ಬೆಂಗಳೂರಿನ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. (ಕೃಷಿ) ಕೋರ್ಸಿನ ನಾಲ್ಕನೆಯ ಹಾಗೂ ಕೊನೆಯ ವರುಷದಲ್ಲಿ ನಾನು ಓದುತ್ತಿದ್ದೆ (1976-77). ಆಗೊಂದು ದಿನ ನನಗೆ ತಂದೆಯವರ ಆಪ್ತ ಹಾಗೂ ಹೆಸರುವಾಸಿ ಸಾಹಿತಿ ನಿರಂಜನರಿಂದ ಫೋನ್ ಕರೆ ಬಂತು.

“ಕೃಷ್ಣ, ವಿಲ್ಸನ್ ಗಾರ್ಡನಿಗೆ ಹೋಗಿ ಎಂ.ಎಲ್. ಎನ್. ಅಯ್ಯಂಗಾರರನ್ನು ನೀನು ಕಾಣಬೇಕು. ಅವರಿಗೆ ಅನಾರೋಗ್ಯ. ಅವರು “ತೋಟಗಾರಿಕೆ” ಪುಸ್ತಕ ಬರಿತಿದ್ದಾರೆ. ಅದನ್ನು ಮುಗಿಸಲು ಅವರಿಗೆ ಸಹಾಯ ಬೇಕಂತೆ. ನಿನ್ನಿಂದ ಸಾಧ್ಯವೇ ನೋಡು” ಎಂದರು ನಿರಂಜನರು.

ಆ ವಾರಾಂತ್ಯದಲ್ಲಿ ಹೆಬ್ಬಾಳ ಹಾಸ್ಟೆಲಿನಿಂದ ವಿಲ್ಸನ್ ಗಾರ್ಡನಿಗೆ ಸೈಕಲಿನಲ್ಲಿ ಹೋಗಿ ಎಂ.ಎಲ್. ಎನ್. ಅಯ್ಯಂಗಾರರನ್ನು ಭೇಟಿಯಾದೆ. ಹಾಗೆ ಶುರು ಅವರ - ನನ್ನ ಸಂಬಂಧ. ಪುಟ್ಟ ಮನೆಯಲ್ಲಿ ಅವರ ವಾಸ. ಮನೆ ತುಂಬಾ ಪುಸ್ತಕಗಳು. ಮೊದಲ ಭೇಟಿಯಲ್ಲೇ ಇವರೊಬ್ಬ ವಿಶೇಷ ವ್ಯಕ್ತಿ ಎಂದನಿಸಿತು. ನನ್ನ ತಂದೆಯ ವಯಸ್ಸಿನವರಾದ ಅವರಲ್ಲಿ ತುಂಬಿತುಳುಕುವ ವಿನಯ.

ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಲಿದ್ದ “ತೋಟಗಾರಿಕೆ” ಪುಸ್ತಕದ ಕೊನೆಯ ಸಂಪುಟದ ಅಧ್ಯಾಯಗಳ ಬರವಣಿಗೆಗೆ ನನ್ನ ಸಹಾಯ ಬೇಕೆಂದು ವಿನಂತಿಸಿದರು. ಅದೊಂದು ಸಮಗ್ರ ಕೈಪಿಡಿ. ಅವರಿಗೆ ತೀವ್ರ ಅನಾರೋಗ್ಯದಿಂದಾಗಿ ಬರವಣಿಗೆ ಮುಂದುವರಿಸಲು ಕಷ್ಟವಾಗಿತ್ತು. ನಾನು ಆ ಜವಾಬ್ದಾರಿ ಒಪ್ಪಿಕೊಂಡೆ. ನನ್ನ ಪದವಿ ಶಿಕ್ಷಣದ ನಡುವೆ ಸಮಯ ಹೊಂದಿಸಿಕೊಂಡು ಆ ಪುಸ್ತಕದ ಕೆಲವು ಅಧ್ಯಾಯಗಳನ್ನು ಬರೆದೆ. ಪ್ರತಿಯೊಂದು ಅಧ್ಯಾಯದ ಬರವಣಿಗೆ ಮುಗಿದಾಗ, ಅವರ ಮನೆಗೆ ಹೋಗಿ ನಾನು ಬರೆದ ಹಾಳೆಗಳನ್ನು ಕೊಟ್ಟು, ವಿಚಾರ ವಿನಿಮಯ ನಡೆಸಿ, ಹಾಸ್ಟಿಲಿಗೆ ಹಿಂತಿರುಗುತ್ತಿದ್ದೆ. ನನ್ನ ಕೃಷಿ ಬರವಣಿಗೆಯ ಆರಂಭದ ದಿನಗಳಲ್ಲಿ ನನಗೆ ಅವರ ಮಾರ್ಗದರ್ಶನ ಸಿಕ್ಕಿದ್ದು ನನ್ನ ಅದೃಷ್ಟ.

ಕ್ರಮೇಣ ನನ್ನ ಕೋರ್ಸಿನ ನಾಲ್ಕನೆಯ ವರುಷದ ಪಾಠಗಳು ಮುಗಿದವು. ಹಾಸ್ಟೆಲ್ ವಾರ್ಡನರಿಂದ ಅನುಮತಿ ಪಡೆದು, ಹೆಚ್ಚುವರಿ ಒಂದು ತಿಂಗಳು ಹಾಸ್ಟೆಲಿನಲ್ಲಿ ಉಳಿದೆ. ಆ ಅವಧಿಯಲ್ಲಿ “ತೋಟಗಾರಿಕೆ” ಪುಸ್ತಕದ ಬಗ್ಗೆ ನಾನು ವಹಿಸಿಕೊಂಡ ಜವಾಬ್ದಾರಿ ಮುಗಿಸಿ, ನಂತರ ನನ್ನೂರು ಮಂಗಳೂರಿಗೆ ಮರಳಿದೆ.

ಇತ್ತೀಚೆಗೆ, ಎಂ.ಎಲ್.ಎನ್. ಅಯ್ಯಂಗಾರರ ಜನಪ್ರಿಯ ಪುಸ್ತಕ “ರೈತರ ನೆಚ್ಚು ಮೆಚ್ಚಿನ ಮರಗಳು” ಬಗ್ಗೆ “ಸಂಪದ”ದಲ್ಲಿ ಎಚ್.ಪಿ. ನಾಡಿಗರ ಬರಹವನ್ನು ಓದಿದವರ ಸಂಖ್ಯೆ 15,000 ದಾಟಿದೆ! ಅದನ್ನು ಕಂಡಾಗ, ಸುಮಾರು 50 ವರುಷಗಳ ಹಿಂದಿನ ಇವೆಲ್ಲ ಘಟನೆಗಳು ನೆನಪಾದವು.

ಎಂ.ಎಲ್. ನರಸಿಂಹ ಅಯ್ಯಂಗಾರರು ಚನ್ನಪಟ್ಟಣದ ಹತ್ತಿರದ ಮಳೂರಿನ ಹಸುರುವಾಣಿ ವಂಶದವರು. ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ವಿದ್ಯಾಭ್ಯಾಸದ ನಂತರ ಹತ್ತು ವರುಷ ಎಸ್.ಎಲ್.ಎನ್. ಹೈಸ್ಕೂಲು, ಹೆಬ್ಬಾಳದ ವ್ಯವಸಾಯದ ಸ್ಕೂಲ್ ಮತ್ತು ಕಾಲೇಜಿನಲ್ಲಿ ಪಾಠ ಹೇಳಿದರು. ಅನಂತರ ಹತ್ತು ವರುಷ (ಆಗಿನ) ಮೈಸೂರು ಕೃಷಿ ಇಲಾಖೆಯ ನಿರ್ದೇಶಕರ ಬಳಿ ತಾಂತ್ರಿಕ ಸಹಾಯಕ ಹುದ್ದೆ ನಿರ್ವಹಣೆ. ತದನಂತರ, ನವದೆಹಲಿಯ ಆಹಾರ ಮತ್ತು ಕೃಷಿ ಮಂತ್ರಾಲಯದ ವಿಸ್ತರಣಾ ವಿಭಾಗದಲ್ಲಿ ಫಾರ್ಮ್ ರೇಡಿಯೋ ಆಫೀಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ. ಬಳಿಕ ಬೆಂಗಳೂರಿನ ವಿಲ್ಸನ್ ಗಾರ್ಡನಿನಲ್ಲಿ ನೆಲೆಸಿದರು.

ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ. ರೈತರಿಗೆ ಉಪಯುಕ್ತ ಮಾಹಿತಿ ನೀಡಬೇಕೆಂಬ ಉದ್ದೇಶದಿಂದ ಅವರು ಬರೆದ ಕೆಲವು ಪುಸ್ತಕಗಳು ಇವು:

1) ಇದು ಯಾವ ಮರ? (1962) ಪ್ರ: ಉಷಾ ಸಾಹಿತ್ಯ ಮಾಲೆ, ಮೈಸೂರು; ಪುಟ 132, ಬೆಲೆ ರೂ. 2.50

2) ವನಮಾಲಿ (1966) ಪ್ರ: ಪೀಪಲ್ಸ್ ಬುಕ್ ಹೌಸ್, ಮೈಸೂರು; ಪುಟ 72, ಬೆಲೆ ರೂ. 1.75

3) ನಮ್ಮ ಹಣ್ಣುಗಳು (1973) ಪ್ರ: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ; ಪುಟ 160, ಬೆಲೆ ರೂ. 3/-

4) ನಮ್ಮ ದನಗಳು (1973) ಪ್ರ: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ; ಪುಟ 173, ಬೆಲೆ ರೂ. 3/-

(ಪ್ರಸಾರಾಂಗದ ಗೃಹ ಸರಸ್ವತಿ ಗ್ರಂಥಮಾಲೆಯ 25ನೇ ಪುಸ್ತಕ: ನಮ್ಮ ಹಣ್ಣುಗಳು ಮತ್ತು 26ನೇ ಪುಸ್ತಕ ನಮ್ಮ ದನಗಳು)

5) ರೈತರ ನೆಚ್ಚು ಮೆಚ್ಚಿನ ಮರಗಳು (1973) ಪ್ರ: ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು; ಪುಟ 256, ಬೆಲೆ ರೂ. 12/-

ಇವಲ್ಲದೆ, ಭಾರತ-ಭಾರತಿ ಪುಸ್ತಕ ಸಂಪದಕ್ಕಾಗಿ ಎರಡು ಪುಟ್ಟ ವ್ಯಕ್ತಿ ಪರಿಚಯ ಪುಸ್ತಕ ಅನುವಾದಿಸಿದ್ದಾರೆ.

ತಾನು ನೀಡುವ ಮಾಹಿತಿ ರೈತರಿಗೆ/ ಓದುಗರಿಗೆ ಸುಲಭವಾಗಿ ಅರ್ಥವಾಗಬೇಕೆಂಬ ತುಡಿತ ಅವರ ಪುಸ್ತಕಗಳ ಪುಟಪುಟದಲ್ಲಿಯೂ ಕಾಣಿಸುತ್ತದೆ. “ವಿಶ್ವ ಪರಿಸರ ದಿನ”ವಾದ ಇವತ್ತು (ಜೂನ್ 5) ಎಂ.ಎಲ್.ಎನ್. ಅಯ್ಯಂಗಾರರು “ವನಮಾಲಿ” ಪುಸ್ತಕದ ಮುಮ್ಮಾತಿನಲ್ಲಿ 01-01-1966ರಂದು ಬರೆದಿದ್ದ ಸಂದೇಶ ಇಂದಿಗೂ ಎಷ್ಟು ಪ್ರಸ್ತುತ ಎಂಬುದನ್ನು ಗಮನಿಸಿ:

“ಮಣ್ಣು, ಹುಲ್ಲು, ವನ, ವೃಕ್ಷ, ಫಲ, ಜಲ, ಮೀನು, ಪ್ರಾಣಿ, ವಾಯುಗುಣ ಮುಂತಾದುವು ಮಾನವನ ಮೂಲ ಸಂಪತ್ತುಗಳು. ಚೆನ್ನಾಗಿ ಕಾಪಾಡಿಟ್ಟುಕೊಂಡರೆ ಅವು ನಿತ್ಯಸಂಪತ್ತುಗಳು - ಕ್ಷಯಿಸದ, ಕ್ಷೀಣಿಸದ ಕೊಡುಗೆಗಳು; ಪ್ರಕೃತಿಯ ಪ್ರಸಾದ. ಆದರೆ ಇವು ಅಕ್ಷಯವಾಗಿರಲು ಅವುಗಳ ಪಾಲನೆ ಬಗ್ಗೆ ನಮ್ಮ ಜನ ಆಸಕ್ತಿ ಇಡಬೇಕು, ಶ್ರದ್ಧೆ ವಹಿಸಬೇಕು; ಅವುಗಳ ರಕ್ಷಣಾ ಕಾರ್ಯದಲ್ಲಿ ಪಾಲುಗೊಳ್ಳಬೇಕು.”

ಫೋಟೋ: “ವನಮಾಲಿ” ಪುಸ್ತಕದ ಮುಖಪುಟ