ರವಿ ಬೆಳಗೆರೆಯವರ ನಿಧನಾನಂತರ ಹೊಸದಾಗಿ ಬಂದ ಹಲವು ಪುಸ್ತಕಗಳಲ್ಲಿ ‘ರಾಜ್ ದಿ ಶೋ ಮ್ಯಾನ್’ ಸಹ ಒಂದು. ರಾಜ್ ಕಪೂರ್ ಹಿಂದಿ ಸಿನೆಮಾ ರಂಗದ ಅತೀ ದೊಡ್ಡ ಹೆಸರು. ನಟ, ನಿರ್ದೇಶಕ, ನಿರ್ಮಾಪಕ, ಆರ್ ಕೆ ಸ್ಟುಡಿಯೋದ ಸ್ಥಾಪಕರಾಗಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳು ಹಲವಾರು. ಅಂತಹ ಓರ್ವ ಅಪ್ಪಟ ಪ್ರತಿಭಾವಂತ ಕಲಾವಿದನ ಸಿನೆಮಾ ಜೀವನ ಅದರಲ್ಲೂ ಅವರ ಖಾಸಗಿ ಜೀವನದ ಬಗ್ಗೆ ಸವಿವರವಾದ ಮಾಹಿತಿಯನ್ನು ಈ ಕೃತಿ ಅಡಕಗೊಂಡಿದೆ. ರಾಜ್ ಕಪೂರ್ ಜೊತೆಗೆ ಹಲವಾರು ಚಿತ್ರಗಳಲ್ಲಿ ನಟಿಸಿದ ನರ್ಗೀಸ್ ಗೆ ಆತನ ಜೊತೆ ಪ್ರೇಮವಿತ್ತೇ ಎನ್ನುವ ಮಿಲಿಯನ್ ಡಾಲರ್ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಬೆಳಗೆರೆಯವರು ಮಾಡಿದ್ದಾರೆ.
"ನಾನು ಜಗತ್ತಿನ ಅತ್ಯುತ್ತಮ ವಿಸ್ಕಿ ಕುಡಿದಿದ್ದೇನೆ. ಇಡೀ ಪ್ರಪಂಚಕ್ಕೇ ಮೋಹ ಹುಟ್ಟಿಸುವಂತಹ ಸೌಂದರ್ಯವತಿಯರ ತೆಕ್ಕೆಯಲ್ಲಿ ನಲಿದಿದ್ದೇನೆ. ಜಗತ್ತಿನ ಅತ್ಯುತ್ತಮ ಸ್ಥಳಗಳಲ್ಲಿ ನನ್ನ ಹೆಜ್ಜೆ ಗುರುತು ಮೂಡಿವೆ. ಪರಮ ಉತ್ಕೃಷ್ಟ ಪಕ್ಷಾನ್ನಗಳ ರುಚಿ ನಾನು ನೋಡಿದ್ದೇನೆ. ಗೆಲುವು ಮತ್ತು ಕೀರ್ತಿಗಳ ಶಿಖರಗಳ ತುತ್ತತುದಿಯಲ್ಲಿ ನಿಂತು ನಕ್ಕಿದ್ದೇನೆ. ಸೋಲುಗಳ ಆಶಾಂತರಾಳದ ಕಂದರಗಳಲ್ಲಿ ಬಿದ್ದಿದ್ದೇನೆ ಮತ್ತು ಎದ್ದಿದ್ದೇನೆ. ನನ್ನ ಹೆಸರು ರಾಜ್ ಕಪೂರ್! ನನ್ನ ನಂತರವೂ ನಾನು ಬದುಕಿರುತ್ತೇನೆ. ಬಿಟ್ಟುಹೋಗುವ ಕೊನೆಯ ಘಳಿಗೆಯಲ್ಲಿ “he is finished' ಅಂದಿದ್ದಳು ನರ್ಗಿಸ್, ಉಹುಂ, ಮುಗಿದು ಹೋಗುವ ಮಾತೆಲ್ಲಿಂದ ಬಂತು? ನಾನು ಈಗಷ್ಟೆ ಆರಂಭಿಸಿದ್ದೇನೆ ಅಂತ ಹೇಳಿಕಳಿಸಿದ್ದೆ ಏಕೆಂದರೆ, ನಾನು ರಾಜ್ ಕಪೂರ್!" ಹೀಗಂದವನು ರಾಜ್ ಕಪೂರ್.
ಅವನು ತನ್ನ ಸುತ್ತಲಿದ್ದ ಎಲ್ಲವನ್ನೂ ಎಲ್ಲರನ್ನೂ ಆಕ್ರಮಿಸಿಕೊಂಡು ಬದುಕಿದ ವಿಶಾಲ ಆಲದ ಮರದಂಥವನು. ಅವನನ್ನು ಸಮೀಪಿಸಿದ ಪ್ರತಿ ಹೆಂಗಸೂ ಅವನ ಧಗಧಗಿಸುವ ಕಾಂಕ್ಷೆಗಳಲ್ಲಿ ಉರಿದು ಹೋದವಳೇ. ಆ ಹೆಂಗಸರನ್ನೆಲ್ಲ ಅವನು 'Women in White' ಅಂತಲೇ ಕರೆಯುತ್ತಿದ್ದ, ನಿಮಗೆ ಆಶ್ಚರ್ಯವಾಗಬಹುದು: ರಾಜ್ ಕಪೂರ್ ನ ಸ್ತ್ರೀಯರ ಸಾಲಿನಲ್ಲಿ ಕೇವಲ ನರ್ಗಿಸ್, ಪದ್ಮನಿಯರಂತಹ ಚಂದನದ ಗೊಂಬೆಗಳು ಮಾತ್ರ ಅಲ್ಲ, ಅಲ್ಲಿ ಲತಾ ಮಂಗೇಶ್ವರಳಂತಹ ಶುಭ್ರ ಶ್ವೇತ ವಸ್ತ್ರಧಾರಿ ಕೋಗಿಲೆಗಳೂ ಇದ್ದವು. ಸ್ವತಃ ರಾಜ್ ಕಪೂರ್ ಅದ್ಭುತ ಗಾಯಕನಾಗಿದ್ದ. ಅವನ ಪಕ್ಕದಲ್ಲಿ ಕುಳಿತಿದ್ದ ಮಹಾಕವಿ ಶೈಲೇಂದ್ರ, ಯಾವ ಸರಹೊತ್ತಿನಲ್ಲಿ ಕೇಳಿದರೂ ಒಂದು ಅವಿಸ್ಮರಣೀಯ ಕವಿತೆಯನ್ನು ಬರೆದುಕೊಡಲು ಸಿದ್ಧನಿರುತ್ತಿದ್ದ. ಅಲ್ಲೇ ಪಕ್ಕದಲ್ಲಿ ಅಮರ ಸಂಗೀತ ಸೃಷ್ಟಿಸಿಕೊಡಲು ರಾಜ್ ಕಪೂರ್ನ ಮಿತ್ರರಾದ ಶಂಕರ್-ಜೈಕಿಷನ್ ಇರುತ್ತಿದ್ದರು. ಎಲ್ಲರಿಗಿಂತ ಮುಖ್ಯವಾಗಿ, ಅವನ ಪಾಲಿಗೆ ಅಂತರಾತ್ಮವೇ ಆಗಿ ಹೋಗಿದ್ದ ಮಹಾಮಿತ್ರ ಮುಖೇಶ್ ಚಂದ್ ಮಾಥುರ್ (ಮುಖೇಶ್) ಇರುತ್ತಿದ್ದ. ಆದರೂ ಸಾಲದು. ರಾಜ್ ಕಪೂರ್ಗೆ ಲತಾ ಇರಲೇ ಬೇಕು. ಹಾಡು ಸಿದ್ದವಿರಲಿ ಬಿಡಲಿ; ಆರ್ಕೆ ಸ್ಟುಡಿಯೋಸ್ ನಲ್ಲಿ ಲತಾ ಇರಬೇಕು. ಎದುರಿಗೊಂದು ಟೇಪ್ ರೆಕಾರ್ಡರು. ಸ್ವತಃ ರಾಜ್ ಕಪೂರನಿಗೇ ಹಾಡಲು ಬರುತ್ತಿತ್ತು. ಸಂಗೀತ ಅರ್ಥವಾಗುತ್ತಿತ್ತು. ಧಾಟಿಗಳು ನೆನಪಾಗುತ್ತಿದ್ದವು. ಅವನು ಲತಾಳನ್ನು ಎದುರಿಗೆ ಕೂಡಿಸಿಕೊಂಡು ಉನ್ಮತ್ತ ದುಂಬಿಯಂತೆ ಒಂದು ಧಾಟಿ, ಒಂದು ರಾಗವನ್ನು ಹಾಡಿ ತೋರಿಸುತ್ತಿದ್ದ. ಮುಂದಿನ ಚಿತ್ರಕ್ಕೆ ಅದೇ ಮುಕುಟ ಗೀತೆಯಾಗುತ್ತಿತ್ತು. ಹಾಗೆ ಆರ್ಕೆ ಸ್ಟುಡಿಯೋಸ್ನ ನಿರಂತರ ಕ್ರಿಯೇಟಿವಿಟಿಯ ಮಧ್ಯದಲ್ಲೇ ಹುಟ್ಟಿ ಮುಂದೆಂದೋ ಅದ್ಭುತ ಗೀತೆಯಾಗಿ ಹೊರ ಹೊಮ್ಮಿದ್ದೇ, “ಓ ಬಸಂತೀ... ಪವನ್ ಪಾಗಲ್... ನಾ ಜಾರೇ ನಾ ಜಾ... ರುಕೋ ಕೊಯೀ...!”
ಇಂತಹ ಕುತೂಹಲ ಭರಿತ ಸಾಲುಗಳಿಂದ ಪ್ರಾರಂಭವಾಗುವ ಈ ಪುಸ್ತಕ ಪ್ರತೀ ಪುಟಗಳಲ್ಲೂ ಕುತೂಹಲ ಕೆರಳಿಸುತ್ತದೆ. ರಾಜ್ - ಲತಾ ಮಂಗೇಷ್ಕರ್ ಜುಗಲ್ ಬಂದಿ, ಪ್ರಾಣ ಸೇಹಿತ ಮುಖೇಶ್ ಜೊತೆಗಿನ ನಂಟು. ಖ್ಯಾತ ನಟ ಪ್ರಥ್ವಿ ರಾಜ್ ಕಪೂರ್ ಮನೆತನದ ಕುಡಿಯಾದ ರಾಜ್ ಕಪೂರ್ ತನ್ನ ಹದಿಹರೆಯದಲ್ಲಿ ಅಷ್ಟೇನೂ ಸುಂದರವಾದ ಮೈಕಟ್ಟು ಹೊಂದಿರಲಿಲ್ಲ. ನಂತರದ ದಿನಗಳಲ್ಲಿ ಅವರು ಸಿನೆಮಾಗೆ ಬೇಕಾದಂತೆ ತನ್ನನ್ನು ಬದಲಾಯಿಸಿಕೊಂಡರು. ತಮ್ಮ ಹಾವ ಭಾವ, ಮಾತಾಡುವ ಶೈಲಿ, ಅದಕ್ಕೆ ಸಾಥ್ ನೀಡುತ್ತಿದ್ದ ಹಾಡಿಗೆ ತಕ್ಕ ಮುಖೇಶ್ ನ ಧ್ವನಿ ಎಲ್ಲವನ್ನೂ ಚೆನ್ನಾಗಿ ಬಳಸಿಕೊಂಡು ‘ರಾಜ್ - ಶೋಮ್ಯಾನ್’ ಆದರು.
ರಾಜ್ ಕಪೂರ್ ಅವರು ಖ್ಯಾತ ಚಿತ್ರ ‘ಮೇರಾ ನಾಮ್ ಜೋಕರ್’ನಲ್ಲಿ ತಮ್ಮದೇ ಜೀವನಗಾಥೆಯನ್ನು ಹೇಳಲು ಹೊರಟಿದ್ದರಾ? ಗೊತ್ತಿಲ್ಲ. ಆದರೆ ಚಿತ್ರ ವೀಕ್ಷಿಸಿದರಿಗೆಲ್ಲಾ ಹಾಗೆ ಅನಿಸಿದ್ದು ಮಾತ್ರ ಸುಳ್ಳಲ್ಲ. ಆ ಕಾಲದ ಅತ್ಯಂತ ಸುದೀರ್ಘ ಚಿತ್ರ (ಸುಮಾರು ನಾಲ್ಕು ಗಂಟೆ) ಹಲವರಿಗೆ ಬೋರ್ ಹೊಡೆಸಿ ಮಕಾಡೆ ಮಲಗಿತ್ತು. ಆದರೆ ನಂತರದ ದಿನಗಳಲ್ಲಿ ಮತ್ತೆ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದುಕೊಂಡಿತ್ತು. ಆ ಚಿತ್ರದಲ್ಲಿ ತಮ್ಮ ಬದುಕಿನಲ್ಲಿ ಹಾದು ಹೋದ ತಮ್ಮ ಪ್ರೇಯಸಿಯರ ಬಗ್ಗೆ ಹೇಳ ಹೊರಟಿದ್ದರಾ ರಾಜ್? ತಮ್ಮ ನೋವುಗಳನ್ನು ಜೋಕರ್ ಪಾತ್ರದಲ್ಲಿ ತೋಡಿಕೊಂಡಿದ್ದರಾ? ಎಲ್ಲರನ್ನು ನಗಿಸುವ ಜೋಕರ್ ಅಂತರಂಗದಲ್ಲಿ ತನ್ನ ನೋವನ್ನು ಅಡಗಿಸಿ ಕೊಂಡಿರುತ್ತಾನೆ ಎನ್ನುವ ಸತ್ಯ ಪ್ರಪಂಚಕ್ಕೆ ಹೇಳಲು ಹೊರಟಿದ್ದರು ಅನಿಸುತ್ತೆ. ಏನಾದರಾಗಲಿ, ಚಿತ್ರರಂಗದ ಅದ್ಭುತ ಕಲಾವಿದನ ಬಗ್ಗೆ ರವಿ ಬೆಳಗೆರೆ ಬರೆದ ಪುಟ್ಟ ಪುಸ್ತಕ ಆತನ ಬದುಕಿನ ಹಲವಾರು ಆಯಾಮಗಳನ್ನು ತೆರೆದಿಟ್ಟಿದೆ.
೧೧೬ ಪುಟಗಳ ಈ ಪುಟ್ಟ ಪುಸ್ತಕವನ್ನು ರವಿ ಬೆಳಗೆರೆಯವರ ಮಗಳು ಭಾವನಾ ಬೆಳಗೆರೆ ‘ಸರಳ, ಸುಂದರ ಮಾತ್ರವಲ್ಲದೆ ಸಹಜಾಭಿನಯ ಚತುರ ಎಂದೇ ಹೆಸರಾದ ಸಹೃದಯಿ ನಟ ಶ್ರೀ ಅನಂತ ನಾಗ್ ಅವರಿಗೆ” ಅರ್ಪಣೆ ಮಾಡಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!