ಇಂದು ಪ್ರಪಂಚ ತುಂಬಾ ಕಿರಿದಾಗಿದೆ ಎಂದು ಎಲ್ಲರಿಗೂ ಅನಿಸುತ್ತದೆ. ಏಕೆಂದರೆ ಪ್ರಪಂಚದ ಯಾವುದೇ ಭಾಗಕ್ಕಾದರೂ ದಿನ ಕಳೆಯುವಷ್ಟರಲ್ಲಿ ಹೋಗಿ ತಲುಪಬಹುದಾದ ಸಂಚಾರ ವ್ಯವಸ್ಥೆ ಲಭ್ಯವಿದೆ. ಆದರೆ ನಾಲ್ಕೈದು ಶತಮಾನಗಳ ಹಿಂದೆ ಈ ರೀತಿಯ ಸೌಲಭ್ಯಗಳು ಇರಲಿಲ್ಲ. ಭೂಮಿಯ ಒಂದು ಭಾಗದಲ್ಲಿದ್ದ ಜನರಿಗೆ ಮತ್ತೊಂದು ಭಾಗದಲ್ಲಿ ಏನಿದೆ? ಅಲ್ಲಿ ಭೂಭಾಗವಿದೆಯೇ? ಸಮುದ್ರದಿಂದಲೇ ಕೂಡಿದೆಯೇ? ಚಿತ್ರ ವಿಚಿತ್ರ ಪ್ರಾಣಿಗಳು ಇವೆಯೇ? ಎಂಬ ಹಲವಾರು ವಿಚಾರಗಳು ಗೊತ್ತೇ ಇರಲಿಲ್ಲ. ಆದರೆ ಪ್ರತಿಯೊಂದು ಕಡೆಯಲ್ಲಿ ಹುಚ್ಚು ಸಾಹಸಿಗಳು ಇದ್ದೇ ಇರುತ್ತಾರೆ. ಆಗ ಭೂ ಪ್ರದಕ್ಷಿಣೆಗೆ ಇದ್ದ ಏಕೈಕ ಮಾರ್ಗ ಎಂದರೆ ನೌಕಾಯಾನ. ನೌಕಾಯಾನದಲ್ಲಿ ಒದಗಿ ಬರುವ ಅಡಚಣೆಗಳು ನೂರಾರು. ಅವನ್ನೆಲ್ಲಾ ಮೆಟ್ಟಿ ನಿಂತು ಮೊದಲನೇ ಬಾರಿಗೆ ಇಡೀ ಭೂಮಿಯನ್ನು ಸುತ್ತಿದ ಓರ್ವ ಸಾಹಸಿ ನಾವಿಕನ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
ವ್ಯಾಪಾರದ ನೆಪದಲ್ಲಿ ೧೪೯೮ರಲ್ಲಿ ಭಾರತಕ್ಕೆ ದಾರಿ ಹುಡುಕಿಕೊಂಡು ಬಂದ ಪೋರ್ಚ್ ಗೀಸ್ ನಾವಿಕ ವಾಸ್ಕೋ ಡಿ ಗಾಮ ಆಗಲಿ, ಅಮೇರಿಕಾ ಖಂಡದ ಕೆಲವು ದ್ವೀಪಗಳನ್ನು ೧೪೯೨ರಲ್ಲಿ ಹುಡುಕಿದ ಕ್ರಿಸ್ಟೋಫರ್ ಕೊಲಂಬಸ್ ಆಗಲಿ ನಂತರದ ದಿನಗಳಲ್ಲಿ ಅಮೇರಿಕಾ ಎನ್ನುವುದು ಏಷ್ಯಾ ಖಂಡಕ್ಕಿಂತ ಬೇರೆ ಆಗಿರುವ ಪ್ರತ್ಯೇಖ ಖಂಡ ಎಂದು ತಿಳಿಸಿದ ಇಟಾಲಿಯನ್ ನಾವಿಕ ಅಮೇರಿಗೊ ವೆಸ್ಪುಚ್ಚಿ (ವೆಸ್ಪುಸ್ಸಿ) ಯಾಗಲಿ ಪ್ರಪಂಚದ ಎಲ್ಲಾ ಭಾಗಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಇದನ್ನು ಸಾಧಿಸಿದ್ದು ಮತ್ತು ಅದೇ ವಿಶ್ವ ಪರ್ಯಟನೆಯಲ್ಲೇ ತನ್ನ ಜೀವ ತೆತ್ತ ಸಾಹಸಿ ನಾವಿಕ ಫರ್ಡಿನಂಡ್ ಮಗೆಲ್ಲನ್ (Ferdinand Magellan) ಅಥವಾ ಮಗೆಲನ್. ೧೨ ರಿಂದ ೧೬ನೇ ಶತಮಾನದ ಸಮಯದಲ್ಲಿ ಹಡಗು ಹತ್ತಿ ಹೋಗುವುದೇ ಹೊಸ ಭೂಭಾಗ ಅಥವಾ ಬೇರೆ ದೇಶಗಳನ್ನು ಹುಡುಕಲು ಇದ್ದ ಏಕೈಕ ದಾರಿ. ಹುಡುಕಲು ಹೋದವರಿಗೆ ಭೂಭಾಗ್ಯವೂ ಸಿಕ್ಕಬಹುದು, ಸಿಗದೆಯೂ ಇರಬಹುದು. ಸಮುದ್ರದಲ್ಲಿ ಏಳುವ ಭೀಕರ ಬಿರುಗಾಳಿಗೆ ಸಿಕ್ಕಿ, ಆಹಾರವಿಲ್ಲದೇ ಸತ್ತವರೂ ಅಸಂಖ್ಯಾತ ಮಂದಿ ಇದ್ದಾರೆ. ಹಡಗಿಗೆ ಹತ್ತಿದ ವ್ಯಕ್ತಿ ಮರಳಿ ಮತ್ತೆ ಬರುವನೋ ಎನ್ನುವುದು ಆ ಕಾಲದಲ್ಲಿ ಖಾತ್ರಿ ಇರಲಿಲ್ಲ. ಆದರೆ ಆಗಲೂ ಸಾಹಸಿಗಳಿಗೆ ಕೊರತೆ ಇರಲಿಲ್ಲ. ಅಂತಹ ಓರ್ವ ಹುಚ್ಚು ಸಾಹಸಿಯೇ ಫರ್ಡಿನಂಡ್ ಮಗೆಲ್ಲನ್.
ಮಗೆಲ್ಲನ್ ಪೋರ್ಚ್ ಗೀಸ್ ರಾಜ ಒಂದನೇ ಮ್ಯಾನ್ಯುಯೆಲ್ ನ ಆಪ್ತ ಆಸ್ಥಾನಿಕ ನಾವಿಕನಾಗಿದ್ದ. ೧೪೯೫ರಲ್ಲಿ ಮ್ಯಾನ್ಯುಯೆಲ್ ಜೊತೆ ಸೇರಿಕೊಂಡು ಈತ ೧೫೧೧ರಲ್ಲಿ ಮಲಕ್ಕಾ ದ್ವೀಪವನ್ನು ವಶ ಪಡಿಸಿಕೊಳ್ಳುತ್ತಾನೆ. ಆ ಬಳಿಕ ಈತನ ಹೆಸರು ಪ್ರಸಿದ್ಧಿಗೆ ಬರುತ್ತದೆ. ಆದರೆ ಕೆಲವೇ ವರ್ಷಗಳಲ್ಲಿ ರಾಜನ ಜೊತೆ ಭಿನ್ನಾಭಿಪ್ರಾಯ ಮೂಡಿ ಮಗೆಲ್ಲನ್ ಸ್ಪೇನ್ ನ ರಾಜನ ಜೊತೆ ೧೫೧೭ರಲ್ಲಿ ಸ್ನೇಹ ಮಾಡಿಕೊಳ್ಳುತ್ತಾನೆ. ಸ್ಪೇನ್ ರಾಜನ ಸಹಕಾರದೊಂದಿಗೆ ೧೫೧೯ರಲ್ಲಿ ಐದು ಹಡಗುಗಳೊಂದಿಗೆ ವಿಶ್ವ ಪರ್ಯಟನೆಗೆ ಹೊರಡುತ್ತಾನೆ.
ಈ ಪ್ರಯಾಣವು ಮಗೆಲ್ಲನ್ ನ ಹಿಂದಿನ ಪ್ರಯಾಣಗಳಂತೆ ಆರಾಮದಾಯಕವಾಗಿರಲಿಲ್ಲ. ಕಡಲಿನ ಹವಾಮಾನವೂ ಪ್ರಯಾಣಕ್ಕೆ ಸೂಕ್ತವಾಗಿರಲಿಲ್ಲ. ಸಮುದ್ರದ ನೀರಿನ ಹರಿವು ಅವರ ಪ್ರಯಾಣದ ವಿರುದ್ಧ ದಿಕ್ಕಿನಲ್ಲಿತ್ತು. ಸಿಬ್ಬಂದಿಗಳೂ ಮಗೆಲ್ಲನ್ ಗೆ ಪ್ರೋತ್ಸಾಹ ನೀಡದೇ ಆತನ ವಿರುದ್ಧವೇ ದಂಗೆ ಎದ್ದರು. ಆದರೂ ತನ್ನ ಚಾಣಾಕ್ಷತನದಿಂದ ನಿಭಾಯಿಸಿ ಹಾಗೂ ಹೀಗೂ ಒಂದು ಹೊಸ ಭೂಭಾಗ ಸೇರಿಕೊಳ್ಳುತ್ತಾನೆ. ಅದುವೇ ಇಂದಿನ ದಕ್ಷಿಣ ಅಮೇರಿಕಾ. ಆತ ಸಾಗಿ ಬಂದ ಸಮುದ್ರಕ್ಕೆ ಆಗ ಹೆಸರು ಇರಲಿಲ್ಲ. ಮಗೆಲ್ಲನ್ ಆ ಸಮುದ್ರಕ್ಕೆ ಫೆಸಿಫಿಕ್ ಮಹಾ ಸಾಗರ ಎಂದು ನಾಮಕರಣ ಮಾಡುತ್ತಾನೆ. ಆತ ಕಂಡು ಹಿಡಿದ ಈ ಸಮುದ್ರ ಮಾರ್ಗಕ್ಕೆ (ಜಲಸಂಧಿ) ನಂತರದ ದಿನಗಳಲ್ಲಿ ಈತನ ಹೆಸರನ್ನೇ ನೀಡಲಾಯಿತು. ಅದುವೇ ಮಗೆಲ್ಲನ್ ಜಲಸಂಧಿ (Strait of Magellan).
ಅಲ್ಲಿಂದ ಮರಳಿ ಸ್ಪೇನ್ ಗೆ ಹೊರಟಾಗ ಅವರ ಬಳಿ ಉಳಿದದ್ದು ಮೂರು ಹಡಗುಗಳು ಮಾತ್ರ. ಆದರೆ ಫೆಸಿಫಿಕ್ ಮಹಾ ಸಾಗರದಲ್ಲಿ ಪರ್ಯಟನೆ ಮಾಡುವಾಗ ಪ್ರತಿಕೂಲ ಹವಾಮಾನದ ಕಾರಣ ಹಲವಾರು ದಿನಗಳು ಉರುಳಿ ಅವರ ಬಳಿ ಇದ್ದ ಆಹಾರ ಸಾಮಾಗ್ರಿಗಳು ಖಾಲಿಯಾಗತೊಡಗಿದವು. ಮಗೆಲ್ಲನ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಹಸಿವಿನಿಂದ ನರಳತೊಡಗಿದರು. ಕೆಲವು ಸಿಬ್ಬಂದಿಗಳು ಹಸಿವಿನಿಂದ ಸತ್ತೇ ಹೋದರು. ಆದರೂ ಸುಮಾರು ಹದಿನಾಲ್ಕು ವಾರಗಳ ಪ್ರಯಾಣ ಮಾಡಿ ಕೊನೆಗೆ ಪಶ್ಚಿಮ ಫೆಸಿಫಿಕ್ ನ ಬಳಿಯಿದ್ದ ಒಂದು ದ್ವೀಪವನ್ನು ತಲುಪಿದರು. ಅಲ್ಲಿ ಸ್ವಲ್ಪ ದಿನ ತಂಗಿದ ಮಗೆಲ್ಲನ್ ಮತ್ತು ಆತನ ತಂಡ ಪ್ರಯಾಣ ಮುಂದುವರೆಸಿ ಫಿಲಿಫೈನ್ಸ್ ತಲುಪಿದರು.
ಫಿಲಿಫೈನ್ಸ್ ನ ಸ್ಥಳೀಯ ನಾಯಕರ ಜೊತೆ ಎಪ್ರಿಲ್ ೨೭, ೧೫೨೧ರಂದು ಗಲಾಟೆ ಮಾಡಿಕೊಂಡು ಸಣ್ಣ ಹೋರಾಟವಾಗಿ ಮಗೆಲ್ಲನ್ ದಾರುಣವಾಗಿ ಸಾವನ್ನಪ್ಪುತ್ತಾನೆ. ಮಗೆಲ್ಲನ್ ನ ಸಾವಿನ ಬಳಿಕ ಆತನ ಸಿಬ್ಬಂದಿಗಳು ಮತ್ತು ಹಡಗನ್ನು ಬಿಟ್ಟು ಕಳಿಸುತ್ತಾರೆ ಫಿಲಿಫೈನ್ಸ್ ನಾಯಕರು. ಕೊನೆಗೂ ಅವನ ಹಡಗು ಸೆಪ್ಟೆಂಬರ್ ೧೫೨೨ರಂದು ಸ್ಪೇನ್ ತಲುಪುತ್ತದೆ. ಸಾಹಸಿ ನಾವಿಕ ಮಗೆಲ್ಲನ್ ಸಾವಿಗೆ ಸ್ಪೇನ್ ಜನರು ಕಣ್ಣೀರಾಗುತ್ತಾರೆ. ಆತನ್ ಸಾಹಸ ಇಂದಿಗೂ ಎಲ್ಲಾ ನಾವಿಕರಿಗೆ ಸ್ಪೂರ್ತಿದಾಯಕ. ಮಗೆಲ್ಲನ್ ವಿಶ್ವವನ್ನು ಹಡಗಿನಲ್ಲಿ ಪ್ರದಕ್ಷಿಣೆ ಮಾಡಿದ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರನಾಗುತ್ತಾನೆ. ಆದರೆ ಈ ಪರ್ಯಟನೆಯ ಸವಿಯನ್ನು ಅನುಭವಿಸಲು ಮಗೆಲ್ಲನ್ ಜೀವಂತವಾಗಿರಲಿಲ್ಲ. ಅದುವೇ ಕಟು ವಾಸ್ತವ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!