ಇಮಾಮ್ ಸಾಹೇಬರ ಕುದುರೆ

ಖ್ಯಾತ ಸಾಹಿತಿ ವೈ ಎಸ್ ಹರಗಿಯವರ ನೂತನ ಕಾದಂಬರಿ ‘ಇಮಾಮ್ ಸಾಹೇಬರ ಕುದುರೆ’ ಇತ್ತೀಚೆಗೆ ಬಿಡುಗಡೆಯಾಗಿದೆ. ಬಹಳ ಕುತೂಹಲಕಾರಿ ಶೀರ್ಷಿಕೆಯನ್ನು ಹೊಂದಿರುವ ಈ ಕಾದಂಬರಿಯ ಕಥಾ ವಸ್ತು ಕೂಡಾ ತುಂಬಾ ಆಸಕ್ತಿದಾಯಕವಾಗಿದೆ. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಅಮರೇಶ ನುಗಡೋಣಿ. ಇವರು ತಮ್ಮ ಬೆನ್ನುಡಿಯಲ್ಲಿ “ಯಾವುದೇ 'ಇಸಂ'ಗಳ ಕಾದಾಟಕ್ಕಿಂತ ಮನುಷ್ಯ ಪ್ರೀತಿ ಮತ್ತು ಜೀವಪರ ನಿಲುಮೆಗಳ ಪರಿಪಾಲಿಸುತ್ತಾ, ಕೂಡಿ ಬಾಳುವುದೇ ನಿಜವಾದ ಮನುಷ್ಯ ಧರ್ಮ, ಶ್ರೀ ವೈ ಎಸ್ ಹರಗಿ ಅವರ ಇಮಾಮ್‌ ಸಾಹೇಬರ ಕುದುರೆ ಕಾದಂಬರಿಯ ಆಶಯವೂ ಆಗಿದೆ.

ಕಾದಂಬರಿಯ ಕೇಂದ್ರ ಬಿಂದು 'ಶಾಂತಿಪುರ' ಹೆಸರಿಗೆ ಮಾತ್ರ ಶಾಂತಿಪುರ ಆದರೆ ಅದು ಅಪ್ಪಟ ಅಶಾಂತಿಪುರವಾಗಿ ನರಳುತ್ತದೆ. ಈ ಊರಿನಲ್ಲಿಯ ರಾಜಕೀಯ ಕಾದಾಟ, ಅಸೂಯೆ, ದ್ವೇಷ, ಅಸ್ಪೃಶ್ಯರ ಶೋಷಣೆ, ಹೆಣ್ಣಿಗಾಗಿ ನಡೆಯುವ ಕಾದಾಟ, ದೇವರ ಹೆಸರಿನಲ್ಲಿ ನಡೆಯುವ ಆನಾಚಾರಗಳು ಕುಪ್ರಸಿದ್ದಿಯಾಗಿದೆ .

ಇಲ್ಲಿ ದರ್ಗಾಕ್ಕೆ ಬಿಟ್ಟ ಹರಕೆಯ ಕುದುರೆಯೇ ಸಾಮಾಜಿಕ ಸಾಮರಸ್ಯದ ಸಂಕೇತವಾಗಿ ಬಿಂಬಿತವಾಗಿದ್ದು, ಆದು ನಿರ್ಲಿಪ್ತ ಸಂತನಂತೆ ಕಾದಂಬರಿಯ ಪ್ರಾರಂಭದಿಂದ ಕೊನೆಯವರೆಗೆ ಸಾತ್ವಿಕ ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ. ಅದೇ ರೀತಿಯಾಗಿ ರಾಜಕೀಯ ಮರೆಮೋಸದ ಕಲೆಯನ್ನು ಕರಗತ ಮಾಡಿಕೊಳ್ಳಲಾರದೇ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮಾನ್ಯುವಿನಂತೆ ನರಳುವ ಎಂ.ಎಲ್.ಎ ದೇವರಾಯಪ್ಪ ಹುಡೇದಮನಿ ಪಾತ್ರ ಬಹುವಾಗಿ ಕಾಡುತ್ತದೆ. ಸ್ವಜಾತಿ ಪ್ರೇಮ ಮತ್ತು ಮಡಿ ಮೈಲಿಗೆಗಳು ಅಘೋಷಿತ ಕರ್ಮಶ ಕೋಟೆಯಲ್ಲಿ ಬಂಧಿಯಾಗಲಾರದೇ ಹಿರೇಮಠದ ಗುರುಪೀಠವನ್ನು ತೊರೆದು ಕಾಡು ದೇವರ ಗಾಡಿಯಲ್ಲಿ ವಾಸಮಾಡುವ ಗುರಯ್ಯ ಗಾಂಧೀ: ಅಚ್ಚಾರ ಪಾತ್ರವು ಕಾದಂಬರಿಯುದ್ದಕ್ಕೂ ಸತ್ಯದ ಪ್ರತಿಪಾದನೆ ಮಾಡುತ್ತದೆ.

ಪೋಲಿಸರು ಚಂದ್ರಿಯನ್ನು ಬಂಧಿಸಲು ಹೋದಾಗ ಸೊಪ್ಪಿನ ಮಾರೆಮ್ಮನ ಗರ್ಭಗುಡಿಯೊಳಗೆ ಆಕೆ ನೇರವಾಗಿ ಹೋಗಿ ಬೆತ್ತಲ ಸೇವೆಯನ್ನು ಸಲ್ಲಿಸುವ ನಿದರ್ಶನ ಇತಿಹಾಸದ ಕರಾಳ ಹೆಜ್ಜೆ ಗುರುತುಗಳನ್ನು ನೆನಪಿಸುತ್ತದೆ.” ಎಂದು ಬರೆದು ಕಾದಂಬರಿಯ ಅನಾವರಣವನ್ನು ಕಡಿಮೆ ಪದಗಳಲ್ಲಿ ಹೇಳಿ ಓದುವ ಕುತೂಹಲವನ್ನು ನಮ್ಮಲ್ಲಿ ಬಿತ್ತಿದ್ದಾರೆ.