ಮನುಷ್ಯನ ಬಾಯಿ ರುಚಿಗೆ ಯಾವುದೇ ಸೀಮೆಗಳಿಲ್ಲ. ನಮ್ಮ ನಾಲಿಗೆಗೆ ರುಚಿ ತಿಳಿಸುವ ಗುಣ ಇಲ್ಲದೇ ಹೋಗಿದ್ದರೆ ಬಹುಷಃ ಪ್ರಪಂಚದಲ್ಲಿ ಇಷ್ಟೊಂದು ಬಗೆಯ ವೈವಿಧ್ಯಮಯ ತಿಂಡಿ ತಿನಸು, ಸಿಹಿ ತಿಂಡಿಗಳು, ಖಾರ ತಿಂಡಿಗಳು, ಕಣ್ಮನ ಸೆಳೆಯುವ ಆಹಾರಗಳು ಇರುತ್ತಿರಲಿಲ್ಲ. ಈ ಆಹಾರ ಪದ್ಧತಿಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಾ ಹೋಗುತ್ತವೆ. ದಕ್ಷಿಣ ಭಾರತದ ಖ್ಯಾತ ತಿಂಡಿ ಉತ್ತರ ಭಾರತದಲ್ಲಿ ಸಿಗದೇ ಇರಬಹುದು. ಪರಿಚಯವೂ ಇರಲಾರದು. ಹಾಗೆಯೇ ರಾಜಸ್ಥಾನದ ಖಾದ್ಯಗಳು ಕೋಲ್ಕತ್ತಾದಲ್ಲಿ ಇರಲಿಕ್ಕಿಲ್ಲ. ಕೋಲ್ಕತ್ತಾದ ಬೆಂಗಾಲಿ ಸಿಹಿ ತಿಂಡಿಗಳು ಯಾರ ಬಾಯಲ್ಲೂ ನೀರೂರಿಸಬಹುದು. ನಾಲಗೆಯ ರುಚಿಯನ್ನು ತಣಿಸಲು ಮಾನವ ಬಹಳಷ್ಟು ಸಾಹಸಗಳನ್ನೂ ಮಾಡುತ್ತಾ ಇರುತ್ತಾನೆ.
ಬಹಳಷ್ಟು ಸಲ ನಾವು ಬೇರೆ ಸ್ಥಳಗಳಿಗೆ ಪ್ರವಾಸ ಹೋದಾಗ ಅಲ್ಲಿನ ವಿಶೇಷತೆಗಳ ಜೊತೆ ಸ್ಥಳೀಯ ತಿಂಡಿಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಏಕೆಂದರೆ ಕೆಲವು ತಿಂಡಿಗಳು ಅಲ್ಲಿಯ ಸಂಸ್ಕೃತಿಯ ಜೊತೆ ತಳುಕು ಹಾಕಿಕೊಂಡಿರುತ್ತದೆ. ತಿಂಡಿ ತಿನ್ನುತ್ತಾ ಅಲ್ಲಿಯ ಇತಿಹಾಸದ ಬಗ್ಗೆಯೂ ನಾವು ಅರಿತುಕೊಳ್ಳಬಹುದು. ರಾಜ ಮಹಾರಾಜರು ಇಷ್ಟ ಪಟ್ಟು ತಿನ್ನುತ್ತಿದ್ದ, ವಿಶೇಷವಾಗಿ ರಾಣಿಯರಿಗಾಗಿ ತಯಾರಾಗುತ್ತಿದ್ದ ಅಥವಾ ತಮ್ಮ ಕುಲ ದೇವರಿಗೆ ಅರ್ಪಿಸುತ್ತಿದ್ದ ವಿಶೇಷ ಭಕ್ಷ್ಯಗಳ ಬಗ್ಗೆಯೂ ಮಾಹಿತಿ ಸಿಗಬಹುದು. ನೀವು ಉತ್ತರ ಪ್ರದೇಶಕ್ಕೆ ಪ್ರವಾಸ ಹೋದಾಗ ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದರ ಜೊತೆಗೆ ಅಲ್ಲಿಯ ವಿಶೇಷ ಸಿಹಿ ತಿಂಡಿಯಾದ ‘ಶೀರ್ಮಲ್’ ಬಗ್ಗೆ ತಿಳಿದುಕೊಳ್ಳಲೇ ಬೇಕು. ಈ ಸಿಹಿ ತಿಂಡಿಗೆ ಬಹು ಬೇಡಿಕೆ ಇರುವ ಕಾರಣ ಹಲವಾರು ಬಾರಿ ನಿಮಗೆ ಬೇರೆ ಬೇರೆ ಅಂಗಡಿಗಳನ್ನು ಸುತ್ತುವಂತೆ ಮಾಡಬಲ್ಲದು.
ಈ ಶೀರ್ಮಲ್ ಗೆ ಕೇವಲ ಭಾರತದಲ್ಲಷ್ಟೇ ಅಲ್ಲ ಇರಾನ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲೂ ಅಭಿಮಾನಿಗಳಿದ್ದಾರೆ. ಮೈದಾ, ತುಪ್ಪ, ಹಾಲು ಮತ್ತು ಕೇಸರಿ ಬಳಸಿ ತಯಾರಿಸಲಾಗುವ ಈ ತಿಂಡಿಯನ್ನು ಯತೇಚ್ಛವಾದ ಬೆಣ್ಣೆ ಮತ್ತು ಜೇನುತುಪ್ಪ ಸವರಿ ಬೇಯಿಸಲಾಗುತ್ತದೆ. ಕೆಲವು ತಯಾರಕರು ಇದರ ಮೇಲೆ ಬಾದಾಮಿ ಮತ್ತು ಗೋಡಂಬಿ ಚೂರುಗಳನ್ನು ಉದುರಿಸಿ ಮತ್ತಷ್ಟು ಆಕರ್ಷಣೀಯ ಹಾಗೂ ಸ್ವಾದಿಷ್ಟವಾಗುವಂತೆ ಮಾಡುತ್ತಾರೆ. ಇದೊಂಥರಾ ನಾನ್ ಕುಲ್ಚಾ ರೊಟ್ಟಿಯ ಹಾಗಿದ್ದು ತಿನ್ನಲು ಬಲು ರುಚಿಕರವಂತೆ. ಲಕ್ನೋದ ಹಳೆಯ ಸಿಹಿ ತಿಂಡಿ ತಯಾರಕರಲ್ಲಿ ಸಿಗುವ ಈ ತಿಂಡಿಗೆ ಮದುವೆ, ಹುಟ್ಟು ಹಬ್ಬ ಇನ್ನಿತರ ಶುಭ ಸಮಾರಂಭಗಳಲ್ಲಿ ಅಗ್ರ ಸ್ಥಾನವಿದೆ. ನಮ್ಮಲ್ಲಿ ಚಿರೋಟಿ-ಹಾಲು ಇರುವಂತೆ ಅಲ್ಲಿ ಶೀರ್ಮಲ್ ಬಡಿಸುತ್ತಾರೆ.
ಶೀರ್ಮಲ್ ನ ಸ್ವಾದಕ್ಕೆ ಮೊರೆಹೋಗಿರುವ ಕೆಲವರು ತಮ್ಮ ಬೆಳಿಗ್ಗೆಯ ತಿಂಡಿಗೂ ಇದನ್ನೇ ತಿನ್ನುತ್ತಾರೆ. ಬಡವ ಬಲ್ಲಿದನೆನ್ನುವ ಬೇಧಭಾವವಿಲ್ಲದೇ ಎಲ್ಲರ ಮನ ಗೆದ್ದ ತಿಂಡಿ ಇದು. ಉತ್ತರ ಪ್ರದೇಶದ ಬಹಳಷ್ಟು ಮನೆಗಳಲ್ಲಿ ಈ ತಿಂಡಿಯನ್ನು ತಯಾರಿಸುತ್ತಾರೆ. ಹಳೆಯ ಸಿಹಿ ತಿಂಡಿಗಳನ್ನು ಮಾರುವ ಅಂಗಡಿಗಳಲ್ಲೂ ಲಭ್ಯವಿದೆ. ಹಾಗಾದರೆ ಮುಂದೆ ಎಂದಾದರೂ ಉತ್ತರ ಪ್ರದೇಶಕ್ಕೆ ಪ್ರವಾಸ ಹೋದರೆ ಶೀರ್ಮಲ್ ತಿನ್ನಲು ಮಾತ್ರ ಮರೆಯ ಬೇಡಿ!
(ಆಧಾರ)
ಚಿತ್ರ ಕೃಪೆ: ವೀಕಿಪೀಡಿಯಾ ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!