ಬದುಕು ಸಾಗಿಸಲು ಪರದಾಡುತ್ತಿರುವ ಒಬ್ಬ ಅಮೆರಿಕದ ನಟನಿಗೆ, ಅಪರಿಚಿತರ ನಡುವೆ ಬದಲಿ ಪಾತ್ರಗಳನ್ನು ನಿಜ ಜೀವನದಲ್ಲಿ ನಿರ್ವಹಿಸುವ ಜಪಾನಿನ ಒಂದು ಏಜೆನ್ಸಿಯಲ್ಲಿ ಆಕಸ್ಮಿಕವಾಗಿ ಕೆಲಸ ಸಿಗುತ್ತದೆ. ಮೊದಲಿಗೆ ಹೊಟ್ಟೆಪಾಡಿಗಾಗಿ ಶುರುಮಾಡಿದ ಈ ಕೆಲಸ, ಮುಂದೆ ಅವನನ್ನು ಬಿಡಿಸಿಕೊಳ್ಳಲಾಗದ ಭಾವನಾತ್ಮಕ ಸುಳಿಯೊಳಗೆ ಸೆಳೆದುಕೊಳ್ಳುತ್ತದೆ. ಈ ಪಾತ್ರಗಳನ್ನು ನಿರ್ವಹಿಸುತ್ತಾ ಅವನು ತನ್ನ ಬದುಕಿಗೊಂದು ಅರ್ಥವನ್ನೂ ಉದ್ದೇಶವನ್ನೂ ಕಂಡುಕೊಳ್ಳುತ್ತಾನೆ; ಜೊತೆಗೆ ಎಂದೂ ನನಸಾಗದೇ ಉಳಿದುಹೋದ ತನ್ನದೇ ಹಂಬಲಗಳನ್ನೂ ಕಂಡುಕೊಳ್ಳುತ್ತಾನೆ. ತಂದೆಯ ಗೈರುಹಾಜರಿಯನ್ನು ಅವನು ಒಳಗೊಳಗೇ ಹೊತ್ತುಕೊಂಡಿರುವವನು — ತಂದೆಯ ಅಂತ್ಯಸಂಸ್ಕಾರಕ್ಕೆ ಹೋಗಬೇಕಿದ್ದವನು “ವಿಮಾನ ನಿಲ್ದಾಣದಿಂದ ಆಚೆ ಹೆಜ್ಜೆಯೇ ಇಡಲಾಗಲಿಲ್ಲ” ಎಂದು ಹೇಳುತ್ತಾನೆ. ಅದೇ ತಳಮಳ ಅವನನ್ನು ತನ್ನ ಗ್ರಾಹಕರಲ್ಲೊಬ್ಬರ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗುವಂತೆ ಮಾಡುತ್ತದೆ; ಜೀವನದ ಅತ್ಯಂತ ದೊಡ್ಡ ರಿಸ್ಕ್ ಇದರಲ್ಲಿ ಅವನು ತೆಗೆದುಕೊಳ್ಳುತ್ತಾನೆ. ತನ್ನ ತಂದೆಗೆ ಕೊಡಲಾಗದೇ ಹೋದ ಕಾಳಜಿಯನ್ನೂ, ಪ್ರೀತಿಯನ್ನೂ ಅವನು ಅಲ್ಲಿ ಸುರಿಯುತ್ತಾನೆ.

ಬಿಗಿಯಾದ ಚಿತ್ರಕಥೆ, ಅಷ್ಟೇ ಅಚ್ಚುಕಟ್ಟಾದ ಛಾಯಾಗ್ರಹಣ. ನಿರ್ದೇಶಕಿ ಹಿಕಾರಿ ಮತ್ತು ಛಾಯಾಗ್ರಾಹಕ ತಕುರೊ ಇಶಿಜಾಕಾ ಚಿತ್ರದ ಬಹುಪಾಲನ್ನು ಹಗಲಿನ ಬೆಳಕಿನಲ್ಲೇ ಚಿತ್ರೀಕರಿಸಿದ್ದಾರೆ. ಸಿನಿಮಾ ನೋಡುವವರಿಗೆ ನೋಡಿ ಬಹುಶಃ ಅಭ್ಯಾಸವಾಗಿಬಿಟ್ಟಿರುವ ನಿಯಾನ್ ದೀಪಗಳ ರಾತ್ರಿಯ ಟೋಕಿಯೊ ಇಲ್ಲಿ ಇಲ್ಲ. ಈ ಆಯ್ಕೆಯೇ ಚಿತ್ರಕ್ಕೆ ಪ್ರಾಮಾಣಿಕತೆಯನ್ನು ತಂದುಕೊಡುತ್ತದೆ — ಇಲ್ಲಿರುವುದು ಸಾಮಾನ್ಯ ಬದುಕು, ಸಹಜ ಬೆಳಕಿನಲ್ಲಿ. ಫಿಲಿಪ್ ವಾಂಡರ್‌ಪ್ಲೊಗ್ ಪಾತ್ರದಲ್ಲಿ ಬ್ರೆಂಡನ್ ಫ್ರೇಸರ್, ನಿರ್ದೇಶಕಿ ಬಯಸಿದ್ದೆಲ್ಲವನ್ನು ಹೊಂದಿರುವ ನೈಜ ಅಭಿನಯವನ್ನು ನೀಡಿದ್ದಾರೆ. ವೈಯಕ್ತಿಕ ನೋವುಗಳಿಂದಾಗಿ ನಿಜಜೀವನದಲ್ಲಿ, ತನ್ನದೇ ವೃತ್ತಿಬದುಕಿನಲ್ಲಿ ಒಂದು ಸುದೀರ್ಘ ಬಿಕ್ಕಟ್ಟನ್ನು ಕಂಡ ಈ ನಟ, ತನ್ನದೇ ಕಷ್ಟಗಳ ಅನುಭವಗಳಲ್ಲಿ ಹಲವನ್ನು ಈ ಪಾತ್ರದೊಳಗೆ ತಂದಿದ್ದಾರೆ ಎನಿಸುತ್ತದೆ.

ಈ ಚಿತ್ರ ಇಂದಿನ ಜಪಾನಿ ಸಮಾಜವನ್ನು ಪ್ರತಿಬಿಂಬಿಸುತ್ತದೆ; ಅಲ್ಲಿ ಒಂಟಿತನ ಎನ್ನುವುದು ನಿಭಾಯಿಸಲು ತುಂಬಾ ಕಷ್ಟದ ಸಂಗತಿ ಎಂದು ಹೇಳುತ್ತಾರೆ. ಜಗತ್ತಿನ ಬಹುತೇಕ ಸಮಾಜಗಳಲ್ಲೂ ಪರಿಸ್ಥಿತಿ ಹೀಗೆಯೇ ಇದೆ ಎನ್ನುವುದೂ ನಿಜ; ಆದರೂ ಆಧುನಿಕ ಸೂಕ್ಷ್ಮತೆಗಳಿಗಿಂತ ಸಂಪ್ರದಾಯಕ್ಕೇ ಇಂದಿಗೂ ಹೆಚ್ಚಿನ ಮನ್ನಣೆ ಸಿಗುವ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿನಿಂದಾಗಿ ಜಪಾನ್ ಬೇರೆಯಾಗಿಯೇ ನಿಲ್ಲುತ್ತದೆ.

ನಟನ ಬಳಿಗೆ ಬರುವ ಗ್ರಾಹಕರೆಲ್ಲ ಬಿಡಿಸಿಕೊಳ್ಳಲಾಗದ ಸಂದಿಗ್ಧಗಳಲ್ಲಿ ಸಿಲುಕಿಕೊಂಡ ಸಾಮಾನ್ಯ ಜನ. ತನ್ನ ಗೆಳತಿಯನ್ನೇ ಮದುವೆಯಾಗಬೇಕೆಂದಿರುವ ಒಬ್ಬ ಯುವತಿ, ಅವಳಿದ್ದಂತೆಯೇ ಅವಳನ್ನು ಒಪ್ಪಿಕೊಳ್ಳಲಾಗದ ಹೆತ್ತವರ ಮುಂದೆ ನಿಲ್ಲಿಸಲೆಂದು ಈ ನಟನನ್ನೇ ಗಂಡನಾಗಿ ಬಾಡಿಗೆಗೆ ಪಡೆದು ಸಮಾಧಾನ ಕಂಡುಕೊಳ್ಳುತ್ತಾಳೆ. ಒಬ್ಬ ಒಂಟಿ ತಾಯಿ, ತನ್ನ ಹನ್ನೊಂದು ವರ್ಷದ ಮಗಳಿಗೆ ಆಕೆಯ ಇಡೀ ಬದುಕನ್ನೇ ರೂಪಿಸಬಲ್ಲ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಸಿಗಲಿ ಎಂದಷ್ಟೇ, ಇವನನ್ನು ತನ್ನ ಗಂಡನ ಪಾತ್ರಕ್ಕೆ ನೇಮಿಸಿಕೊಳ್ಳುತ್ತಾಳೆ. ಫಿಲಿಪ್ ಆ ಸಂಬಂಧದೊಳಗೆ ತೀರಾ ಆಳಕ್ಕೆ ಭಾವನಾತ್ಮಕವಾಗಿ ಇಳಿದುಬಿಟ್ಟಾಗ — ಅಭಿನಯಿಸುವುದನ್ನು ಬಿಟ್ಟು ಸಹಜವೆಂಬಂತೆ ಅನುಭವಿಸತೊಡಗಿದಾಗ — ಆಕೆಗೂ ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ತನಗೆ ಎಂದೂ ಇಲ್ಲದೇ ಹೋದ ಮಗಳನ್ನು ಬಿಟ್ಟುಕೊಡಬೇಕಾದಾಗ ಫಿಲಿಪ್ ಒಳಗೊಳಗೇ ನೊಂದುಕೊಳ್ಳುತ್ತಾನೆ. ಇಷ್ಟು ಕಾಲ ಸಿಗದೇ ಇದ್ದದ್ದು ಕೊನೆಗೂ ಸಿಕ್ಕಿತಾದರೂ, ಮತ್ತೆ ಅದನ್ನೇ ಬಿಟ್ಟುಕೊಡಬೇಕಾದ ಪರಿಸ್ಥಿತಿ; ಮನಸ್ಸಿಲ್ಲದಿದ್ದರೂ ಹೇಳಬೇಕಾದ ಮಾತುಗಳು, ಮಾಡಬೇಕಾದ ಕೆಲಸಗಳು — ಇವೆಲ್ಲ ಸೇರಿ ಅವನನ್ನು ದೊಡ್ಡದಾದ ಮಾನಸಿಕ ತಳಮಳಕ್ಕೆ ದೂಡುತ್ತವೆ.

ಇದನ್ನೆಲ್ಲ ಮೀರಿ ಮುಂದೆ ಸಾಗಲು ಪ್ರಯತ್ನಿಸುತ್ತಿರುವಾಗ, ಒಬ್ಬ ಗ್ರಾಹಕ ಅವನ ಮನಸ್ಸನ್ನು ಎಷ್ಟು ಆಳವಾಗಿ ಕಲಕುತ್ತಾನೆಂದರೆ, ಬದುಕಿನ ಅತಿ ದೊಡ್ಡ ಅಪಾಯವನ್ನು ಎದುರುಹಾಕಿಕೊಳ್ಳುವಂತೆ ಮಾಡುತ್ತಾನೆ. ಗತಕಾಲದ ಖ್ಯಾತ ನಟ ಕಿಕುವೊ, ಇಳಿ ವಯಸ್ಸಿನಲ್ಲಿ ಈಗ ತನ್ನ ನೆನಪುಗಳನ್ನೇ ಕಳೆದುಕೊಳ್ಳುತ್ತಿದ್ದಾನೆ. ಅವನಿಗಾಗಿ ಫಿಲಿಪ್ ತನ್ನ ಕೆಲಸವನ್ನು, ಬಹುಪಾಲು ತನ್ನ ಸ್ವಾತಂತ್ರ್ಯವನ್ನೂ ಪಣಕ್ಕಿಡಲು ಸಿದ್ಧನಾಗುತ್ತಾನೆ. ಇನ್ನೂ ನೆಲೆ ಕಂಡುಕೊಳ್ಳಲು, ಸ್ಥಿರವಾದ ವೃತ್ತಿಬದುಕಿನಲ್ಲಿ ಬೇರೂರಲು ಹೆಣಗುತ್ತಿರುವ ಒಬ್ಬ ನಟನ ಈ ಸೂಕ್ಷ್ಮ ಚಿತ್ರಣದ ಮೂಲಕ, ನಿಜಕ್ಕೂ ಜನರಿಗೆ ಸಂತೋಷ ತರುವ ಒಂದು ವಿಚಿತ್ರ ವ್ಯವಹಾರವನ್ನು ನಿರ್ದೇಶಕಿ ಕಟ್ಟಿಕೊಡುತ್ತಾರೆ.

ಕೊನೆಗೆ ಇವೆಲ್ಲ — ಭಾವನೆಗಳಿರುವ, ನೀತಿಯಿರುವ, ಜೊತೆಗೆ ತಮ್ಮ ಸುತ್ತಲಿನವರಿಗೆ ಒಳ್ಳೆಯದನ್ನು ಮಾಡಬೇಕೆಂಬ ಶುದ್ಧ ಮನಸ್ಸಿನ ಆಕಾಂಕ್ಷೆ ಇರುವ ಮನುಷ್ಯರ ನಡುವೆ ನಡೆಯುವ ಸಂಗತಿಗಳಷ್ಟೇ. ಅವರೂ ತಮ್ಮ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಲೇ ಬದುಕು ಸಾಗಿಸುತ್ತಿದ್ದಾರೆ. ತನ್ನದೇ ನೋವುಗಳಿಂದ, ಅಪೂರ್ಣವಾಗಿ ಉಳಿದುಹೋದ ಸಂಗತಿಗಳಿಂದ ಹುಟ್ಟುವ ಮತ್ತೊಬ್ಬರಿಗಾಗಿ ಅಪಾಯ ಎದುರಿಸುವ ಈ ಮನಸ್ಸು ತೀರ ಸಹಜವಾಗಿಯೇ ಕಾಣುತ್ತದೆ. ಅಂತಹ ಸಂದರ್ಭದಲ್ಲಿ ಯಾವ ಮನುಷ್ಯನಾದರೂ ಹಾಗೆಯೇ ಮಾಡುತ್ತಿದ್ದ ಎಂದು ನಿಮಗೆ ಅನಿಸದೆ ಇರದು. ಮತ್ತೆ, ಅಲ್ಪ ಕಾಲದಲ್ಲಿಯೇ ನೀವು ಒಳ್ಳೆಯ ವ್ಯಕ್ತಿ ಎಂದು ತಿಳಿದುಕೊಂಡ ನಿಮ್ಮನ್ನು ಬಲ್ಲ ಸುತ್ತಮುತ್ತಲಿನ ಜನರು, ಬದುಕನ್ನೇ ಬದಲಿಸಬಲ್ಲ ಸಂಕಷ್ಟಗಳಿಂದ ನಿಮ್ಮನ್ನು ಪಾರುಮಾಡಲು ಮನಸಾರೆ ಮುಂದೆ ಬರುತ್ತಾರೆ. ನಿಮ್ಮಲ್ಲಿ ಒಬ್ಬ ಒಳ್ಳೆಯ ಮನುಷ್ಯನನ್ನು ಕಂಡದ್ದಕ್ಕಾಗಿಯೇ ಜನ ನಿಜವಾಗಿಯೂ, ಹೃದಯದಿಂದ ಸಹಾಯ ಮಾಡುತ್ತಾರೆ. ಇಂಥವುಗಳ ಚಿತ್ರಣ ಸಿನಿಮಾದಲ್ಲಿ ಬಂದಾಗ ಅದು ಯಾವಾಗಲೂ ಪ್ರೇಕ್ಷಕರ ಹೃದಯದಲ್ಲಿ ಚಿರಕಾಲ ಜಾಗ ಪಡೆದುಕೊಳ್ಳುತ್ತದೆ.

ರೆಂಟಲ್ ಫ್ಯಾಮಿಲಿ ಆಧುನಿಕವಾಗಿದೆ, ಕುತೂಹಲಕಾರಿಯಾಗಿದೆ. ಇದರಲ್ಲಿ ವ್ಯಕ್ತವಾದ ಭಾವನೆಗಳು ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತವೆ; ಜೊತೆಗೆ ಸಿನಿಮಾ ನಿಮ್ಮ ಮನಸ್ಸನ್ನು ಕಲಕುತ್ತದೆ. ಮನುಷ್ಯನ ಭಾವನೆಗಳ ಬಗ್ಗೆ ಆಸಕ್ತಿಯಿರುವವರು, ಅವುಗಳಲ್ಲಿ ಮುಳುಗು ಹಾಕಲು ಇಷ್ಟಪಡುವವರು ತಪ್ಪದೆ ನೋಡಬೇಕಾದ ಚಿತ್ರ. ನಿಮ್ಮದೇ ಬದುಕಿನ ಎಷ್ಟೋ ಸಂಗತಿಗಳೊಂದಿಗೆ ಅನುರಣಿಸುವ ಮನಸ್ಸಿನ ಮೂಲೆಗಳನ್ನು ಮುಟ್ಟುವಲ್ಲಿ ನಿರ್ದೇಶಕಿ ಹಿಕಾರಿ ಯಶಸ್ವಿಯಾಗಿದ್ದಾರೆ. ಈ ರೀತಿಯ ಏಜೆನ್ಸಿಗಳ ಸೇವೆ ನೈತಿಕವೋ ಅಲ್ಲವೋ ಎಂಬುದನ್ನು ತೀರ್ಮಾನಿಸುವ ಕೆಲಸವನ್ನು ಅವರು ಸಂಪೂರ್ಣವಾಗಿ ಪ್ರೇಕ್ಷಕರಿಗೇ ಬಿಟ್ಟುಬಿಟ್ಟಿದ್ದಾರೆ. ಅವಕಾಶ ಸಿಕ್ಕರೆ ಖಂಡಿತ ನೋಡಿ.