ಕಲಬುರ್ಗಿಯ ಅಪ್ಪನ ಕೆರೆ ತುಂಬ ಪ್ರಸಿದ್ಧ. ಅದರ ದಂಡೆಯ ಮೇಲೆ ಒಂದು ವಾಚನಾಲಯ ಇದ್ದದ್ದು ನೆನಪಿದೆ. ಜನ ಅಲ್ಲಿಗೆ ಬಂದು ಉಚಿತವಾಗಿ ಪೇಪರ್, ಮಾಸಿಕ ಅಥವಾ ವಾರಪತ್ರಿಕೆಗಳನ್ನು ಓದಿ ಹೋಗುತ್ತಿದ್ದರು. ನಾನೂ ಒಂದೆರಡು ಬಾರಿ ಅಲ್ಲಿಗೆ ಹೋದ ನೆನಪು.

ಮನೆಯಲ್ಲಿ ನಮ್ಮಪ್ಪ, ಅಣ್ಣ ಇಬ್ಬರಿಗೂ ಓದಿನಲ್ಲಿ ಆಸಕ್ತಿ. ಹೀಗಾಗಿ ನನಗೂ ಅಲ್ಪಸ್ವಲ್ಪ ಓದುವ ಹವ್ಯಾಸ ಇತ್ತು. ಶಾಲೆಯ ಪುಸ್ತಕ ಅಷ್ಟು ರುಚಿಸದಿದ್ದರೂ, ಸುಧಾ, ತರಂಗ, ಮಯೂರ ಮಾತ್ರ ಓದುತ್ತಿದ್ದೆ.

ಹತ್ತನೇ ತರಗತಿ ಓದುವಾಗ ನಾವು ಬ್ರಹ್ಮಪುರದ ಬಬ್ಲಾದೀ ಅವರ ಮನೆಯಲ್ಲಿ ಬಾಡಿಗೆಗಿದ್ದೆವು.

ಏರಿಯಾದ ಹೆಸರು ವಿಚಿತ್ರ ಅನಿಸಿತಾ? ಕಲಬುರ್ಗಿಯ ಮಾತೇ ಹಾಗೆ! ಎಲ್ಲಾ ಊರುಗಳೂ ಜಗತ್ತಿನಲ್ಲಿ ಇದ್ದರೆ, ಕಲಬುರ್ಗಿಯಲ್ಲಿ ಜಗತ್ ಇತ್ತು! ‘ಜಗತ್’ ಅನ್ನೋದು ಕಲಬುರ್ಗಿಯ ಒಂದು ಏರಿಯಾದ ಹೆಸರು. ಇನ್ನು ಬ್ರಹ್ಮಪುರ ಹೆಸರಿಗೆ ಆಶ್ಚರ್ಯ ಪಡಬೇಕಾಗಿಲ್ಲ!

ಅಲ್ಲಿ ನಮ್ಮ ಮನೆಯ ಮುಂದೆ ಒಂದು ಪಾಳುಬಿದ್ದ ಬಾವಿ ಇತ್ತು. ಅದು ಕೆಲವು ಜನರ ಆಹುತಿಯನ್ನು ತೆಗೆದುಕೊಂಡಿತ್ತು ಅನ್ನುವ ಕಥೆಗಳೂ ಇದ್ದವು. ಮುಂದೆ ಅದನ್ನು ಮುಚ್ಚಲಾಯಿತು. ಅದರ ಪಕ್ಕದಲ್ಲೇ ಈಗ ಒಂದು ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ.

ಅದರ ಪಕ್ಕಕ್ಕೆ ಪ್ರತಿ ಗುರುವಾರ ಬರುತ್ತಿತ್ತು ಒಂದು ಸಂಚಾರಿ ಗ್ರಂಥಾಲಯ.

ಒಂದು ದೊಡ್ಡ ಬಸ್ ಅನ್ನು ಮಾರ್ಪಡಿಸಿ, ಅದರೊಳಗೆ ನೂರಾರು ಪುಸ್ತಕಗಳನ್ನು ಇಡಲು ವ್ಯವಸ್ಥೆ ಮಾಡಿದ್ದರು. ಸ್ವಲ್ಪವೇ ಹಣಕ್ಕೆ ಚಂದಾದಾರರಾಗಬಹುದಿತ್ತು. ವಾರಕ್ಕೆ ಎರಡು ಪುಸ್ತಕಗಳನ್ನು ಎರವಲು ಪಡೆಯುವ ಅವಕಾಶ.

ಆ ಗ್ರಂಥಾಲಯದಲ್ಲಿ ನಾನು ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಆದರೆ ಈಗ ಅವುಗಳ ಹೆಸರು ಯಾವುದೂ ನೆನಪಿಲ್ಲ. ನೆನಪಿರುವುದು ಮಾತ್ರ—ಪ್ರತಿ ವಾರವೂ ಆ ಸಂಚಾರಿ ಗ್ರಂಥಾಲಯ ಬರುವ ದಾರಿ ಕಾಯುತ್ತಿದ್ದುದು. ಬಸ್ ಬಂದ ಮೇಲೆ ಸುಮಾರು ಒಂದು ಗಂಟೆ ಕಾಲ ಅದರೊಳಗೆ ಪುಸ್ತಕಗಳನ್ನು ಹುಡುಕುತ್ತಿದ್ದೆ. ಇಷ್ಟವಾದ ಒಂದೋ, ಎರಡೋ ಪುಸ್ತಕಗಳನ್ನು ತೆಗೆದುಕೊಂಡು ಮನೆಗೆ ಬರುತ್ತಿದ್ದೆ.

ಒಂದು ದಿನ ಗ್ರಂಥಾಲಯದ ಚಾಲಕರು ನನ್ನ ಹದಿಹರೆಯದ ವಯಸ್ಸನ್ನು ನೋಡಿ,

“ಯಾವ ಕ್ಲಾಸಲ್ಲಿ ಓದ್ತೀ?” ಅಂತ ಕೇಳಿದರು

“ಟೆಂತ್,” ಎಂದೆ.

ಅದಕ್ಕೆ ಅವರು, “ಅಲ್ಲೋ, ತಮ್ಮಾ… ಹತ್ತನೇ ತರಗತಿ ಪುಸ್ತಕ ಓದು. ಇದೆಲ್ಲ ಯಾಕ ಓದಿ ಸಮಯ ಹಾಳು ಮಾಡ್ತೀ?” ಎಂದರು.

ಅವರು ಹೇಳಿದ್ದು ಬಹುಶಃ ಗದರಿಕೆಯಂತೆ ಅನಿಸಿರಬಹುದು. ಆದರೆ ಅದರೊಳಗೆ ನನ್ನ ಬಗ್ಗೆ ಇದ್ದ ಕಾಳಜಿ ನನಗೆ ಆಗ ಅರ್ಥವಾಗಲಿಲ್ಲ.

ಅಂದೇ ಕೊನೆ.

ಮತ್ತೆ ಆ ಸಂಚಾರಿ ಗ್ರಂಥಾಲಯಕ್ಕೆ ಹೋಗಲಿಲ್ಲ!

ದುಡ್ಡು ಸಿಕ್ಕರೆ ಸಾಕು, ಯಾರು ಬಂದು ಯಾವ ಪುಸ್ತಕ ತಗೊಂಡರೆ ನಮಗೇನು ಅನ್ನುವ ಈ ಕಾಲದಲ್ಲಿ, ನನ್ನ ಪರಿಚಯವೇ ಇಲ್ಲದಿದ್ದರೂ ನನ್ನ ಓದುವ ಅಭ್ಯಾಸದ ಬಗ್ಗೆ ಕಾಳಜಿ ವಹಿಸಿದ್ದ ಆ ಚಾಲಕರು ಮಾತ್ರ ಇವತ್ತಿಗೂ ನೆನಪಿಗೆ ಬರುತ್ತಾರೆ.