ಇತ್ತೀಚೆಗೆ ವಿದ್ಯಾರ್ಥಿಗಳ ಪ್ರವಾಸದ ವಾಹನಗಳು ಸರಣಿ ಅಪಘಾತಗಳಿಗೆ ಈಡಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯು ಜಲಪಾತ, ನದಿ ಹಾಗೂ ಸಮುದ್ರ ತೀರಗಳಿಗೆ ಮಕ್ಕಳ ಪ್ರವಾಸವನ್ನು ನಿಷೇಧಿಸಿರುವುದು ಅತ್ಯಂತ ಸ್ವಾಗತಾರ್ಹ ಮತ್ತು ಮುಂಜಾಗ್ರತೆಯ ಕ್ರಮವಾಗಿದೆ.

ಕಲಿಕೆ ಮತ್ತು ಜ್ಞಾನಾರ್ಜನೆಯ ಪವಿತ್ರ ಉದ್ದೇಶದಿಂದ ಕೈಗೊಳ್ಳುವ ಪ್ರವಾಸಗಳು, ಕೇವಲ ಕ್ಷಣಿಕ ಮೋಜು ಹಾಗೂ ಬೇಜವಾಬ್ದಾರಿತನದ ನಿರ್ಧಾರಗಳಿಂದಾಗಿ ದುರಂತದಲ್ಲಿ ಅಂತ್ಯವಾಗುತ್ತಿವೆ. ಪ್ರವಾಸಿ ತಾಣಗಳಲ್ಲಿ ನೀರಿನ ಆಳ ಅರಿಯದೆ ಇಳಿಯುವುದು, ಕಡಿದಾದ ಕಲ್ಲುಗಳ ಮೇಲೆ ನಿಂತು ಸೆಲ್ಲಿ ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕುವುದು ಮತ್ತು ವಾಹನ ಚಾಲಕರ ಅತಿವೇಗ ಹಾಗೂ ನಿರ್ಲಕ್ಷ್ಯಗಳು ಇಂತಹ ಕಣ್ಣೀರಿನ ಕಥೆಗಳಿಗೆ ಕಾರಣವಾಗುತ್ತಿವೆ. ವಿದ್ಯಾರ್ಥಿ ಸಮೂಹದ ಅಮೂಲ್ಯ ಜೀವ ರಕ್ಷಣೆಗಾಗಿ ಕಾಲೇಜು ಇಲಾಖೆ ತಂದಿರುವ ಈ ಕಟ್ಟುನಿಟ್ಟಿನ ನಿಯಮಗಳನ್ನು ಶಾಲಾ ಮಟ್ಟಕ್ಕೂ ವಿಸ್ತರಿಸಬೇಕಾದ ತುರ್ತು ಅಗತ್ಯ ಇಂದು ಎದುರಾಗಿದೆ.

ಈ ನಿಯಮಗಳು ಕೇವಲ ಕಾಗದದ ಮೇಲಿನ ಆದೇಶಗಳಾಗಿ ಉಳಿಯಬಾರದು. ಶಾಲಾ-ಕಾಲೇಜು ಆಡಳಿತ ಮಂಡಳಿಗಳು, ಶಿಕ್ಷಕರು, ಪೋಷಕರು ಮತ್ತು ಸ್ವತಃ ವಿದ್ಯಾರ್ಥಿಗಳು ಒಟ್ಟಾಗಿ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಪ್ರವಾಸದ ಸ್ಥಳಗಳನ್ನು ಆಯ್ಕೆ ಮಾಡುವಾಗ ಐತಿಹಾಸಿಕ, ವೈಜ್ಞಾನಿಕ ಮತ್ತು ಸುರಕ್ಷಿತ ತಾಣಗಳಿಗೆ ಮೊದಲ ಆದ್ಯತೆ ನೀಡಬೇಕು. ಶಿಕ್ಷಕರು ಪ್ರವಾಸದುದ್ದಕ್ಕೂ ವಿದ್ಯಾರ್ಥಿಗಳ ಮೇಲೆ ನಿರಂತರ ನಿಗಾ ಇರಿಸಬೇಕು.

ಇದರ ಜತೆಗೆ ಪ್ರವಾಸಿ ತಾಣಗಳಲ್ಲಿ ನಮ್ಮ ಬೇಜವಾಬ್ದಾರಿತನ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಚಿತ್ರದುರ್ಗ ತಾಲೂಕಿನ ವಾಣಿವಿಲಾಸ ಅಣೆಕಟ್ಟಿನಲ್ಲಿ ತಂದೆಯೊಬ್ಬರು ಮಗುವನ್ನು ಕೈಯಲ್ಲಿ ಹಿಡಿದು ಸೆಲ್ಫಿ ತೆಗೆದುಕೊಳ್ಳುವಾಗ ಮಗು ನೀರಿಗೆ ಬಿದ್ದು ಮೃತಪಟ್ಟ ಘಟನೆ ಕೇವಲ ಹೃದಯ ವಿದ್ರಾವಕವಲ್ಲ, ಅದು ನಮಗೊಂದು ಎಚ್ಚರಿಕೆಯ ಘಂಟೆ. ಕ್ಷಣಿಕ 'ಲೈಕ್ಸ್' ಮತ್ತು 'ಕಮೆಂಟ್ಸ್' ಆಸೆಗಾಗಿ ಅತ್ಯಂತ ಅಪಾಯಕಾರಿ ಜಾಗಗಳಲ್ಲಿ ನಿಂತು ಜೀವವನ್ನೇ ಪಣಕ್ಕಿಡುವ 'ಸೆಲ್ಫಿ ಹುಚ್ಚು' ಇಂದು ಮಹಾಮಾರಿಯಾಗಿ ಕಾಡುತ್ತಿದೆ.

ಅಣೆಕಟ್ಟು ಕಡಿದ ಕಡಿದಾದ ಬೆಟ್ಟಗಳು, ಚಲಿಸುವ ರೈಲುಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ಈಗಾಗಲೇ ದೇಶಾದ್ಯಂತ ನೂರಾರು ಜೀವಗಳು ಸಾವನಪ್ಪಿವೆ. ಈ ಸಾವುಗಳು ಆಕಸ್ಮಿಕ ಅಪಘಾತಗಳಲ್ಲಿ ನಮ್ಮದೇ ಸ್ವಯಂಕೃತ ಅಪರಾಧಗಳು. ಈ ನಿರಂತರ ದುರಂತಗಳಿಗೆ ಕಡಿವಾಣ ಹಾಕಲು ಕೇವಲ ಸರಕಾರದ ನಿಯಮಗಳು ಸಾಲದು. ಅದಕ್ಕೆ ಸಾರ್ವಜನಿಕರ ಸಹಭಾಗಿತ್ವ ಮತ್ತು ಸ್ವಯಂ-ಶಿಸ್ತು ಅತೀ ಮುಖ್ಯ.

ಶೈಕ್ಷಣಿಕ ಪ್ರವಾಸಗಳು ಕೇವಲ ಮನೋರಂಜನೆಯ ಉದ್ದೇಶಕ್ಕೆ ಸೀಮಿತವಾಗದೆ ಐತಿಹಾಸಿಕ, ವೈಜ್ಞಾನಿಕ ಮತ್ತು ಶೈಕ್ಷಣಿಕ ಮಹತ್ವವುಳ್ಳ ಸುರಕ್ಷಿತ ಸ್ಥಳಗಳಿಗೆ ಮಾತ್ರ ಸೀಮಿತವಾಗಿರಬೇಕು. ಅಪಾಯಕಾರಿ ಸ್ಥಳಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮಕ್ಕಳೊಂದಿಗೆ ಇರುವಾಗ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು. ಪ್ರವಾಸಿ ತಾಣಗಳು ಮತ್ತು ಜಲಾಶಯಗಳ ಬಳಿ 'ನೋ ಸೆಲ್ಫಿ ಝೋನ್' ಎಂದು ಪ್ರಕಟಿಸಿ, ನಿಯಮ ಉಲ್ಲಂಘಿಸುವವರಿಗೆ ಭಾರೀ ದಂಡ ವಿಧಿಸುವ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕು.

ಜ್ಞಾನ ಬೆಳೆಸಿಕೊಳ್ಳಬೇಕಾದ ಪ್ರವಾಸಗಳು ಸ್ಮಶಾನ ಯಾತ್ರೆಯಾಗಬಾರದು. ಹಾಗೆಯೇ, ಕ್ಯಾಮರಾದ ಒಂದು 'ಕ್ಲಿಕ್' ಇಡೀ ಜೀವನದ ಸಂತೋಷವನ್ನೇ ಕಸಿದುಕೊಳ್ಳುವಂತಾಗಬಾರದು. ಸರಕಾರ ತಂದಿರುವ ನಿಯಮಗಳನ್ನು ಶಿಸ್ತಿನಿಂದ ಪಾಲಿಸೋಣ. ಸೆಲ್ಫಿ ಹುಚ್ಚಿಗೆ ಕಡಿವಾಣ ಹಾಕಿ, ಜವಾಬ್ದಾರಿಯುತ ಪ್ರವಾಸ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ. ಪ್ರವಾಸದ ಆನಂದವು ಜವಾಬ್ದಾರಿಯ ಮಿತಿಯೊಳಗಿದ್ದಾಗ ಮಾತ್ರ ಶೈಕ್ಷಣಿಕ ಪ್ರವಾಸಗಳು ಸುಸೂತ್ರವಾಗಿ ಮತ್ತು ಅರ್ಥಪೂರ್ಣವಾಗಿ ಮುಕ್ತಾಯಗೊಳ್ಳಲು ಸಾಧ್ಯ

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೯-೦೫-೨೦೨೬

ಚಿತ್ರ ಕೃಪೆ: ಪ್ರಗತಿವಾಡಿ ಜಾಲತಾಣ