಹಾರದ ಜೊತೆ ಸೇವಿಸಲು ಪ್ರಾರಂಭಿಸಿದ್ದಾರೆ. ಹೀಗಾಗಿ ಗೋಡಂಬಿ ಬೀಜಕ್ಕೆ ಉತ್ತಮ ಮಾರುಕಟ್ಟೆ ಇದೆ. ಆದರೆ ಕರ್ನಾಟಕದಲ್ಲಿ ಬೇಡಿಕೆಗೆ ತಕ್ಕ ಉತ್ಪಾದನೆ ಇಲ್ಲ. 

ನಾವು ಮಾಡುವ ಕೃಷಿ ನಮಗೂ, ಪ್ರಕೃತಿಯಲ್ಲಿರುವ ಕೆಲವು ಜೀವಿಗಳಿಗೂ ಪ್ರಯೋಜನವಾಗುವಂತಿರಬೇಕು ಈ ನಿಟ್ಟಿನಲ್ಲಿ ರಬ್ಬರ್ ಬೆಳೆಗಿಂತ ಗೇರು ಬೆಳೆಷ್ಟೋ ವಾಸಿ. ಈ ಗೇರು ಬೆಳೆಗೆ ಉತ್ತಮ ಭವಿಷ್ಯವಿದೆ. ನಾವು ಮಾಡುವ ಯಾವುದೇ ಕೃಷಿ ಪರಿಸರಕ್ಕೆ ಪೂರಕವಾಗಿರಬೇಕು. ನೈಸರ್ಗಿಕ ಸಂಪನ್ಮೂಲಗಳ ಅಳಿವಿಗೆ ಕಾರಣವಾಗಬಾರದು. ಕೊಳವೆ ಬಾವಿ ನೀರು, ಅಂತಜಲ ಕುಸಿತ, ವಿದ್ಯುತ್ ಶಕ್ತಿ ವ್ಯಯ ಯಾವುದೂ ಇಲ್ಲದೇ ಕೃಷಿ ಸಾಧ್ಯವಿದ್ದರೆ ಅದು ಗೇರು ಬೆಳೆಯಿಂದ ಮಾತ್ರ. ಲಾಭದಾಯಕವೆಂದು ನಾವು ತಿಳಿದ ಬೆಳೆಗಳ ನೈಜ ಲೆಕ್ಕಾಚಾರ ಲಾಭದ್ದಾಗಿರುವುದಿಲ್ಲ.

ಗೇರು ಪ್ರಪಂಚದ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಬೆಳೆಸಲಾಗುವ ಬೆಳೆ. ಇದರ ಈಗಿನ ಬೇಡಿಕೆ ಸುಮಾರು ೧೩ ಲಕ್ಷ ಟನ್ ಇದ್ದು ೨೦೩೦ಕ್ಕೆ ಒಟ್ಟಾರೆ ಬೇಡಿಕೆ ೨೫-೩೦ ಲಕ್ಷ ಟನ್ ಗಳಷ್ಟು ಏರುವ ಸಾಧ್ಯತೆ ಇದೆ. ಇದು ೨೦೫೦ರ ಹೊತ್ತಿಗೆ ೪೦-೫೦ ಲಕ್ಷ ಟನ್‌ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ನಮ್ಮ ದೇಶದಲ್ಲಿ ಇದರ ಉತ್ಪಾದನೆ ಈಗ ಕೇವಲ ೮ ಲಕ್ಷ ಟನ್‌ಗಳಷ್ಟು ಮಾತ್ರ. ಮೇಲಿನ ಗುರಿಯನ್ನು ತಲುಪಲು ಈಗಿರುವ ಪ್ರದೇಶವನ್ನು ೧೦ ಪಟ್ಟು ವಿಸ್ತರಿಸಬೇಕಾಗುತ್ತದೆ. ಇದು ಈಗಿನ ವೇಗದಲ್ಲಿ ಹೋದರೆ ೫೦ ವರ್ಷವಾದರೂ ಮುಟ್ಟಲು ಸಾಧ್ಯವಿಲ್ಲ. ಆದುದರಿಂದ ಗೇರು ಬೆಳೆ ಬೆಳೆಸಲು 'ಸರಳ ತಂತ್ರಜ್ಞಾನಗಳು, ಉತ್ತಮ ತಳಿಗಳು, ಬೆಳೆ ಪ್ರೋತ್ಸಾಹಗಳು, ಸವಲತ್ತುಗಳು ಹೆಚ್ಚು ಚೆಚ್ಚು ಅಭಿವೃದ್ಧಿಯಾಗುತ್ತಲೇ ಇರುತ್ತವೆ.

ನಮ್ಮ ದೇಶದಲ್ಲಿ ಗೇರು ಬೆಳೆ ಬಗ್ಗೆ ಸಂಶೋಧನೆ ಮತ್ತು ತಳಿ ಅಭಿವೃದ್ಧಿ. ಸಾಕಷ್ಟು ಆಗಿದೆ. ಕರ್ನಾಟಕದ ಪುತ್ತೂರಿನಲ್ಲಿ ಗೇರು ಸಂಶೋಧನಾ ನಿರ್ದೇಶನಾಲಯ, ಮಂಗಳೂರಿನ ಉಳ್ಳಾಲದಲ್ಲಿ ಗೇರು ಸಂಶೋಧನಾ ಕೇಂದ್ರ, ಕೇರಳದ ಕೊಟ್ಟಕ್ಕರ. ಆಂಧ್ರದ ಬಾಪಟ್ಲಾ, ಅಸ್ಸಾಂ ನ ದರ್ಗಾಂವ್ ಮತ್ತು ಮಹಾರಾಷ್ಟ್ರದ ವೆಂಗುರ್ಲದಲ್ಲಿ ಗೇರು ಸಂಶೋಧನಾ ಕೇಂದ್ರಗಳಿವೆ. ಇಲ್ಲಿ ಹಲವಾರು ಸುಧಾರಿತ ಮತ್ತು ಹೈಬ್ರಿಡ್ ತಳಿಗಳನ್ನೂ, ಸುಧಾರಿತ ಬೆಳೆ ತಾಂತ್ರಿಕತೆಯ ಸಂಶೋಧನೆ ಮಾಡಲಾಗುತ್ತಿದೆ. ಇವರೆಲ್ಲರ ಸಂಶೋಧನಾ ಫಲಿತಾಂಶದ ದಾರಿಯಲ್ಲಿ ಕೃಷಿ ಮಾಡಿದರೆ ಉತ್ತಮ ಲಾಭದಾಯಕ ಇಳುವರಿ ಪಡೆಯಲು ಸಾಧ್ಯ.

06 (1).jpg

ಗೇರಿನಲ್ಲಿ ಉತ್ತಮ ತಳಿಗಳು: ಎನ್ ಆರ್‌ ಸಿ ಸಿ ಸೆಲೆಕ್ಷನ್-1, ಭಾಸ್ಕರ, ಎನ್‌ ಆರ್‌ ಸಿ ಸಿ ಸೆಲೆಕ್ಷನ್ 2, ಉಳ್ಳಾಲ 1,2,3, 4, ಯು ಎನ್ 50, ಚಿಂತಾಮಣಿ- 1,2, ಧನ, ವೆಂಗುರ್ಲಾ 4, ವೆಂಗುರ್ಲಾ 7,8, 3, ಮಡಕತ್ತರ 2, ಪ್ರಿಯಾಂಕ. ವಿಆರ್‌ಐ( ವೃದ್ದಾಚಲಂ) 3 ಮುಂತಾದ ತಳಿಗಳು ಲಭ್ಯವಿದೆ. ಕೇರಳ ತ್ರಿಶೂರಿನ ಮಡಕತ್ತರ ಗೇರು ಸಂಶೋಧನಾ ಕೇಂದ್ರವು ಒಂದೆರಡು ವರ್ಷಗಳ ಹಿಂದೆ ೮ ಹೊಸ ತಳಿಗಳನ್ನೂ ಬಿಡುಗಡೆಗೊಳಿಸಿದೆ.

ಗೇರು ಬೆಳೆಯನ್ನು ಸಾಂಪ್ರದಾಯಿಕ ಅಂತರದಲ್ಲಿ ಬೆಳೆಸಿದರೆ ಒಂದು ಎಕ್ರೆಯಲ್ಲಿ ೬೦ ಮರಗಳು, ಆದರೆ ಈಗ ಅದರ ಬದಲಿಗೆ ಅಧಿಕ ಸಾಂದ್ರ ಅಂತರದ ಬೇಸಾಯವನ್ನು ಪರಿಚಯಿಸಲಾಗಿದೆ. ಇದರಲ್ಲಿ ಎಕ್ರೆಗೆ ೪೦೦ ಗಿಡ ತನಕ ಹಿಡಿಸಬಹುದು. ಗಿಡವನ್ನು ನಾವು ತರಬೇತಿ ಕೊಟ್ಟು ಬೆಳೆಸಿ (ಹೊಸ ಚಿಗುರು ಬಂದು ಅಧಿಕ ಇಳುವರಿ ಬರುವಂತಾಗಲು), ಮರಕ್ಕೆ ಬೇಕಾದ ಸಾರಾಂಶಗಳನ್ನು ಕೊಟ್ಟು. ಪ್ರತೀ ವರ್ಷ ಗೆಲ್ಲು ಸವರಿ, ಪೀಡೆ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಾ ಬಂದರೆ ೧೦ ವರ್ಷಕ್ಕೆ ಪ್ರತೀ ಮರಲ್ಲಿ ೭-೮ ಕಿಲೋ ತನಕ ಇಳುವರಿ ಬರುವುದು ಸಾಬೀತಾಗಿದೆ. ಆ ಪ್ರಕಾರ ಒಂದು ಎಕ್ರೆಯಲ್ಲಿ ೨೮ ಕ್ವಿಂಟಾಲು ಇಳುವರಿ ಪಡೆಯಲು ಸಾಧ್ಯ. ಇಂದಿನ ಧಾರಣೆಯಲ್ಲಿ ಸುಮಾರು ಐದು ಲಕ್ಷ ಆದಾಯವಾಯಿತು. ಇದಕ್ಕೆ ವ್ಯಯಿಸುವ ಖರ್ಚು ಏನಿದ್ದರೂ ೬೦-೭೦ ಸಾವಿರ ಮಾತ್ರ ಇದು ವರ್ಷದಲ್ಲಿ ೩-೪ ತಿಂಗಳು ಮಾತ್ರ. ಇಂತಹ ಕೆಲಸ ಕಡಿಮೆ ಇದ್ದು, ಲಾಭ ಹೆಚ್ಚು ಇರುವ ಬೆಳೆ ಗೇರು ಎಂದರೆ ತಪ್ಪಾಗಲಾರದು.

ಮೊದಲು ಗೇರು ಎಂದರೆ ಅದು ಕರಾವಳಿಯ ಸಮುದ್ರ ತೀರದಲ್ಲಿ ಮತ್ತು ಅದಕ್ಕೆ ತಾಗಿಕೊಂಡ ಹೆಚ್ಚು ಮಳೆಯಾಗುವ ಮಲೆನಾಡಿನಲ್ಲಿ ಮಾತ್ರ ಚೆನ್ನಾಗಿ ಬೆಳೆಯುವ ಬೆಳೆ ಎಂದಷ್ಟೇ ಜನರ ತಿಳುವಳಿಕೆಯಾಗಿತ್ತು. ಆದರೆ ಈಗ ಅದು ಈ ಪರಿಧಿಯನ್ನು ಮೀರಿ ಹೊರಕ್ಕೆ ವಿಸ್ತರಿಸಿದೆ. ಕೋಲಾರ ಜಿಲ್ಲೆ ಚಿಂತಾಮಣಿಯಲ್ಲಿ ಗೇರು ಬಹಳಷ್ಟು ಉತ್ತಮವಾಗಿ ಬೆಳೆಯುತ್ತದೆ. ಗೇರಿನಲ್ಲಿ ಚಿಂತಾಮಣಿ-1 ಮತ್ತು ಚಿಂತಾಮಣಿ-2 ಎಂಬ ತಳಿಗಳನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಬಿದ್ದಳ್ಳಿಯಲ್ಲಿಯೂ ಬೆಳೆಸಿ ಉತ್ತಮ ಇಳುವರಿ ಪಡೆದವರಿದ್ದಾರೆ.

ಗೇರು ಬೀಜ ಗೋಡಂಬಿಗೆ ಉತ್ತಮ ಬೇಡಿಕೆ ಇದೆ ಅದರೆ ಅದಕ್ಕನುಗುಣವಾಗಿ ಬೆಲೆ ಏರಿಕೆ ಆಗುತ್ತಿಲ್ಲ. ಕಚ್ಚಾ ಗೇರು ಬೀಜದ ಧಾರಣೆಯನ್ನು ನಿರ್ಧರಿಸುವವರು ವ್ಯಾಪಾರಸ್ಥರು ಆಮದು ಸುಂಕ ನಮ್ಮ ದೇಶದ ಬೆಳೆಗಾಗರರಿಗೆ ಅನುಕೂಲಕರವಾಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ಆಮದು ಸುಂಕ ವಿಧಿಸಲಾಗಿದ್ದರೂ ಗೋಡಂಬಿಗೆ ನೈಜ ಬೇಡಿಕೆ ಮತ್ತು ಬೆಲೆ ಇರುವ ಕಾರಣ ಯಾವುದೇ ಕಾರಣಕ್ಕೂ ಇದಕ್ಕೆ ನಿಷೇಧದಂತಹ ಅಂಜಿಕೆ ಇಲ್ಲ.

ಗೇರು ಬೇಸಾಯದಲ್ಲಿ ವರ್ಷದಲ್ಲಿ ಮೂರು ನಾಲ್ಕು ತಿಂಗಳು ಮಾತ್ರ ಆದಾಯ. ಈ ಕಾರಣಕ್ಕೆ ಜನ ಇನ್ನೂ ಗೇರು ಬೆಳೆಸಲು ಹಿಂದೇಟು ಹಾಕುತ್ತಾರೆ. ಇತ್ತೀಚೆಗೆ ನೈಸರ್ಗಿಕ ರಬ್ಬರಿಗೆ ಧಾರಣಿ ಏರಿಕೆಯಾದಾಗ ಇದ್ದ ಗೇರು ಮರಗಳೂ ಸಹ ಕಡಿದುರುಳಲ್ಪಟ್ಟಿತು. ಈಗ ಅದೇ ಜನ ಮತ್ತೆ ರಬ್ಬರ್ ಕಡಿದು ಗೇರು ನೆಡಲು ಮುಂದಾಗಿದ್ದಾರೆ. ಗೇರು ಬೀಜದಲ್ಲಿ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು (Vitamin K, manganese, magnesium, phosphorous, copper, and iron) ಇವೆ. ಇದನ್ನು ಪ್ರಾಕೃತಿಕ ವಿಟಮಿನ್ ಮಾತ್ರೆ ("nature's vitamin pill") ಎನ್ನುತ್ತಾರೆ. 

ಗೋಡಂಬಿಯನ್ನು ತಿನ್ನುವವರಿಲ್ಲ ಎಂಬ ಪರಿಸ್ಥಿತಿ ಬರುವುದೇ ಇಲ್ಲ. ಗೋಡಂಬಿ ಸೇವನೆಯಿಂದ ಮನುಷ್ಯ ಶರೀರದ ರಕ್ತ ನಾಳಗಳಿಗೆ ರಕ್ಷಣೆ ದೊರೆಯುತ್ತವೆ. ಮೆದುಳಿನ ಶಕ್ತಿ ವೃದ್ಧಿಸುತ್ತದೆ. ಮೂಳೆಗಳನ್ನು ಸಧೃಢಗೊಳಿಸುತ್ತದೆ. ಹೃದಯಕ್ಕೆ ಹೆಚ್ಚಿನ ಶಕ್ತಿ ಕೊಡುತ್ತದೆ. ಮೂತ್ರ ಕೋಶವನ್ನು ರಕ್ಷಿಸುತ್ತದೆ. ಬೊಜ್ಜು ತನವನ್ನು ನಿಯಂತ್ರಿಸುತ್ತದೆ. ಗೋಡಂಬಿ ಎಂಬುದು ಕ್ಯಾನ್ಸರ್‌ನಂತಹ ಜೀವ ಕೋಶಗಳ ಅನಿಯಂತ್ರಿತ ಬೆಳವಣಿಗೆಯನ್ನು ತಡೆಯುವ ಪ್ರಮುಖ ಆಹಾರ ವಸ್ತು. ನೂರಾರು ವರ್ಷಗಳಿಂದ ಗೇರು ಕೃಷಿ ಮಾಡುತ್ತಾ ಅದರ ಉತ್ಪನ್ನವನ್ನು ಬಳಸುತ್ತಾ ಇರುವ ಗೋವಾದ ಜನರ ಆರೋಗ್ಯದಲ್ಲಿ ಈ ಅಂಶ ಪತ್ತೆಯಾಗಿದೆ.

ಈ ವರ್ಷದ ಬೆಳೆ ವಿಸ್ತರಣೆಯ ಸರದಿ ಗೇರು. ಯಾಕೆಂದರೆ ಗೋಡಂಬಿಯಷ್ಟು ಲಾಭದ ಬೆಳೆ ಬೇರೆ ಇಲ್ಲ ಎಂಬುದು ಕೊನೆಯದಾಗಿ ತಿಳುವಳಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಕೆಲಸಗಾರರ ತೊಂದರೆ ನಿಭಾಯಿಸಿ, ಖರ್ಚು ರಹಿತ ಅಧಿಕ ಆದಾಯದ ಬೆಳೆಯಾಗಿ ಗೇರು ಬೆಳೆ ಮುಂಚೂಣಿಗೆ ಬರಲಿದೆ.

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ