ಹೇರ್ ಪಿನ್

ಲೇಖಕ ಬಾಲಮುರಳೀಧರ ವಿ. ಅವರು ಬರೆದ 'ಹೇರ್‌ ಪಿನ್' ಕೃತಿಯು ಮಾನವ ಸಹಜ ಪ್ರೇಮ-ಕಾಮನೆಗಳಿಗೆ ಸಂಬಂಧಿಸಿದ ವಿಶಾಲ ಕಥಾಹಂದರವನ್ನು ಹೊಂದಿದೆ. ಪಾಶ್ಚಿಮಾತ್ಯ ಹಾಗೂ ನವ್ಯಶೈಲಿಯ ವಿಚಾರ-ಬರಹಗಳ ಚಹರೆಯನ್ನು ಪಡೆದಿರುವ ಈ ಕಾದಂಬರಿಯು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಹುಡುಕಾಟ ನಡೆಸುವ ಪ್ರಯತ್ನವಾಗಿ ಮೂಡಿಬಂದಿದೆ. ಈ ಕೃತಿಗೆ ಲೇಖಕರು ಬರೆದ ಸಾಲುಗಳು ನಿಮ್ಮ ಓದಿಗಾಗಿ ಹೀಗಿದೆ:

“'ಹೇರ್‌ಪಿನ್' ತಿರುವಿನಲ್ಲಿ...

ಯಾರೂ ಮುಖ್ಯರಲ್ಲ;

ಯಾರೂ ಅಮುಖ್ಯರಲ್ಲ;

ಯಾವುದೂ ಯಕಶ್ಚಿತವಲ್ಲ.!'

ರಸ ಋಷಿ, ಕವಿ ಕುವೆಂಪುರವರ ಮಾತನ್ನು ಬಿಟ್ಟು ಬೇರೆ ಏನನ್ನು ಹೇಳಲು ಬಯಸುವುದಿಲ್ಲ. ಈ ಕಾದಂಬರಿಯನ್ನು ಬರೆದಿದ್ದೇನೆ. ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ಎಂಬುದಷ್ಟೇ ಆರಿಕೆ.

ಫೋನ್ ಮಾಡಿದಾಗಲೆಲ್ಲ ಕಾದಂಬರಿಯ ಬಗ್ಗೆ ವಿಚಾರಿಸುತ್ತಲೇ ನನ್ನನ್ನು ದಾರಿ ತಪ್ಪದಂತೆ ನೋಡಿಕೊಂಡ ಆನಂದ ಕುಂಚುನೂರ ಅವರಿಗೆ, ಅಂದವಾಗಿ ಪುಸ್ತಕವನ್ನು ಕಟ್ಟಿಕೊಟ್ಟ ಮಂಜುನಾಥ ವಿ.ಎಂ.ರವರಿಗೆ, ಟೈಟಲ್‌ನಿಂದ ಮುದ್ರಣದವರೆಗೂ ಎಲ್ಲಾ ಹಂತದಲ್ಲೂ ಚರ್ಚಿಸಿ ಪುಸ್ತಕವನ್ನು ನಿಮ್ಮ ಕೈ ಸೇರುವಂತೆ ಮಾಡಿದ ಈ ಇಬ್ಬರ ಗೆಳೆಯರಿಗೂ ಆಭಾರಿಯಾಗಿದ್ದೇನೆ.

ದೇಶ ವಿದೇಶಗಳನ್ನು ಸುತ್ತಿ ಕೋಶಗಳನ್ನು ಓದಿ ಪ್ರಜ್ಞಾವಂತರ ಜೊತೆ ಸಂವಾದ, ಬಸವ ತತ್ವದ ನಂಬಿಕೆಯ ನೆಲದಲ್ಲಿ ಸದಾ ಚಟುವಟಿಕೆಯಿಂದಿರುವ ಈ ಕಾದಂಬರಿಗೆ ಮುನ್ನುಡಿಯನ್ನು ಬರೆದು ಹಾರೈಸಿದ ಭತ್ತದ ಮನ, ವಚನ ಟಿವಿಯ ಮುಖ್ಯಸ್ಥರು ಹಾಗೂ ಪ್ರಧಾನ ಸಂಪಾದಕರಾದ ಡಾ. ಸಿದ್ದು ಯಾಪಲಪರವಿರವರಿಗೆ ಹೃದಯ ಪ್ರೀತಿಯ ನಮನಗಳು.

ಪಿ. ಲಂಕೇಶ್‌ರವರ ಬರಹಗಳು ಮತ್ತು ಡಾ. ಪ್ರಭಾಕರ ಶಿಶಿಲ, ಶ್ರೀ ಹೆಚ್. ಎಸ್.ರೇಣುಕರಾಧ್ಯರವರು ಮಹಾಭಾರತದ ಬಗ್ಗೆ ಉಲ್ಲೇಖಿಸಿರುವ ಸಂಗತಿಗಳು, ಮರೆಯಲಾದೀತೆ ಶ್ರೀ ಬೆಳಗೆರೆ ಶಾಸ್ತ್ರಿರವರ ಅನುಭವ ಮಾತುಗಳು ಮತ್ತು ಎಲ್ಲೋ ಓದಿದ, ಮನಸ್ಸಿನಲ್ಲಿ ಉಳಿದ ಪ್ರತಿಭಾವಂತರ ಲೇಖನಗಳ ಹಲವು ವಿಷಯಗಳು ನನ್ನ ಕಾದಂಬರಿಯಲ್ಲಿ ಪೂರಕವಾಗಿ ಕಾಣಿಸಬಹುದು. ಅವರಿಗೆ ಮರ್ನಪೂರ್ವಕವಾಗಿ ವಂದಿಸುತ್ತೇನೆ.

ಕಾದಂಬರಿಯನ್ನು ಓದಿ, ತಿದ್ದಿ-ತೀಡಿ, ಪ್ರತಿ ಪುಟವನ್ನು ಭಾಗಾಕಾರ ಮಾಡಿ, 'ಪರವಾಗಿಲ್ಲ, ಒಳ್ಳೆಯ ಪ್ರಯತ್ನ.' ಎಂದು ಬೆನ್ನು ತಟ್ಟಿದ ಹಿರಿಯರು, ಲೇಖಕರು ಆದ ವಿಜಯ್ ಹೆಮ್ಮಿಗೆಯವರಿಗೆ ವಿಶೇಷ ಕೃತಜ್ಞತೆಗಳು.”