ಒಮ್ಮೆ ಒಬ್ಬ ಕವಿಯ ಹೆಂಡತಿ ತನ್ನ ಪತಿಯನ್ನು ಯಥಾಲಾಪವಾಗಿ ಕೇಳಿದಳು: “ನೀವು ಯಾವಾಗಲೂ ಅಮ್ಮನ ಕುರಿತಾಗಿಯೇ ಬರೆಯುತ್ತೀರಿ. ಪತ್ನಿಯ ಕುರಿತು ಏನಾದರೂ ಬರೆಯುವುದಿಲ್ಲವೇ?”

ಆ ಪ್ರಶ್ನೆ ಕೇಳಿದ ತಕ್ಷಣ ಕವಿಯ ಮನದಲ್ಲಿ ಮೂಡಿದ ಭಾವನೆಗಳ ಕವಿತೆ ಹೀಗಿದೆ… ಯಾರೋ ನೀನು?

ಚಂದ್ರನಷ್ಟು ಸುಂದರಿಯಲ್ಲದಿದ್ದರೂ, ಕಮಲದಂತೆ ಕೋಮಲೆಯಲ್ಲದಿದ್ದರೂ, ಸರಸ್ವತಿಯಷ್ಟು ವಿದ್ಯಾವಂತೆಯಲ್ಲದಿದ್ದರೂ, ಧನಲಕ್ಷ್ಮಿಯಷ್ಟು ಸಂಪತ್ತಿಲ್ಲದಿದ್ದರೂ, ಪಾರ್ವತಿಯಷ್ಟು ಧೈರ್ಯವಿಲ್ಲದಿದ್ದರೂ, ನಿನಗೆ ಸಾಟಿಯಾಗುವವರು ಯಾರೂ ಇಲ್ಲ.

ನಿನ್ನ ಕಣ್ಣಿನಲ್ಲಿ ಬೆಳದಿಂಗಳ ಹೊಳಪು, ನಿನ್ನ ಮನಸ್ಸಿನಲ್ಲಿ ಕರುಣೆಯ ಸಾಗರ, ನಿನ್ನ ಮಾತುಗಳಲ್ಲಿ ಜೇನಿನ ಸಿಹಿ, ಹಸಿವಾದಾಗ ಹೊಟ್ಟೆ ತುಂಬಿಸುವ ತಾಯ್ತನ, ಪ್ರೀತಿಯಲ್ಲಿ ಅಳತೆಯೇ ಇಲ್ಲದ ತೀವ್ರತೆ...

ಇವೆಲ್ಲಕ್ಕೂ ಬೆಲೆ ಕಟ್ಟಲು ಸಾಧ್ಯವೇ? ನನ್ನ ಜೀವನವೇ ನೀನಾಗಿರುವೆ.

'ಹೆಂಡತಿ ಅದ್ಭುತ'

ನಿನ್ನನ್ನು ಕೇವಲ ಪತ್ನಿ ಎಂಬ ಎರಡಕ್ಷರದ ಪದದಲ್ಲಿ ಕಟ್ಟಿಹಾಕುವುದು ಸಾಧ್ಯವೇ? ನೀನೇ ನನ್ನ ಬಾಳ ಜ್ಯೋತಿ, ನೀನೇ ನನ್ನ ಮನೆಯ ಮಣಿದೀಪ.

ಹಾಲ್ಯಾವುದು, ನೀರ್ಯಾವುದು ಎಂದು ಗುರುತಿಸಲಾಗದಷ್ಟು ಒಂದಾಗಿ ಬೆರೆತುಹೋಗಿರುವೆವು ನಾವು.

ಕತ್ತಲಾದರೂ ಜೊತೆಯಾಗಿ, ಬೆಳಕಾದರೂ ಜೊತೆಯಾಗಿ, ಸುಖದಲ್ಲೂ ದುಃಖದಲ್ಲೂ, ಸೋಲಲ್ಲೂ ಗೆಲುವಲ್ಲೂ ಕೈ ಹಿಡಿದು ನಡೆದಿರುವೆವು. ಅರೆಕ್ಷಣ ಕೋಪ ಬಂದರೂ,

ಮರುಕ್ಷಣದಲ್ಲೇ ಮರೆತುಬಿಡುವ ನಮ್ಮ ಅನುಬಂಧದ ಆಳವನ್ನು ಅಳೆಯಲು ಸಾಧ್ಯವೇ?

ಋಣವಿದ್ದು ಒಂದಾದೆವೋ, ಋಣ ತೀರಿಸಲೆಂದೇ ಒಂದಾದೆವೋ, ತಿಳಿಯದು. ಆದರೆ ಒಂದು ಮಾತ್ರ ಸತ್ಯ...

ನೀನೊಂದು ಅದ್ಭುತ.

ಪ್ರತಿಯೊಬ್ಬರ ಮನೆಯಲ್ಲೂ, ಪ್ರತಿಯೊಬ್ಬ ಹೆಂಡತಿಯೂ ತನ್ನ ಗಂಡನಿಗೆ ಆಕಾಶದಷ್ಟು ಪ್ರೀತಿ ಹಂಚುವ ಶಕ್ತಿ.

ಆ ಶಕ್ತಿಯನ್ನು ಪತ್ನಿ ಎಂಬ ಎರಡಕ್ಷರದ ಪದದಲ್ಲಿ ಹೇಳಿಬಿಡುವುದು ಸಾಧ್ಯವಿಲ್ಲ. ಊಹೂ... ಸಾಲದು.

ಹಾಗಾದರೆ, ಅಮ್ಮ ಎಂಬ ಪದಕ್ಕಿರುವ ಸಿಹಿತನದಂತೆ, ಹೆಂಡತಿಯ ಪ್ರೀತಿ, ತ್ಯಾಗ, ಮಮತೆ, ಸ್ನೇಹ, ಸಹನೆ ಮತ್ತು ಬದುಕಿನ ಸಂಗಾತಿತನವನ್ನು ಒಳಗೊಂಡಿರುವ ಹೊಸ ಪದವೊಂದನ್ನು ಯಾರಾದರೂ ಸೂಚಿಸುವಿರಾ?

ಹೆಂಡತಿಯರನ್ನು ಹೃದಯಪೂರ್ವಕವಾಗಿ ಪ್ರೀತಿಸುವ ಎಲ್ಲರಿಗೂ ಅರ್ಪಣೆ.

~ಸಂಪಿಗೆ ವಾಸು, ಬಳ್ಳಾರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ