ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್

ಬಹಳ ದಿನಗಳ ಬಳಿಕ ಬರವಣಿಗೆಯ ಖುಷಿಗೆ ಮರಳಿರುವ ಪತ್ರಕರ್ತ ರವೀಂದ್ರ ಜೋಶಿ ‘ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಪ್ರಸ್ತುತ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್ ಬಗ್ಗೆ ಬಹುತೇಕರಿಗೆ ಗೊತ್ತಿದೆ. ಆದರೆ, ಅಜಿತ್ ದೋವಲ್ ಅವರು ಪಾಕಿಸ್ತಾನದಲ್ಲಿ ಭಾರತೀಯ ಗೂಢಾಚಾರರಾಗಿ ಏಳು ವರ್ಷಗಳನ್ನು ಕಳೆದಿದ್ದರು ಎನ್ನುವ ಸಂಗತಿ ಎಷ್ಟು ಜನಕ್ಕೆ ಗೊತ್ತಿದೆ? ಪಾಕಿಸ್ತಾನದ ಪರಮಾಣು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ರವಾನಿಸುತ್ತಿದ್ದ ವಿಷಯ ಈಗ ಯಾರಿಗೂ ಗೊತ್ತಿರಲಿಕ್ಕಿಲ್ಲ. ‘ಗೂಢಾಚಾರಿಯ ರಹಸ್ಯ ಬದುಕು’ ಎನ್ನುವ ಈ ಕೃತಿಯ ಒಂದು ಅಧ್ಯಾಯ ಅಜಿತ್ ದೋವಲ್ ಅವರ ಸಾಹಸಗಾಥೆ, ದೇಶ ಪ್ರೇಮವನ್ನು ಇಂಚಿಂಚಾಗಿ ಹೊರ ಜಗತ್ತಿಗೆ ತೆರೆದಿಟ್ಟಿದೆ. ಇದನ್ನೇ ಇತ್ತೀಚೆಗೆ ಬಾಲಿವುಡ್ ಬಾಕ್ಸ್ ಆಫೀಸ್ ಹುಡಿ ಮಾಡಿದ ಚಿತ್ರ ‘ಧುರಂದರ್’ ನಲ್ಲಿ ಬಳಸಿಕೊಳ್ಳಲಾಗಿದೆ ಎನ್ನುತ್ತಾರೆ.

ಅಜಿತ್ ದೋವಲ್ ಬಗ್ಗೆ ಕೃತಿಯ ಲೇಖಕರು ಬೆನ್ನುಡಿಯಲ್ಲಿ ಬರೆಯುತ್ತಾರೆ… “ದೇಶಕ್ಕಾಗಿ ಏನು ಬೇಕಾದರೂ ಮಾಡಲು ಯಾವಾಗಲೂ ಸಿದ್ಧರಿರುವ ಅಂತಹ ಅನೇಕ ವೀರರಿಗೆ ನಮ್ಮ ಭರತಭೂಮಿಯೇ ಜನ್ಮಭೂಮಿ. ಅಂತಹವರ ಸಾಲಿನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಒಬ್ಬರು. ದೇಶದ ಮೇಲಿನ ಅವರ ಪ್ರೀತಿಗೆ ಯಾವುದೇ ಮಿತಿಯಿಲ್ಲ. ಈಗ ಅವರ ಪ್ರಸಿದ್ದಿ ಎಷ್ಟೆಂದರೆ ಭಾರತೀಯರಿಗೆ ಅಜಿತ್ ದೋವಲ್ ಯಾರೆಂದು ಈಗ ಪರಿಚಯಿಸುವ ಅಗತ್ಯವಿಲ್ಲ. ಅವರ ವಿಶಿಷ್ಟ ರಾಜತಾಂತ್ರಿಕತೆ ಮತ್ತು ಅಚ್ಚರಿಯ ತಂತ್ರಗಳಿಂದಾಗಿ ಅವರನ್ನು ಭಾರತದ ಆಧುನಿಕ ಜೇಮ್ಸ್ ಬಾಂಡ್ ಮತ್ತು ಚಾಣಕ್ಯ ಎಂದು ಕರೆಯಲಾಗುತ್ತದೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷವಾಗಿ ವಿಶ್ವಾಸಾರ್ಹ ಅಧಿಕಾರಿ ಎಂದು ಪರಿಗಣಿಸಿದ್ದಾರೆ. ಭಾರತದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಅಧ್ಯಕ್ಷರಾದ ಅವರನ್ನು ಮೋದಿ ಆಡಳಿತದ ಕೇಂದ್ರ ಸರ್ಕಾರದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಹಾಗಂತ ದೋವಲ್ ಈ ಸರ್ಕಾರದಿಂದ ಹುಟ್ಟಿದ ಕೂಸಲ್ಲ. ಬೇರೆ ಪಕ್ಷಗಳು ಆಡಳಿತದಲ್ಲಿ ಇದ್ದಾಗಲೂ ಅವರು ತಮ್ಮ ಕರ್ತವ್ಯವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದರು, ದೇಶಕ್ಕಾಗಿ ಜೀವದ ಹಂಗು ತೊರೆದು ರಿಸ್ಕ್‌ಗಳನ್ನು ತೆಗೆದುಕೊಂಡಿದ್ದರು ಎಂಬುದು ಇವತ್ತು ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ.”

೧೯೯೯ರಲ್ಲಿ ಭಯೋತ್ಪಾದಕರು ಕಾಠ್ಮಂಡು-ದೆಹಲಿ ಮಾರ್ಗದ ವಿಮಾನವನ್ನು ಹೈಜಾಕ್ ಮಾಡಿ ಕಂದಹಾರ್ ಗೆ ತೆಗೆದುಕೊಂಡು ಹೋದಾಗ ಭಾರತದ ಪರವಾಗಿ ಮಾತುಕತೆ ನಡೆಸಿದವರು ಇದೇ ಅಜಿತ್ ದೋವಲ್. ಭಯೋತ್ಪಾದಕರ ಯಾವುದೇ ಶರತ್ತನ್ನೂ ಪೂರೈಸದೆ ಒತ್ತೆಯಾಳುಗಳನ್ನು ವಾಪಾಸ್ ತರುವ ಭರವಸೆಯನ್ನು ಕೊಟ್ಟರೂ ರಾಜತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಅಂದಿನ ಸರಕಾರ ಇದಕ್ಕೆ ಒಪ್ಪದೇ, ಭಯೋತ್ಪಾದಕರ ಷರತ್ತುಗಳನ್ನು ಒಪ್ಪಿಕೊಳ್ಳುತ್ತದೆ. ದೋವಲ್ ಆ ಸಮಯದಲ್ಲಿ ಈ ಒಪ್ಪಂದಕ್ಕೆ ಒಪ್ಪಿಕೊಳ್ಳುವುದಿಲ್ಲ. ಆದರೆ ಸರಕಾರದ ನಿರ್ಧಾರಕ್ಕೆ ಒಲ್ಲದ ಮನಸ್ಸಿನಿಂದ ತಲೆಬಾಗುತ್ತಾರೆ. ಅಂದು ಸರಕಾರ ಅಜಿತ್ ದೋವಲ್ ಮಾತು ಕೇಳಿದ್ದರೆ ಮುಂದೆ ೨೦೦೧ರ ಸಂಸತ್ ದಾಳಿ, ೨೦೦೮ರ ಮುಂಬೈ ದಾಳಿ, ೨೦೨೯ರ ಪುಲ್ವಾಮಾ ದಾಳಿ ನಡೆಯುತ್ತಿರಲಿಲ್ಲವೇನೋ? ಏಕೆಂದರೆ ಅಂದು ಸಂಧಾನದ ಫಲವಾಗಿ ನಾವು ಬಿಡುಗಡೆ ಮಾಡಿದ ಉಗ್ರಗಾಮಿಗಳೇ ಈ ಎಲ್ಲಾ ದಾಳಿಗಳ ರುವಾರಿಗಳಾಗಿದ್ದರು. 

ದೋವಲ್ ಐಪಿಎಸ್ ಹುದ್ದೆಯಲ್ಲಿರುವಾಗ ತಲಸ್ಸೇರಿಯ ಕೋಮು ಗಲಭೆ, ಮಿಜೋರಾಂ ನ ಗಲಭೆ, ಪಂಜಾಬ್ ನಲ್ಲಿ ನಡೆದ ಸ್ವರ್ಣ ಮಂದಿರದಲ್ಲಿ ಖಲಿಸ್ತಾನಿಗಳ ಉಪಟಳ, ಈಶಾನ್ಯ ರಾಜ್ಯಗಳಲ್ಲಿನ ಗಲಭೆಗಳ ನಿಗ್ರಹ ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸಿ ಎಲ್ಲೆಡೆ ಶಾಂತಿ ಸ್ಥಾಪನೆ ಮಾಡುತ್ತಾರೆ. ಇರಾಕ್ ನಲ್ಲಿನ ಭಯೋತ್ಪಾದಕರ ಕೈಯಲ್ಲಿ ಸಿಕ್ಕಿ ಬಿದ್ದಿದ್ದ ಸುಮಾರು ೪೦ಕ್ಕೂ ಅಧಿಕ ನರ್ಸ್ ಗಳನ್ನು ಬಿಡುಗಡೆ ಮಾಡಿಸಿ ಭಾರತಕ್ಕೆ ಮರಳಿ ತಂದ ಕೀರ್ತಿ ಅಜಿತ್ ದೋವಲ್ ಅವರಿಗೆ ಸಲ್ಲಬೇಕು. ಈ ಅಪ್ರತಿಮ ದೇಶ ಭಕ್ತ ತನ್ನ ೮೧ನೇ ವಯಸ್ಸಿನಲ್ಲೂ (ಜನನ ೧೯೪೫) ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ನಮಗೆಲ್ಲಾ ಹೆಮ್ಮೆಯ ಸಂಗತಿ. ಈ ಕೃತಿ ನಮಗೆ ತಿಳಿಯದ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಸುಮಾರು ೮೦ ಪುಟಗಳ ಈ ಕೃತಿಯನ್ನು ರವೀಂದ್ರ ಜೋಶಿಯವರು “ಮಾತಿನ ಮನೆ ಕಟ್ಟುತ್ತಲೇ ಬರೆಯುವುದನ್ನೇ ಮರೆತಿದ್ದ ನನಗೆ ಮತ್ತೆ ಪೂರ್ವಾಶ್ರಮಕ್ಕೆ ಕರೆತಂದು ಅಕ್ಷರ ಕೃಷಿಗೆ ತೊಡಗಿಸಿದ ಡಾ. ವಿದ್ಯಾಶಂಕರ್ ಪಿ. ಅವರಿಗೆ ಪ್ರೀತಿಯಿಂದ” ಅರ್ಪಣೆ ಮಾಡಿದ್ದಾರೆ.