ಲೇಖಕರಾದ ಮಹದೇವ ಬಸರಕೋಡ ಇವರು ಬರೆದ ಕಥಾ ಸಂಕಲನ ಆಕಾಶ ದೇವತೆ ಪ್ರಕಟವಾಗಿದೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಪಿ.ಚಂದ್ರಿಕಾ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತಪಡಿಸಿದ ಭಾವಗಳು ಹೀಗಿವೆ…
“ನಮ್ಮ ಮುಂದಿರುವ ಕತ್ತಲೆಯನ್ನು ದೂಷಿಸುವುದಕ್ಕಿಂತ ಬಳಿಯಿರುವ ದೀಪವನ್ನು ಹಚ್ಚಿ ದಾರಿ ಹುಡುಕುವುದು ಒಳಿತು ಎನ್ನುತ್ತಾರೆ ಜಾನ್ ಎಫ್ ಕೆನಡಿಯವರು. ಮನುಷ್ಯನಲ್ಲಿನ ಇಚ್ಚಾಶಕ್ತಿಗೆ ದಕ್ಕುವ ಯಾವುದನ್ನಾದರೂ ಸರಿಯೆ ದಕ್ಕಿಸಿಕೊಂಡು ಅದನ್ನು ಜಗದ ಒಳಿತಿಗಾಗಿ ದುಡಿಸಿಕೊಳ್ಳುವ ಅಗತ್ಯ ಇಂದು ಇದೆ. ನನಗೆ ಕೆನಡಿಯವರ ಈ ಮಾತು ಹುಡುಕಾಟದಲ್ಲಿರುವ ಯಾರೇ ಆದರೂ ಅನುಸರಿಸಬೇಕಾದ ಕ್ರಮ ಅನ್ನಿಸುತ್ತದೆ. ನಮ್ಮಲ್ಲಿ ನಮಗೆ ನಂಬಿಕೆ ಬೇಕು ಆ ನಂಬಿಕೆ ಭವಿಷ್ಯದ ಆಶಾದೀಪವೂ ಆಗಿರಬೇಕು. ಇದಿಷ್ಟು ಮಾತುಗಳು ನನಗೆ ನೆನಪಾದದ್ದು ಮಹದೇವ ಬಸರಕೋಡ ಅವರ 'ಆಕಾಶ ದೇವತೆ' ಎನ್ನುವ ಕಥಾ ಸಂಕಲವನ್ನು ಓದಿದಾಗ, ಕಥೆ ಎಂದರೆ ಅವು ಕಥೆಗಳಲ್ಲ ಜೀವನದ ಪಯಣದ ಒಂದೊಂದು ಮಜಲುಗಳು. ಸಾಹಸದಲ್ಲಿ ಗೆದ್ದವರಿಗಿಂತ ನಿತ್ರಾಣರಲ್ಲಿ ತುಂಬುವ ಶಕ್ತಿಯ ಬಗ್ಗೆಯೇ ಕಾಳಜಿ ವಹಿಸಬೇಕಿದೆ. ಬದುಕಿನ ಮರ್ಮಕ್ಕೆ ಮೋಹಿತರಾಗಿ ಅದು ಉತ್ತೇಜಿಸುವ ನಾವು ನಂಬಿದ ಆತ್ಯಂತಿಕ ಸತ್ಯಗಳ ಎಡೆಗೆ ಸಾಗಬೇಕಿರುವ ಜರೂರತ್ತಿನ ಚಿಂತನೆಯ ಭಾಗಗಳಾಗಿ ಬಸರಕೋಡ ಅವರು ಬರೆಯುತ್ತಾರೆ. ಕಣ್ಣಿಗೆ ನಿದ್ದೆ ಹತ್ತದ ಯಾವ ಸಂಗತಿಯನ್ನೋ ಧ್ಯಾನಿಸುತ್ತಾ ಬದುಕಿನ ರುದ್ರತೆಯ ಕಲ್ಪನೆಯನ್ನು ಸೌಮ್ಯವಾಗಿ ಒಡೆಯುತ್ತಾ ಹೋಗುತ್ತಾರೆ ಮಹಾದೇವ ಬಸರಕೋಡ.
ಒಂದೇ ಗುಕ್ಕಿಗೆ ಓದಬಲ್ಲ ಗುಣವನ್ನು ಹೊಂದಿರುವ ಈ ಕಥೆಗಳು ಮೇಲ್ನೋಟಕ್ಕೆ ಸರಳ ಸಜ್ಜನಿಕೆಯ ಬರಹಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದಾನೊಂದು ಕಾಲದಲ್ಲಿ ಏನಾಗಿತ್ತು ಎನ್ನುವುದರ ಕಡೆಗೆ ಬಸರಕೋಡ ಅವರಿಗೆ ಆಸಕ್ತಿಯಿಲ್ಲ. ತನ್ನ ಎದುರು ಉರಿವ ವಾಸ್ತವದಲ್ಲಿ ಅರಳುವ ಜೀವಗಳ ಜಗತ್ತು ಅವರನ್ನು ಹಿಡಿದಿಟ್ಟುಕೊಂಡಿವೆ. ತನ್ನ ಪರಿಧಿಯ ಒಳಗೆ ಬರುವ ಎಲ್ಲವನ್ನೂ ಒಳಗೊಳ್ಳುತ್ತಾ, ತನ್ನ ನೈತಿಕ ನಿಲುವಿಗೆ ತಕ್ಕಂತೆ ಹೇಳಲೇ ಬೇಕಾದ ಸಂಗತಿಗಳನ್ನು ಅಡಕ ಮಾಡುತ್ತಾ ಹೋಗುವ ಬಸರಕೋಡ ಅವರು ಕಥೆ ಹೇಳುವುದು ಸಾಹಸಮಯವಾದ. ಕ್ಲಿಷ್ಟಕರವಾದ ಸಂಗತಿಯಂತೆ ಭಾವಿಸುವುದಿಲ್ಲ. ತಮ್ಮ ಶಿಕ್ಷಕ ಜೀವನದ ಅನುಭವ ಅದು ತೆರೆಯುವ ಕಥನ ಲೋಕವನ್ನು ಹೇಳುವಲ್ಲಿ ಅವರಿಗೆ ಅತ್ಯಂತ ಉತ್ಸಾಹವಿದೆ. ಬಹುಶಃ ಶಿಕ್ಷಣವೊಂದು ದೊರೆತುಬಿಟ್ಟರೆ ಮಕ್ಕಳ ಭವಿಷ್ಯ ಅತ್ಯಂತ ಉಜ್ವಲ ಎಂದು ನಂಬಿರುವ ಅವರಿಗೆ ಆ ಜಗತ್ತನ್ನು ಹೇಳುವಲ್ಲಿ ಆಸಕ್ತಿ ಹೆಚ್ಚಾಗೇ ಇದೆ ಎನ್ನಬಹುದು. ಮೇಲು ನೋಟಕ್ಕೆ ಶಿಕ್ಷಣ ಹಾಗೂ ಸಾಮಾಜಿಕ ಪರಿಸರದ ಸುತ್ತಾ ಹೆಣೆದಿರುವ ಕಥೆಗಳಾಗಿ ವೇದ್ಯವಾಗುತ್ತವೆ. ಮಕ್ಕಳ ಮನೋಲೋಕ ಮತ್ತು ಸಮಾಜ ಎರಡರ ವಿನ್ಯಾಸದಲ್ಲಿ ಕಥನ ತೆರೆದುಕೊಳ್ಳುತ್ತದೆ.
ವಿನ್ಯಾಸವೆಂದರೆ ಇಟ್ಟಿಗೆಯನ್ನು ಚೌಕಾಕಾರವಾಗಿ ಪೇರಿಸಿದ ಹಾಗೇ ಮಾತ್ರವಲ್ಲ ಅದನ್ನು ಹೇಗೂ ಚಂದಗೊಳಿಸುವ ಸಾಧ್ಯತೆಗಳಿವೆ. ಸಾಧ್ಯತೆ ಎಂದರೆ ತಾನು ನಂಬಿದ ತತ್ವವನ್ನು, ತಾನು ಹೇಳುವ ಕಥೆಯ ಜೊತೆ ಸೇರಿಸಿ ಅಸಾಧ್ಯವಾದ ರೀತಿಯಲ್ಲಿ ಬೆಳಕಾಗಿಸುವುದು, ಎಲ್ಲವನ್ನೂ ಸಮನ್ವಯಗೊಳಿಸುವುದು ಎಂದರೆ ಭಾಷಿಕ ಸಾಧ್ಯತೆಯನ್ನು ಭಾವನಾತ್ಮಕತೆಯಲ್ಲಿ ಬೆಸೆಯುವುದು. ಬಯಲಲ್ಲಿ ನಿಂತು ಹಾಕಿದ ಕೂಗು ಸಂತಸವೋ ಸಂಕಟವೋ. ಅದು ಮತ್ತೆ ಮತ್ತೆ ನನಗೆ ಕೇಳಬೇಕು, ಆ ಮೂಲಕ ಜಗತ್ತು ಅದನ್ನು ಕೇಳಿಸಿಕೊಳ್ಳುವುದು. ಅಂದರೆ ನನ್ನನ್ನು ನಾನು ನೋಡಿಕೊಳ್ಳದೆ. ನನ್ನನ್ನು ನಾನು ತೆರೆದುಕೊಳ್ಳದೆ ಕಲೆಯಲ್ಲಿ ಸಂವಹನ ಸಾಧಿಸುವುದು ಸಾಧ್ಯವಾಗದು. ಆದ್ದರಿಂದಲೆ ಹೇಳುವ ಕಥೆ ರಾಜನದ್ದಿರಲಿ, ಸಾಮಾನ್ಯರದ್ದಿರಲಿ ಅದರಲ್ಲಿ ನಾನು ಎನ್ನುವ ಭಾವವನ್ನು ಬೆರೆಸಿಬಿಟ್ಟರೆ ಅದಕ್ಕೆ ಬಹುದೊಡ್ಡ ಆಯಾಮ ಸಿಕ್ಕಿ ಎಲ್ಲರದ್ದು ಆಗಿಬಿಡುತ್ತದೆ. ಬಸರಕೋಡ ಅವರ ಕಥೆಗಳೂ ಹೀಗೆ ಒಂದು ಭಾಷೆ. ಅದನ್ನ ಕಲಿಯಬೇಕು. ಅದೃಷ್ಟವಶಾತ್ ಕೆಲವೊಮ್ಮೆ ನಮ್ಮೊಳಗೆ ಗೊತ್ತಿಲ್ಲದೆ ಅದು ಹುದುಗಿರುತ್ತದೆ ನೆಲದೊಳಗೆ ಹರಿವ ನೀರಿನ ಹಾಗೆ. ಅದು ಸಿಕ್ಕಿಬಿಟ್ಟರೆ ನಮ್ಮ ಪಾಲಿನ ದೊಡ್ಡ ಭಾಗ್ಯ. ಹಾಗಲ್ಲದೆ ಹೋದರೆ ಅದನ್ನ ಕಷ್ಟಪಟ್ಟು ಕಲಿಯಬೇಕಾಗುತ್ತದೆ. ನಮ್ಮ ಪ್ರಯತ್ನ ಸಾಧನೆಗಳೆಲ್ಲವನ್ನೂ ಅಲ್ಲಿ ತೋರಿಸುವ ಮತ್ತೊಂದು ಮಗದೊಂದು ಪ್ರಯೋಗಗಳಿಗಾಗಿ ಮೀಸಲಿಡಬೇಕಾಗುತ್ತದೆ. ಇಲ್ಲದಿದ್ದರೆ ಕಥನವಾಗಲು ಸಾಧ್ಯವಿಲ್ಲ. ಕಥೆಗಾರನಾಗುವುದೇ ಸಾಧ್ಯವಿಲ್ಲ ಅಂದಮೇಲೆ ಅದರೊಳಗಿನ ದೃಷ್ಟಾರನನ್ನು ಕಾಣಿಸುವುದಾದರೂ ಹೇಗೆ? ಮಗುವಾಗದೆ ದೃಷ್ಟಾರನಾಗಲಾರ. ಹೀಗಾಗೇ ಭಾಷೆಯ ಜೊತೆ ವಿನಯವನ್ನು ಸಾಧಿಸಬೇಕಾಗುತ್ತದೆ.
ಬಸರಕೋಡ ಅವರು ಈ ಜಗತ್ತು ಧ್ಯಾನಿಸುವ ಒಂದು ದೊಡ್ಡ ಆದರ್ಶದ ಸಂಗತಿಯನ್ನು ತಮ್ಮ ಬರವಣಿಗೆಗೆ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇಲ್ಲಿಯ ಕಥೆಗಳಲ್ಲಿ ಢಾಳಾಗಿ ಕಾಣುವ ಹಾಗೆ ಎರಡು ಭಾಗಗಳಿವೆ. ಒಂದು ಪುಟ್ಟವರ ಜಗತ್ತು. ಇನ್ನೊಂದು ದೊಡ್ಡವರ ಜಗತ್ತು. ಮಕ್ಕಳು ನಮ್ಮ ದೊಡ್ಡ ಭರವಸೆಗಳು ನಾವು ನಂಬಿದ ಆದರ್ಶಗಳನ್ನು ಹೊತ್ತೊಯ್ಯುವ ವಾಹಕಗಳು. ಅಂಥಾ ಮಕ್ಕಳು ತಮ್ಮ ಸ್ಥಿತಿಯಿಂದ ಜಿಗಿದು ಅನಂತ ಸಾಧ್ಯತೆಯನ್ನು ಒಳಗು ಮಾಡಿಕೊಳ್ಳುವ ಸ್ಥಿತಿಯನ್ನು ಮುಟ್ಟುವ ಅಚ್ಚರಿ ಇಲ್ಲಿಯ ಕಥೆಗಳ ಮುಖ್ಯ ಜೀವಾಳ. ಅದು ಮೊದಲ ಕಥೆ 'ಐಸ್ ಕ್ರೀಂ ಹುಡುಗ' ಕಥೆಯಿಂದ ಮೊದಲುಗೊಂಡು ಬೆರಳೆಣಿಕೆಯ ಕಥೆಗಳನ್ನು ಬಿಟ್ಟು ಉಳಿದೆಲ್ಲದರಲ್ಲೂ ಹಾಸು ಹೊಕ್ಕಾಗಿದೆ. ಮಕ್ಕಳು ತಮ್ಮ ಬದುಕಿನ ಸಾಧ್ಯತೆಯಲ್ಲಿ ನಿಷ್ಕಾಮ ಸ್ಥಿತಿಯಲ್ಲಿ ನಾವು ಬಯಸುವ ಎತ್ತರವನ್ನು ಸಾಧಿಸಿಬಿಡುತ್ತಾರೆ. ತೆಗೆದುಕೊಂಡ ಹಣದಿಂದ ವ್ಯಾಪಾರ ಮಾಡಿ ಹಣವನ್ನು ವಾಪಾಸು ಮಾಡುವ ಶಶಾಂಕ್ ಆಗಲಿ, ತಾಯನ್ನು ಕಳಕೊಂಡ ಶಿವು ತಾಯ ಮಾತಿನಂತೆ ಆಕಾಶದೇವತೆಯನ್ನು ಬೇಡುವಾಗ ಕಂಡ ಮಹಿಳೆ ಅವನಿಗೆ ಸಹಾಯ ಮಾಡಿದ್ದರಿಂದ ತಾಯಿ ಮಾತು ಸುಳ್ಳಾಗಲಿಲ್ಲ ಎಂದು ಕೊಳ್ಳುವುದಾಗಲೀ, ಓದಿನಲ್ಲಿ ಮುಂದಿದ್ದರೂ ತನಗಾಗಿ ಮಾತ್ರ ಬದುಕುವ ಜಯಂತ, ಎಲ್ಲರಿಗಾಗಿ ಬದುಕುವ ಅವಿನಾಶನ ನಡುವಣ ವ್ಯತ್ಯಾಸಗಳು, ತನ್ನ ಮಗ ಈ ಸ್ಕೂಲಲ್ಲಿ ಓದಿದರೆ ದೊಡ್ಡವನಾಗುತ್ತಾನೆ ಎನ್ನುವ ತಾಯ ಕನಸಿಗೆ ನೀರೆರವ ಪ್ರಿನ್ಸಿಪಾಲ್ ಅದು ತನ್ನ ಬದುಕಿನ ಸಾರ್ಥಕತೆ ಎಂದು ಭಾವಿಸುವುದಾಗಲೀ, ಶಾಲೆಗೆ ಬಾರದ ವಿನಯನಂಥಾ ಹುಡುಗನ ಮನೆಯ ಸ್ಥಿತಿಗೆ ಮರುಗಿ, ವೈದ್ಯನಾಗಿರುವ ತನ್ನ ಹಳೆಯ ಶಿಷ್ಯನ ಮೂಲಕ ಹೊಸ ಶಿಷ್ಯನಿಗೆ ಸಹಾಯ ಮಾಡಿಸುವ ಮನೋಹರ್ ಮೇಷ್ಟರು, ಪ್ರವಾಹದಲ್ಲಿ ತಾಯನ್ನು ಕಳಕೊಂಡ ಪುಟ್ಟ ಕಾವೇರಿ ತಮ್ಮನನ್ನು ಕಾಪಾಡಿಕೊಳ್ಳುವ ಭರದಲ್ಲಿ ಆಹಾರದ ಕಿಟ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗದ ಅಸಹಾಯಕತೆಯಲ್ಲಿದ್ದಾಗ ಯಾರೋ ಒಬ್ಬ ಸ್ವಯಂ ಸೇವಕ ಮಾನವೀಯತೆಯಲ್ಲಿ ತಂದುಕೊಟ್ಟಿದ್ದಾಗಲೀ ಎಲ್ಲವೂ ಮಾನವೀಯತೆಯ ನೆಲೆಗಟ್ಟಲ್ಲೇ ನಡೆಯುತ್ತವೆ. ಅಸಹಾಯಕ ಪುಟ್ಟ ಜೀವಗಳ ಜೊತೆ ಸಮಾಜ ಇವತ್ತು ನಡೆದುಕೊಳ್ಳಬೇಕಿರುವ ರೀತಿಯನ್ನು ತೋರುವಂಥಾದ್ದೇ ಆಗಿದೆ. ಅವರ ಮಾತುಗಳಲ್ಲಿ ಹೇಳುವುದಾದರೆ ಯಾವ ಯೂನಿವರ್ಸಿಟಿಯೂ ಹೇಳಿಕೊಡದ ಪಾಠಗಳಿವು.
ಇನ್ನು ನಮ್ಮ ಕಾಲದ ಬಹು ದೊಡ್ಡ ಸಂಘರ್ಷದ ಕಾಲಘಟ್ಟ ಎಂದರೆ ಅದು ಕರೋನಾ ಕಾಲದ ಲಾಕೌನ್ ಸಂಬಂಧಗಳ ಅರ್ಥಗಳನ್ನು ಕಂಡುಕೊಂಡಿದ್ದೇ ಆವಾಗ. ಮನುಷ್ಯನೊಳಗಿನ ಶ್ರದ್ದೆ, ಪ್ರೀತಿ ತಾಳ್ಮೆ ಎಲ್ಲದರ ಜೊತೆಗೆ ಕ್ರೌರ್ಯವೂ ಪ್ರಕಟವಾಗಿತ್ತು. ಒಂದೇ ಮನೆಯೊಳಗೆ ಇದ್ದೂ ಅಪರಿಚಿತರಾಗಿದ್ದ ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿಹೋಗಿದ್ದ ಜನ ಸಂಬಂಧಗಳನ್ನು ಹೊಂದಾಣಿಕೆ ಎಂದು ಮಾತ್ರ ಪರಿಗಣಿಸಿ ಹೊಲಿದ ಅಂಗಿಗೆ ಸರಿ ಹೊಂದಿಸಲು ಮನುಷ್ಯನನ್ನೇ ಕತ್ತರಿಸುವ ಮೂರ್ಖತನದ ಪರಮಾವಧಿಯಲ್ಲಿ ಬದುಕುವ ಅನಿವಾರ್ಯತೆಯನ್ನು ದಾಟಿಕೊಳ್ಳುವ ಸರಯೂ, ಅದನ್ನು ಅರ್ಥ ಮಾಡಿಕೊಳ್ಳುವ ಅಪ್ಪ ಎಲ್ಲವೂ ಜೀವವೊಂದರ ಬೆಲೆ -ಅದು ಹೆಣ್ಣಿರಲಿ, ಗಂಡಿರಲಿ-ದೊಡ್ಡದು ಎಂದು ಹೇಳುತ್ತದೆ. ಸಂಸಾರ ಹೊಂದಾಣಿಕೆ ಅದು ಎಲ್ಲವೂ ಸರಿಯಿದ್ದಾಗ ಇಲ್ಲದಿದ್ದರೆ ಅಲ್ಲಿ ಹೊಂದಾಣಿಕೆಯ ಅಗತ್ಯವೇ ಬದುವುದಿಲ್ಲ. ಅಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಅದು ಆತ್ಮದ್ರೋಹದ ಕೆಲಸವಾಗುತ್ತದೆ.
ಇನ್ನು ಅಂಥಾದ್ದೇ ಹೆಣ್ಣಿನ ಇನ್ನೊಂದು ಕಥೆ ಒಲವೇ ಬದುಕಿನ ದಾರಿದೀಪದ ಬಿಂದು ತನ್ನ ಬದುಕಿನಲ್ಲಿ ಬಂದ ಪ್ರೀತಿ ಮಹೇಶನನ್ನು ಮರೆಯಲಾರದವಳಾಗಿದ್ದಾಳೆ. ಇಬ್ಬರ ಮರುಭೇಟಿ ಅವಳಲ್ಲಿ ತಲ್ಲಣಗಳನ್ನು ಹುಟ್ಟಿಹಾಕುತ್ತದೆ. ತನ್ನ ನಿಷ್ಪಯೋಜಕ ಗಂಡ ಮನೆಯವರ ಕ್ರೌರ್ಯ, ತನ್ನ ಬದುಕಿಗಾಗಿ ದುಡಿದು ಬದುಕುವ ಅನಿವಾರ್ಯತೆ ಎಲ್ಲದರ ನಡುವೆ ಮಹೇಶನ ಕಡೆಗೆ ತುಡಿತ ಹೆಚ್ಚಾದರೂ ತಾನು ಈಗ ಅವನ ಸಂಸಾರದ ಮಧ್ಯೆ ಹೋಗಿ ಹದುಳವನ್ನು ಕೆಡಿಸುವುದು ಸರಿಯೇ ಎನ್ನುವ ವಿವೇಚನಾಪೂರ್ಣವಾದ ನಡೆಯಿಂದ ತನ್ನೆಲ್ಲಾ ತುಮುಲಗಳನ್ನು ದಾಟಿಕೊಂಡು ಬಿಡುತ್ತಾಳೆ.
ವೈಯಕ್ತಿಕವಾಗಿ ನನಗೆ ಕಟ್ಟುವ ಕೌಶಲ್ಯದ ಬಗೆ ನಂಬಿಕೆ ಇಲ್ಲ. ಅದು ಯಾವಾಗಲೂ ಕೃತಕವಾಗಿರುತ್ತದೆ. ಅದನ್ನ ದಾಟಿಕೊಳ್ಳಲಿಕ್ಕೆ ಏನು ಮಾಡಬೇಕು ಎನ್ನುವುದನ್ನ ಬುದ್ದಿಪೂರ್ವಕವಾಗಿ ಯೋಚಿಸಿದರೆ ಅದು ಕಸರತ್ತಾಗುತ್ತದೆ. ನೆಲದ ಎದೆಯಿಂದ ಹುಟ್ಟುವ ಬಳ್ಳಿಯೊಂದು ತಾನು ತಡಕೊಳ್ಳುವ ಭಾರವನ್ನು ತಾನೇ ನಿರ್ಧರಿಸಿ ಹೂವು ಕಾಯಿಗಳನ್ನು ಅರಳಿಸುತ್ತದೆ. ಇದು ಪ್ರಕೃತಿ ಸಹಜವಾಗಿರುವುದು. ಪ್ರತಿಯೊಬ್ಬ ಲೇಖಕನಿಗೂ ಇದು ಅನ್ವಯ ಆಗುತ್ತದೆ ಎನ್ನುವುದು ನನ್ನ ತಿಳುವಳಿಕೆ. ಬಸರಕೋಡರ ಬರವಣಿಗೆಯಲ್ಲಿ ಇದೂ ಒಂದು ಪ್ರಯತ್ನ ತಮ್ಮ ಚಿಂತನೆಗಳಿಗೆ ಭಾಷಿಕ ರೂಪವನ್ನು ಅವರು ಕೊಟ್ಟಿದ್ದಾರೆ. ಇಡೀ ಕಥೆಗಳನ್ನು ನೇರವಾದ ಮಾತುಗಳ ಮೂಲಕ ಹೆಣೆಯಲು ಪ್ರಯತ್ನ ಪಟ್ಟಿದ್ದಾರೆ. ಇದು ಅರ್ಥ ಮಾಡಿಸುವ ಇನ್ನೊಂದೇ ಕ್ರಮ ಕೂಡಾ. ಸಮಕಾಲೀನ ಸಂಗತಿಯೊಂದನ್ನು ಸಮಕಾಲೀನವಾದ ಸಂದರ್ಭದಲ್ಲಿ ಇಡುವಾಗ ಇದಲ್ಲದೆ ಏನು ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಥೆಗಾರನೇ ದಾರಿಗಳನ್ನು ಹುಡುಕಿಕೊಳ್ಳಬೇಕು. ಕಥೆಯಲ್ಲಿನ ಜಿಗಿತಗಳಿಗೆ ಸುಸಂಬದ್ಧತೆಯನ್ನು ಹುಡುಕುವ ಬಸರಕೋಡ ಅವರಿಗೆ ಕಥೆ ಹೇಳುವುದು ಸಹಜವಾಗೇ ಬಂದಿದೆ. ಮಕ್ಕಳೊಂದಿಗಿನ ಮಾತು ಅವರ ಬರಹವನ್ನು ಸರಳವಾಗುವಂತೆ ರೂಪಿಸಿದೆ. ಕವಿಯಾಗಿ ಅಂಕಣಕಾರರಾಗಿ ಪರಿಚಿತರಾಗಿರುವ ಬಸರಕೋಡ ಕಥೆಗಳ ಮೂಲಕವೂ ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. ಅವರ ಈ ಸಾರ್ಥಕ ಪ್ರಯತ್ನ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಅಪರೂಪದ ಕೊಡುಗೆಯನ್ನು ಕೊಡಲಿ ಎಂದು ಆಶಿಸುತ್ತೇನೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!