ಮುರಿದು ಬಿದ್ದ ಗೋಡೆಗಳು, ಶಿಥಿಲಗೊಂಡ ಚಾವಣಿ, ಮಳೆ ಬಂದರೆ ತರಗತಿಯ ಒಳಗೆ ಛತ್ರಿ ಹಿಡಿಯಬೇಕಾದ ದುಸ್ಥಿತಿ- ಇವು ರಾಜ್ಯದ ಬಹುತೇಕ ಸರಕಾರಿ ಶಾಲೆಗಳು ದಶಕಗಳಿಂದ ಎದುರಿಸುತ್ತಿರುವ ಕಟು ವಾಸ್ತವಗಳು, ಖಾಸಗಿ ಶಾಲೆಗಳ ವೈಭವದ ಮುಂದೆ ಶ್ರೀಸಾಮಾನ್ಯರ ಮಕ್ಕಳು ಕಲಿಯುವ ಸರಕಾರಿ ಶಾಲೆಗಳು ಅನಾಥ ಪ್ರಜ್ಞೆಯಿಂದ ಮೂಲೆಗುಂಪಾಗುತ್ತಿದ್ದವು. ಆದರೆ, ಈಗ ರಾಜ್ಯ ಸರಕಾರ ಹಮ್ಮಿಕೊಂಡಿರುವ 'ಸುರಕ್ಷಿತ ಕಲಿಕೆ-ಸುಭದ್ರ ಭವಿಷ್ಯ' ಯೋಜನೆ ಹಾಗೂ ಶಾಲಾ ಕಟ್ಟಡಗಳ ನವೀಕರಣದ ನಿರ್ಧಾರವು ತಡವಾಗಿಯಾದರೂ ಸಾಕಾರಗೊಳ್ಳುತ್ತಿರುವ ಒಂದು ಆಶಾದಾಯಕ ಹೆಜ್ಜೆಯಾಗಿದೆ.

ರಾಜ್ಯದಲ್ಲಿ ೪೮,೦೦೦ಕ್ಕೂ ಹೆಚ್ಚು ಸರಕಾರಿ ಶಾಲೆಗಳಿದ್ದು, ಈ ಪೈಕಿ ೩,೩೦೦ಕ್ಕೂ ಹೆಚ್ಚು ಶಾಲೆಗಳು ನೂರು ವರ್ಷ ಪೂರೈಸಿವೆ ಎನ್ನುವುದು ಕನ್ನಡಿಗರ ಹೆಮ್ಮೆ. ಆದರೆ, ಈ ಪಾರಂಪರಿಕ ಕಟ್ಟಡಗಳು ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸುರಕ್ಷಿತವಾಗಿವೆಯೇ ಎಂಬ ಪ್ರಶ್ನೆಗೆ ಮಾತ್ರ ನಮ್ಮಲ್ಲಿ ಉತ್ತರವಿಲ್ಲ. ಸುಣ್ಣ ಬಣ್ಣ ಬಳಿದು ಹಳೆಯ ಕಟ್ಟಡಗಳನ್ನು ಮುಚ್ಚಿಡುವ ಹಳೇ ಪದ್ಧತಿಯನ್ನು ಕೈಬಿಟ್ಟು, 'ಭಾರತದ ರಾಷ್ಟ್ರೀಯ ಕಟ್ಟಡ ಸಂಹಿತೆ-೨೦೧೬'ರ ಕಟ್ಟುನಿಟ್ಟಾದ ಮಾನದಂಡಗಳಡಿ ಶಾಲಾ ಕಟ್ಟಡಗಳನ್ನು ಮರುರೂಪಿಸಲು ಹೊರಟಿರುವುದು ಸ್ವಾಗತಾರ್ಹ. ತರಗತಿ ಕೊಠಡಿಗಳ ಎತ್ತರ, ನಿರ್ಗಮನ ದ್ವಾರಗಳ ವಿಸ್ತೀರ್ಣದ ಜತೆಗೆ ಭೂಕಂಪ ಹಾಗೂ ಅಗ್ನಿ ನಿರೋಧಕ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿರುವುದು ಮಕ್ಕಳ ಜೀವಕ್ಕೆ ಸರಕಾರ ನೀಡುತ್ತಿರುವ ಭರವಸೆಯಾಗಿದೆ.

ಈ ಬದಲಾವಣೆಯ ಹಿಂದೆ ಮಾನ್ಯ ಹೈಕೋರ್ಟ್ ೨೦೨೫ರಲ್ಲಿ ನೀಡಿದ ಐತಿಹಾಸಿಕ ತೀರ್ಪಿನ ಪಾತ್ರ ದೊಡ್ಡದಿದೆ. ಖಾಸಗಿ ಮತ್ತು ಅನುದಾನರಹಿತ ಶಾಲೆಗಳಿಗೆ ವಿಧಿಸುವ ಕಠಿಣ ಅಗ್ನಿ ಸುರಕ್ಷತಾ ನಿಯಮಗಳು ಸರಕಾರಿ ಶಾಲೆಗಳಿಗೂ ಅನ್ವಯವಾಗಬೇಕು ಎಂದು ಕೋರ್ಟ್ ಹೇಳುವ ಮೂಲಕ ಶಿಕ್ಷಣ ಇಲಾಖೆಯ ಕಣ್ಣು ತೆರೆಸಿತ್ತು. ಖಾಸಗಿ ಶಾಲೆಗಳ ಮೇಲೆ ನಿಯಮಗಳ ಚಾಟಿ ಬೀಸುವ ಶಿಕ್ಷಣ ಇಲಾಖೆ, ತನ್ನದೇ ಒಡೆತನದ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಗಾಳಿಗೆ ತೂರುವಂತಿಲ್ಲ ಎಂಬ ನ್ಯಾಯಾಲಯದ ನಿಲುವು ತಾರ್ಕಿಕ ಅಂತ್ಯ ಕಂಡಿದೆ.

ಸರಕಾರ ೨೦೨೬-೨೭ರ ಬಜೆಟ್‌ ನಲ್ಲಿ ಕೊಠಡಿಗಳ ನಿರ್ಮಾಣಕ್ಕೆ ೫೬೫ ಕೋಟಿ ರೂ. ಹಾಗೂ ಶೌಚಾಲಯಗಳಿಗೆ ೭೫ ಕೋಟಿ ರೂ. ಮೀಸಲಿಟ್ಟಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕೇವಲ ಬಜೆಟ್ ಘೋಷಣೆಗಳಿಂದ ಶಾಲೆಗಳು ಸುಧಾರಿಸುವುದಿಲ್ಲ. ಈ ಹಿಂದೆ ಬಿಡುಗಡೆಯಾದ ಅನುದಾನಗಳು ಎಷ್ಟರಮಟ್ಟಿಗೆ ಬಳಕೆಯಾಗಿವೆ, ಅದರಲ್ಲಿ ನಡೆದಿರುವ ಭ್ರಷ್ಟಾಚಾರ ಎಷ್ಟು ಎನ್ನುವುದು ಯಾರಿಗೂ ತಿಳಿಯದ ವಿಷಯವೇನಲ್ಲ, ಈ ಬಾರಿ ಸಿಎಸ್ ಆರ್ ನಿಧಿಯನ್ನೂ ಬಳಸಿಕೊಳ್ಳಲಾಗುತ್ತಿರುವುದರಿಂದ, ಪ್ರತಿಯೊಂದು ಪೈಸೆ ಕೂಡ ಮಕ್ಕಳ ಸುರಕ್ಷತೆಗೆ ಪ್ರಾಮಾಣಿಕವಾಗಿ ಬಳಕೆಯಾಗಬೇಕಿದೆ.

ಶಿಕ್ಷಣ ಇಲಾಖೆಯ ಆಯುಕ್ತರು ಹೇಳುವಂತೆ ನಿಯಮಗಳು ಕೇವಲ ಕಾಗದದ ಮೇಲೆ ಜಾರಿಯಾದರೆ ಸಾಲದು. ಪ್ರತಿ ಮೂರು ತಿಂಗಳಿಗೊಮ್ಮೆ ಶಾಲೆಗಳಲ್ಲಿ 'ಮಾಕ್ ಡ್ರಿಲ್' ನಡೆಸುವ ಯೋಜನೆ ನಿರಂತರವಾಗಿ ನಡೆಯಬೇಕು. ಸರಕಾರಿ ಶಾಲೆಗೆ ಬರುವ ಬಡ, ಮಧ್ಯಮ ವರ್ಗದ ಮಕ್ಕಳ ಪ್ರಾಣವೂ ಶ್ರೀಮಂತರ ಮಕ್ಕಳ ಪ್ರಾಣದಷ್ಟೇ ಅಮೂಲ್ಯವಾದುದು. 'ಸುರಕ್ಷಿತ ಕಲಿಕೆ' ಎನ್ನುವುದು ಕೇವಲ ಆಕರ್ಷಕ ಧೈಯವಾಕ್ಯವಾಗಿ ಉಳಿಯದೆ, ರಾಜ್ಯದ ಪ್ರತಿಯೊಂದು ಮಗುವಿಗೂ ಸಿಗುವ ಸಾಂವಿಧಾನಿಕ ಹಕ್ಕಾಗಲಿ. ಹಂತ-ಹಂತವಾಗಿ ಎನ್ನುವ ನೆಪದಲ್ಲಿ ಯೋಜನೆ ಕಾಲಹರಣವಾಗದೆ. ಸಮರೋಪಾದಿಯಲ್ಲಿ ಜಾರಿಯಾಗಲಿ. ಸುರಕ್ಷತೆ ಕೇವಲ ಘೋಷಣೆಯಾಗದಿರಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೬-೦೫-೨೦೨೬

ಚಿತ್ರ ಕೃಪೆ: ಜಸ್ಟ್ ಡಯಲ್ ತಾಣ