ತಾತನ ಜೊತೆಯಲ್ಲಿ ಹೊಲ ಉಳುಮೆಗೆ ಬೆಳಗಿನ ೬.೩೦ ಸಮಯಕ್ಕೆ ಹೊಲಕ್ಕೆ ಹೋಗುತ್ತಿದ್ದೆ . ಬೆಳಗಿನ ಶುಭ್ರ ಗಾಳಿ, ಹಕ್ಕಿಚಿಲಿಪಿಲಿ ಜೊತೆ ಸ್ವಲ್ಪ ಮೈ ಚಳಿ .
ಮನೆಯಿಂದ ಹೋರಾಟ ಆಕ್ಷಣ , ಮನಸಿನಲ್ಲಿ ಏನಪ್ಪಾ ಇಷ್ಟುಬೇಗ ಹೋಗ್ಬೇಕು ಅಂತ ಅನ್ನಿಸಿದ್ರೂ , ಆ ನಮ್ಮ ತಾತನ ಘಡು ಧ್ವನಿಗೆ ಭಯದಲ್ಲಿ ಹೋಗಲೇಬೇಕಿತ್ತು.
ಆಗ ಅದು ನನ್ನ ಉಳುಮೆಯ ತರಬೇತಿಯ ಸಮಯ, ಸಂದರ್ಬಾನುಸಾರಕ್ಕೆ ನಾನು ಕಲಿಯಲೇ ಬೇಕಿತ್ತು.
ತರಬೇತಿ ಮುಂದುವರೆಯುತ್ತಿರುವಾಗ , ಮನಸಲ್ಲಿ ಒಂದೇ ಚಿಂತೆ ಹೊಟ್ಟೆ ಹಸಿವೂ ಜಾಸ್ತಿ ಆಗುತ್ತಿದ್ದಂತೆ ಒಟ್ಟ ಎಷ್ಟು ಹೊತ್ತಿಗೆ ಊಟ ತರುತ್ತಾರೆ ಎಂದು ಮನೆಕಡೆಯ ದಾರಿಯನ್ನೇ ನೋಡುತ್ತಿದ್ದೆ.
ದೂರದಲ್ಲಿ ಅಜ್ಜಿ ಊಟ ಹೊತ್ತು ತರುವ ದೃಶ್ಯ ನೋಡಿ ಮನಸಿನಲ್ಲೇ ಖುಷಿಯಾದರೆ ಮತ್ತೊಂದೆಡೆ ಏನು ಊಟ ಏರಬಹದುದು ಎಂಬುದು ಸ್ವಾರಸ್ಯಕರ .
ಕೂಡಲೇ ತಾತ ಹಾಗು ನಾನು ಊಟಕ್ಕೆ ನಮ್ಮ ಜಮೀನಿನ ದೊಡ್ಡ ಆಲದ ಮರದ ಕೆಳಗಡೆ ಕೈ ತೊಳೆದು ಕುಳಿತಿದ್ದೆವು .
ಕ್ಷಣದಲ್ಲೇ ಕಾಗೇಗಳ ಹಿಂಡು ನಮ್ಮ ಸುತ್ತಲೂ , ಕೆಲವೊಂದು ಮರದ ಮೇಲೆ, ಕೆಲವೊಂದು ತುಂಬಾ ಹತ್ತಿರದಲ್ಲೇ ದೈರ್ಯದಿಂದ ನಮ್ಮನ್ನೇ ನೋಡುತ , ಹಾಗು ಅಜ್ಜಿಯ ಊಟದ ಬುಟ್ಟಿಯನ್ನೇ ನೋಡುತಿದ್ದವು .
ಸಾಮಾನ್ಯವಾಗಿ ಬಿಸಿ ಮುದ್ದೆ , ತರಕಾರಿ ಸಾಂಬಾರು , ಕೆಂಡದಲ್ಲಿ ಸುಟ್ಟ ಅಕ್ಕಿ ಹಪ್ಪಳ ಮತ್ತು ಅನ್ನ. ನಾನು ಚಿಕ್ಕವನು ಹುಡುಕು ಬುದ್ದಿ (ತುಂಟಾಟ) ಕಾಗೆಗಳನ್ನು ಓಡಿಸುವ ಯತ್ನ , ತಾತ ತನ್ನ ಮೊದಲ ಮುದ್ದೆಯ ತುತ್ತನ್ನು ಮುರಿದು ಕಾಗೆಗಳು ಏರುವಕಡೆಗೆ ಎಸೆದರೆ , ಯಾವ ಕಾಗೆ ಕಸಿಯುತ್ತದೆ ಎಂದು ನೋಡಲು ಕುತೂಹಲ.
ಅದು ತುಂಬ ದಷ್ಟಪುಷ್ಟ ಕಾಗೆ ಆಗಿರುತ್ತಿತ್ತು ಏಕೆಂದರೆ ಹಸಿದಾಗ ಅದರ ಊಟವನ್ನು ಕಸಿಯಲು ತುಂಬ ಪರಿಣಿತಿ ಹೊಂದಿರುತ್ತಿತ್ತು .
ಅನಂತರ ತಾತ ಹೇಳಿದ್ದು "ಮಗಾ ಮೊದಲ್ನೇ ತುತ್ತು ಕಾಗೆಗೆ ಹಾಕ್ಬೇಕು " ಅಂದಿನಿಂದ ಎಲ್ಲ ದಿನಗಳಲ್ಲೂ ಹೊಲದಲ್ಲಿ, ತೋಟದಲ್ಲಿ ಊಟ ಮಾಡುವಾಗ ಕಾಗೆಗೆ ಮೊದಲ ತುತ್ತು ನೀಡುವುದು ರೂಢಿಯಾಯಿತು . ಕಾಗೆ ಜೊತೆ ನಾಯಿಯೂ ಇರುತಿತ್ತು ಅದಕ್ಕೂ ಒಂದು ತುತ್ತು ಹಾಕಲಾಗುತ್ತಿತ್ತು.ಆದರೆ ಕೆಲವೊಂದು ಕಾಗೆಗಳಿಗೆ ಸಿಗುತ್ತಲೇ ಇರುತ್ತಿರಲಿಲ್ಲ , ಯಾವ ಕಾಗೆಗೆ ಸಿಕ್ಕಿಲ್ಲ ಆ ಕಾಗೆಗೆ ಮುದ್ದೆ ಕೊಡಲು ಪ್ರಯತ್ನಿಸುತ್ತಿದೆ .
ಅದರಲ್ಲೂ ಚಿಕ್ಕ ಕಾಗೆ ಮರಿ ಅಥವಾ ತುಂಬ ಬಲಹೀನ ಕಾಗೆಗೆ ತುತ್ತು ಸಿಗುವವರೆಗೂ ಕಾಯಿತ್ತಿದೆ . ಆದರೆ ಇಂದು ನಿಜಕ್ಕೂ ಶೋಚನೀಯ ಯಾವಾಗ ತೋಟ , ಹೊಲದಲ್ಲಿ ಊಟಕ್ಕೆ ಕೂತರೆ , ಕಾಗೆಗಳೇ ನೋಡ ಸಿಗುವುದಿಲ್ಲ , ತುಂಬಾ ಬೇಸರವಾಗುತ್ತದೆ , ಕಾರಣ ಗೊತ್ತಿಲ್ಲ . ಆ ಕಾಗೆಗಳ ಜೊತೆ ಊಟ ಮಾಡುವ ಖುಷಿ ಕಾಣದಂತಾಗಿದೆ .
ಆದರೆ ನಮ್ಮ ಕೆಟ್ಟ ಮನುಷ್ಯ ಜಾತಿ ಆ ಕಾಗೆ ಗಳನ್ನು ಪಿತೃಪಕ್ಷದಲ್ಲಿ ಮಾತ್ರ ನೆನಯುವಷ್ಟು ಬುದ್ದಿವಂತ ವಿದ್ಯಾವಂತರಾಗಿದ್ದೀವಿ .
ಬಣ್ಣ ಕಪ್ಪಗಿದ್ದರೇನು
ನನಗೆ ನಾನೇ ಸಾಟಿ
ನಾನಿಲ್ಲದ ನಾಡು
ಮೌನ ಮುರಿದ ಗೂಡು
ಕಷ್ಟ ನಿನಗೆ ಕೇಳಲು ನನ್ನ ಹಾಡು
ಹಳ್ಳಿ ಬಿಟ್ಟು ನಗರ ಸೇರುತ್ತಿರೋದು ನಿಮ್ಮ ಪಾಡು
ಕೋಗಿಲೆ ಬೆಳದದ್ದು ನನ್ನ ಗೂಡು
ಸಂಕಷ್ಟದಲ್ಲಿ ಇಂದು ನನ್ನ ಹಿಂಡು
ಪಿತೃಪಕ್ಷಕ್ಕೆ ಮಾತ್ರ, ನೆನೆಯಬೇಡಿ ನನ್ನ
ವರ್ಷವಿಡೀ ಸದಾ ನಿಮ್ಮ ಜೊತೆಗಿರುವ ಬಯಕೆ
ಪಕೃತಿಯ ಮಡಿಲಲ್ಲಿ ,ನಿಮ್ಮ ಕೈತುತ್ತಿನ ಆರೈಕೆಯಲ್ಲಿ
ಚಿತ್ರ ಸಂಗ್ರಹಣೆ :- ಚಾಟ್ ಜಿ ಪಿ ಟಿ
ದೀಪು ಬೆಳ್ಳುಳಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!