ಸನ್ ಸಿಟಿ ಎಂದೇ ಪ್ರಸಿದ್ಧವಾಗಿರುವ ನಗರ ನಮ್ಮ ಗುಲಬರ್ಗಾ. ಬಹುಶಃ ಡೆಕ್ಕನ್ ಹೆರಾಲ್ಡ್ ಪೇಪರ್ ಅಲ್ಲಿ ಮೊದಲ ಬಾರಿಗೆ ಈ ಹೆಸರ ಪ್ರಯೋಗ ಆಗಿತ್ತು. ಇದನ್ನು ಈಗ ಮೂಲನಾಮದಿಂದ ಕರೆಯುತ್ತಾರೆ ಸರ್ಕಾರಿ ದಾಖಲೆಗಳಲ್ಲಿ, ಕಲಬುರಗಿ ಎಂದು. ತೊಂಭತ್ತರ ದಶಕದಲ್ಲಿ ಈಗಿನಂತೆ ಹೋಟೆಲ್, ಮಾಲ್ ಮತ್ತೆ ಮಲ್ಟಿಪೆಕ್ಸ್ ಇರಲಿಲ್ಲ. ಆವಾಗ ಏನಿದ್ದರೂ ರಸ್ತೆ ಬದಿಯ ಮಿರ್ಚಿ ಭಜಿ, ಪಾನಿ ಪೂರಿ, ಹೋಟೆಲುಗಳಲ್ಲಿ ಇಡ್ಲಿ, ದೋಸೆ, ಪೂರಿ ಇತ್ಯಾದಿ ತಿಂದುಕೊಂಡು ಸಿನಿಮಾ ಟಾಕಿಸಿನಲ್ಲಿ ಸಿನಿಮಾ ನೋಡಿ ಪಬ್ಲಿಕ ಗಾರ್ಡನ್ ಅಲ್ಲಿ ಸಮಯ ಕಳೆಯುತ್ತಿತ್ತು.

ಹಾಗೆ ನೋಡಿದರೆ ಬಿಸಿಲು ಯಾವಾಗಲೂ ಯಥೇಚ್ಛವಾಗಿ ಇದ್ದರೂ, ಬೇಸಿಗೆ ಅಂತ official ಕಾಲ ಬಂದಾಗ ಹುಟ್ಟಿಕೊಳ್ಳುತ್ತಿದ್ದ ವಿಶೇಷ ಅಂಗಡಿಗಳೆಂದರೆ ಕಬ್ಬಿನ ಹಾಲಿನ ಅಂಗಡಿ. ಖಾಲಿ ಪ್ಲಾಟ್ಗಳಲ್ಲಿ ಒಂದು ದೊಡ್ಡ ಟೆಂಟ್ ಹಾಕಿ, ಒಳಗಡೆ ಸುತ್ತಲೂ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಇರುತ್ತಿತ್ತು. ಒಳಗೆ ಚಿಕ್ಕ ಟೆಂಟ್ ಅಲ್ಲಿ ಒಂದು ಗಾಣ, ಎತ್ತು ಅದರ ಸುತ್ತಲೂ ಸುತ್ತುವುದು, ಮಧ್ಯೆ ಕಬ್ಬನ್ನು ಗಾಣದಲ್ಲಿ ಹಾಕುತ್ತಿದ್ದರು. ನೊರೆ ನೊರೆಯಾಗಿ ಬರುತ್ತಿದ್ದ ಕಬ್ಬಿನ ಹಾಲು ನೋಡಲು ಖುಷಿ ಮತ್ತೆ ಅದನ್ನ ಐಸ್ ಜೊತೆ ಗ್ಲಾಸಲಿ ಹಾಕಿ ಕುಳಿತಲ್ಲೇ ತಂದುಕೊಡುತ್ತಿದ್ದರು. ಈ ಟೆಂಟ್ಗಳು ಆಗಿನ ವೈಶಿಷ್ಟ್ಯ ಆಗಿತ್ತು.

ಮುಂದೆ ಕಾಲ ಬದಲಾದಂತೆ ಮೋಟಾರ್ ಇಂದ ಕಬ್ಬು ಹಿಂಡಲಾಗುತ್ತಿತ್ತು. ಟೆಂಟ್ ಬದಲು ಈಗ ಚಿಕ್ಕ ಚಿಕ್ಕ ಬಂಡಿಗಳು ಬಂದವು. ಆ ಉರಿಯುವ ಬಿಸಿಲಲ್ಲಿ ಕುಡಿಯುತ್ತಿದ್ದ ತಣ್ಣನೆ ಕಬ್ಬಿನ ಹಾಲು ಉಷ್ಣ ಎಂದು ನಮಗೆ ಗೊತ್ತೆ ಇರಲಿಲ್ಲ. ಅದನ್ನು ಪರಿವಾರ ಸಮೇತ ಕುಡಿಯುವುದೇ ಒಂದು ಖುಷಿ.

ಈಗ ಕಬ್ಬಿನ ಹಾಲು ಪೇಪರ್ ಕಪ್ ಅಲ್ಲಿ ಕುಡಿಯುವಾಗ ಅದರ ರುಚಿ ಬೇರೆಯೇ ಆಗಿರುತ್ತದೆ. ಮಿಂಟ್, ಬ್ಲ್ಯಾಕ್ ಸಾಲ್ಟ್, ಶುಂಠಿ ಹೀಗೆ ವೈವಿಧ್ಯತೆ ಈಗ ಇದ್ದರೂ ಬೇಸಿಗೆಯಲ್ಲಿ ಮಾತ್ರ ದೊರೆಯುತ್ತಿದ್ದ ಪ್ಲೇನ್ ಅಥವಾ ನಿಂಬೆಯೊಂದಿನ ಆ ವಿಶೇಷತೆ ಈಗ ಮರೆಯಾಗಿದೆ.

ವಿಶಯಗಳು ಯಾವಾಗಲೂ ವಿರಳವಾಗಿದ್ದರೆ ಸೊಗಸು. ಅದು ಬೇಗೆಯಲ್ಲಿ ಸಿಗುತ್ತಿದ್ದ ಕಬ್ಬಿನ ಹಾಲಂಗಡಿ ಇರಬಹುದು ಇಲ್ಲವೇ ವರ್ಷಕ್ಕೊಮ್ಮೆ ಬರುತ್ತಿದ್ದ ಅಪ್ಪನ ಜಾತ್ರೆ ಆಗಿರಬಹುದು. ಈಗ ಎಲ್ಲೆಡೆ ಜಾತ್ರೆ, ಎಲ್ಲೆಡೆ ತಿಂಡಿ ತಿನಿಸು ಆದರೆ ವಿಶೇಷತೆ ಮರೆಯಾಗಿದೆ.