ಒಂದು ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ಸಕಲ ಸಿದ್ಧತೆಗಳು ಆಗಿದ್ದವು. ಆದರೆ ರೋಗಿಯ ಪ್ರಜ್ಞೆ ತಪ್ಪಿಸಲು ಬಳಸುವ ಕ್ಲೋರೋಫಾರಂ ಅಥವಾ ಅರಿವಳಿಕೆ ಮದ್ದು ಖಾಲಿಯಾಗಿತ್ತು. ಮದ್ದನ್ನು ಆರ್ಡರ್ ಮಾಡಲಾಗಿದ್ದರೂ ಬಂದು ತಲುಪಿರಲಿಲ್ಲ. ಆಪರೇಷನ್ ತುರ್ತಾಗಿ ಮಾಡಬೇಕಾಗಿತ್ತು ಇಲ್ಲವಾದಲ್ಲಿ ರೋಗಿಯ ಪ್ರಾಣಕ್ಕೇ ಅಪಾಯವಿತ್ತು. ಆದರೆ ರೋಗಿಯ ಪ್ರಜ್ಞೆ ತಪ್ಪಿಸದೇ ಆಪರೇಷನ್ ಮಾಡುವಂತೆಯೂ ಇರಲಿಲ್ಲ. ಅಷ್ಟರಲ್ಲಿ ಹಿರಿಯ ವೈದ್ಯರೊಬ್ಬರಿಗೆ ಒಂದು ಐಡಿಯಾ ಹೊಳೆಯುತ್ತೆ. ಅವರು ಕೂಡಲೇ ತಮ್ಮ ಶೂ, ಸಾಕ್ಸ್ ಬಿಚ್ಚಿ ಅದನ್ನು ರೋಗಿಯ ಮೂಗಿನ ಬಳಿ ಹಿಡಿಯುತ್ತಾರೆ. ಕೂಡಲೇ ರೋಗಿ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ನಂತರ ಆಪರೇಷನ್ ಸರಾಗವಾಗಿ ನಡೆದು, ರೋಗಿ ಗುಣಮುಖನಾಗುತ್ತಾನೆ.
ಇದು ಒಂದು ತಮಾಷೆಯ ಕಾಲ್ಪನಿಕ ಪ್ರಸಂಗ ಅಷ್ಟೇ. ಶೂ ಹಾಗೂ ಸಾಕ್ಸ್ ನಿಂದ ಹೊರಬರುವ ದುರ್ವಾಸನೆಯನ್ನು ಯಾರೂ ತಡೆದುಕೊಳ್ಳಲಾರರು. ಅದನ್ನೇ ಇಲ್ಲಿ ಕಾಲ್ಪನಿಕ ಪ್ರಸಂಗದಲ್ಲಿ ಬಿಂಬಿಸಲಾಗಿದೆ. ಅದೆಲ್ಲಾ ಪಕ್ಕಕ್ಕಿರಲಿ, ನಿಜವಾಗಿಯೂ ಶೂ ನಿಂದ ಅಷ್ಟೊಂದು ಕೆಟ್ಟ ವಾಸನೆ ಹೇಗೆ ಬರುತ್ತದೆ? ಅದನ್ನು ನಿವಾರಿಸುವ ಬಗೆ ಹೇಗೆ? ಬನ್ನಿ, ಒಂದೊಂದಾಗಿ ನೋಡುವ.
ಸ್ಟೈಲಿಶ್ ಲುಕ್ ನೀಡುವ ಕಾರಣದಿಂದಾಗಿ ಬಹುತೇಕ ಜನರು ಇತ್ತೀಚೆಗೆ ಪ್ರತಿದಿನವೂ ಶೂಗಳನ್ನು ಧರಿಸುತ್ತಾರೆ. ಆದರೆ ಹೆಚ್ಚು ಸಮಯ ಶೂಗಳನ್ನು ಹಾಕಿಕೊಂಡಿರುವುದರಿಂದ, ಬೆವರು ಮತ್ತು ತೇವಾಂಶ ಶೂಗಳೊಳಗೆ ಜಮೆಯಾಗುತ್ತದೆ. ಇದರ ಪರಿಣಾಮವಾಗಿ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲವಾಗುತ್ತದೆ ಮತ್ತು ಶೂಗಳಿಂದ ಅಸಹ್ಯಕರವಾದ ವಾಸನೆ ಬರುತ್ತದೆ. ಎಷ್ಟೇ ಸ್ವಚ್ಛವಾಗಿ ಶೂಗಳನ್ನು ಇಟ್ಟರೂ ಸಹ ಈ ಸಮಸ್ಯೆ ಕೆಲವರಿಗೆ ತುಂಬಾ ಕಾಡುತ್ತಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಶೂ ತೆಗೆಯುವ ಸಂದರ್ಭ ಬಂದಾಗ ಈ ದುರ್ವಾಸನೆ ನಿಮ್ಮ ಮುಜುಗರಕ್ಕೆ ಕಾರಣವಾಗಬಹುದು. ಆದರೆ ಚಿಂತಿಸಬೇಕಾಗಿಲ್ಲ! ಮನೆಯಲ್ಲೇ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಈ ಸಮಸ್ಯೆಯನ್ನು ನಿವಾರಿಸಬಹುದು. ಶೂನಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ಸರಳ ಮತ್ತು ಪರಿಣಾಮಕಾರಿ ಸಲಹೆಗಳನ್ನು ಅನುಸರಿಸಿ.
ಶೂಗಳನ್ನು ಬಿಸಿಲಿನಲ್ಲಿ ಇಡಿ: ಶೂಗಳ ದುರ್ವಾಸನೆಯನ್ನು ತೆಗೆದುಹಾಕುವ ಅತ್ಯಂತ ಸುಲಭ ಮತ್ತು ನೈಸರ್ಗಿಕ ವಿಧಾನವೆಂದರೆ ಅವುಗಳನ್ನು ಬಿಸಿಲಿನಲ್ಲಿ ಇಡುವುದು. ಶೂಗಳೊಳಗಿನ ತೇವಾಂಶ ಮತ್ತು ಬೆವರು ಬ್ಯಾಕ್ಟಿರಿಯಾ ಬೆಳವಣಿಗೆಗೆ ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ವಾರಕ್ಕೆ ಕನಿಷ್ಠ ಒಂದು ಅಥವಾ ಎರಡು ಬಾರಿ ಶೂಗಳನ್ನು ಸ್ವಲ್ಪ ಸಮಯ ಬಿಸಿಲಿನಲ್ಲಿ ಇಡಿ. ಬಿಸಿಲಿನ ಉಷ್ಣತೆ ತೇವಾಂಶವನ್ನು ತೆಗೆದುಹಾಕುತ್ತದೆ, ಬ್ಯಾಕ್ಟಿರಿಯಾಗಳನ್ನು ನಾಶಪಡಿಸುತ್ತದೆ ಮತ್ತು ಶೂಗಳಿಗೆ ತಾಜಾತನವನ್ನು ನೀಡುತ್ತದೆ.
ಅಡಿಗೆ ಸೋಡಾ ಬಳಕೆ: ಅಡಿಗೆ ಸೋಡಾ ಒಂದು ಅತ್ಯುತ್ತಮ ನೈಸರ್ಗಿಕವಾದ ವಾಸನೆ ನಿವಾರಕವಾಗಿದೆ. ಇದು ತೇವಾಂಶ ಮತ್ತು ದುರ್ವಾಸನೆಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ರಾತ್ರಿ ಮಲಗುವ ಮುನ್ನ ಶೂಗಳೊಳಗೆ ಒಂದು ಟೀ ಚಮಚ ಅಡಿಗೆ ಸೋಡಾವನ್ನು ಸಿಂಪಡಿಸಿ ಹಾಗೆಯೇ ಬಿಡಿ. ಮರುದಿನ ಬೆಳಿಗ್ಗೆ ಶೂಗಳನ್ನು ಚೆನ್ನಾಗಿ ಕುಲುಕಿ ಅಥವಾ ಸ್ವಚ್ಛಗೊಳಿಸಿ. ಈ ವಿಧಾನವನ್ನು ಕೆಲ ದಿನಗಳು ಅನುಸರಿಸಿದರೆ ಶೂಗಳಲ್ಲಿನ ವಾಸನೆ ಬಹುತೇಕ ಕಡಿಮೆಯಾಗುತ್ತದೆ.
ಟೀ ಬ್ಯಾಗ್ಗಳ ಉಪಯೋಗ: ಟೀ ಬ್ಯಾಗ್ಗಳಲ್ಲಿ ಇರುವ ಟ್ಯಾನಿನ್ಗಳು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತವೆ. ಇವು ದುರ್ವಾಸನೆ ಉಂಟುಮಾಡುವ ಬ್ಯಾಕ್ಟಿರಿಯಾಗಳನ್ನು ನಾಶಪಡಿಸಲು ಸಹಾಯ ಮಾಡುತ್ತವೆ. ಬಳಸಿದ ಅಥವಾ ಹೊಸ ಟೀ ಬ್ಯಾಗ್ಗಳನ್ನು ಶೂಗಳೊಳಗೆ ಇಟ್ಟು ರಾತ್ರಿ ತುಂಬಾ ಬಿಡಿ. ಬೆಳಿಗ್ಗೆ ತೆಗೆದಾಗ ಶೂಗಳಲ್ಲಿ ಇರುವ ಅಸಹ್ಯ ವಾಸನೆ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೆ ಬರುತ್ತದೆ.
ಬಿಳಿ ವಿನೆಗರ್ ಬಳಕೆ: ಬಿಳಿ ವಿನೆಗರ್ ಸಹ ಶೂಗಳ ದುರ್ವಾಸನೆಯನ್ನು ಹೋಗಲಾಡಿಸಲು ಬಹಳ ಪರಿಣಾಮಕಾರಿಯಾಗಿದೆ. ಇದರಲ್ಲಿ ಬ್ಯಾಕ್ಟಿರಿಯಾ ವಿರೋಧಿ ಗುಣಗಳಿವೆ. ಸ್ವಲ್ಪ ಬಿಳಿ ವಿನೆಗರ್ ಹಾಗೂ ನೀರನ್ನು ಸಮ ಪ್ರಮಾಣದಲ್ಲಿ ಸ್ಟೇ ಬಾಟಲಿಯಲ್ಲಿ ಮಿಶ್ರಣ ಮಾಡಿ. ಈ ದ್ರಾವಣವನ್ನು ಶೂಗಳ ಒಳಭಾಗಕ್ಕೆ ಲಘುವಾಗಿ ಸಿಂಪಡಿಸಿ. ನಂತರ ಶೂಗಳನ್ನು ಚೆನ್ನಾಗಿ ಒಣಗಲು ಬಿಡಿ. ಇದರಿಂದ ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟಿರಿಯಾ ನಾಶವಾಗುತ್ತದೆ.
ನಿಂಬೆ ಅಥವಾ ಕಿತ್ತಳೆ ಸಿಪ್ಪೆ : ನಿಂಬೆ ಮತ್ತು ಕಿತ್ತಳೆ ಸಿಪ್ಪೆಗಳು ನೈಸರ್ಗಿಕ ಸುಗಂಧವನ್ನು ಹೊಂದಿರುವುದರ ಜೊತೆಗೆ ವಾಸನೆ ಹೀರಿಕೊಳ್ಳುವ ಗುಣವೂ ಇವೆ. ರಾತ್ರಿ ಮಲಗುವ ಮುನ್ನ ಶೂಗಳೊಳಗೆ ನಿಂಬೆ ಅಥವಾ ಕಿತ್ತಳೆ ಸಿಪ್ಪೆಗಳನ್ನು ಇಡಿ. ಮರುದಿನ ಬೆಳಿಗ್ಗೆ ಅವುಗಳನ್ನು ತೆಗೆದುಹಾಕಿ. ಈ ಸರಳ ವಿಧಾನ ಶೂಗಳಲ್ಲಿನ ದುರ್ವಾಸನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ತಾಜಾ ವಾಸನೆ ನೀಡುತ್ತದೆ.
ಶೂ ಜೊತೆ ಸಾಕ್ಸ್ ನಿಂದಲೂ ಕೆಟ್ಟ ವಾಸನೆ ಬರುವ ಸಾಧ್ಯತೆ ಇರುತ್ತದೆ. ನೀವು ಬಳಸುವ ಸಾಕ್ಸ್ ಗಳನ್ನು ದಿನಂಪ್ರತಿ ಒಗೆದು ಸ್ವಚ್ಛವಾಗಿಡಿ. ಇದರಿಂದ ನಿಮ್ಮ ಸಾಕ್ಸ್ ಕೆಟ್ಟ ವಾಸನೆ ಬರುವುದಿಲ್ಲ. ಹೀಗೆ ಮನೆ ಉಪಾಯಗಳನ್ನು ಮಾಡುವುದರ ಮೂಲಕ ಸಾಕ್ಸ್ ಹಾಗೂ ಶೂಗಳನ್ನು ಸ್ವಚ್ಛವಾಗಿಯೂ, ದುರ್ವಾಸನೆ ರಹಿತವಾಗಿಯೂ ಇಡಬಹುದು.
(ಆಧಾರ)
ಚಿತ್ರ : ಪ್ರೊಟೆಕ್ಟ್ ಏರ್ ಜಾಲತಾಣದಿಂದ ಸಂಗ್ರಹಿತ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!