ಮೂವತ್ತು ಕಿಲೋಮೀಟರ್ ದೂರದ ಆಫೀಸಿಗೆ ಹೋಗುವುದೇ ಒಂದು ಕೆಲಸ. ಬೇರೆ ದೇಶಗಳಿಗೆ ಹೋಲಿಸಿದರೆ ಈ ದೂರ ದೂರವೇ ಅಲ್ಲ. ಆದರೆ ಬೆಂಗಳೂರಿನ ಮಾತೆ ಬೇರೆ, ಇಲ್ಲಿ ದೂರವನ್ನು ಸಮಯದಿಂದ ಅಳೆಯುತ್ತಾರೆ. ಒಂದು ಗಂಟೆ ರಸ್ತೆ, ಸಾಯಂಕಾಲವಾದರೆ ಎರಡು ಇಲ್ಲವೇ ಮೂರು ಗಂಟೆ, ಅಷ್ಟೇ!

ನನ್ನ ಆಫೀಸು, ಹೋಗಿಬರಲು ಕ್ಯಾಬ್ ವ್ಯವಸ್ಥೆ ಕೊಟ್ಟಿದೆ. ಅದರಲ್ಲಿ ಸವಾರಿ ಮಾಡುವುದೆಂದರೆ ಚಿಕ್ಕ ಮಗು ಅದರ ತಂದೆಯ ಮೇಲೆ ಎಲ್ಲ ಜವಾಬ್ದಾರಿ ಹೇರಿ ಆರಾಮಾಗಿ ಇದ್ದಂತೆ. ಎಷ್ಟು ಟ್ರಾಫಿಕ್ ಇದೆ, ಮಳೆ ಸುರಿಯುತ್ತಿದೆಯೋ, ಯಾವ ರಸ್ತೆ ಹೋದರೆ ಬೇಗ ಹೋಗುತ್ತೇವೆ ಎಲ್ಲವೂ ಡ್ರೈವರ್ ಕೆಲಸ. ನಾವುಗಳು ಏನಿದ್ದರೂ ಸ್ವಲ್ಪ ನಿದ್ದೆ, ಮೊಬೈಲ್ ವಾಚನ ಮತ್ತೆ ನಿದ್ದೆ ಹೀಗೆ ಕಾಲ ಕಳೆಯುವುದು. ಓದುವದು ಕಷ್ಟ, ಗಡ ಗಡ ನಡುಗುತ್ತಾ ಆಗಾಗ ಮೇಲೆ ಹಾರುತ್ತ ಕೂರುವುದರಿಂದ ಓದುವದು ಇಲ್ಲ ಬರೆಯುವದು ಸ್ವಲ್ಪ ಕಷ್ಟ. ಯಾಕೆ ಅಂದರೆ ನಮ್ಮ ರಸ್ತೆ ಹಾಗೆ! ನಾವು ಕೊಡುವ ಟ್ಯಾಕ್ಸ್ ದುಡ್ಡು ಬಾಕಿ ತೊಂಭತ್ತೆಂಟು ಪ್ರತಿಶತ ಜನರ ಕಲ್ಯಾಣಕ್ಕಾಗಿ ಸರ್ಕಾರ ಉಪಯೋಗಿಸುತ್ತದೆ, ರಸ್ತೆ ಮಾಡಲು ಎಲ್ಲಿಂದ ಉಳಿಯುತ್ತೆ ದುಡ್ಡು!

ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅಪ್ಪನ ಕಾಳಜಿ ಒಂದು ಥರ ಬಂಧನ ಆಗಿ ಕಾಣುತ್ತಲ್ಲ ಹಾಗೆಯೇ, ಪ್ರಯಾಣ ಸ್ವಾತಂತ್ರ್ಯ ಬೇಕೆನಿಸುತ್ತದೆ. ಎಷ್ಟೊತ್ತಿಗೆ ಹೋಗಬೇಕು, ವಾಪಸ್ ಬರಬೇಕು ಅನ್ನುವ ನಿರ್ಧಾರ ನಾವೇ ತೆಗೆದುಕೊಳ್ಳಬೇಕು ಅಂದರೆ ನಮ್ಮದೇ ವಾಹನ ಉಪಯೋಗಿಸಬೇಕು ಇಲ್ಲವೇ ಮೆಟ್ರೋ ಹತ್ತಬೇಕು.

ವಿಕಸಿತ ಭಾರತದ ಪ್ರಮಾಣವಾಗಿ ನಮಗೆ ಇಂದು ಮೆಟ್ರೋ ಸೇವೆ ಲಭ್ಯವಿದೆ. ಅದರಲ್ಲಿ ಪ್ರಯಾಣ ಕೇವಲ ನಲವತ್ತು ನಿಮಿಷ ಅಷ್ಟೇ! ಸ್ಟೇಷನ್ ಗೆ ಹೋಗಲು ಅರ್ಧ ಗಂಟೆ ಮತ್ತೆ ಆಫೀಸು ಕಡೆ ಹೋಗಲು ಹತ್ತು ಹದಿನೈದು ನಿಮಿಷ. ಒಟ್ಟಿಗೆ ಅಷ್ಟೇ ಕ್ಯಾಬ್ ನಲ್ಲಿ ಹೋದಷ್ಟೇ, ಆದರೆ ಸ್ವಾತಂತ್ರ್ಯ ನಮ್ಮದು. ಸಮಯ ನಾವು ನಿರ್ಧರಿಸಿದ್ದು.

ಮೆಟ್ರೋ ಸೇವೆ ಕೊಡುವ ಸರ್ಕಾರ ಅದನ್ನು ಸೇರಲು ಬಸ್ ವ್ಯವಸ್ಥೆ ಮರೆತಿದೆ. ಅದಕ್ಕೆಂದೇ ನಮ್ಮ ಸೇವೆಗೆ ಒಂದು ಗುಂಡಿ ಒತ್ತಿದರೆ ಬಂದು ನಿಲ್ಲುವ ಓಲಾ ಊಬರ್ ಇಲ್ಲವೇ ನಮ್ಮ ಯಾತ್ರಿ ಇವೆ. ಮೊದಲು ಆಟೋ ಡ್ರೈವರ್ಗಳು ಅಲ್ಲಿ ಬರಲ್ಲ ಇಲ್ಲಿ ಬರಲ್ಲ ಇಪ್ಪತ್ತು ರೂಪಾಯಿ ಮೀಟರ್ ಮೇಲೆ ಅಂತೆಲ್ಲ ಹೇಳುವವರು ಈಗ ಸುಮ್ಮನೆ ಬಂದು ಕರೆದುಕೊಂಡು ಹೋಗುತ್ತಾರೆ. ಒಂದು ಡೈರೆಕ್ಟ್ ಆಟೋಗೆ ಕೊಡುವುದಕ್ಕಿಂತ ಹೆಚ್ಚು ಈ ಸೇವೆಗಳಿಗೆ ಕೊಡಬೇಕು ಏಕೆಂದರೆ ಓಲಾ ಊಬರ್ ಬದುಕಬೇಕಲ್ಲ!

ಸ್ವಂತ ವಾಹನ ನಿಲ್ಲಿಸಲು ಮೆಟ್ರೋ ಸ್ಟೇಷನ್ಗಳಲ್ಲಿ ಅವಕಾಶ ಇದೆ. ಆದರೆ ಕಾರ್ ಇಡುವ ವ್ಯವಸ್ಥೆ ಇರುವ ಸ್ಟೇಷನ್ಗಳು ಕಮ್ಮಿ. ನಮ್ಮ ಮೈಸೂರು ರಸ್ತೆ ನಿಲ್ದಾಣ ಒಳ್ಳೆ ಪಾರ್ಕಿಂಗ್ ಹೊಂದಿದೆ. ದ್ವಿಚಕ್ರ ವಾಹನ ಎಲ್ಲಾ ಸ್ಟೇಷನ್ಗಳಲ್ಲೂ ಇಡಬಹುದು. ಅದನ್ನು ಉಪಯೋಗಿಸಿದರೆ ಆಟೋಗಾಗಿ ಕಾಯುವ ತೊಂದರೆ ಇರುವದಿಲ್ಲ. ಸಮಯ ಸ್ವಲ್ಪ ಉಳಿಯುವುದು.

ಆಫೀಸು ಹತ್ತಿರವೇ ಮನೆ ಮಾಡುವದು ಉತ್ತಮ. ಆದರೆ ಬೆಂಗಳೂರಿನ ಆ ಭಾಗ ನಮಗೆ ಒಗ್ಗದು.

ಇಷ್ಟೆಲ್ಲಾ ಕಷ್ಟ ಪಡುವುದಕ್ಕಿಂತ ಮಗುವಿನಂತೆ ಕ್ಯಾಬ್ ಅಲ್ಲಿ ಮಲಗುವುದು ಎಷ್ಟೋ ವಾಸಿ. ಆದರೆ ಆ ಭಾಗ್ಯ ಎಲ್ಲರಿಗೂ ಸಿಗುವದಿಲ್ಲ!