ವೃಕ್ಷಮಾತೆ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕನವರ ಹೆಸರು ಕೇಳದವರೇ ವಿರಳ. ತನಗೆ ಮಕ್ಕಳಿಲ್ಲವೆಂಬ ಕೊರತೆಯನ್ನು ದೂರಮಾಡಲು ಗಿಡಗಳನ್ನೇ ಮಕ್ಕಳೆಂದು ತಿಳಿದು ನೆಟ್ಟು, ಪೋಷಿಸಿ ದೊಡ್ಡ ಮರಗಳನ್ನಾಗಿ ಮಾಡಿದ ಶ್ರೇಯಸ್ಸು ಇವರಿಗೆ ಸದಾಕಾಲ ಸಲ್ಲುತ್ತದೆ. ಇವರ ಈ ಸಮಾಜಮುಖಿ ಕಾರ್ಯವನ್ನು ಗಮನಿಸಿ ಕೇಂದ್ರ ಸರಕಾರವು ಇವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಬಗ್ಗೆ ಹಲವಾರು ಕೃತಿಗಳು ಹೊರಬಂದಿವೆ. ಶ್ರೀಧರ ಬನವಾಸಿ ಇವರು ‘ವೃಕ್ಷಮಾತೆ ತಿಮ್ಮಕ್ಕ’ ಎನ್ನುವ ನೂತನ ನಾಟಕ ಪುಸ್ತಕವನ್ನು ಹೊರತಂದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಸಿ ಎಂ ಗೋವಿಂದ ರೆಡ್ಡಿ. ಇವರ ಮಾತುಗಳಲ್ಲಿ ಪುಸ್ತಕವನ್ನು ಗಮನಿಸಿದಾಗ…  

“ಶ್ರೀಧರ ಬನವಾಸಿ ಅವರು ಕವಿತೆ, ಕತೆ, ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿ ಹೆಸರು ಮಾಡಿರುವಂಥವರು. ಕತೆ, ಕಾದಂಬರಿಗಳ ರಚನೆಯಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡಿರುವ ಇವರು 'ಅಮ್ಮನ ಆಟೋಗ್ರಾಫ್', 'ದೇವರ ಜೋಳಿಗೆ', 'ಬ್ರಿಟಿಷ್ ಬಂಗ್ಲೆ' ಎಂಬ ಕಥಾಸಂಕಲನಗಳನ್ನೂ, 'ತಿಗರಿಯ ಹೂಗಳು' ಎಂಬ ಕವನ ಸಂಕಲನವನ್ನೂ, 'ಬೇರು' ಎಂಬ ಕಾದಂಬರಿಯನ್ನೂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿ, ಇದೀಗ 'ವೃಕ್ಷಮಾತೆ ತಿಮ್ಮಕ್ಕ' ಎಂಬ ನಾಟಕವೊಂದನ್ನು ರಚಿಸಿ ನನ್ನಿಂದ ಮುನ್ನುಡಿಯ ಮಾತುಗಳನ್ನು ಬಯಸಿದ್ದಾರೆ. ಅವರು ನನ್ನ ಮೇಲಿಟ್ಟಿರುವ ಅಭಿಮಾನ ಮತ್ತು ಪ್ರೀತಿಗೆ ಕಟ್ಟುಬಿದ್ದು ಪ್ರಸ್ತುತ ನಾಟಕದ ಬಗ್ಗೆ ನನಗೆ ತೋಚಿದ ಕೆಲವು ಮಾತುಗಳನ್ನು ಹೇಳಲು ಇಚ್ಛಿಸುತ್ತೇನೆ.

ನಾಟಕ ಮಾನವ ಲೋಕದ ಅತ್ಯಂತ ಪ್ರಾಚೀನವಾದ ಕಲೆ. ಗ್ರೀಕ್ ಸಾಹಿತ್ಯದಲ್ಲಿನ ನಾಟಕಗಳನ್ನು, ಸಾಹಿತ್ಯ ಮೀಮಾಂಸೆಯನ್ನು ಕುರಿತು ಚರ್ಚಿಸಲು ಆಕರಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಭಾರತೀಯ ಕಾವ್ಯ ಪರಂಪರೆಯಲ್ಲಿ ಮಹಾಕವಿ ಕಾಳಿದಾಸನು 'ಕಾವ್ಯೇಷು ನಾಟಕಂ ರಮ್ಯಂ' ಎಂದು ಹೇಳಿ ನಾಟಕದ ಶ್ರೇಷ್ಠತೆಯನ್ನು ಹೇಳಿದ್ದಾನೆ.

ಇಲ್ಲಿ ಶ್ರೀಧರ ಬನವಾಸಿ ಅವರು ಭಿನ್ನವಾಗಿ ಕಾಣುತ್ತಾರೆ. 'ವೃಕ್ಷಮಾತೆ ತಿಮ್ಮಕ್ಕ' ನಾಟಕದಲ್ಲಿ ಅವರು ಬಳಸಿರುವ ಭಾಷೆ, ತಂತ್ರಗಳು ಪ್ರತ್ಯೇಕವಾಗಿ ಕಾಣುತ್ತವೆ. ಪುರಾಣದ ಕಥೆಗಳಿಂದಲೋ, ಇತಿಹಾಸದಿಂದಲೋ ನಾಟಕಗಳಿಗೆ ವಸ್ತುವನ್ನು ಆರಿಸಿಕೊಳ್ಳುವುದು ಸಾಮಾನ್ಯ ಆದರೆ ಶ್ರೀಧರ ಅವರು ಪ್ರಸ್ತುತ ಸಮಾಜದಲ್ಲಿ ಜನೋಪಕಾರಿ ಕೆಲಸ ಮಾಡಿರುವ ಸಾಲುಮರದ ತಿಮ್ಮಕ್ಕನ ಕಥೆಯನ್ನಾಧರಿಸಿ ನಾಟಕ ರಚನೆ ಮಾಡಿ ಪುಸ್ತಕ ಪ್ರಪಂಚದಲ್ಲಿ ಅವರನ್ನು ಅಮರರಾಗಿಸಲು ಹೊರಟಿದ್ದಾರೆ. ಶ್ರೀಧರ ಅವರು ನಾಟಕದ ಪ್ರಾರಂಭದಲ್ಲಿಯೇ 'ಮರಯೋಗಿ ಮಕ್ಕಳ ತಿಮ್ಮಕ್ಕನ ಕಥೆ'ಯಲ್ಲಿ ತಿಮ್ಮಕ್ಕನ ಬಡತನದ ಬದುಕಿನ ಬವಣೆಯನ್ನು ಗದ್ಯರೂಪದಲ್ಲಿ ಸುಮಾರು ಹದಿನಾಲ್ಕು ಪುಟಗಳಷ್ಟು ವಿಸ್ತಾರವಾಗಿ ಹೇಳಿದ್ದಾರೆ. ಈ ಬರಹ ನಾಟಕವನ್ನು ಪ್ರವೇಶಿಸಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ತಿಮ್ಮಕ್ಕ ಅಕ್ಷರಜ್ಞಾನವಿಲ್ಲದ, ಹಸಿವು, ಬಡತನ, ಜೀತಪದ್ಧತಿಗಳ ನಡುವೆ ನಲುಗಿಹೋಗಿದ್ದರೂ ದೇಶವೇ ಮೆಚ್ಚುವಂತೆ ಆಕೆಯು ಸಾಲುಮರಗಳನ್ನು ನೆಟ್ಟು, ಪೋಷಿಸಿ ಮಾದರಿಯಾಗುವುದೇ ಅಲ್ಲದೆ ಪರಿಸರ ಸಂರಕ್ಷಣೆಗೆ ನೀಡಿರುವ ಕೊಡುಗೆಯನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದ ದಲಿತರು, ಶೋಷಿತರು ಹೊಟ್ಟೆಪಾಡಿಗಾಗಿ ಪಡಬಾರದ ಪಡಿಪಾಟಲುಗಳನ್ನೆಲ್ಲ ಪಟ್ಟಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳುವುದೊಂದನ್ನೇ ತಮ್ಮ ಜೀವನದ ಪರಮಗುರಿ ಎಂದು ಭಾವಿಸಿಕೊಂಡು ಬದುಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಅವರಿದ್ದುದೇ ಇದಕ್ಕೆ ಕಾರಣ. ಹಾಗೆಂದು ಸ್ವಾತಂತ್ರ್ಯಾನಂತರದ ಇವರ ಸ್ಥಿತಿಗತಿಗಳು ಸುಧಾರಿಸಿಬಿಟ್ಟಿವೆ ಎಂದು ಹೇಳಲಿಕ್ಕಾಗುವುದಿಲ್ಲ. ಈಗಲೂ ಕೆಲವು ಕಡೆ ಶೋಷಣೆ ಕಂಡು ಬರುತ್ತಲೇ ಇದೆ. ಈ ಮೊದಲು ಹಳ್ಳಿಗಳಲ್ಲಿ ಮೇಲು-ಕೀಳು ಜಾತಿಗಳ ತಾರತಮ್ಯ ಯಥೇಚ್ಛವಾಗಿ ಕಾಣುತ್ತಿತ್ತು. ದಲಿತರು ಮತ್ತು ಶೋಷಿತ ವರ್ಗದವರು ಜೀತಪದ್ಧತಿಯ ಕರಾಳಹಸ್ತಕ್ಕೆ ನಲುಗಿಹೋಗಿದ್ದರು. ಅಂತಹ ಹಳ್ಳಿಗಳಲ್ಲಿ ಮೈಸೂರು ರಾಜ್ಯದ ಸಂಸ್ಥಾನಕ್ಕೆ ಸೇರಿದ್ದ ತುಮಕೂರು ಜಿಲ್ಲೆಯ ಕುಕ್ಕೇನಹಳ್ಳಿಯಲ್ಲಿ ಜನಿಸಿದ ಕಥಾನಾಯಕಿ ತಿಮ್ಮಕ್ಕ ಮಾಡಿದ ಅಮೋಘವಾದ ಸಾಧನೆಯಿಂದ 'ಸಾಲುಮರದ ತಿಮ್ಮಕ್ಕ' ಎಂದು ಖ್ಯಾತರಾದರು.

ಮಕ್ಕಳ ಆಟಪಾಠಗಳು, ಜಾತ್ರೆಯ ನೋಟಗಳು, ಮಾವಿನಕಾಯಿ ಕದ್ದುತಿನ್ನುವ ಚೇಷ್ಟೆಗಳು ನಾಟಕಕ್ಕೆ ಹೊಸ ಮೆರುಗನ್ನು ತಂದುಕೊಡುತ್ತವೆ. ಹನ್ನೆರಡನೆಯ ದೃಶ್ಯದವರೆಗೂ ಇದು ಮಕ್ಕಳ ನಾಟಕದಂತೆ ಕಂಡು ಬಂದರೂ, ತಿಮ್ಮಕ್ಕ ಬೆಳೆದು ನಿಂತ ಹಾಗೆ ನಾಟಕವೂ ಗಂಭೀರವಾಗಿ ಬೆಳೆದುಬಿಡುತ್ತದೆ. ಅಲ್ಲಿ ಬರುವ ಹಾಡಿನ ಸಾಲು 'ಅರಿಶಿಣದ ಕೊಂಬೆಲ್ಲ ನೀರಾಗಿ ಹರಿತೈತೆ... ಮಲ್ಲಿಗೆ ಕನಕಾಂಬರಿ ನಾಚಿಕೆಯಿಂದ ಮುದುಡೌವೆ. ದಿಬ್ಬಣದ ಜಾತ್ರೆಯಲ್ಲಿ ಮದುವಣಗಿತ್ತಿಯ ಮೆರೆದಾಟ ಮುತ್ತೈದೆಯಾಗುತಿಹಳು ಮನೆಮಗಳು...' ಎನ್ನುತ್ತದೆ.

ತವರು ಮನೆಯಿಂದ ಗಂಡನ ಮನೆಗೆ ಬಂದ ತಿಮ್ಮಕ್ಕನಿಗೆ ಬಹುತೇಕ ಎಲ್ಲರೂ ತಾವಂದುಕೊಳ್ಳುವಂತೆ ಗಂಡನ ಮನೆಯಲ್ಲಿ ಹೇಳಿಕೊಳ್ಳುವಂತಹ ಸುಖ ಸಿಗುವುದಿಲ್ಲ. ಜಗಳಗಳು, ಮನಸ್ತಾಪಗಳು ಇದ್ದದ್ದೇ ತಾನೆ! ಆದರೆ ಇವರಿಗೆ ಮಕ್ಕಳಾಗದ್ದು ದೊಡ್ಡ ಕೊರಗಾಗಿ ಉಳಿದುಕೊಳ್ಳುತ್ತದೆ. ಆದರೆ ಆ ಕೊರಗನ್ನು ತೀರಿಸಿಕೊಳ್ಳಲು ಆಲದ ಮರಗಳನ್ನು ರಸ್ತೆ ಎರಡೂ ಬದಿಗಳಲ್ಲಿ ನೆಟ್ಟು ಅವುಗಳನ್ನೇ ತಮ್ಮ ಮಕ್ಕಳಂತೆ ಕಾಣುವ ಮನೋಭಾವವಿದೆಯಲ್ಲ ಅದು ವರ್ಣಿಸಲಾಗದ ಅನುಭೂತಿ.

ಗಿಡಮರಗಳು ನೆರಳು ನೀಡುವುದೇ ಅಲ್ಲದೆ ಸಾವಿರಾರು ಪ್ರಾಣಿ, ಪಕ್ಷಿ, ಕೀಟಗಳಿಗೆ ಆವಾಸಸ್ಥಾನವಾಗುತ್ತವೆ. ಮರಗಳು ಮಕ್ಕಳಾದರೆ ಇವೆಲ್ಲ ಮೊಮ್ಮಕ್ಕಳು, ಮರಿಮಕ್ಕಳು. ಆದರೆ ನಮ್ಮಲ್ಲಿರುವ ಒಂದು ದೋಷವೆಂದರೆ ಹಿತ್ತಲಗಿಡ ಮದ್ದಲ್ಲ ಎಂಬಂತೆ ಜನ ಸಾಧಕರನ್ನು ಕಾಣುವುದು. ಸಾಧನೆಯನ್ನು ಗುರುತಿಸಬೇಕಾದರೆ ಅದಕ್ಕೆ ಹೊರಗಿನವರೇ ಆಗಬೇಕು. ಹಾಗೆಯೇ ತಿಮ್ಮಕ್ಕನ ಸಾಧನೆ ನಮ್ಮ ಜನರಿಗೆ ಕಾಣುವುದೇ ಇಲ್ಲ. ಬೇರೆಲ್ಲಿಂದಲೋ ಬಂದ ವಲಯ ಅರಣ್ಯಾಧಿಕಾರಿ ಇದನ್ನು ಗುರುತಿಸುತ್ತಾನೆ. ಎಲೆಮರೆಯ ಕಾಯಿಯಂತೆ ಉಳಿದಿದ್ದ ತಿಮ್ಮಕ್ಕ ದಿನಬೆಳಗಾಗುವುದರಲ್ಲಿ ದೇಶದ ಆಸ್ತಿಯಾಗಿಬಿಡುತ್ತಾಳೆ. ನಾಟಕಕಾರರೇ ಹೇಳುವಂತೆ ಇಂದು ಸಾಲುಮರದ ತಿಮ್ಮಕ್ಕನ ಸಾಧನೆಯನ್ನು ಜಗತ್ತೇ ಕೊಂಡಾಡಿರಬಹುದು. ಪರಿಸರ ಉಳಿವಿಗೆ ಈ ತರಹದ ಹೊಗಳಿಕೆ ಬೇಕಾಗಿಲ್ಲ, ಪರಿಸರವನ್ನು ಉಳಿಸುವ ಕೈಗಳು ಬೇಕಾಗಿವೆ. ತಿಮ್ಮಕ್ಕನಂತೆ ಮರಗಳನ್ನು ನೆಟ್ಟು ಸಾಕುವ ಮನಸ್ಸುಗಳು ಬೇಕು.

ಒಟ್ಟಿನಲ್ಲಿ ನಾಟಕ ಮಕ್ಕಳಿಗಿರಲಿ ಹಿರಿಯರಿಗಿರಲಿ ಅದು ನೀಡುವ ಸಂದೇಶ ದೊಡ್ಡದು. ಸಮಾಜ ಇಂತಹ ನಾಟಕಗಳಿಂದ ಕಲಿಯುವುದು ಸಾಕಷ್ಟಿದೆ. ನಾಟಕಕಾರರು ಬಳಸಿರುವ ತಂತ್ರ, ಕಲೆಗಾರಿಕೆ ಮೆಚ್ಚುವಂಥದು. ಫಕೀರರು ರಚಿಸಿರುವ ಇಪ್ಪತ್ತೆರಡು ದೃಶ್ಯಗಳ ಈ ನಾಟಕ 'ಬೇರು' ಕಾದಂಬರಿಯಂತೆ ಗಾತ್ರದಲ್ಲಿ ದೊಡ್ಡದಾದರೂ ಚಿಕ್ಕಯ್ಯ ಮತ್ತು ತಿಮ್ಮಕ್ಕನು ಬೆಳೆಸಿದ ಮರಗಳಂತೆ ವಿಶಾಲವಾಗಿ ಹಬ್ಬಿ, ಹರಡಿ, ಪಕ್ಷಿಗಳಿಗೆ ಆಸರೆಯಾದಂತೆ ಇವರ ಸಾಹಿತ್ಯ ಹಬ್ಬಿ ಬೆಳೆಯಲಿ. 'ವೃಕ್ಷಮಾತೆ ತಿಮ್ಮಕ್ಕ'ಳಂತಹ ನಾಟಕಗಳು ಶ್ರೀಧರ ಬನವಾಸಿ ಅವರ ಲೇಖನಿಯಿಂದ ಇನ್ನಷ್ಟು ಮೂಡಿಬರಲೆಂದು ಹಾರೈಸುತ್ತೇನೆ.”

ಸಾಲು ಮರದ ತಿಮ್ಮಕ್ಕನವರ ಈ ಜೀವನ ನಾಟಕ ಓದಿದಾಗ ಕಣ್ಣಾಲಿಗಳು ತೇವವಾಗುತ್ತವೆ. ಇದನ್ನು ಯಾರದರೂ ರಂಗದ ಮೇಲೆ ತರಲಿ ಎನ್ನುವುದೇ ಹೆಬ್ಬಯಕೆ.