ಡಾ. ರಾಧಾರಮೇಶ್ ಬರೆದಿರುವ ‘ನನ್ನರಿವಿನ ನೇಪಥ್ಯದಲ್ಲಿ” ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ. ಯಾಕೆಂದರೆ, ಇದು ವೈದ್ಯಕೀಯ ಚಿಕಿತ್ಸೆ, ವೈದ್ಯರು ಮತ್ತು ಶುಶ್ರೂಷಕರ ಪಾತ್ರ ಇವುಗಳ ಬಗ್ಗೆ ನಮ್ಮ ಕಣ್ಣು ತೆರೆಸುವ ಹೊತ್ತಗೆ.
ಇಪ್ಪತ್ತಾರು ವರುಷಗಳ ಮುಂಚೆ (1999ರಲ್ಲಿ) ನವಕರ್ನಾಟಕ ಪಬ್ಲಿಕೇಷನ್ಸ್ ಈ ಪುಸ್ತಕವನ್ನು ಪ್ರಕಟಿಸಿದಾಗ ಖರೀದಿಸಿ ಓದಿದ್ದೆ. ಇತ್ತೀಚೆಗೆ ವಯಸ್ಸು 70 ದಾಟಿದಾಗ ಇದನ್ನು ಪುನಃ ಓದಿದಾಗ ನನಗೆ ಅನಿಸಿದ್ದು, ಇದರಲ್ಲಿರುವ ಸಂಗತಿಗಳು ಇಂದಿಗೂ ಪ್ರಸ್ತುತ.
ಆದ್ದರಿಂದ, ಇದರ ಬಗ್ಗೆ “ಸಂಪದ”ದ ಪುಸ್ತಕ ಪರಿಚಯ ವಿಭಾಗದಲ್ಲಿ ನನ್ನ ಬರಹ ಪ್ರಕಟಿಸಿದ್ದೇನೆ. ಹಾಗೂ ಆ ಪುಸ್ತಕದ “ಮೂಕಂ ಕರೋತಿ ವಾಚಾಲಂ” ಮತ್ತು “ಅನಾಥೋ ದೈವ ರಕ್ಷಕಃ” ಎಂಬ ಎರಡು ಅಧ್ಯಾಯಗಳ ಸಾರಾಂಶ ಇಲ್ಲಿದೆ:
“ಮೂಕಂ ಕರೋತಿ ವಾಚಾಲಂ” (ಅಧ್ಯಾಯ 5)
ಇದರಲ್ಲಿ ದಾಖಲಿಸಿದ ಪ್ರಕರಣ ಸುಮಾರು 35 ವರುಷ ವಯಸ್ಸಿನ ಹನುಮವ್ವನದು. ಆಕೆಯನ್ನು ಡಾ.ರಾಧಾರಮೇಶ “ತುರ್ತು ಚಿಕಿತ್ಸೆ” ವಿಭಾಗದಲ್ಲಿದ್ದಾಗ ಅಲ್ಲಿಗೆ ಕರೆತಂದಿದ್ದರು. ಎರಡು ದಿನಗಳ ಹಿಂದೆ ಆಕೆಗೆ ಜ್ವರ, ತಲೆನೋವು, ವಾಂತಿ ತಲೆದೋರಿ ಅವತ್ತು ಬೆಳಗಿನಿಂದ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಇವರೂ ಹಿರಿಯ ವೈದ್ಯರೂ ಅವಳು “ಎನ್-ಸೆಫಲೈಟಿಸ್” ಎಂಬ ಮಿದುಳು ಸಂಬಂಧಿ ರೋಗದಿಂದ ಬಳಲುತ್ತಿದ್ದಾಳೆ ಎಂದು ತರ್ಕಿಸಿದರು. ಇದು ವೈರಸುಗಳಿಂದ ಉಂಟಾಗುವ ಕಾಯಿಲೆ. ಹಾಗಾಗಿ ಇದಕ್ಕೆ ಪರಿಣಾಮಕಾರಿ ಔಷಧಿಯಿಲ್ಲ. “ಲುಬಾರ್ ಪಂಕ್ಚರ್” ಪರೀಕ್ಷೆಯಿಂದ ಆಕೆಯ ಕಾಯಿಲೆ ಖಚಿತವಾಯಿತು.
ಮುಂದಿನ ಎರಡು ದಿನಗಳಲ್ಲಿ ಅವಳ ದೇಹಸ್ಥಿತಿ ಹದಗೆಟ್ಟು, ಆಕೆ ಸಂಪೂರ್ಣ ಪ್ರಜ್ಞಾಶೂನ್ಯಳಾದಳು. ಮೂರು ವಾರಗಳು ಅದೇ ಸ್ಥಿತಿಯಲ್ಲಿದ್ದಳು. ಅನಂತರ ಪುನಶ್ಚೇತನಗೊಂಡಳು! ಇನ್ನೆರಡು ವಾರಗಳಲ್ಲಿ ಅವಳ ಪರಿಸ್ಥಿತಿ ಸುಧಾರಿಸಿತು. ಹಾಸಿಗೆಯಲ್ಲಿ ತಾನೇ ಎದ್ದು ಕೂರಲು ಸಮರ್ಥಳಾದಳು. ಹಾಗಾಗಿ ಅವಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳಿಸಿದರು. ಅದಾಗಿ ಸುಮಾರು ಮೂರು ತಿಂಗಳ ನಂತರ ಒಂದು ದಿನ ಹನುಮವ್ವ ರಾಧಾರಮೇಶರನ್ನು ಕಾಣಲಿಕ್ಕಾಗಿ ಆಸ್ಪತ್ರೆಗೆ ಬಂದಳು. ಇವರಿಗೆ ಹನುಮವ್ವಳನ್ನು ಗುರುತು ಹಿಡಿಯಲು ಒಂದೆರಡು ನಿಮಿಷ ಬೇಕಾಯಿತು. ಯಾಕೆಂದರೆ ಆಸ್ಪತ್ರೆಯ ಹಾಸಿಗೆಯಲ್ಲಿ ಜೀವಂತ ಶವದಂತೆ ನಿಶ್ಚಲವಾಗಿ ಮಲಗಿರುತ್ತಿದ್ದ ಆಕೆ, ಈಗ ಉತ್ಸಾಹದ ಚಿಲುಮೆಯಾಗಿ ಬದಲಾಗಿದ್ದಳು. ಪವಾಡ ಸದೃಶವಾಗಿ ಅವಳು ಗುಣಮುಖಳಾಗಿದ್ದಳು. ಆಕೆಯ ಚೇತರಿಕೆಯಲ್ಲಿ ತನ್ನ ಪಾತ್ರ ಕಿಂಚಿತ್ತೂ ಇರಲಿಲ್ಲ ಎಂದು ಬರೆದಿರುವ ರಾಧಾರಮೇಶರಿಗೆ “ಈ ಪ್ರಕರಣವನ್ನು ನೆನೆದಾಗ ನಮ್ಮ ಪ್ರಯತ್ನಕ್ಕೂ ಮೀರಿ, ನಮ್ಮ ನಿರೀಕ್ಷೆಗಳನ್ನು ತಲೆಕೆಳಗೆ ಮಾಡುವಂತಹ ಶಕ್ತಿಯೊಂದು ಇದೆಯೇನೋ ಎಂಬ ಭಾವನೆಯುಂಟಾಗುತ್ತದೆ.”
“ಅನಾಥೋ ದೈವ ರಕ್ಷಕಂ” (ಅಧ್ಯಾಯ 7)
ಅಂತಹದೇ ಇನ್ನೊಂದು ಪ್ರಕರಣವನ್ನು “ಅನಾಥೋ ದೈವ ರಕ್ಷಕಃ”ದಲ್ಲಿ ವಿವರಿಸಿದ್ದಾರೆ ಡಾ. ರಾಧಾರಮೇಶ್. ಸುಮಾರು ಇಪ್ಪತ್ತು ವರುಷ ವಯಸ್ಸಿನ ಲಕ್ಷ್ಮಮ್ಮನ ಕಾಲುಗಳು ಬಾತುಕೊಂಡಿದ್ದವು. ಬೇಗಬೇಗ ಹೆಜ್ಜೆ ಹಾಕಿದರೆ ಅವಳಿಗೆ ಏದುಬ್ಬಸ ಬರುತ್ತಿತ್ತು. ಅವಳ ಪರೀಕ್ಷೆ ನಡೆಸಿದಾಗ, ಆಕೆಯ ಹೃದಯ ದುರ್ಬಲವಾಗಿರುವುದು ಸ್ಪಷ್ಟವಾಯಿತು. ಆದರೆ ಅವಳ ಹೃದಯದ ಕವಾಟಗಳಲ್ಲಿ ಯಾವ ದೋಷವೂ ಕಂಡುಬಂದಿರಲಿಲ್ಲ. ಹಿರಿಯ ವೈದ್ಯರೂ ಪ್ರತಿಭಾವಂತರೂ ಆದ ಡಾ. ಸೋಮಯ್ಯ ರೋಗಿಯ ಕಾಯಿಲೆ “ಕಾರ್ಡಿಯೋಮಯೋಪತಿ” ಆಗಿರಬೇಕೆಂದು ಅಭಿಪ್ರಾಯ ಪಟ್ಟರು. ಅದು ಅಪರೂಪದ ವಿಚಿತ್ರ ಬಗೆಯ ಹೃದಯದ ಕಾಯಿಲೆ. ಈ ಕಾಯಿಲೆಗೆ ಯಾವ ಸ್ಪಷ್ಟ ಉಪಚಾರ ಇಲ್ಲದಿದ್ದ ಕಾರಣ, ಕೇವಲ ಉಪಶಮನಕಾರಿ ಔಷಧಿಗಳನ್ನು ಬರೆದು, ಅದರ ಜೊತೆಗೆ ಬಿ.ಕಾಂಪ್ಲೆಕ್ಸ್ ಇಂಜೆಕ್ಷನ್ ಕೂಡ ನೀಡಬೇಕೆಂದು ರಾಧಾರಮೇಶ ಸೂಚಿಸಿದ್ದರು.
ಆದರೆ ರೋಗಿಯ ಸ್ಥಿತಿಯಲ್ಲಿ ಸುಧಾರಣೆ ಕಾಣಲಿಲ್ಲ. ಎರಡು ವಾರ ಸರಿದವು. ಆ ದಿನ ಹಿರಿಯ ವೈದ್ಯ ಡಾ. ಸೋಮಯ್ಯ ಅವರು ರಾಧಾರಮೇಶರನ್ನು ಕರೆದು, (ಆ ರಾತ್ರಿ ರಾಧಾರಮೇಶರಿಗೆ ನೈಟ್ ಡ್ಯೂಟಿ ಇದ್ದ ಕಾರಣ) ಈ ರಾತ್ರಿ ಆಕೆ ಬದುಕಿ ಉಳಿಯಲಾರಳು; ಒಂದು ವೇಳೆ ಆಕೆ ರಾತ್ರಿ ತೀರಿಕೊಂಡರೆ, ಬಯಾಪ್ಸಿ ಸೂಜಿಯಿಂದ ಆಕೆಯ ಹೃದಯದ ತುಣುಕೊಂದನ್ನು ತೆಗೆದಿರಿಸಿ ಅದನ್ನು ಪರೀಕ್ಷಿಸಲು ಸಲಹೆ ಇತ್ತರು. ರಾಧಾರಮೇಶ ಅದಕ್ಕೆ ಸಿದ್ಧರಾಗಿ ಕಾದಿದ್ದರು. ಆದರೆ, ಮರುದಿನ ಮುಂಜಾನೆ ಲಕ್ಷ್ಮಮ್ಮ ಗಾಢ ನಿದ್ರೆಯಲ್ಲಿದ್ದಳು. ಮುಂದಿನ 4-5 ದಿನಗಳಲ್ಲಿ ಆಕೆ ವಿಸ್ಮಯಕರ ರೀತಿಯಲ್ಲಿ ಸುಧಾರಿಸಿದ್ದಳು. ಅನಂತರ ತಿಳಿದು ಬಂದದ್ದು ಏನೆಂದರೆ, ಆಕೆಗೆ ಬಿ-ಕಾಂಪ್ಲೆಕ್ಸ್ ಇಂಜೆಕ್ಷನ್ ಆರಂಭಿಸಿದ್ದು ಅವಳು ಸುಧಾರಿಸತೊಡಗಿದ 2-3 ದಿನಗಳ ಹಿಂದೆ. ಕಾರಣ: ಆಗಷ್ಟೇ ಬಿ-ಕಾಂಪ್ಲೆಕ್ಸ್ ಇಂಜೆಕ್ಷನಿನ ಸ್ಟಾಕ್ ಆಸ್ಪತ್ರೆಗೆ ಬಂದಿತ್ತು! ಈಗ ಡಾ. ಸೋಮಯ್ಯ ಮತ್ತು ರಾಧಾರಮೇಶರಿಗೆ ಆಕೆಯ ಕಾಯಿಲೆ “ಬೆರಿಬೆರಿ” ಎಂಬುದು ಖಚಿತವಾಯಿತು. ಯಾಕೆಂದರೆ, ಈ ಕಾಯಿಲೆ ಇರುವ ರೋಗಿಗೆ ವಿಟಮಿನ್ ಬಿ-1 ಇಂಜೆಕ್ಷನ್ ರೂಪದಲ್ಲಿ ಕೊಟ್ಟ ಕೆಲವೇ ಗಂಟೆಗಳಲ್ಲಿ ರೋಗ ಸುಧಾರಣೆಯ ಲಕ್ಷಣಗಳು ಕಂಡು ಬರುತ್ತವೆ. ಆಕೆಯ ರೋಗ ನಿವಾರಣೆಯಲ್ಲಿ ನಮ್ಮ ಪಾತ್ರವೇನೂ ಇರಲಿಲ್ಲ ಎನ್ನುತ್ತಾರೆ ರಾಧಾರಮೇಶ.
ಇಂತಹ ಹಲವು ಪ್ರಕರಣಗಳನ್ನು ಈ ಪುಸ್ತಕದಲ್ಲಿ ದಾಖಲಿಸಿರುವುದು ಜನಜಾಗೃತಿಗೆ ಲೇಖಕರ ಕೊಡುಗೆ. ಯಾಕೆಂದರೆ, ಪ್ರತಿಯೊಂದು ಪ್ರಕರಣವೂ ವೈದ್ಯರ, ರೋಗಿಗಳ ಮತ್ತು ಜನಸಾಮಾನ್ಯರ ಅರಿವಿನ ಮಟ್ಟ ಹೆಚ್ಚಿಸುತ್ತದೆ.
ಕೊನೆಯ ಅಧ್ಯಾಯದಲ್ಲಿ ಅವರು ಹೇಳುವ ಕಿವಿಮಾತು: “ವೈದ್ಯಕೀಯ ವಿಜ್ಞಾನ, ವೈಜ್ಞಾನಿಕ ತಳಹದಿಯ ಮೇಲೆ ನಿಂತಿದ್ದರೂ ವೈದ್ಯಕೀಯ ವಿದ್ಯಮಾನಗಳನ್ನು ನಿಖರವಾದ, ನಿರ್ದಿಷ್ಟವಾದ ರೀತಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಅದಕ್ಕೆ ಕಾರಣ ವೈದ್ಯಕೀಯ ವಿಜ್ಞಾನದಲ್ಲಿರುವ ಅಪರಿಪೂರ್ಣತೆ. … ಇದರ ಅರಿವು ವೈದ್ಯರಿಗೂ ಶ್ರೀಸಾಮಾನ್ಯರಿಗೂ ಬಹಳ ಅವಶ್ಯ.”
ಪ್ರತಿಕ್ರಿಯೆ (1)
ಇದುವರೆಗೂ ನಮ್ಮ ಅರಿವಿನ ವಿಸ್ತಾರಕ್ಕೆ ಕಾರಣರಾದ ಅನೇಕಾನೇಕ ವಿಜ್ಞಾನಿಗಳ ಹೆಗಲ ಮೇಲೆ ನಾನು ನಿಂತಿದ್ದೇನೆ. ಹಾಗಾಗಿ ನಾನು ವೈಜ್ಞಾನಿಕ ಅರಿವಿನ ಇನ್ನಷ್ಟು ವಿಸ್ತ್ತೃತ ನೋಟವನ್ನು ಕಾಣಬಲ್ಲೆ : ಎನ್ನುತ್ತಾರೆ ನಮ್ಮ ಕಾಲದ ಉದ್ದಾಮ ಉದ್ದಾಮ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್. ಈ ವಿನಯವೇ ಎಲ್ಲಾ ಜ್ಞಾನಕ್ಷೇತ್ರದ ತಳಹದಿ ಯಾಗಬೇಕು. ಇದೇ ಆ ಕ್ಷೇತ್ರದ ಅರಿವನ್ನು ಉಳಿಸುವುದು ಹಾಗೂ ಬೆಳೆಸುವುದು.