ಇತ್ತೀಚಿನ ಪೀಳಿಗೆಗೆ ಈ ಶೀರ್ಷಿಕೆ ಬಗ್ಗೆ ತಿಳಿದಿರುವುದಿಲ್ಲ ಏಕೆಂದರೆ ಈಗ ಎಲ್ಲರ ಮನೆಯ್ಲಲಿಯು ಸಹ ಟಿ ವಿ ಇರುವುದರಿಂದ , ಇತ್ತೀಚಿನ ದಿನಗಳಲ್ಲಿ ಈ ವಿ ಸಿ ಡಿ ಹಾಗು ಹಳ್ಳಿಯ ಚಿತ್ರ ಪ್ರದರ್ಶನ ಕಡಿಮೆಯಾಗಿದ್ದು ಸಾಮಾನ್ಯವಾಗಿ ನೋಡಲು ಸಿಗುವುದಿಲ್ಲ.
ಈ ರೀತಿಯ ಕಾರ್ಯಕ್ರಮ ಇರುವುದನ್ನು ಸಾಮಾನ್ಯವಾಗಿ ಧ್ವನಿವರ್ಧಕ ಮೂಲಕ ತಿಳಿಸಲಾಗುತಿತ್ತು, ಆ ಸೌಲಭ್ಯ ಎಲ್ಲದ ಕಡೆಯಲಿ ಒಬ್ಬರಿಂದ ಇನ್ನೊಬ್ಬರಿಗೆ ಆ ಮಾಹಿತಿ ತಿಳಿಯುತ್ತಿತ್ತು. ವಿಷಯ ತಿಳಿದ ಕೂಡಲೇ ಎಲ್ಲರಲ್ಲಿಯೂ ಮೊದಲ ಕುತೂಹಲ ಯಾವ ಯಾವ ಸಿನಿಮಾ ಹಾಕುತ್ತಾರೆ ಮತ್ತು ಯಾವ ನಾಯಕ ನಟನ ಸಿನಿಮಾ ಎಂಬುದೇ ಸ್ವಾರಸ್ಯಕರ.
ಟಿವಿ ತರುವವರಿಗೂ ಎಲ್ಲರಲ್ಲಿಯೂ ಒಂದೇ ಆಸೆ. ಆ ಟಿವಿ ಎಷ್ಟು ದೊಡ್ಡದು ಹಾಗೂ ಅದು ಬಿಳಿ ಕಪ್ಪು ಅಥವಾ ಕಲರ್ (ಬಣ್ಣದ ) ಟಿವಿ ಎಂಬ ಮಾಹಿತಿಗಳು ಈಗಾಗಲೇ ಆ ಟಿವಿ ಕಾರ್ಯಕ್ರಮ ಆಯೋಜಿಸಿದರ ಮನೆಯವರಿಂದ ತಿಳಿದುಕೊಳ್ಳುತ್ತಿದ್ದರು ಮತ್ತು ರಾತ್ರಿ ಊಟ ಬೇಗ ಮುಗಿಸಿ ಕಾಯುತ್ತಿದ್ದ ಆ ಕ್ಷಣಗಳೇ ಮಧುರ
ಹೊಲ ಗದ್ದೆಯಲ್ಲಿ ದಿನಪೂರ್ತಿ ದುಡಿದು ದಣಿದಿದ್ದರೂ ಎಲ್ಲಾ ನೋವು ಮತ್ತು ಆಯಾಸವನ್ನು ಮರೆತು ಕೊಂಚ ಮನರಂಜನೆಗೆ ಹಾತೊರೆಯುತ್ತಿದ್ದ ಮುಗ್ದ ನಿಶ್ಕಲ್ಮಷದ ಮನಸುಗಳ ಮೌನ ಮತ್ತು ಜೀವನದ ಜಂಜಾಟಗಳ ಕ್ಷಣಿಕ ಸ್ವಲ್ಪ ಸಮಯದ ಮುಕ್ತಿಗೆ ಇದೊಂದು ಚಿಕ್ಕ ಮನರಂಜನೆಯಾಗಿತ್ತು. ಎಲ್ಲರೂ ಟಿವಿಗೆ ಹತ್ತಿರ ಇರುವ ಹಾಗೆ ಚಾಪೆಯನ್ನು ಹಾಸಿ ಅವರ ಜಾಗವನ್ನು ಕಾಯ್ದಿರಿಸುತಿದ್ದರು. ಕೆಲವೊಮ್ಮೆ ಚಿಕ್ಕ ಪುಟ್ಟ ಜಗಳಗಳೂ ಸಹ ನಡೆಯಿತ್ತಿದ್ದವು. ಏನೇ ಆದರೂ ಅದೆಲ್ಲವೂ ಕಾರ್ಯಕ್ರಮ ಪ್ರಾರಂಭ ಆಗುವವರೆಗೂ ಮಾತ್ರ ಸೀಮಿತ.
ಮೊದಲ ಸಿನೆಮಾ ವಿ ಸಿ ಡಿ ಪರೀಕ್ಷೆ ನಡೆಸುತಿದ್ದಾಗ ಎಲ್ಲರೂ ಸಹ ತುಂಬಾ ಗಾಂಭೀರ್ಯದಿಂದ ಸುಜನಶೀಲರಾಗಿ ಕುಳಿತಿರುತ್ತಿದ್ದರು. ಈ ವಿ ಸಿ ಡಿ ತುಂಬಾ ಹಳೆಯದಾಗಿದ್ದರೆ ಟಿವಿಯಲ್ಲಿ ಚಿತ್ರ ಸರಿಯಾಗಿ ಕಾಣಿಸುತ್ತಿರಲಿಲ್ಲ. ಕೆಲವೊಮ್ಮೆ ಅದಕ್ಕೆ ಮದುವೆಯ / ಲಗ್ನ ಪತ್ರಿಕೆಯ ಲಕೋಟೆಯ ಕಾಗದವನ್ನು ಆ ವಿ ಸಿ ಡಿಯ ಟೇಪ್ ಮಧ್ಯೆ ಇರಿಸಲಾಗುತಿತ್ತು. ಆಗ ಟಿವಿಯ ಚಿತ್ರ ಸುಧಾರಿಸುತಿತ್ತು .
ಈ ಎಲ್ಲ ಹಂತಗಳನ್ನು ದಾಟಿ ಯಾವುದೊ ಸಿನಿಮಾ ನಡೆಯುತ್ತಿದ್ದಾಗ ಮಧ್ಯೆ ಮಳೆ ಬಂದರೆ ಎಲ್ಲವೂ ಹಾಳಾಗುತಿತ್ತು ಮತ್ತು ಕರೆಂಟ್ ಹೋದರೆ ಪಾಪ ಎಲ್ಲರು ಸಹ ಮತ್ತೆ ಕರೆಂಟ್ ಬರುವವರೆಗೂ ಕಾಯುತಿದ್ದರು. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಯಾವುದೇ ಸಿನೆಮಾ ಪ್ರದರ್ಶನದಲ್ಲಿ ಬರುವ ಪಾತ್ರಗಳಲ್ಲಿ ಅವರ ಕಷ್ಟ, ತಪ್ಪು, ಪಶ್ಚತ್ತಾಪ, ದೈರ್ಯಕ್ಕೆ ಸ್ಫೂರ್ತಿಯಾಗುತಿತ್ತು.
ಈ ಮಧ್ಯೆ ಕೆಲವೊಬ್ಬರು ಅಲ್ಲೇ ನಿದ್ರೆಗೆ ಜಾರುತಿದ್ದರು, ಅವರು ಮಲಗಿರುವ ಭಂಗಿಯನ್ನು ನೋಡಿ ಎಲ್ಲರಿಗೂ ತೋರಿಸಿ ಅಪಹಾಸ್ಯ ಮಾಡುತಿದ್ದರು. ನನಗೆ ತಿಳಿದ ಹಾಗೆ ನಾನು ೧೨-೧೫ ವರ್ಷದವನಿದ್ದಾಗ ಹಾಗೆ ಸಿನಿಮಾ ನೋಡುತ್ತಾ ಅಲ್ಲೇ ನಿದ್ರೆಗೆ ಜಾರಿದ್ದ ನನ್ನ ಸ್ನೇಹಿತನ ಬಾಯಿಗೆ ಅಲ್ಲೇ ಬೇರೆಯವರು ಸೇದಿ ಬಿದ್ದಿದ್ದ ತುಂಡು ಬಿಡಿಯನ್ನು ಅವನ ಬಾಯಿಗೆ ಇಟ್ಟು ಎಲ್ಲರಿಗೂ ತೋರಿಸಿ ಹೊಟ್ಟೆ ಹುಣ್ಣಾಗಿಸುವಷ್ಟು ನಿಕ್ಕಿದ್ದು ಮರೆಯಲಾಗದ ನೆನಪು . ಬೆಳಗಿನ ತನಕ ಈ ರೀತಿಯಾಗಿ ಎರಡು ಅಥವಾ ಮೂರು ಸಿನೆಮಾ ನೋಡುತಿದ್ದ ಅಂದಿನ ಮನರಂಜನೆಯ ಆ ದಿನಗಳೇ ಅವಿಸ್ಮರಣೀಯ .
ಚಿತ್ರ ಸಂಗ್ರಹಣೆ :- ಚಾಟ್ ಜಿ ಪಿ ಟಿ
ದೀಪು ಬೆಳ್ಳುಳ್ಳಿ ಮೈಸೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!