ಖ್ಯಾತ ಕವಯತ್ರಿ ಮಾಯಾ ಏಂಜೆಲೋರ ಆತ್ಮಕಥೆಯನ್ನು ಎಂ ಆರ್ ಕಮಲ ಬಹಳ ಸೊಗಸಾಗಿ ಬರೆದಿದ್ದಾರೆ. ಕಪ್ಪು ವರ್ಣದ ಮಾಯಾ ಏಂಜೆಲೋರ ಸಾಹಸಮಯ ಜೀವನದ ಬಗ್ಗೆ ಈ ಆತ್ಮ ಕಥೆಯಲ್ಲಿ ಚಿತ್ರಿಸಲಾಗಿದೆ.
“ಮಾಯಾ ಏಂಜೆಲೊ, ಆಧುನಿಕ ವಿಶ್ವಕಾವ್ಯದಲ್ಲಿ ಬಹು ಮುಖ್ಯ ಹೆಸರು. ಕಪ್ಪು ಜನಾಂಗದ ಈ ಮಹಿಳೆ ತನ್ನ ಕಾವ್ಯದ ಮಾಂತ್ರಿಕ ಶಕ್ತಿಯಿಂದ ಸಾಹಿತ್ಯಾಸಕ್ತರನ್ನು ಮರುಳು ಮಾಡಿರುವುದೇ ಒಂದು ಸೋಜಿಗವಾಗಿದೆ. ನೊಂದ ಜನಾಂಗದ ಆಶೋತ್ತರ, ನೋವು-ನಲಿವುಗಳನ್ನು ತನ್ನ ಅಭಿವ್ಯಕ್ತಿಯ ಮುಖ್ಯ ಧಾರೆಯಾಗಿಸಿಕೊಂಡಿರುವ ಈಕೆಯ ಕವಿತೆಗಳು ಹೊಸ ಓದುಗನೊಬ್ಬ ಆಯುವ ವಿಶ್ವದ ಅತ್ಯುತ್ತಮ ಇಪ್ಪತ್ತೈದು ಕವಿತೆಗಳಲ್ಲಿ ಸ್ಥಾನ ಪಡೆದಿರುತ್ತವೆ ಎಂಬುದು ಈಕೆಯ ಕಾವ್ಯದ ಗುಣಾತ್ಮಕತೆಯನ್ನು ಪ್ರತಿನಿಧಿಸುತ್ತದೆ.
ಸದ್ಯದ ಆತ್ಮಕತೆ ‘ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ’ಯ ಬಗೆಗೆ ಹೇಳುವುದಾದರೆ, ಈ ಪುಸ್ತಕವು ಮಹಿಳಾ ಸಾಹಿತ್ಯದ ಸೂಜಿಗಲ್ಲು ಎಂದೇ ಗುರುತಿಸಲಾಗಿದೆ. ಪ್ರತಿ ವರ್ಷವೂ ಹೊಸ ಭಾಷೆಗಳಿಗೆ ಅನುವಾದವಾಗುತ್ತ ಲಕ್ಷಾಂತರ ಪ್ರತಿ ಮಾರಾಟವನ್ನು ಕಾಣುತ್ತಲೇ ಇರುವ ಪುಸ್ತಕವಾಗಿದೆ. ಆಫ್ರಿಕನ್-ಅಮೆರಿಕನ್ ಮಹಿಳಾ ಸಾಹಿತ್ಯವನ್ನು ಪರಿಚಯಿಸುವ ‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಮಾಲಿಕೆಯ ಕೊನೆಯ ಪುಸ್ತಕವಾಗಿ ಇದನ್ನು ಪ್ರಕಟಿಸುತ್ತಿರುವುದು ಮಾಲಿಕೆಯ ಸಾಂಕೇತಿಕ ಅರ್ಥವನ್ನು ಹೆಚ್ಚಿಸಿದೆ. ‘ಕತ್ತಲ ಹೂವಿನ ಹಾಡು’, ‘ಕಪ್ಪು ಹಕ್ಕಿಯ ಬೆಳಕಿನ ಹಾಡು’, ‘ಉತ್ತರ ನಕ್ಷತ್ರ’, ‘ನನ್ನ ಕಥೆ’ ಈ ಮಾಲಿಕೆಯ ಇತರ ಪುಸ್ತಕಗಳಾಗಿವೆ. ಒಂದು ಜನಾಂಗದ, ಅದರಲ್ಲೂ ಮಹಿಳೆಯರ ಕಾವ್ಯ, ಜೀವನ, ಆತ್ಮಕಥೆಗಳನ್ನು ಒಳಗೊಂಡ ಈ ಬಗೆಯ ಪ್ರಯತ್ನದ ಹೆಚ್ಚುಗಾರಿಕೆಯ ಕುರಿತು ಹೇಳುವ ಅವಶ್ಯಕತೆಯಿಲ್ಲ. ಅತ್ಯುತ್ತಮ ಗುಣಮಟ್ಟದ ಸಾರವನ್ನು ಒಳಗೊಂಡ ಸರಿಸುಮಾರು ಒಂದು ಸಾವಿರ ಪುಟಗಳು ಕನ್ನಡ ಭಾಷೆಗೆ ಎಲ್ಲ ರೀತಿಯಲ್ಲೂ ಅಗತ್ಯವೇ.” ಇದು ಈ ಕೃತಿಯ ಬೆನ್ನುಡಿಯಲ್ಲಿ ಕಂಡ ಸಾಲುಗಳು.
ಲೇಖಕರಾದ ಎಂ ಆರ್ ಕಮಲ ಇವರು ತಮ್ಮ ಮನದಾಳದ ಮಾತುಗಳನ್ನು ಹೇಳಿರುವುದು ಹೀಗೆ.. “ ಇದೀಗ ಬೀಳ್ಕೊಡುವ ಗಳಿಗೆ! ಆದರೆ ಇದೊಂದು ಸಂತಸಕರವಾದ ವಿದಾಯ. ಎಂ.ಎ. ಓದುವಾಗ ತಮ್ಮ ಕವಿತೆಗಳ ಮೂಲಕ ನನ್ನ ಮನಸ್ಸಿನಲ್ಲಿ ತಮ್ಮ ಭಾವಲೋಕದ ಬೀಜವನ್ನು ಬಿತ್ತಿ, ಈ ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದು, ಸಾವಿರಾರು ಸಾಲುಗಳಾಗಿ ಟಿಸಿಲೊಡೆದು ಐದು ಪುಸ್ತಕಗಳಲ್ಲಿ ತಮ್ಮ ಸುಗಂಧವನ್ನು ಹರಡಿಕೊಂಡ ಕಪ್ಪು ಕವಿಗಳಿಗೆ ನಾನೀಗ ಖುಷಿಯಿಂದ ಕೈ ಬೀಸಿ ಕಳುಹಿಸಿಕೊಡುತ್ತಿದ್ದೇನೆ. ಈಗೇನಿದ್ದರೂ ತಮ್ಮ ಹೋರಾಟದ ಬದುಕಿನಲ್ಲಿ ಹಾಡಿನ ಮೂಲಕ ಮನುಷ್ಯ ಪ್ರಪಂಚವನ್ನು ಆರ್ದ್ರಗೊಳಿಸಿದ; ತಮ್ಮ ಚಾರಿತ್ರ್ಯದಿಂದಲೇ ಚಿರಸ್ಮರಣೀಯರಾದ ಈ ನನ್ನ ಗೆಳತಿಯರು ಕನ್ನಡ ಭಾಷೆಯ ಹೊಸ ಹೊಸ ಓದುಗರೊಂದಿಗೆ ತಮ್ಮ ಸಂಬಂಧವನ್ನು ಬೆಸೆಯುತ್ತ ತಮ್ಮ ಕಥೆಗಳನ್ನು ಮತ್ತೆ ಮತ್ತೆ ಹೇಳಿಕೊಳ್ಳುವುದಷ್ಟೇ. ಈ ವರ್ಷಗಳಲ್ಲಿ ಎಲ್ಲ ನೋವು, ದುಃಖ, ಯಾತನೆಗಳ ನಡುವೆಯೇ ಬದುಕಿನ ಸುಖವಿದೆ, ಆದರೆ ಹೋರಾಡುತ್ತಲೇ ನಾವದನ್ನು ಪಡೆಯಬೇಕಾಗುತ್ತದೆ ಎಂದು ನೂರುನೂರು ಸಲ ಈ ಗೆಳತಿಯರು ನನಗೆ ಹೇಳಿಕೊಟ್ಟಿದ್ದಾರೆ. ಅವರ ಸ್ನೇಹ, ಒಡನಾಟ, ಮೃದುಮಾತಿಗೆ ನಾನು ಋಣಿ ಎಂದರೆಷ್ಟೇ ಸಾಲದು.
ಕಪ್ಪು ಕವಿತೆಗಳ ಚೆಲುವನ್ನು ಹುಡುಕುತ್ತ ಹೊರಡುವಂತೆ ಮಾಡಿ, ನೂರಾರು ಲೇಖಕರನ್ನು ಭೇಟಿ ಮಾಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಮಿತಿಯೆಂದರೆ ಆ ಜನಾಂಗದ ಎದೆಯ ಹಾಡನ್ನು ಕನ್ನಡದ ಅಮೃತವಾಹಿನಿಯಾಗಿ ಹರಿಸುವ ಕೆಲಸ ಒಬ್ಬರಿಂದಲೇ ಆಗುವುದಲ್ಲ ಎನ್ನುವುದು. ಹೊಸ ತಲೆಮಾರಿನ ಬರಹಗಾರರು ಈ ಐದು ಪುಸ್ತಕಗಳಿಂದ ಪ್ರಭಾವಿತರಾಗಿ, ನನ್ನಂತೆಯೇ ಹುಡುಕಿ ಹೊರಟು ಇನ್ನಷ್ಟು ಉತ್ತಮ ಕವಿತೆ, ಕಥೆ, ಆತ್ಮಚರಿತ್ರೆ, ಕಾದಂಬರಿಗಳನ್ನು ಕನ್ನಡಿಸಿ ಭಾಷೆಗೆ ಮೆರಗು ನೀಡಲಿ ಎಂಬುದೇ ನನ್ನ ಬಯಕೆ. ‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಮಾಲಿಕೆಯ ಪುಸ್ತಕಗಳು ಅಪಾರ ಓದುಗರನ್ನು ಮತ್ತು ಹೊಸ ಗೆಳೆಯರನ್ನು ಗಳಿಸಿಕೊಟ್ಟಿವೆ. ಈ ಮಾಲಿಕೆಯಿಂದ ಪ್ರಭಾವಿತರಾದ ಅನೇಕರು ಮನುಷ್ಯನ ಒಳಿತಿನ ಬೇರುಗಳು ಎಲ್ಲಿವೆ ಎಂಬ ಚಿಕ್ಕ ಪ್ರಮಾಣದ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಗೆಳೆಯರ ಸೀಮಿತ ವಲಯದಲ್ಲಿ ಹೊಸ ವಿಚಾರ, ನವ ಸಂಭ್ರಮ, ಉತ್ಸಾಹಗಳನ್ನು ಈ ಪುಸ್ತಕಗಳು ಹುಟ್ಟುಹಾಕಿರುವುದು ಅವುಗಳ ಅಂತಃಸತ್ವದಿಂದ ಮಾತ್ರ.”
೨೦೮ ಪುಟಗಳ ಈ ಕೃತಿಗೆ ೨೦೦೭ರ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗಳು ದೊರೆತಿವೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!