ಕಳೆದ ವಾರ ಸಿಂಗಾಪುರ ದೇಶಕ್ಕೆ ಹೆಸರು ಬಂದ ಕಥೆಯನ್ನು ಓದಿರುವಿರಿ. ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ಇನ್ನೊಂದು ದೇಶ ಲಾವೋಸ್. ಇದು ಆಗ್ನೇಯ ಏಷ್ಯಾದಲ್ಲಿರುವ ಸಂಪೂರ್ಣವಾಗಿ ನೆಲಾವೃತವಾದ (Landlocked) ಒಂದು ಸುಂದರ ರಾಷ್ಟ್ರವಾಗಿದೆ. ವಿಯೆಂಟಿಯಾನ್ (Vientiane) ಎನ್ನುವುದು ಲಾವೋಸ್ ನ ರಾಜಧಾನಿ. ಚೀನಾ, ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ದೇಶಗಳೊಂದಿಗೆ ಲಾವೋಸ್ ತನ್ನ ಗಡಿಯನ್ನು ಹಂಚಿಕೊಂಡಿದೆ.
ಲಾವೋಸ್ ಎಂಬ ಪುಟ್ಟ ದೇಶವು ೧೪ನೇ ಶತಮಾನದಲ್ಲಿ 'ಲಾಂಗ್ ಝಾಂಗ್' ಸಾಮ್ರಾಜ್ಯದಿಂದ ರೂಪುಗೊಂಡಿತು. ನಂತರ ಫ್ರೆಂಚ್ ವಸಾಹತಾಗಿ, ೧೯೫೩ರಲ್ಲಿ ಸ್ವಾತಂತ್ರ್ಯ ಪಡೆಯಿತು. ಪ್ರಸ್ತುತ ಲಾವೋಸ್ ನಲ್ಲಿ ಕಮ್ಯೂನಿಸ್ಟ್ ಸರಕಾರವಿದೆ. ನಿಮಗೆ ಲಾವೋಸ್ ಎನ್ನುವ ಹೆಸರು ಹೇಗೆ ಬಂತು ಅನ್ನೋ ಕುತೂಹಲವಿರಬಹುದಲ್ಲವೇ? ಅದಕ್ಕೆ ಕಾರಣ ಲಾವೋ ಎನ್ನುವ ಮೂಲ ನಿವಾಸಿಗಳ ಗುಂಪು. ಲಾವೋ ಜನರ ಅಥವಾ ಮಂದಿಯ ಸಾಮ್ರಾಜ್ಯ ಎಂದು ಕರೆಯಲಾಗುವ ಇದಕ್ಕೆ ಹಳೆಯ ಫ್ರೆಂಚ್ ಹೆಸರಾದ ‘ರಾಯೌಮ್ ಡೆಸ್ ಲಾವೋಸ್’ ನಿಂದಲೂ ಬಂದಿರಬಹುದು ಎನ್ನುತ್ತಾರೆ. ಲಾವೋ ಎಂದರೆ ಏನು ಎಂದು ಸ್ಪಷ್ಟ ಮಾಹಿತಿ ಇಲ್ಲ. ಬಹುಷ ಇದೊಂದು ಮೂಲ ನಿವಾಸಿಗಳ ಗುಂಪಿನ ಹೆಸರಿರಬಹುದು ಎನ್ನುತ್ತಾರೆ ಇತಿಹಾಸಕಾರರು.
ಚೀನಾ ಮತ್ತು ವಿಯಟ್ನಾಂ ದೇಶದ ಹಳೆಯ ದಾಖಲೆಗಳಲ್ಲಿ ಲಾವೋ ಬಗ್ಗೆ ಒಂದು ಮಾಹಿತಿ ಇದೆ. ಅದನ್ನು ಕೇಳಿದರೆ ನಿಮಗೆ ಅಚ್ಚರಿಯಾದೀತು. ರಾಮಾಯಣದ ಲವ (ಶ್ರೀರಾಮನ ಮಗ) ನಿಗೂ ಲಾವೋಸ್ ಗೂ ನಂಟು ಇದೆ ಎನ್ನಲಾಗಿದೆ. ಇದು ಎಷ್ಟು ಸತ್ಯ ಎನ್ನುವುದನ್ನು ಹೇಳಲಾಗದಿದ್ದರೂ ದಾಖಲಾತಿಗಳಲ್ಲಿ ಅಡಕವಾಗಿರುವುದರಿಂದ ಏನಾದರೂ ನಂಟು ಇದ್ದಿರಲೂ ಬಹುದು. ಇದು ಲಾವೋಸ್ ನ ನಾಮ ಪುರಾಣ.
ಲಾವೋಸ್ ನ ವಿಶೇಷತೆ ಎಂದರೆ ಇದು ವಿಶ್ವದ ಅಗ್ಗದ ದೇಶಗಳಲ್ಲಿ ಒಂದು ಎನ್ನುವ ಖ್ಯಾತಿ ಪಡೆದುಕೊಂಡಿದೆ. ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡಲು ಲಾವೋಸ್ ಉತ್ತಮ ಆಯ್ಕೆ. ಇಲ್ಲಿರುವ ಲುವಾಂಗ್ ಪ್ರಬಾಂಗ್ (Luang Prabang) ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!