ಅಕ್ಟೋಬರ್ 31 ಎಂದೊಡನೆ 1985 ರಿಂದ ಸರಿಸುಮಾರು 3 ದಶಕಗಳ ಕಾಲ ಆ ದಿನವನ್ನು ನಮ್ಮ ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾಗಾಂಧಿಯವರ ಪುಣ್ಯತಿಥಿಯ ಆಚರಣೆ ಎಂಬುದಾಗಿ ಮಾತ್ರ ನಮ್ಮ ಕೇಂದ್ರ ಸರ್ಕಾರವು ಪರಿಗಣಿಸಿತ್ತು ಎನ್ನುವುದು ನಮ್ಮೆಲ್ಲರಿಗೂ ಸರ್ವೇಸಾಮಾನ್ಯವಾಗಿ ತಿಳಿದ ವಿಷಯ.
ಆದರೆ, ಅಕ್ಟೋಬರ್ 31 ರ ದಿನಾಂಕಕ್ಕೆ ಮತ್ತೊಂದು ವಿಶೇಷತೆಯೂ ಇದೆ ಎಂಬುದು ಬಹುತೇಕ ಭಾರತೀಯರ ಅರಿವಿಗೆ ಬಂದದ್ದು ಕೇವಲ ಅದು ಇತ್ತೀಚಿನ ವರ್ಷಗಳಲ್ಲಿ ಎನ್ನುವುದು ಸತ್ಯ ಸಂಗತಿ.
ಈ ದೇಶ ಕಂಡ ಅಪ್ರತಿಮ ರಾಜಕೀಯ ನಾಯಕರಲ್ಲಿ ಒಬ್ಬರು, ಅಖಂಡ ಭಾರತದ ಒಕ್ಕೂಟ ವ್ಯವಸ್ಥೆಗೆ ಹಗಲಿರುಳು ಶ್ರಮಿಸಿ, ಅದನ್ನು ಸಾಕಾರಗೊಳಿಸಿದ ಧೀಮಂತ ವ್ಯಕ್ತಿ ಹಾಗೂ ತಮ್ಮ ದಿಟ್ಟ ನಿಲುವು ಮತ್ತು ಹೋರಾಟಗಳಿಂದ "ಉಕ್ಕಿನ ಮನುಷ್ಯ" ಎಂದೇ ಪ್ರಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನವು ಅಕ್ಟೋಬರ್ 31 ರಂದೇ ಆಗಿದ್ದು, ಈಗ ಭಾರತ ಸರ್ಕಾರವು, ಅಖಂಡ ಭಾರತದ ಐಕ್ಯತೆಗೆ ಪಟೇಲರು ನೀಡಿದ ಅತ್ಯಮೂಲ್ಯ ಕೊಡುಗೆಯನ್ನು ಸ್ಮರಿಸಲು ಆ ದಿನವನ್ನು "ರಾಷ್ಟ್ರೀಯ ಏಕತಾ ದಿನ"ವನ್ನಾಗಿ ಘೋಷಿಸಿರುವುದು ತೀರಾ ಇತ್ತೀಚಿನ ಬೆಳವಣಿಗೆ ಎಂಬುದನ್ನು ನಾವೆಲ್ಲರೂ ಬಲ್ಲೆವು.
ವಲ್ಲಭಭಾಯ್ ಝವೇರ್ ಭಾಯ್ ಪಟೇಲರು (31 ಅಕ್ಟೋಬರ್ 1875 - 15 ಡಿಸೆಂಬರ್ 1950) ಭಾರತದ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ದೇಶದ ರಾಜಕೀಯ ಕ್ಷೇತ್ರದ ಅನೇಕ ಬೆಳವಣಿಗೆಗಳಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ ನಮ್ಮ ರಾಷ್ಟ್ರದ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಅತ್ಯಂತ ಪ್ರಮುಖರು ಎಂದರೆ ತಪ್ಪಾಗಲಾರದು.
ವೃತ್ತಿಯಿಂದ ವಕೀಲರಾಗಿದ್ದ ಪಟೇಲರು ತಮ್ಮ ಕ್ಷೇತ್ರದಲ್ಲಿ ಪ್ರಖ್ಯಾತರಾಗಿದ್ದಷ್ಟೇ ಅಲ್ಲದೆ, ಉತ್ತಮ ಆದಾಯವನ್ನು ಹೊಂದಿದ್ದಾಗ್ಯೂ, ಅದನ್ನು ತ್ಯಜಿಸಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು ಎಂಬುದು ವಿಶೇಷವಾಗಿತ್ತು. ಪಟೇಲರ ಕರ್ತವ್ಯನಿಷ್ಠೆ ಪ್ರಶ್ನಾತೀತವಾಗಿತ್ತು ಎಂಬುದಕ್ಕೆ ಈ ಕೆಳಗಿನ ಪ್ರಸಂಗವೊಂದು ಸಾಕ್ಷಿಯಾಗುತ್ತದೆ.
ಪಟೇಲರು ವಕೀಲಿ ವೃತ್ತಿಯಲ್ಲಿದ್ದಾಗ ಒಮ್ಮೆ ಕೊಲೆ ಮೊಕದ್ದಮೆಯೊಂದರಲ್ಲಿ ಆಪಾದಿತನಾಗಿದ್ದ ತಮ್ಮ ಕಕ್ಷಿದಾರನ ಪರವಾಗಿ ಮುಂಬೈನ ನ್ಯಾಯಾಲಯವೊಂದರಲ್ಲಿ ವಾದವನ್ನು ಮಂಡಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಟೆಲಿಗ್ರಾಂ ಸಂದೇಶವೊಂದು ಬರುತ್ತದೆ. ಆ ಸಂದೇಶವನ್ನು ಓದಿದ ನಂತರ ಪಟೇಲರು ತಮ್ಮ ಕಣ್ಣಂಚಿನ ಕಂಬನಿಯನ್ನು ಒರೆಸಿ, ಟೆಲಿಗ್ರಾಂ ನ್ನು ಜೇಬಿನಲ್ಲಿರಿಸಿ, ಕಕ್ಷಿದಾರನ ಪರವಾಗಿ ತಮ್ಮ ಸುಧೀರ್ಘ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸುವುದನ್ನು ಮುಂದುವರೆಸಿ, ಅದನ್ನು ಪೂರ್ಣಗೊಳಿಸುತ್ತಾರೆ.
ನ್ಯಾಯಾಲಯದ ಕಾರ್ಯಕಲಾಪವು ಅಂತ್ಯಗೊಂಡ ನಂತರ, ಅವರಿಗೆ ಬಂದಿದ್ದ ಟೆಲಿಗ್ರಾಂ ಸಂದೇಶವನ್ನು ಕುರಿತು ಅವರ ಸ್ನೇಹಿತರು ಪ್ರಶ್ನಿಸಿದಾಗ, ಅದು ಪಟೇಲರ ಪತ್ನಿಯ ಸಾವಿನ ಸುದ್ದಿಯನ್ನು ಹೊತ್ತುತಂದ ಸಂದೇಶವಾಗಿತ್ತು ಎಂದು ತಿಳಿದು ಬರುತ್ತದೆ. ಆ ಸಂದರ್ಭದಲ್ಲಿ ಪಟೇಲರು ನೀಡಿದ ಉತ್ತರ ಅವರ ಕರ್ತವ್ಯನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿತ್ತು.
"ಅನಾರೋಗ್ಯ ಪೀಡಿತಳಾಗಿದ್ದ ನನ್ನ ಪತ್ನಿಯನ್ನoತೂ ಉಳಿಸಿಕೊಳ್ಳಲು ನನ್ನಿoದ ಸಾಧ್ಯವಾಗಲಿಲ್ಲ, ಆದರೆ ನನ್ನ ಕಕ್ಷಿದಾರನ ಪರವಾದ ವಾದವನ್ನು ನಾನು ಇಂದು ಮಂಡಿಸದಿದ್ದರೆ, ನ್ಯಾಯಾಲಯವು ಆತನನ್ನು ಅಪರಾಧಿ ಎಂದು ಪರಿಗಣಿಸಿ ಗಲ್ಲು ಶಿಕ್ಷೆಯನ್ನು ವಿಧಿಸುವ ಎಲ್ಲಾ ಸಾಧ್ಯತೆಗಳು ಇದ್ದುದರಿಂದ, ಆತ ನಿರಪರಾಧಿ ಎಂದು ಸಾಬೀತು ಮಾಡಲು ನನಗಿದ್ದ ಕೊನೇ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ಆತನ ಜೀವ ಉಳಿಸಲು ನನಗಿದ್ದದ್ದು ಇದೊಂದೇ ದಾರಿ. ಆದ್ದರಿಂದ, ಆ ಅವಕಾಶವನ್ನು ಕಳೆದುಕೊಳ್ಳದೆ, ನನ್ನ ಕಕ್ಷಿದಾರನ ರಕ್ಷಣೆಗೆ ನಿಲ್ಲುವುದು ನನ್ನ ಆದ್ಯ ಕರ್ತವ್ಯವಾಗಿದ್ದರಿಂದ ನಾನು ಆ ಹೊಣೆಗಾರಿಕೆಯನ್ನು ನಿರ್ವಹಿಸುವುದು ಅನಿವಾರ್ಯವಾಗಿತ್ತು." ಒಬ್ಬ ವಕೀಲನಾಗಿ ತನ್ನ ಕಕ್ಷಿದಾರನ ಹಿತರಕ್ಷಣೆಯನ್ನು ಮಾಡುವುದು ಆತನ ಮೊದಲ ಆದ್ಯತೆಯಾಗಿರಬೇಕು ಎನ್ನುವುದನ್ನು ಪಟೇಲರು ಈ ನಿದರ್ಶನದ ಮೂಲಕ ನಿರೂಪಿಸಿದ್ದರು.
ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ನಂತರವೂ ಅದೇ ಕರ್ತವ್ಯ ಬದ್ಧತೆಯನ್ನು ಪಟೇಲರು ಹೊಂದಿದ್ದರು ಎಂಬುದು ಬಹಳ ಗಮನಾರ್ಹವಾದ ಸಂಗತಿ. 1928 ರ ಸಮಯದಲ್ಲಿ ಗುಜರಾತಿನ ಬಾರ್ಡೋಲಿಯಲ್ಲಿ ಬ್ರಿಟಿಷರು ರೈತ ಸಮುದಾಯದ ಮೇಲೆ ವಿಧಿಸಿದ್ದ ಕಂದಾಯವನ್ನು ವಿರೋಧಿಸಿ, ಆ ಅನ್ಯಾಯದ ವಿರುದ್ಧ ರೈತರನ್ನು ಸಮರ್ಥವಾಗಿ ಸಂಘಟಿಸಿ, ಬ್ರಿಟಿಷರ ವಿರುದ್ಧ ಬೃಹತ್ ಹೋರಾಟವನ್ನು ಘೋಷಿಸಿದ್ದೇ ಅಲ್ಲದೆ ಅದನ್ನು ಯಶಸ್ವಿಯಾಗಿ ಮುನ್ನಡೆಸಿ, ಬ್ರಿಟಿಷ್ ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದ ಪಟೇಲರು, ಈ ಚಳುವಳಿಯಿಂದ "ಸರ್ದಾರ್" ಎಂಬ ಬಿರುದನ್ನು ರೈತ ಸಮುದಾಯದಿಂದ ಗಳಿಸಿ, ಮುಂದೆ ಹಾಗೆಯೇ ಸಂಬೋಧಿಸಲ್ಪಟ್ಟು ಖ್ಯಾತರಾದದ್ದು ಒಂದು ಇತಿಹಾಸ.
ಕೇವಲ ತಮ್ಮ ಕರ್ತವ್ಯನಿಷ್ಠೆಗಷ್ಟೇ ಅಲ್ಲದೆ, ನಿಸ್ವಾರ್ಥ ಮನೋಭಾವಕ್ಕೂ ಪಟೇಲರು ಹೆಸರಾಗಿದ್ದರು ಎಂಬುದು ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಘಟನೆಯೊಂದು ನಿರೂಪಿಸುತ್ತದೆ. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಲು ನಿರ್ಧರಿಸಿದ ನಂತರ 1946 ರಲ್ಲಿ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭವಾಯಿತು. ಆಗ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾಗುವವರೇ ಮುಂದೆ ಸ್ವಾತಂತ್ರ್ಯಾನಂತರದ ದೇಶದ ಪ್ರಥಮ ಪ್ರಧಾನಿಯಾಗುವುದಾಗಿ ಪೂರ್ವಭಾವಿಯಾಗಿ ನಿಯೋಜಿತವಾಗಿತ್ತು. ಈ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು ತನ್ನ ಪ್ರಾoತೀಯ ಕಾಂಗ್ರೆಸ್ ಸಮಿತಿಗಳಿಂದ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಹೆಸರುಗಳನ್ನು ಶಿಫಾರಸ್ಸು ಮಾಡಲು ಪ್ರಸ್ತಾವನೆಗಳನ್ನು ಆಹ್ವಾನಿಸಿತು.
ಆಗ ದೇಶದಾದ್ಯಂತ ಆಸ್ತಿತ್ವದಲ್ಲಿದ್ದ ಒಟ್ಟು ಹದಿನೈದು ಪ್ರಾಂತೀಯ ಕಾಂಗ್ರೆಸ್ ಸಮಿತಿಗಳು ಸಲ್ಲಿಸಿದ ಪ್ರಸ್ತಾವನೆಗಳಲ್ಲಿ ಒಟ್ಟು ಹನ್ನೆರಡು ಪ್ರಸ್ತಾವನೆಗಳು ಪಟೇಲರ ಪರವಾಗಿದ್ದವು ಎಂಬುದು ಬಹಳ ಗಮನಾರ್ಹವಾದ ಸಂಗತಿಯಾಗಿತ್ತು. ಇನ್ನುಳಿದ ಮೂರು ಪ್ರಸ್ತಾವನೆಗಳಲ್ಲಿ ಎರಡು ಆಚಾರ್ಯ ಜೆ ಬಿ ಕೃಪಲಾನಿಯವರ ಪರವಾಗಿಯೂ ಹಾಗೂ ಒಂದು ಪ್ರಸ್ತಾವನೆಯು ಪಟ್ಟಾಭಿ ಸೀತಾರಾಮಯ್ಯನವರ ಪರವಾಗಿ ಬಂದಿದ್ದವು. ಹಾಗೆಯೇ, ನೆಹರು ಪರವಾಗಿ ಒಂದೇ ಒಂದು ಪ್ರಸ್ತಾವನೆಯೂ ಇರಲಿಲ್ಲ ಎಂಬುದು ಸಹ ಅಷ್ಟೇ ಗಮನಾರ್ಹವಾಗಿತ್ತು.
ಆದರೆ, ಗಾಂಧಿಯವರನ್ನು ತಮ್ಮ ನಾಯಕನೆಂದು ಪರಿಗಣಿಸಿದ್ದ ಪಟೇಲರು ಗಾಂಧಿಯವರ ಒಲವು ನೆಹರೂರವರ ಪರವಾಗಿದೆ ಎಂಬ ಅವರ ಮನದ ಇಂಗಿತವನ್ನು ಅರಿತಿದ್ದರಿಂದ, ಪಟೇಲರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತಮ್ಮ ಪರವಾಗಿ ಬಂದಿದ್ದ ಎಲ್ಲಾ ಪ್ರಸ್ತಾವನೆಗಳನ್ನು ಜವಾಹರ್ ಲಾಲ್ ನೆಹರುರವರ ಪರವಾಗಿ ನೀಡುವುದರ ಮೂಲಕ ತಮಗೆ ಅನಾಯಾಸವಾಗಿ ಒಲಿದು ಬರಬಹುದಾಗಿದ್ದ ಪ್ರಧಾನಿ ಹುದ್ದೆಯನ್ನು ಉದಾರವಾಗಿ ನೆಹರುರವರಿಗೆ ಕೊಡುಗೆಯಾಗಿ ನೀಡುವುದರ ಮೂಲಕ ತಮ್ಮ ನಿಸ್ವಾರ್ಥತೆಯನ್ನು ಮೆರೆದಿದ್ದರು ಎಂಬ ಸತ್ಯವನ್ನು ಕಾಂಗ್ರೆಸ್ ಬಹಿರಂಗಪಡಿಸದೇ ಇದ್ದುದರಿಂದ ಆ ವಿಷಯವು ಇಂದಿಗೂ ಬಹುತೇಕ ಭಾರತೀಯರ ಅರಿವಿಗೆ ಬಂದಿಲ್ಲ ಎಂಬುದು ಒಂದು ದುರ್ದೈವದ ಸಂಗತಿ.
ಸ್ವಾತಂತ್ರ್ಯಾನಂತರ, ಭಾರತದಲ್ಲಿ ಅಂದು ಆಸ್ತಿತ್ವದಲ್ಲಿದ್ದ ಸುಮಾರು 560 ಕ್ಕೂ ಅಧಿಕ ದೇಶೀಯ ಸಂಸ್ಥಾನಗಳನ್ನು ದೇಶದ ಒಕ್ಕೂಟ ವ್ಯವಸ್ಥೆಯ ಪರಿಧಿಗೆ ತರುವ ಹೊಣೆ ಹೊತ್ತಿದ್ದ ಅಂದಿನ ಉಪಪ್ರಧಾನಿ ಮತ್ತು ಗೃಹ ಸಚಿವರಾಗಿದ್ದ ವಲ್ಲಭಭಾಯ್ ಪಟೇಲರು ಆ ಜವಾಬ್ದಾರಿಯನ್ನು ನಿರ್ವಹಿಸಲು ಪಟ್ಟ ಪರಿಶ್ರಮ ಬಹುಶಃ ನಮ್ಮ ಊಹೆಗೂ ನಿಲುಕದ್ದು ಎಂದರೆ ತಪ್ಪಾಗಲಾರದು.
ತಮ್ಮ ಈ ಪ್ರಯತ್ನದಲ್ಲಿ ಪಟೇಲರು, ಕಾಶ್ಮೀರ ಸಂಸ್ಥಾನಕ್ಕೆ ಮನವೊಲಿಕೆ, ಜುನಾಗಢ ಸಂಸ್ಥಾನಕ್ಕೆ ಬೆದರಿಕೆ ಹಾಗೂ ಹೈದರಾಬಾದ್ ಸಂಸ್ಥಾನಕ್ಕೆ ಸೇನಾ ಕಾರ್ಯಾಚರಣೆ ಹೀಗೆ ವಿವಿಧ ತಂತ್ರಗಳನ್ನು ಪ್ರಯೋಗಿಸುವ ಮುಖಾಂತರ ದೇಶೀಯ ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸುವಲ್ಲಿ ಯಶಸ್ವಿಯಾದರು. ಇಂದು ಅಖಂಡ ಭಾರತವು ಆಸ್ತಿತ್ವದಲ್ಲಿದೆ ಎಂದರೆ ಅದರ ಸಂಪೂರ್ಣ ಕೀರ್ತಿ ಸರ್ದಾರ್ ವಲ್ಲಭಭಾಯ್ ಪಟೇಲರಿಗೆ ಸಲ್ಲಬೇಕು ಎಂಬುದು ನಿರ್ವಿವಾದದ ಸಂಗತಿ ಎನ್ನುವುದನ್ನು ಇಡೀ ದೇಶದ ಜನತೆ ಅರಿತಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ಭಗೀರಥ ಪ್ರಯತ್ನದಲ್ಲಿ ಅಂದು ಗೃಹ ಸಚಿವರಾಗಿದ್ದ ಪಟೇಲರ ಕಾರ್ಯದರ್ಶಿ ಸ್ಥಾನಕ್ಕೆ ವಿಶೇಷವಾಗಿ ನೇಮಕಗೊಂಡಿದ್ದ ವಿ ಪಿ ಮೆನನ್ ರವರು ತಮ್ಮ ಆಡಳಿತ ಸಾಮರ್ಥ್ಯವನ್ನು ಧಾರೆ ಎರೆಯುವ ಮೂಲಕ ಪಟೇಲರಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖನಾರ್ಹ.
ಸ್ವಾತಂತ್ರ್ಯಾನಂತರ, 1949 ರಲ್ಲಿ ನಮ್ಮ ದೇಶದ ಸಂವಿಧಾನವನ್ನು ಅಂತಿಮ ಗೊಳಿಸುವ ಹಂತದಲ್ಲಿ, ಜಮ್ಮು ಮತ್ತು ಕಾಶ್ಮೀರವು ಮುಸ್ಲಿಂ ಬಹುಸಂಖ್ಯಾತ ರಾಜ್ಯವಾದುದರಿಂದ ಅದಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕೆಂಬ ಬೇಡಿಕೆಯನ್ನು ಶೇಖ್ ಅಬ್ದುಲ್ಲ ಮತ್ತು ಇತರರು ಮಂಡಿಸಿದಾಗ, ಪ್ರಧಾನಿ ನೆಹರು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಭೇಟಿಯಾಗಲು ಅವರಿಗೆ ಸೂಚಿಸುತ್ತಾರೆ. ಅದರಂತೆ ಶೇಖ್ ಅಬ್ದುಲ್ಲಾ ಹಾಗೂ ಆತನ ಸಹಚರರು ಅಂಬೇಡ್ಕರ್ ರವರನ್ನು ಭೇಟಿಯಾಗಿ ತಮ್ಮ ಪ್ರಸ್ತಾವನೆಯನ್ನು ಅವರ ಮುಂದೆ ಸಲ್ಲಿಸಿದಾಗ, ಅವರು ಅದನ್ನು ಸಾರಸಗಟಾಗಿ ತಿರಸ್ಕರಿಸಿಬಿಟ್ಟಿದ್ದರು.
ಆ ನಂತರ, ನೆಹರುರವರು ಶೇಖ್ ಅಬ್ದುಲ್ಲಾರ ಬೇಡಿಕೆಯನ್ನು ಈಡೇರಿಸಲು ಈ ಮೊದಲೇ ನಿರ್ಧರಿಸಿದ್ದರಿಂದ, ಅನ್ಯಮಾರ್ಗವಿಲ್ಲದೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಉದ್ದೇಶದ ಸಂವಿಧಾನದ 370 ನೇ ವಿಧಿಯನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡುವ ಹೊಣೆಯನ್ನು ಗೃಹ ಮಂತ್ರಿಗಳಾಗಿದ್ದ ಪಟೇಲರ ಹೆಗಲಿಗೇರಿಸಿ, ಚಾಣಾಕ್ಷತನದಿಂದ ನೆಹರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ವಿದೇಶ ಪ್ರವಾಸಕ್ಕೆ ತೆರಳಿದ್ದು, ಒಂದು ವ್ಯವಸ್ಥಿತ ಸಂಚಿನ ಭಾಗವಾಗಿತ್ತು ಎಂಬುದು ಯಾರ ಗಮನಕ್ಕೂ ಬರಲೇಯಿಲ್ಲ.
ಆದರೆ, ಪ್ರಧಾನಿಯವರ ಈ ಆಣತಿಯಿಂದ ತೀವ್ರ ಸಂಧಿಗ್ಧ ಪರಿಸ್ಥಿತಿಗೆ ಸಿಲುಕಿದ ಪಟೇಲರು, ನೆಹರುರವರ ಅನುಪಸ್ಥಿತಿಯಲ್ಲಿ ಅಂತಿಮವಾಗಿ 370 ನೇ ವಿಧಿಯನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡುವಾಗ, ಅದು ಕೇವಲ "ತಾತ್ಕಾಲಿಕ ಮತ್ತು ಆಶಾಶ್ವತ" (Temporary & Transient) ಎಂಬ ನಿಂಬಂಧನೆಯನ್ನು ಸೇರ್ಪಡೆಮಾಡಿ, ಭವಿಷ್ಯದಲ್ಲಿ ಯಾವುದೇ ಕಾನೂನಾತ್ಮಕ ತೊಡಕುಗಳಿಲ್ಲದೆ 370 ನೇ ಕಲಮನ್ನು ರದ್ದು ಮಾಡಬಹುದಾದ ಸಾಧ್ಯತೆಯ ಆಯ್ಕೆಯನ್ನು ಕೇಂದ್ರ ಸರ್ಕಾರವು ಹೊಂದಿರುವಂತೆ ಮುಂಜಾಗ್ರತೆಯನ್ನು ವಹಿಸುವ ಮೂಲಕ ದೇಶದ ಬಹುಸಂಖ್ಯಾತ ಹಿಂದೂಗಳ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ಪಟೇಲರು ಯಶಸ್ವಿಯಾಗಿದ್ದು, ಅವರ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿತ್ತು ಎಂಬುದು ಅತ್ಯಂತ ಗಮನಾರ್ಹ ಸಂಗತಿಯೆನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಮುಂದೆ ಸರಿಯಾಗಿ ಏಳು ದಶಕಗಳ ಸುಧೀರ್ಘ ಅವಧಿಯ ನಂತರ 2019 ರ ಆಗಸ್ಟ್ 5 ರಂದು ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದ 370 ನೇ ವಿಧಿಯನ್ನು ರದ್ದುಮಾಡುವ ದಿಟ್ಟ ನಿರ್ಧಾರವನ್ನು ಕೈಗೊಂಡಾಗ , ಪಟೇಲರು ಅಂದು ದೂರದರ್ಶಿತ್ವದಿಂದ ಕೈಗೊಂಡ ಕ್ರಮವು ಮೋದಿಯವರ ಸರ್ಕಾರದ ನೆರವಿಗೆ ಬಂದಿತ್ತು ಎಂಬುದು ಈಗ ನಿರ್ವಿವಾದದ ಅಂಶ ಮತ್ತು ಇತಿಹಾಸ.
ಇಂತಹ ಧೀರೋದಾತ್ತ ವ್ಯಕ್ತಿತ್ವದ ನಾಯಕರಾಗಿದ್ದ ಸರ್ದಾರ್ ಪಟೇಲರನ್ನು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಕೇವಲ ಮೂರು ವರ್ಷಗಳ ಅಲ್ಪಾವಧಿಯಲ್ಲೇ (15 ಡಿಸೆಂಬರ್ 1950) ನಾವು ಕಳೆದುಕೊಂಡಿದ್ದು, ಭಾರತೀಯರ ಅತ್ಯಂತ ದೊಡ್ಡ ದೌರ್ಭಾಗ್ಯ ಎಂದರೆ ಅದು ಅತಿಶಯೋಕ್ತಿಯಾಗಲಾರದು.
ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ಭಾರತ ರತ್ನ”ವನ್ನು ದೇಶಕ್ಕೆ ಕಿಂಚಿತ್ತು ಕೊಡುಗೆ ನೀಡದ ಹಲವಾರು ವ್ಯಕ್ತಿಗಳಿಗೆ ನೀಡಿ, ಆ ನಂತರ ಬಹಳ ತಡವಾಗಿ ಧೀಮಂತ ವ್ಯಕ್ತಿತ್ವದ ಮಹಾನ್ ನಾಯಕರಾದ ಸರ್ದಾರ್ ಪಟೇಲರಿಗೆ, ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಲು ಅವರು ವಿಧಿವಶರಾದ ನಾಲ್ಕು ದಶಕಗಳ ನಂತರ 1991 ರಲ್ಲಿ ಭಾರತ ಸರ್ಕಾರವು ನಿರ್ಧರಿಸಿದ್ದು ನಿಜಕ್ಕೂ ಒಂದು ವಿಪರ್ಯಾಸದ ಸಂಗತಿ ಮತ್ತು ನಮ್ಮ ಕಲುಷಿತ ರಾಜಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರೆ ಅದು ಬಹುಶಃ ತಪ್ಪಾಗಲಾರದು.
ತಮ್ಮ ಜೀವನದ ಕೊನೆಯ ಉಸಿರಿನವರೆಗೂ ಭಾರತದ ಒಳಿತಿಗಾಗಿ ಶ್ರಮಿಸಿದ "ಉಕ್ಕಿನ ಮನುಷ್ಯ" ಪಟೇಲರನ್ನು ಹಾಗೂ ಅವರು ದೇಶಕ್ಕೆ ನೀಡಿದ ಅಪಾರ ಕೊಡುಗೆಯನ್ನು ಕಾಂಗ್ರೆಸ್ ನ ಆಡಳಿತಾವಧಿಯ ಭಾರತ ಸರ್ಕಾರವು ದಶಕಗಳ ಕಾಲ ಸಂಪೂರ್ಣವಾಗಿ ಕಡೆಗಣಿಸಿದ್ದು ಒಂದು ದುರಂತವೇ ಸರಿ ಎಂದೆನ್ನಬಹುದು.
ಆದರೆ, ಪ್ರಸ್ತುತ ಕೇಂದ್ರದಲ್ಲಿ ಆಡಳಿತದಲ್ಲಿರುವ ಎನ್ ಡಿ ಎ ಸರ್ಕಾರವು ಪಟೇಲರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲು ಗುಜರಾತ್ ನ ನರ್ಮದಾ ಜಿಲ್ಲೆಯ ಕೇವಾಡಿಯಾ ಪಟ್ಟಣದ ಬಳಿಯ ನವಗಾಮ್ ಬಳಿ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲಾಶಯವನ್ನು ಪ್ರಧಾನಿ ನರೇಂದ್ರ ಮೋದಿಯವರು 2017 ರಲ್ಲಿ ಉದ್ಘಾಟಿಸಿ, ಪಟೇಲರ ಸ್ಮರಣಾರ್ಥ ಅದಕ್ಕೆ "ಸರ್ದಾರ್ ಸರೋವರ" ಎಂದು ಹೆಸರಿಸುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡಿದೆ.
ಪಟೇಲರು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಆಸ್ತಿತ್ವಕ್ಕೆ ತರಲು ಪಟ್ಟ ಶ್ರಮದ ನೆನಪಿಗಾಗಿ 597 ಅಡಿ ಎತ್ತರದ ಅವರ ಬೃಹತ್ ಪ್ರತಿಮೆಯನ್ನು ಗುಜರಾತ್ ನ ನರ್ಮದಾ ನದಿ ತೀರದಲ್ಲಿ ನಿರ್ಮಿಸಿ, ಪಟೇಲರ 143 ನೇ ವರ್ಷದ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 2018 ರ ಅಕ್ಟೋಬರ್ 31 ರಂದು ವಿಶ್ವದ ಅತ್ಯಂತ ಎತ್ತರವಾದ ಈ "ಐಕ್ಯತಾ ಪ್ರತಿಮೆ" (Statue of Unity) ಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡುವುದರೊಂದಿಗೆ ಪಟೇಲರ ಜನ್ಮದಿನವಾದ ಅಕ್ಟೋಬರ್ 31 ರ ದಿನವನ್ನು "ರಾಷ್ಟ್ರೀಯ ಏಕತಾ ದಿನ" (National Unity Day) ಎಂದು ಘೋಷಿಸುವ ಮೂಲಕ ಪಟೇಲರನ್ನು ಸೂಕ್ತವಾಗಿ ಗೌರವಿಸಿದ್ದು ನಿಜಕ್ಕೂ ಒಂದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ.
ಭಾರತವು ಕಂಡ ಅತ್ಯಂತ ವಿರಳಾತಿವಿರಳ ರಾಜಕೀಯ ನಾಯಕರಲ್ಲೊಬ್ಬರು ಹಾಗೂ "ಉಕ್ಕಿನ ಮನುಷ್ಯ" ಎಂದೇ ಪ್ರಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನದ 151 ನೇ ವರ್ಷಾಚರಣೆಯಾದ ಅಕ್ಟೋಬರ್ 31 ರ ಈ ಸಂದರ್ಭದಲ್ಲಿ, ಅವರ ಧೀಮಂತ ಹಾಗೂ ಉದಾತ್ತ ವ್ಯಕ್ತಿತ್ವ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಜಾರಿಗೆ ತರಲು ಅವರು ಸಲ್ಲಿಸಿದ ಅಪ್ರತಿಮ ಸೇವೆಯನ್ನು ಸ್ಮರಿಸಿ, ಅವರಿಗೆ ನಮ್ಮ ಗೌರವಪೂರ್ವಕ ನಮನಗಳನ್ನು ಸಲ್ಲಿಸುವುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬುದನ್ನು ಈ ದೇಶದ ನಾಗರೀಕರಾದ ನಾವೆಲ್ಲರೂ ಸದಾ ನೆನಪಿನಲ್ಲಿಡಬೇಕು.
"ಜೈ ಹಿಂದ್, ಜೈ ಭಾರತ್"
ಪ್ರತಿಕ್ರಿಯೆ (2)
ಉತ್ತಮವಾದ ಲೇಖನ
👌👌