ಐತಿಹಾಸಿಕ ಕಾದಂಬರಿಗಳನ್ನು ಬರೆಯುವಲ್ಲಿ ಸಂತೋಷಕುಮಾರ ಮೆಹಂದಳೆಯವರದ್ದು ಎತ್ತಿದ ಕೈ. ಇವರು ಬರೆಯುವ ಕಾದಂಬರಿಗಳು ಕೇವಲ ದಾಖಲೆಗಳನ್ನಷ್ಟೇ ನೀಡದೆ ಸೊಗಸಾಗಿ ಕಥೆಯ ರೂಪದಲ್ಲಿ ಓದಿಸಿಕೊಂಡೂ ಹೋಗುತ್ತದೆ. ಇದೇ ಇವರ ಬರವಣಿಗೆಯ ಹೆಗ್ಗಳಿಕೆ. ಪುಸ್ತಕ ಓದಿ ಇಷ್ಟವಾಗದೇ ಇದ್ದಲ್ಲಿ ಹಣವನ್ನು ಹಿಂದೆ ನೀಡುವ ಚಾಲೆಂಜ್ ಸಹಾ ಮಾಡುತ್ತಾರೆ. ಇದು ಅವರಿಗೆ ಅವರ ಬರವಣಿಗೆಯ ಮೇಲಿರುವ ನಂಬಿಕೆ. ‘ವಾತಾಪಿ…’ ಎನ್ನುವ ಕೃತಿಯಲ್ಲಿ ಅಪ್ರತಿಮ ಸೇನಾನಿ ಇಮ್ಮಡಿ ಪುಲಕೇಶಿ ಬಗ್ಗೆ ಅದ್ಭುತವಾದ ಮಾಹಿತಿಯನ್ನು ನೀಡಿದ್ದಾರೆ.
“ಇಮ್ಮಡಿ ಪುಲಕೇಶಿ - ಅವನು ಈ ಭೂಭಾಗ ಕಂಡ ಅಪ್ರತಿಮ ಯುದ್ಧಾಳು. ನೌಕಾ ಸೇನೆಯನ್ನು ಯಶಸ್ವಿಯಾಗಿ ಮುನ್ನೆಡೆಸಿ ವಿದೇಶಿ ಆಕ್ರಮಣವನ್ನು ಗೆದ್ದ ಹಿರಿಮೆ ಅವನದು. ವಿದೇಶಿ ಯಾತ್ರಾರ್ಥಿಗಳು ಮತ್ತು ಸಾಮ್ರಾಟರ ದೂತರು ಅವನ ಸ್ನೇಹಕ್ಕಾಗಿ ಆಗಮಿಸಿದ್ದರು. ಸಂಪೂರ್ಣ ದಕ್ಷಿಣವನ್ನೆಲ್ಲ ಗೆದ್ದ ಮತ್ತು ದಕ್ಷಿಣಾ ಪಥೇಶ್ವರನೆಂದು ಬಿರುದಾಂಕಿತನಾದ ಮೊಟ್ಟ ಮೊದಲ ಮತ್ತು ಕೊನೆಯ ಮಹಾ ಸೇನಾನಿ ಅವನು. ಅವನು ಗೆದ್ದ ಯುದ್ಧಗಳು ಕೇವಲ ರಣಾಂಗಣ ಸಾಹಸವಲ್ಲ ದಾಖಲಿಸಬಲ್ಲ ಚರಿತ್ರೆಯಾಗಬೇಕಾದ ಅತಿ ದೊಡ್ಡ ದಂಡಯಾತ್ರೆಗಳು. ಪೂರ್ತಿ ಭರತ ಖಂಡದಲ್ಲೆ ಅವನಂಥ ಅಪ್ರತಿಮ ನೇರ ಯುದ್ಧರಂಗಕ್ಕಿಳಿದು ಗೆಲ್ಲುತ್ತಿದ್ದ ಸೇನಾನಿ ಬರಲೇ ಇಲ್ಲ. ಅಖಂಡ ಎರಡು ದಶಕಗಳ ಕಾಲ ಸಂಪೂರ್ಣ ದಕ್ಷಿಣ ಭಾರತವನ್ನಾಳಿದ್ದಲ್ಲದೇ ಜಗತ್ತಿನ ಮೊದಲ ಐದು ಮಹಾಯುದ್ಧದಲ್ಲಿ ಒಂದಾದ ರೇವಾ ನದಿ ತೀರದ ಯುದ್ಧವನ್ನೂ ಗೆದ್ದ ದಾಖಲೆ ಅವನೊಬ್ಬನದ್ದೇ. ಶಿಲ್ಪ ಕಲೆ, ಲಲಿತಕಲೆ ಮತ್ತು ಗುರುಕುಲಗಳಿಗೆ ನ್ಯಾಯ ಒದಗಿಸಿದ, ಎದುರಾಳಿಗಳೇ ಇಲ್ಲದಂತೆ ಜನಾನುರಾಗಿ ಆಡಳಿತ ನಡೆಸಿದ ಅವನಿಗೆ ಮುಳುವಾಗಿದ್ದು ಅವನ ಒಳ್ಳೆಯತನಗಳೆ. ಅವನೇ ಚಾಲುಕ್ಯರ ಅಪ್ರತಿಮ ಸೇನಾನಿ” ಇದು ಬೆನ್ನುಡಿಯಲ್ಲಿ ಕಂಡ ಬರಹ.
ಓದುಗರು ‘ವಾತಾಪಿ’ ಕೃತಿಯನ್ನು ಓದಲು ಆರಂಭಿಸುವ ಮೊದಲು ‘ಮಹಾ ಸಾಮ್ರಾಜ್ಯಕ್ಕೂ ಮುನ್ನ’ ಎನ್ನುವ ಲೇಖಕರ ಮಾತಿನಲ್ಲಿ ಇಮ್ಮಡಿ ಪುಲಕೇಶಿ ಬಗ್ಗೆ ಒಂದಿಷ್ಟು ಐತಿಹಾಸಿಕ ಸತ್ಯಗಳನ್ನು ಅನಾವರಣ ಮಾಡಿದ್ದಾರೆ. ಮೆಹಂದಳೆ ಬರೆಯುತ್ತಾರೆ…
“ಬಹುಶಃ ಇಮ್ಮಡಿ ಪುಲಕೇಶಿಯ ಬಗ್ಗೆ ಇರುವಷ್ಟು ಬ್ಲಾಗ್, ಯೂ ಟ್ಯೂಬರ್ ಮತ್ತು ವಿಡಿಯೊಗಳಷ್ಟು ಮತ್ತೆ ಬೇರಾವುದೇ ಸಾಮ್ರಾಟನ ಬಗ್ಗೆ ನಿಮಗೆ ಸಿಗಲಿಕ್ಕಿಲ್ಲ. ಆ ರೇಂಜ್ನಲ್ಲಿ ವೈಭವೀಕರಿಸುವಾಗ, ನೈಜ ಐತಿಹಾಸಿಕ ಪ್ರಮುಖ ಅಂಶಗಳನ್ನು ಕೈ ಬಿಟ್ಟಿದ್ದೇ ಸಿಗುತ್ತದೆ. ಎಲ್ಲ ಚರ್ವಿತ ಚರ್ವಣ ಮಾಹಿತಿ ಮಾತ್ರ. ವೈಜಯಂತಿಪುರದ ಕದಂಬರ ಮೂಲ ಮಯೂರವರ್ಮನ ಇತಿಹಾಸದಂತೆ ಇಮ್ಮಡಿ ಪುಲಕೇಶಿಯದ್ದೂ ಮೂರು ಮತ್ತೊಂದು ಪುಟದ ಇತಿಹಾಸವೇ ಹೊರತಾಗಿ ಸ್ಕೂಲ ಮತ್ತು ಅನುಕ್ರಮಣಿಕೆಯ ಇತಿಹಾಸವನ್ನು ಯಾರೂ ರಚಿಸಿಯೇ ಇಲ್ಲ. ಈಗಲೂ ಹೇಳುತ್ತಿರುವವರೂ ಇಲ್ಲವೇ ಇಲ್ಲ.
ಮುಂದೆಯೂ ಬರಲಿಕ್ಕಿಲ್ಲ. ಹೋಗಲಿ ಐತಿಹಾಸಿಕ ಕಥೆ ಕಾದಂಬರಿ ಮಾಡುವವರಾದರೂ ಇದನ್ನು ಒಂದು ಘಟನೆಗಳ ಕಾಲಾನುಕ್ರಮಣಿಕೆಯ ಅನುಸಾರ ಮತ್ತು ವಾಸ್ತವ ಸತ್ಯದ, ದತ್ತಾಂಶ ಆಧಾರಿತ ಎಳೆಗಳ ಮೇಲೆ ರೂಪಿಸಿದರಾ..? ಅದೂ ಇಲ್ಲ. ಎಲ್ಲರಂತೆ ಬರಹ, ವೀಡಿಯೊದಲ್ಲೆಲ್ಲ ಸುಮ್ಮನೆ ಅರವತ್ತು ಸಾವಿರ ಆನೆಗಳ ಸೈನ್ಯದ ಕತೆ ವಿಜೃಂಭಿಸಿದೆ. ಒಂದು ಲಕ್ಷ ಪದಾತಿ ಸೈನ್ಯ ಮತ್ತು ಒಂದು ಸಾವಿರ ಹಡಗು ಎಂಬ ವಿಷಯಗಳ, ಆಗಿನ ಕಾಲಕ್ಕೆ ಅರವತ್ತು ಸಾವಿರ ಆನೆಗಳ ಸೈನ್ಯದ ಸಮೇತ ದಂಡೆತ್ತಿ ಬಂದ ಹರ್ಷವರ್ಧನನ ಕಥಾನಕ ನಮಗೂ ಹಿಡಿಸುತ್ತದೆ. ಕಾರಣ ಅವನು ಸೋತ ಎಂಬ ಕಾರಣಕ್ಕೆ. ಆದರೆ ನರ್ಮದೆಯ ತೀರದಲ್ಲಿ ಅರವತ್ತು ಸಾವಿರ ಆನೆಗಳ ಸೈನ್ಯವಿದ್ದರೆ ಅವನು ಯಾಕಾದರೂ ಸೋಲುತ್ತಿದ್ದ. ಹೋಗಲಿ ಅವನನ್ನು ಗೆಲ್ಲಲು ಇಮ್ಮಡಿ ಪುಲಕೇಶಿ ಎಷ್ಟು ದೊಡ್ಡ ಸೈನ್ಯ ಒಯ್ಯಬೇಕಾಗುತ್ತದೆ ಮತ್ತದರ ಇತಿಹಾಸ ಏನು ಎಂದೆಲ್ಲ ಯಾರೂ ಗಮನಿಸಲೇ ಇಲ್ಲ. ಕೇವಲ ವೈಭವೀಕರಿಸುವುದರಲ್ಲೇ ತಲ್ಲೀನರಾಗಿ ಟಿ.ಆರ್.ಪಿ ಗಳಿಸುತ್ತಿದ್ದಾರೆ. ದತ್ತಾಂಶಗಳು ಇಲ್ಲವೇ ಇಲ್ಲ ಎಂದರೂ ಸರಿ.
ಮೂಲತ: ಇಮ್ಮಡಿ ಪುಲಕೇಶಿ ಖಡಾಖಂಡಿತ ಯುದ್ಧ ರಕ್ತಪಾತಗಳನ್ನು ಮಾಡಿದ ವೀರ, ನಿರ್ದಯವಾಗಿ ಶತ್ರುಗಳನ್ನೂ ತರಿದು ಪುಲಕೇಶಿ ಪರಮೇಶ್ವರನಾದ. ಆದರೆ ಎಲ್ಲಿ, ಹೇಗೆ ಎಂಬೆಲ್ಲ ಪ್ರಶ್ನೆಗಳಿಗೆ ಶಾಸನಾಧಾರಿತ ಮತ್ತು ಇತರ ಅಂಶಗಳನ್ನು ಬಿಟ್ಟು ಕತೆಗಳಲ್ಲಿ ಊಹಾತ್ಮಕ ಚಿತ್ರಣವೇ ತಂದು ಕೇಳುಗರಿಗೂ, ಓದುವವರಿಗೂ ಸಂಶಯ ಬರುವಷ್ಟು ಚಿತ್ರಿಸಬಾರದಲ್ಲವೇ..?
ಅವನ ದೊಡ್ಡ ವಿಜಯ ಹರ್ಷನ ಮೇಲೂ, ಅದಕ್ಕೂ ಮೊದಲು ಪಲ್ಲವರ ಮಹೇಂದ್ರವರ್ಮನ ಮೇಲೂ ಆಗಿದ್ದು ಹೌದಾದರೂ ಅದಕ್ಕಿಂತ ದೊಡ್ಡ ದಂಡಯಾತ್ರೆಯ ವಿವರ ನಮಗೆ ಲಭ್ಯವಾಗುವುದೇ ಇಲ್ಲ. ಕಾರಣ ಈ ಎಲ್ಲ ಇತಿಹಾಸ ಸಾರುವ ಕಥಾನಕದ ವಾಸ್ತವ ಅಗೆದು ತೆಗೆದೇ ಇಲ್ಲ. ಆದರೆ ಶಾಸನಗಳಲ್ಲಿ ಇದ್ದೇ ಇದೆ. ಅತಿದೊಡ್ಡ ದೀರ್ಘಕಾಲದ ಯುದ್ಧ ಚೈತ್ರಯಾತ್ರೆ ನಡೆದದ್ದು ಅವನು ಲಾಟರು ಮತ್ತು ಮಾಳವರನ್ನು ತಲುಪಿದಾಗ. ಅದರ ನಂತರ ಯಾವತ್ತೂ ಅವನು ಅಷ್ಟು ದೀರ್ಘ ಯುದ್ಧಗಳನ್ನು ಮಾಡಲಿಲ್ಲ. ಆ ಕಾರಣಕ್ಕೇನೆ ಅವನು ಸಾಮ್ರಾಟನಾದನೆ ಹೊರತಾಗಿ ಸುಮ್ಮನೆ ಸಾಮಂತರನ್ನು ಗೆದ್ದಿದ್ದಕ್ಕೆ ಅಲ್ಲ ಮತ್ತು ಅಂಥಾ ಸರಹದ್ದಿನವರೆಗೂ ಅವನು ಹೋಗದಿದ್ದರೆ, ಪಲ್ಲವರಾಗಲಿ, ಹರ್ಷವರ್ಧನನಾಗಲಿ ಇವನನ್ನು ಗೆಲ್ಲಬೇಕೆಂದು ದೊಡ್ಡ ದಂಡಯಾತ್ರೆಗೆ ಹೊರಡುತ್ತಲೂ ಇರಲಿಲ್ಲ. ಮಾಳವರು ಮತ್ತು ಲಾಟರನ್ನು ತಡುವಿಕೊಂಡವನು ಪೂರ್ತಿ ಉತ್ತರಕ್ಕೆ ಕೈ ಹಾಕಬಾರದೆಂದೇ ಅರ್ಧ ದಕ್ಷಿಣದ ಹಿಡಿತಕ್ಕೂ ಹರ್ಷವರ್ಧನ ಮುಂದಾದನೇ ವಿನಃ ಸುಮ್ಮನೆ ಒಬ್ಬ ದೊರೆ ಎಂದು ಪುಲಕೇಶಿಯನ್ನು ಮಣಿಸಲು ಬಂದಿರಲಿಲ್ಲ.
ವಿದೇಶಿ ದಾಖಲೆ ಮಾತ್ರವಲ್ಲ ಸುಮಾರು ನೂರಕ್ಕೂ ಹೆಚ್ಚು ಶಾಸನಗಳು ಮತ್ತು ತಾಮ್ರ ಪತ್ರಗಳು ಅಷ್ಟೇ ಸಂಖ್ಯೆಯ ಇತರ ಸಾಹಿತ್ಯ ದಾಖಲೆಗಳಲ್ಲಿ ಲಭ್ಯವಿರುವ ಬಿಂದುಗಳನ್ನು ಸೇರಿಸುತ್ತಾ ಇತಿಹಾಸದ ಲಿಂಕುಗಳನ್ನು ಜೋಡಿಸಿದರೆ ಮಾತ್ರ ಇಮ್ಮಡಿಯ ಸಾಹಸದ ನೈಜ ಕಥಾನಕ ಸಿಗುತ್ತದೆ. ಹಾಗಾಗಿ ಅದನ್ನೆಲ್ಲ ಮಾಡಲು ಸತತ ನಾಲ್ಕು ವರ್ಷಗಳ ಶ್ರಮ ಮತ್ತು ಸಮಯ ಹಾಕಬೇಕಾಯಿತು. ಮಯೂರವರ್ಮನಂತೆ ಇವನು ಪ್ರಸ್ತುತ ರಾಜಕೀಯ ನಿರ್ಲಕ್ಷಕ್ಕೂ, ಅನಾದರಕ್ಕೂ ಒಳಗಾದ ದೊರೆ ಕೂಡಾ.
ಜಾತಿಯಾಧಾರಿತ ಮೇಲಾಟದಲ್ಲಿ ಮತ್ತು ವ್ಯವಸ್ಥಿತವಾಗಿ ಕೀಳರಿಮೆಯನ್ನು ಹಿಂದೂಗಳಲ್ಲಿ ಬಿತ್ತುವ ಎಡಪಂಥೀಯ ಇತಿಹಾಸಕಾರರ ಧೋರಣೆಯಿಂದಾಗಿ ಇವತ್ತು 'ಕರ್ಣಾಟ ಬಲಂ' ಎಂಬ ಅಜೇಯ ಸೈನ್ಯ ಸ್ಥಾಪಿಸಿದವನ ಹೆಸರಲ್ಲಿ ಯಾವ ಉತ್ಸವವೂ ಇಲ್ಲ. ಏನಿದ್ದರೂ ಜಾತಿಯಾಧಾರಿತ ಪಾಳೆಗಾರನಿಗೆ ಮಣೆಯಾಗುವ ರಾಜಕೀಯದ ಮಧ್ಯೆ ಅರೆಬರೆ ಮಾಹಿತಿಯ ಪುಲಕೇಶಿ ಕೇವಲ ಓದುಗರ ಮತ್ತು ಬ್ಲಾಗಿಗರ ಜೇಬು ತುಂಬುವ ಸರಕಾಗುತ್ತಿರುವುದು ನಮ್ಮ ಇತಿಹಾಸಕ್ಕೆ ಪ್ರಸ್ತುತ ವ್ಯವಸ್ಥೆ ಮಾಡುತ್ತಿರುವ ದ್ರೋಹವಲ್ಲವೇ ಇನ್ನೇನು..?
ಇವತ್ತು ಕೇವಲ ಐನೂರು ಜನರನ್ನು ಆಳುತ್ತಿದ್ದ ಪಾಳೇಗಾರನೊಬ್ಬನಿಗೆ ರಾಜ್ಯದಲ್ಲಿ ಸಿಗುತ್ತಿರುವ ಗೌರವ ಮತ್ತು ಪರಾಕು, ಭಾರತ ಆಳಿದ್ದ, ಅರ್ಧ ಜಗತ್ತಿಗೇ ಕರ್ಣಾಟ ಬಲಂ ಸೈನ್ಯದ ರುಚಿ ತೋರಿಸಿದ್ದ, ಅತಿ ದೊಡ್ಡ ನೌಕಾ ಪಡೆ ಕಟ್ಟಿದ ಸಾಮ್ರಾಟನಿಗೆ ಒಂದಂಶವೂ ದಕ್ಕುತ್ತಿಲ್ಲ.
ಅಸಲಿಗೆ ಇದನ್ನೆಲ್ಲ ಉಲ್ಲೇಖಿಸಲು ಯಾರಿಗೂ ಆಸಕ್ತಿಯೂ ಇಲ್ಲ. ಇದ್ದವರಿಗೆ ಜಾತಿ ಬೆಂಬಲ ಇಲ್ಲ. ಹೀಗಾಗಿ ಕನಿಷ್ಟ ಓದಿನ ಮಾಹಿತಿಗಾಗಿಯಾದರೂ ಬರಲಿರುವ ಶತಮಾನಗಳಲ್ಲಿ ಇದೆಲ್ಲ ಅಳಿದು ಇನ್ನಿಷ್ಟು ಅನಾದರಕ್ಕೊಳಗಾಗದೇ ಇರಲಿ ಎಂಬ ಕಾರಣಕ್ಕೆ ಕಾದಂಬರಿ ರೂಪದಲ್ಲಿ ಲಭ್ಯ ಇರುವ ಮಾಹಿತಿಯನ್ನೆಲ್ಲ ಕ್ರೋಢೀಕರಿಸಿ ಇತಿಹಾಸ ಮರುರಚನೆಯ ಯತ್ನ ಮಾಡಿದ್ದೇನೆ. ಕಾರಣ ಯಾವ ಅಂಶವೂ ಓದುಗರ ಕೈತಪ್ಪಬಾರದೆನ್ನುವ ಆಶಯ ಆಗಲೂ ಈಗಲೂ ಇದೆ. ಉಳಿದಂತೆ ಸಿಕ್ಕಿದ ಮತ್ತು ಸೂಕ್ತ ಅಂಶಗಳ ಜೊತೆಗೆ ಕಾದಂಬರಿಕಾರನೊಬ್ಬನ ಸ್ವಾತಂತ್ರ್ಯ ಬಳಸಿದ್ದೇನೆ. ಅಲ್ಲಲ್ಲಿ ಕತೆಯಾಗಿ, ಲಾವಣಿಯಾಗಿ, ಜನಪದವಾಗಿ ದಕ್ಕಿದ್ದನ್ನೂ ಇತಿಹಾಸದ ವಾಸ್ತವದ ಜತೆಗೆ ಸಂಯೋಜಿಸಲಾಗಿದೆ.”
ಈ ಮುನ್ನುಡಿಯನ್ನು ಓದಿದ ಬಳಿಕ ನೀವು ಪುಸ್ತಕವನ್ನು ಪೂರ್ತಿಯಾಗಿ ಓದದೇ ಇರಲಾರಿರಿ. ಇಮ್ಮಡಿ ಪುಲಕೇಶಿಯ ವಂಶವೃಕ್ಷವನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ವಾತಾಪಿ ಎಂದರೆ ಈಗಿನ ಬದಾಮಿ. ಪ್ರತೀ ಪುಟದಲ್ಲಿರುವ ಮಾಹಿತಿಗೆ ತಕ್ಕ ದಾಖಲೆಯನ್ನು ನೀಡಿದ್ದಾರೆ. ಈ ಕೃತಿಯನ್ನು ಬರೆಯಲು ಮೆಹಂದಳೆಯವರು ಬಹಳ ಶ್ರಮ ಪಟ್ಟಿದ್ದಾರೆ. ಇದು ಅವರ ಈ ಕೃತಿಯಲ್ಲಿ ಗೊತ್ತಾಗುತ್ತದೆ. ತಮ್ಮ ಈ ೪೦೦ ಪುಟಗಳ ಕೃತಿಯನ್ನು ಮೆಹಂದಳೆಯವರು “ಕೊಂಡು ಓದುವವರಿಲ್ಲ ಎಂಬ ಹಳಾಹಳಿಯನ್ನು ಬದಲಿಸಿ, ಈವರೆಗೆ ಒಂದೂ ಪುಸ್ತಕ ಮರಳಿಸದ ನನ್ನ ಓದುಗ ದೊರೆಗಳಿಗೆ” ಸಮರ್ಪಣೆ ಮಾಡಿದ್ದಾರೆ. ವಾತಾಪಿ ಕೇವಲ ಪ್ರಾರಂಭ ಅಷ್ಟೇ, ಮುಂದಿನ ಭಾಗ ಇನ್ನೂ ಬರಲಿಕ್ಕಿದೆ… ಎನ್ನುವುದು ಸಂತೋಷಕುಮಾರ ಮೆಹಂದಳೆ ಅವರ ಮಾತು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!