ಶರ್ಮಿಷ್ಠೆ

ಲೇಖಕರಾದ ಬೇಲೂರು ರಘುನಂದನ್ ಅವರು ಬರೆದ ಪೌರಾಣಿಕ ನಾಟಕ ‘ಶರ್ಮಿಷ್ಠೆ’. ಈ ನಾಟಕಕ್ಕೆ ಬೆನ್ನುಡಿ ಬರೆದಿದ್ದಾರೆ ಎಚ್ ಎಸ್ ಶಿವಪ್ರಕಾಶ್. ಬೆನ್ನುಡಿಯಲ್ಲಿ “ಶರ್ಮಿಷ್ಠೆ ದೇವಯಾನಿಯರ ಕಥೆಯಲ್ಲಿ ಮನುಷ್ಯರ ಮನದಾಳದಲ್ಲಿ ಹುದುಗಿರುವ ಆದಿಮ ವೈರುದ್ಧ, ಪತಿರೋಧ ಮತ್ತು ವಿರೋಧಾಭಾಸಗಳು ಹಾಸು ಹೊಕ್ಕಾಗಿರುವುದರಿಂದ, ಅದು ಆಧುನಿಕ ಭಾರತೀಯ ಸಾಹಿತ್ಯ ನಾಟಕಗಳಲ್ಲಿ ಹೊಸ ಹೊಸ ಬಗೆಗಳಲ್ಲಿ ಮರುಕಳಿಸುತ್ತಾ ಬರುತ್ತಿವೆ. ಕನ್ನಡ ರಂಗಭೂಮಿಯಲ್ಲಿ ಈ ಹಿಂದೆ ಆದ್ಯರಂಗಾಚಾರರು ಮತ್ತು ಗಿರೀಶ್ ಕಾರ್ನಾಡ್‌ರು. ಈ ಬಗೆಯ ನಾಟಕ ರಚನೆ ಮಾಡಿ ಅವು ರಂಗ ಪ್ರಯೋಗಗಳಿಗೂ ಒಳಾಗಿವೆ. 

ಬೇಲೂರು ರಘುನಂದನ ಅವರು ಈ ಹಳೆಯ ವಸ್ತುವನ್ನು ಹೊಸ ದೃಷ್ಟಿಯಿಂದ ನೋಡಿದ್ದಾರೆ. ಇದು ಆದ್ಯರಂಗಾಚಾರರ ನಾಟಕದಂತೆ ವೈಚಾರಿಕ ನಾಟಕವಲ್ಲ. ಅಥವಾ ಗಿರೀಶ್ ಕಾರ್ನಾಡ್‌ರ ಯಯಾತಿಯಂತೆ ಪಾಶ್ಚಿಮಾತ್ಯ ಅಸ್ತಿತ್ವವಾದಿ ಮಾಡಿದ ಭಾರತೀಯ ಕತೆಯ ಅನುವಾದವಲ್ಲ. 

ಪ್ರಸ್ತುತ ಕೃತಿಯಲ್ಲಿ, ಕಥೆಯೊಳಗಿನ ಪಾತ್ರ ಸನ್ನಿವೇಶಗಳ ವೈರುದ್ಯ ಮತ್ತು ಘರ್ಷಣೆಗಳಿಗೆ ಆಳ ವಿಸ್ತಾರಗಳನ್ನು ನೀಡಿ ಈ ವ್ಯಸನಗಳ ಕಥೆಗೆ ಒಂದು ಇತ್ಯಾತ್ಮಕ ಅಂತ್ಯವನ್ನು ನೀಡಲು ರಘುನಂದನರು ಪುಯತ್ನಿಸಿದ್ದಾರೆ. ಮೂಲ ಕತೆಯ ಜಾಡನ್ನೇ ಹಿಡಿದು ಮುಂದುವರೆದು ಪರಿಣಾಮದಲ್ಲಿ ಪೂರಿ ಬದಲಾವಣೆ ಮಾಡಿದ್ದಾರೆ. 

ಸಂಘರ್ಷ ಅಂತಿಮವಾಗಿ ಸಹಬಾಳ್ವೆಯಲ್ಲಿ ಕೊನೆಗೊಳ್ಳುತ್ತದೆ. ಈ ಅಂತ್ಯವನ್ನು ಬಲವಂತವಾಗಿ ಹೇರದೆ ಮೂಲ ಕತೆಯ ನೂಲುಗಳನ್ನು ಹೊಸ ಬಗೆಯ ನೇಯ್ಗೆಯಲ್ಲಿ ಅಳವಡಿಸಿರುವುದು ಮೆಚ್ಚಿನ ವಿಷಯ. ಸಾಹಿತ್ಯವಾಗಿ ಶಕ್ತವಾಗಿರುವ ಈ ನಾಟಕ ಕೃತಿ ರಂಗಕೃತಿಯಾಗಿಯೂ ಬೆಳಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.