ಶಿಲಾವಲ್ಕ

ನಮಗೆ ನರಮೇಧ ಅಥವಾ ಮಾರಣಹೋಮ (Genocide) ಎಂಬ ವಿಷಯ ಕಂಡೊಡನೆಯೇ ನೆನಪಾಗುವುದು ಹಿಟ್ಲರ್ ನು ಮಾಡಿದ ಹತ್ಯೆಗಳ ಸರಪಣಿ, ಆತನ ಕ್ರೂರವಾದ ಗ್ಯಾಸ್ ಚೇಂಬರ್ ಹತ್ಯೆಗಳು. ಇಂತಹ ಒಂದು ಹತ್ಯಾ ಸರಣಿ ನಮ್ಮ ಪಕ್ಕದ ದೇಶವಾದ ಕಾಂಬೋಡಿಯಾದಲ್ಲೂ ನಡೆದಿದೆ ಎಂದರೆ ಈಗ ನಂಬುವವರ ಸಂಖ್ಯೆ ಕಡಿಮೆ. ಇದು ನಡೆದದ್ದು ಐದು ದಶಕಗಳ ಹಿಂದೆ ಅಂದರೆ ೧೯೭೫ರಲ್ಲಿ. ಬರೋಬ್ಬರಿ ೧೩೬೪ ದಿನಗಳು ಅಂದರೆ ೧೯೭೯ರ ಇಸವಿಯ ತನಕ ನಡೆದ ಈ ಮಾರಣಹೋಮದಲ್ಲಿ ಸತ್ತವರ ಸಂಖ್ಯೆ ಸುಮಾರು ಇಪ್ಪತ್ತು ಲಕ್ಷ ಎಂದು ಅಂದಾಜಿಸಲಾಗಿದೆ. ಅಂದರೆ ಅಂದಿನ ಕಾಂಬೋಡಿಯಾದ ಜನ ಸಂಖ್ಯೆಯ ಕಾಲು ಭಾಗದಷ್ಟು. ಈ ಮಾರಣ ಹೋಮದ ದಾರುಣ ಕಥೆ ಹೇಳಲು ಹೊರಟಿದ್ದಾರೆ ಕತೆಗಾರ್ತಿ ಸಂಜೋತಾ ಪುರೋಹಿತ.

ಈ ಕಾದಂಬರಿಗೆ ‘ಶಿಲಾವಲ್ಕ’ ಎಂಬ ಹೆಸರೇ ಏಕೆ ನೀಡಿದ್ದು ಎಂಬ ಬಗ್ಗೆ ಕಾದಂಬರಿಗಾರ್ತಿ ತಮ್ಮ ಮುನ್ನುಡಿಯಲ್ಲಿ ಹೇಳಿರುವುದು ಹೀಗೆ…”ಈ ಮಾರಣಹೋಮದ ಇತಿಹಾಸವನ್ನು ಕಾದಂಬರಿಯ ಮೂಲಕ ಹೇಳಬೇಕು ಎಂದುಕೊಂಡಾಗ ಬಹಳಷ್ಟು ಪ್ರಶ್ನೆಗಳು ಹುಟ್ಟಿಕೊಂಡವು. ಅನ್ಯ ದೇಶದ ಇತಿಹಾಸವನ್ನು ನಮ್ಮ ಭಾಷೆಯಲ್ಲಿ ಹೇಳಬಹುದೇ ಎಂಬುದು ಮೊಟ್ಟ ಮೊದಲನೆಯ ಪ್ರಶ್ನೆಯಾಗಿತ್ತು. ಕತೆ ಯಾವ ನೆಲದ್ದೇ ಆಗಿದ್ದರೂ ಅದನ್ನು ಹೇಳಬೇಕಾದ ರೀತಿಯಲ್ಲಿ ಹೇಳಿದರೆ ಓದುಗರು ಸ್ವೀಕರಿಸುತ್ತಾರೆ ಎಂಬ ಅಭಯದ ಮಾತುಗಳನ್ನು ಕೇಳಿದ ಮೇಲೆ ಮುಂದಕ್ಕೆ ಸಾಗುವ ಧೈರ್ಯ ಬಂದಿತು. ಈ ಐದು ವರ್ಷಗಳಲ್ಲಿ ಇದಕ್ಕೆ ಸಂಬಂಧ ಪಟ್ಟ ಇತಿಹಾಸದ ಪುಸ್ತಕಗಳನ್ನು ಓದಿ ನಿಜವಾಗಿಯೂ ನಡೆದ ಘಟನೆಗಳನ್ನು ಕತೆಯ ರೂಪದಲ್ಲಿ ನಿಮ್ಮ ಮುಂದೆ ಇಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಒಂದು ಪುಟ್ಟ ದೇಶದ ಮೇಲೆ ನಡೆದ ದೌರ್ಜನ್ಯವನ್ನು ಈ ಕಾದಂಬರಿಯ ಮೂಲಕ ಹೇಳಿದ್ದೇನೆ.

ಕಾದಂಬರಿಗೆ ಯಾವ ಶೀರ್ಷಿಕೆಯನ್ನಿಡಬೇಕು ಎಂದು ಬಹಳಷ್ಟು ತಲೆ ಕೆಡಿಸಿಕೊಂಡಿದ್ದೆ. ಶುರುವಿನಿಂದಲೂ 'ಬುದ್ದನೆದ್ದು ಹೋದ ದೇಶ' ಎಂಬುದು ತಲೆಯಲ್ಲಿತ್ತು. ಏನೇ ಮಾಡಿದರೂ ಅದು ನನ್ನ ಬಿಟ್ಟು ಹೋಗಲೊಲ್ಲದು. ಒಂದು ಮಧ್ಯರಾತ್ರಿಯಲ್ಲಿ ಬುದ್ಧನೆದ್ದು ಹೋದಾಗ ಅವನ ಹಿಂದೆಯೇ ಬೆಳಕು ಸಹ ಹೋಗಿ ಕತ್ತಲೆಯಷ್ಟೇ ಉಳಿದ ಚಿತ್ರಣ ನನ್ನ ಕಣ್ಣ ಮುಂದೆ ಬರುತ್ತಿತ್ತು. ಆದರೆ ಅದನ್ನು ಆಯ್ದುಕೊಳ್ಳಲು ಮನಸ್ಸು ಹಿಂದೇಟು ಹಾಕಿತು. ಬಹಳಷ್ಟು ಯೋಚಿಸಿದ ಮೇಲೆ ‘ಶಿಲಾವಲ್ಕ’ ಎಂದು ನಿಶ್ಚಿತವಾಯಿತು. ಶಿಲಾವಲ್ಕ ಎಂದರೆ ಕಲ್ಲಿನ ಮಧ್ಯದಲ್ಲಿ ಅರಳುವ ಹೂವು. ಅಷ್ಟೆಲ್ಲ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ ಮೇಲೂ ಕಾಂಬೋಡಿಯಾ ದೇಶ ಇವತ್ತು ಮತ್ತೆ ತನ್ನ ಕಾಲ ಮೇಲೆ ನಿಂತಿದೆ. ಅದಕ್ಕಿಂತ ಮಿಗಿಲಾಗಿ ಈ ಕಾದಂಬರಿಯ ನಾಯಕಿ ಶಿವಿ ಕಲ್ಲಿನ ಮಧ್ಯದಲ್ಲಿ ಅರಳಿದ ಹೂವು. ಆ ಕಾರಣಕ್ಕೆ ಈ ಶೀರ್ಷಿಕೆ ಹೆಚ್ಚು ಸೂಕ್ತವೆನ್ನಿಸಿತು.”

ಈ ಕಾದಂಬರಿಯನ್ನು ಓದಿ, ‘ಶಿಲಾವಲ್ಕ’ ಕತೆ ನಮ್ಮದೂ ಹೌದು’ ಎನ್ನುವ ಸರ್ಟಿಫಿಕೇಟ್ ನೀಡಿರುವ ಪ್ರಕಾಶ ನಾಯಕ್ ಅವರು ಈ ಕೃತಿ ಬಗ್ಗೆ ಹೇಳಿರುವ ಮಾಹಿತಿ ಹೀಗಿದೆ…

“ಇತಿಹಾಸವು ಗತಕಾಲದ ದಾಖಲೆಯಾದರೆ ಇತಿಹಾಸವನ್ನು ಆಧರಿಸಿದ ಕತೆ, ಕಾದಂಬರಿಗಳು ಅವುಗಳಿಗೆ ಜೀವತುಂಬಿ ನಮ್ಮ ಕಣ್ಮುಂದೆ ತರುವ ಕಲಾಕೃತಿಗಳು. ಎಲ್ಲೋ ಎಂದೋ ನಡೆದುಹೋದ ಘಟನೆಯ ವರದಿ ರದ್ದಿಯಾಗಿ ಮರೆಯಾಗದೆ ಮನದಲ್ಲಿ ಅಚ್ಚಳಿಯದೆ ನಿಂತು ಸದಾ ಸಕಾಲಿಕವಾಗುವಂತೆ ಮಾಡಬಲ್ಲ ಜೀವಸೆಲೆಗಳು. ಪ್ರವಾಸಕಥನಗಳು ಕಾಣದ ನಾಡಿನ ಭೌಗೋಳಿಕ ವಿವರಗಳೊಟ್ಟಿಗೆ ಅಲ್ಲಿನ ಜನಜೀವನದ ವಿಶೇಷತೆಯನ್ನು ಪರಿಚಯಮಾಡಿಸುವ ಕಿಟಕಿಗಳಾದರೆ ಇಂತಹ ನಾಡಿನ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕಾದಂಬರಿಗಳು ನಾಡಿನೊಟ್ಟಿಗೆ ಅಲ್ಲಿನ ಜನರ ಆಚಾರವಿಚಾರಗಳನ್ನು, ನೋವುನಲಿವುಗಳನ್ನು, ಪರಿಚಯಿಸಿ ಅವರನ್ನು ನಮ್ಮವರನ್ನಾಗಿಸಿಬಿಡುವ ಸಂಬಂಧಸೇತುವೆಗಳು. ಭಾರತದ ನೆರೆದೇಶವಾಗಿದ್ದರೂ ನಮಗೆ ಹೆಚ್ಚಾಗಿ ತಿಳಿದಿರದ ಕಾಂಬೋಡಿಯಾ ಮತ್ತು ದೂರದಲ್ಲಿದ್ದರೂ ನಮಗೆ ಪರಿಚಯವಿದೆ ಎಂದು ನಾವಂದುಕೊಳ್ಳುವ ಅಮೇರಿಕಾಗಳಲ್ಲಿ ಕೆಲವು ದಶಕಗಳಲ್ಲಿ ನಡೆಯುವ 'ಶಿಲಾವಲ್ಕ' ಕಾದಂಬರಿಯ ಕಥನ ದೇಶ ಮತ್ತು ಕಾಲಗಳ ಯಾತ್ರೆಯನ್ನು ಒಟ್ಟಿಗೆ ಮಾಡಿಸುತ್ತದೆ. ಕಾದಂಬರಿ ಓದುತ್ತ ಹೋದಂತೆ ದೇಶಕಾಲಗಳ ವ್ಯತ್ಯಾಸ ಮರೆಯಾಗಿ ನಮ್ಮ ಇಂದಿನ ಇರವಿನ ಕುರಿತ ಅರಿವನ್ನು ಹೆಚ್ಚಿಸುವ ಸಾಹಸ ಮಾಡುತ್ತದೆ. ಇಲ್ಲಿ ನಡೆಯುವ ಘಟನೆಗಳು ಇಂದಿನ ಬದುಕನ್ನು ಎಚ್ಚರಿಕೆಯಿಂದ ನೋಡುವ ಅಗತ್ಯವನ್ನು ಸಾರುತ್ತವೆ. ನಾವು ಅನುಭವಿಸಿರದ ದೇಶ, ಕಾಲಗಳ ದೀರ್ಘ ಕಥನವನ್ನು ಕಟ್ಟುವುದು ಸುಲಭವಲ್ಲ. ತಮ್ಮ ಎರಡನೇ ಕಾದಂಬರಿಯಲ್ಲಿ ಇಂತಹ ಸಾಹಸಕ್ಕೆ ಕೈಹಾಕಿದ ಸಂಜೋತಾ ಅವರಿಗೆ ಅಭಿನಂದನೆಗಳು.

೧೯೭೫ರಿಂದ ೧೯೭೯ರವರೆಗೆ ಕಾಂಬೋಡಿಯದಲ್ಲಿ ನಡೆದ ಅಂತರಿಕ ಯುದ್ಧ ಹೆಚ್ಚು ಕಡಿಮೆ ಇಪ್ಪತ್ತು ಲಕ್ಷ ಜನರನ್ನು (ಆ ಕಾಲದ ಕಾಂಬೋಡಿಯದ ಜನಸಂಖ್ಯೆಯ ಕಾಲುಭಾಗ!) ಬಲಿತೆಗೆದುಕೊಂಡಿತು. (ಭಾರತದಲ್ಲಿಯೂ ಎಮರ್ಜೆನ್ಸಿಯ ಕರಾಳ ಛಾಯೆ ಹೊತ್ತಿಕೊಂಡದ್ದು ೧೯೭೫ರಲ್ಲಿ ಎನ್ನುವುದು ಕಾಕತಾಳೀಯವಾದರೂ ಇಲ್ಲಿ ನೆನಪಿಗೆ ಬರುತ್ತದೆ) ಇನ್ನು ಅಲ್ಲಿಂದ ಗುಳೆಹೋದ ಜನರೆಷ್ಟೋ! ಆ ಅವಧಿಯಲ್ಲಿ ಕಾಂಬೋಡಿಯ ಜನಸಮುದಾಯದ ಮೇಲೆ ಎಸಗಲಾದ ಹಿಂಸಾಚಾರ, ಜನಾಂಗೀಯ ಹತ್ಯೆಗಳು ಮತ್ತು ಯುದ್ಧಕಾಲದ ಅಪಚಾರಗಳ ವಿಚಾರಣೆಗಾಗಿ ೨೦೦೩ರ ಅಂತರಾಷ್ಟ್ರೀಯ ಒಡಂಬಡಿಕೆಯಂತೆ ವಿಶೇಷ ನ್ಯಾಯಾಲಯಗಳು ರಚಿತವಾದವು. ಇಪ್ಪತ್ತೈದು ವರ್ಷಗಳ ಹಿಂದಿನ ಮಾನಸಿಕ ಗಾಯಗಳಿಗೆ ತಡವಾಗಿಯಾದರೂ ತಂಪೆರೆಯುವ ಈ ಪ್ರಯತ್ನ ಹಳೆಗಾಯಗಳನ್ನು ಮತ್ತೆ ಹಸಿಮಾಡದೇ ಇರಲಾರದು. ೨೦೦೯ರಲ್ಲಿ ನಡೆಯುವ ಅಂತಹ ಒಂದು ವಿಚಾರಣೆಯೊಂದಿಗೆ ಶುರುವಾಗುವ ಕಾದಂಬರಿ ತೆರೆದುಕೊಳ್ಳುತ್ತ ಹೋದಂತೆ ಕೆಲವು ಪಾತ್ರಗಳ ಮೂಲಕ ಯುದ್ಧಪೂರ್ವದ ಕಾಂಬೋಡಿಯದ ದೈನಂದಿನ ಬದುಕು, ಅಂತರ್ಯುದ್ಧದ ಕ್ರೌರ್ಯ ಮತ್ತು ಮುಗಿದು ದಶಕಗಳ ನಂತರವೂ ದುಃಸ್ವಪ್ನವಾಗಿ ಅದು ಕಾಡುವ ಕ್ಷಣಗಳನ್ನು ಕಟ್ಟಿಕೊಡಲು ಆರಂಭಿಸುತ್ತದೆ. ಆ ಮೃತ್ಯುಕೂಪದಿಂದ ತಪ್ಪಿಸಿಕೊಂಡು ಹೊರಬರಲು ಸಾಮಾನ್ಯ ಜನರು ನಡೆಸುವ ಸಾಹಸ, ಅಲ್ಲಿಂದ ತಪ್ಪಿಸಿಕೊಂಡು ಬಂದ ನಂತರ ಹೊಸ ನಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ನಡೆಸುವ ಹೆಣಗಾಟ, ಹಾಗೆ ಬದುಕನ್ನು ಕಟ್ಟಿಕೊಳ್ಳಲು ನಮ್ಮಲ್ಲಿ ಇರುವ ಅದಮ್ಯ ಶಕ್ತಿಯನ್ನೂ ಈ ಕಾದಂಬರಿ ಪರಿಚಯಿಸುತ್ತದೆ. ಅದೇ ರೀತಿ ರಾಜಕೀಯ ಒಲವು-ನಿಲುವು, ನಮ್ಮ ಸೀಮಿತ ದೃಷ್ಟಿಗೆ ಸರಿ ಎಂದೇ ಕಾಣುವ ತತ್ವನಿಷ್ಠೆ, ದೇಶಭಕ್ತಿಯ ಆಶೋತ್ತರಗಳಿಂದ ಶುರುವಾಗುವ ಹೋರಾಟಗಳು ಹೇಗೆ ಜನರ ನೆಮ್ಮದಿಯ ಜೊತೆ ಸರಸವಾಡುತ್ತವೆ, ಘಾತಕವಾಗಿ ರೂಪಾಂತರಗೊಳ್ಳುತ್ತವೆ ಎನ್ನುವ ಎಚ್ಚರಿಕೆಯನ್ನೂ ಇಲ್ಲಿ ಗಮನಿಸಬಹುದು.” 

ಸುಮಾರು ೪೫೦ ಪುಟಗಳ ಈ ಮಹತ್ವದ ಕಾದಂಬರಿಯನ್ನು ಲೇಖಕಿ “ಈ ನರಮೇಧದಲ್ಲಿ ಬಲಿಯಾದ ಲಕ್ಷಾಂತರ ಆತ್ಮಗಳಿಗೆ ಹಾಗೂ ಬದುಕುಳಿದು ಮತ್ತೆ ಅರಳಿದ ಜೀವಗಳಿಗೆ’ ಅರ್ಪಣೆ ಮಾಡಿದ್ದಾರೆ. ಈ ಕಾದಂಬರಿಯನ್ನು ಓದುತ್ತಾ ಓದುತ್ತಾ ಶ್ರೀ ವಿಠಲ್ ಶೆಣೈ ಅವರ ‘ಹನುಕಿಯಾ’ ಕಾದಂಬರಿಯ ನೆನಪು (ಈಗಾಗಲೇ ಓದಿದ್ದಲ್ಲಿ) ಕಾಡಬಹುದು. ಅಲ್ಲಿ ಕ್ರೂರಿ ಹಿಟ್ಲರ್ ಇದ್ದರೆ, ಇಲ್ಲಿ ಖಮೇರು ರೂಷ್ ಆಡಳಿತ. ಇಂತಹ ಐತಿಹಾಸಿಕ ಘಟನಾವಳಿಗಳನ್ನು ಹೊತ್ತ ಕಾದಂಬರಿ ಬರೆಯಲು ತುಂಬಾ ಧೈರ್ಯ ಬೇಕು. ಆ ಸಾಹಸವನ್ನು ಸಂಜೋತಾ ಪುರೋಹಿತ ಅವರು ಯಶಸ್ವಿಯಾಗಿ ನೆರವೇರಿಸಿದ್ದಾರೆ ಎಂದು ಕಾದಂಬರಿ ಓದುವಾಗ ನಮ್ಮ ಗಮನಕ್ಕೆ ಬರುತ್ತದೆ.