ಬಹುಪಾಲು ಸಸ್ತನಿಗಳ ರೋಮಗಳ ಬಣ್ಣ ಕಂದು ಅಥವಾ ಕಪ್ಪು ಎಂಬುದನ್ನು ಗಮನಿಸಿದ್ದೀರಾ? ಹಕ್ಕಿಗಳು, ಹಾವುಗಳು ಅಥವಾ ಮೀನುಗಳಂತೆ ಆಕರ್ಷಕ ಕೆನ್ನೀಲಿ, ಗುಲಾಲಿ, ನೇರಳೆ ಅಥವಾ ಹಳದಿ ಬಣ್ಣಗಳ ಸಸ್ತನಿಗಳು ಯಾಕಿಲ್ಲ?
ಸಸ್ತನಿಗಳಲ್ಲಿ ಕಾಣಿಸುವ ಕಂದು, ಕಪ್ಪು ಮತ್ತು ಬಿಳಿ ಬಣ್ಣಗಳ ರೋಮಗಳಿಗೆ ಹಲವು ಕಾರಣಗಳಿವೆ. ಸಸ್ತನಿಗಳಲ್ಲಿ ಮೈಬಣ್ಣ ಹೇಗೆ ಅಭಿವ್ಯಕ್ತವಾಗುತ್ತದೆ ಎಂಬುದು ಮೊದಲ ಕಾರಣ. ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದ ವಿಕಾಸ-ಜೀವಶಾಸ್ತ್ರಜ್ಞ ಮಾಥ್ಯೂ ಷಾಕಿ ಇದನ್ನು ಹೀಗೆ ವಿವರಿಸುತ್ತಾರೆ: ಪ್ರಾಣಿಗಳು ಎರಡು ಮುಖ್ಯ ನಮೂನೆಗಳಲ್ಲಿ ತಮ್ಮ ಬಣ್ಣಗಳನ್ನು ಪ್ರದರ್ಶಿಸುತ್ತವೆ - ವರ್ಣಕಗಳು (ಪಿಗ್-ಮೆಂಟ್ಸ್) ಮತ್ತು ರಚನೆಗಳ (ಸ್ಟ್ರಕ್ಚರ್ಸ್) ಮೂಲಕ. ವರ್ಣಕಗಳು ಪ್ರಾಣಿಗಳ ಚರ್ಮದಲ್ಲಿದ್ದು, ಬೆಳಕನ್ನು ಪ್ರತಿಫಲಿಸುವ ಅಥವಾ ಹೀರುವ ಮೂಲಕ ನಿರ್ದಿಷ್ಟ ಬಣ್ಣಗಳನ್ನು ಸೃಷ್ಟಿಸುತ್ತವೆ. ರಚನೆಗಳ ಮೂಲಕ ಪ್ರಾಣಿಗಳ ಬಣ್ಣಗಳು ಕಾಣಿಸಲು ಕಾರಣ ಚರ್ಮ, ಗರಿಗಳು ಅಥವಾ ಶಲ್ಕ (ಸ್ಕೇಲ್)ಗಳಲ್ಲಿರುವ ವಿವಿಧ ಆಕಾರ ಮತ್ತು ವಿನ್ಯಾಸಗಳ ನ್ಯಾನೋ-ಶಲ್ಕಗಳು. ಇವು ಬೆಳಕನ್ನು ವಿಕೃತಿ (ಡಿಸ್-ಟೋರ್ಟ್) ಮಾಡುವ ಮೂಲಕ ಹೊಳೆಯುವ, ವರ್ಣದೀಪ್ತಿಯ (ಇರಿಡಿಸೆಂಟ್) ಬಣ್ಣಗಳನ್ನು ಪ್ರದರ್ಶಿಸುತ್ತವೆ.
ಪ್ರಾಣಿಗಳು ತಮ್ಮ ಮೈಬಣ್ಣ ಪ್ರದರ್ಶಿಸಲು ಈ ಎರಡು ನಮೂನೆಗಳಲ್ಲಿ ಒಂದನ್ನು ಕೆಲವೊಮ್ಮೆ ಎರಡೂ ನಮೂನೆಗಳನ್ನು ಬಳಸುತ್ತವೆ. ಆದರೆ, ಸಸ್ತನಿಗಳು ಇವೆರಡೂ ನಮೂನೆಗಳನ್ನು ಬಳಸುವುದಿಲ್ಲ ಎನ್ನುತ್ತಾರೆ ಷಾಕಿ. ಕೆರೋಟಿನಾಯ್ಡುಗಳು, ಪೋರ್-ಫೈರಿನ್-ಗಳು, ಟೆರಿನ್-ಗಳು - ಇಂತಹ ಬಣ್ಣ ಉತ್ಪಾದಿಸುವ ವಿವಿಧ ವರ್ಣಕಗಳಲ್ಲಿ ಸಸ್ತನಿಗಳು “ಮೆಲಾನಿನ್” ಎಂಬ ಒಂದು ವರ್ಣಕವನ್ನು ಮಾತ್ರ ಬಳಸುತ್ತವೆ. ಸಸ್ತನಿಗಳು ಪ್ರದರ್ಶಿಸುವ ಎಲ್ಲ ಬಣ್ಣಗಳಿಗೂ ಇದೊಂದೇ ವರ್ಣಕ ಕಾರಣ; ಇದು ಇಲ್ಲದಿರುವ ಮೈಭಾಗಗಳಲ್ಲಿ (ಉದಾಹರಣೆಗೆ ಜೀಬ್ರಾಗಳು ಮತ್ತು ಪಾಂಡಾಗಳಲ್ಲಿ) ಬಿಳಿ ಬಣ್ಣ ಕಾಣಿಸುತ್ತದೆ ಎನ್ನುತ್ತಾರೆ.
ಅದಲ್ಲದೆ, ಸಸ್ತನಿಗಳ ರೋಮಗಳು ಅವು ಪ್ರದರ್ಶಿಸಬಲ್ಲ ಬಣ್ಣಗಳಿಗೆ ಮಿತಿ ಹೇರುತ್ತವೆ. ಹಕ್ಕಿಗಳ ಗರಿಗಳು, ಮೀನುಗಳ ಶಲ್ಕಗಳು ಮತ್ತು ಚರ್ಮ - ಇವುಗಳಂತೆ ರೋಮಗಳು ಸಂಕೀರ್ಣ ರಚನೆಗಳಲ್ಲ. ಆದ್ದರಿಂದ, ನ್ಯಾನೋ ಶಲ್ಕ ವಿನ್ಯಾಸಗಳು ಇಲ್ಲದಿರುವ ಕಾರಣ, ರಚನೆಗಳನ್ನು ಅವಲಂಬಿಸಿದ ಬಣ್ಣಗಳನ್ನು ಸಸ್ತನಿಗಳು ಪ್ರದರ್ಶಿಸಲಾರವು ಎಂದು ಅವರು ವಿವರಿಸುತ್ತಾರೆ.
ಆದರೆ, ಹೊಳೆಯುವ ಕೆಂಪು ಮತ್ತು ನೀಲಿ ಬಣ್ಣಗಳನ್ನು ಪ್ರದರ್ಶಿಸುವ ಮಾನ್-ಡ್ರಿಲ್-ಗಳು ಸಸ್ತನಿಗಳ ಈ ನಿಯಮಕ್ಕೆ ಅಪವಾದ. ಅದೇನಿದ್ದರೂ, ಅವು ಈ ಬಣ್ಣಗಳನ್ನು ಪ್ರದರ್ಶಿಸುವುದು ತಮ್ಮ ಮೈಯಲ್ಲಿ ರೋಮ ಹೊದಿಕೆ ಇಲ್ಲದಿರುವ ಜಾಗಗಳಲ್ಲಿ ಮಾತ್ರ. ಸ್ಲೋತ್-ಗಳ ಮೈಯಲ್ಲಿ ಕೆಲವೊಮ್ಮೆ ಕೆಲವೆಡೆ ಹಸುರು ಬಣ್ಣ ಕಾಣಿಸುತ್ತದೆ. ಇದಕ್ಕೆ ಕಾರಣ ಅವುಗಳ ರೋಮ ಹೊದಿಕೆಯ ಮೇಲೆ ಬೆಳೆಯುವ ಪಾಚಿ!
ಮೂಲ ಕಾರಣ:
ಸಸ್ತನಿಗಳಲ್ಲಿ ಹೊಳೆಯುವ ಬಣ್ಣಗಳು ಇಲ್ಲದಿರಲು ಮೂಲ ಕಾರಣ ಏನು? ವಿಜ್ಞಾನಿಗಳು ನೀಡುವ ಒಂದು ವಿವರಣೆ ಹೀಗಿದೆ:
ಈ ಭೂಮಿಯಲ್ಲಿ ಸಸ್ತನಿಗಳು ಮೊದಲು ಕಾಣಿಸಿಕೊಂಡಾಗ, ದೈತ್ಯ ಡೈನೋಸಾರ್-ಗಳು ಮುಖ್ಯ ಪರಭಕ್ಷಕಗಳು ಆಗಿದ್ದವು ಮತ್ತು ಸಸ್ತನಿಗಳು ಬಲಿಪ್ರಾಣಿಗಳಾಗಿದ್ದವು. ಡೈನೋಸಾರ್-ಗಳಿಗೆ ಆಹಾರ ಆಗುವುದರಿಂದ ಪಾರಾಗುವುದಕ್ಕಾಗಿ 100 ಮಿಲಿಯನ್ ವರುಷಗಳಿಗಿಂತ ಅಧಿಕ ಅವಧಿಯಲ್ಲಿ ಸಸ್ತನಿಗಳು ನಿಶಾಚರಿಗಳು ಆಗಿದ್ದವು (ಈಗಲೂ ಹಲವು ಸಸ್ತನಿಗಳು ನಿಶಾಚರಿಗಳಾಗಿಯೇ ಉಳಿದಿವೆ.)
ಈ ಮಿಲಿಯಗಟ್ಟಲೆ ವರುಷಗಳ ಜೀವನವಿಧಾನ ಸಸ್ತನಿಗಳು ಹೇಗಿವೆ ಎಂಬುದರ ಮೇಲೆ ಪ್ರಧಾನ ಪರಿಣಾಮ ಬೀರಿದೆ. “ಸೈನ್ಸ್” ಜರ್ನಲಿನಲ್ಲಿ ಪ್ರಕಟವಾಗಿರುವ 2025ರ ಒಂದು ಅಧ್ಯಯನ ವರದಿಯಲ್ಲಿ (ಷಾಕಿ ಅದರ ಸಹಲೇಖಕರು) ಆಸಕ್ತಿದಾಯಕ ಸಂಗತಿಯೊಂದು ದಾಖಲಾಗಿದೆ. ಅಧ್ಯಯನ ತಂಡವು ಈಗಿನ ಸಸ್ತನಿಗಳ ಮೆಲನೊಸೋಮ್ಸ್ ಎಂಬ ವರ್ಣಕ-ಶೇಖರಣಾ ರಚನೆಗಳನ್ನು ಜುರಾಸಿಕ್ ಮತ್ತು ಕ್ರೆಟಾಸಿಯಸ್ ಕಾಲಮಾನದ ಆರು ಸಸ್ತನಿಗಳ ಪಳೆಯುಳಿಕೆಗಳ ಸಂರಕ್ಷಿಸಲ್ಪಟ್ಟ ಮೆಲನೊಸೋಮ್ಸ್-ಗಳೊಂದಿಗೆ ಹೋಲಿಸಿತು. ಎಲ್ಲ ಸಸ್ತನಿ ಪಳೆಯುಳಿಕೆಗಳೂ ಕಂದು ಅಥವಾ ಬೂದು ಬಣ್ಣಗಳ ಛಾಯೆಗಳಾಗಿದ್ದವು.
ಪ್ರಾಚೀನ ಕಾಲದ ಈ ಪ್ರಾಣಿಗಳು ಮುಖ್ಯವಾಗಿ ಕತ್ತಲಿನಲ್ಲಿ ಬದುಕುತ್ತಿದ್ದ ಕಾರಣ ಪರಭಕ್ಷಕಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಸ್ತನಿಗಳಿಗೆ ಅವುಗಳ ಗಾಢ ಬಣ್ಣಗಳಿಂದ ಸಹಾಯವಾಯಿತು.
66 ಮಿಲಿಯನ್ ವರುಷಗಳ ಹಿಂದೆ ಪಕ್ಷಿಗಳಲ್ಲದ ಡೈನೋಸಾರ್-ಗಳು ಅಳಿದು ಹೋದವು. ಆಗಿನಿಂದ ಸಸ್ತನಿಗಳ ವೈವಿಧ್ಯತೆಯಲ್ಲಿ ಭಾರೀ ಹೆಚ್ಚಳವಾಗಿ, ಈಗ 6,000ಕ್ಕಿಂತ ಅಧಿಕ ಸ್ಪಿಷಿಸುಗಳಿವೆ. ಈಗ ನಿಶಾಚರಿ ಮತ್ತು ದಿವಾಚಾರಿ ಸಸ್ತನಿಗಳಿದ್ದು, ಇವುಗಳ ಮೇಲೆ ದಾಳಿ ಮಾಡುವ ಪರಭಕ್ಷಕಗಳಿಲ್ಲ. ಆದರೂ ಬಹುಪಾಲು ಸಸ್ತನಿಗಳ ಬಣ್ಣ ಈಗಲೂ ಕಂದು, ಬೂದು ಅಥವಾ ಕಪ್ಪು.
ಫೋಟೋ: ಜೀಬ್ರಾದ ಮೈಯಲ್ಲಿ ಕಪ್ಪು-ಬಿಳಿ ಪಟ್ಟೆಗಳು … ಕೃಪೆ: ಐಸ್ಟೋಕ್ ವೆಬ್-ಸೈಟ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!