ಪತ್ತೇದಾರಿ ಕಾದಂಬರಿ ಎಂದ ಕೂಡಲೇ ಅದರಲ್ಲಿನ ರೋಚಕತೆ, ಕೊನೆಯ ತನಕ ಅಪರಾಧಿ ಯಾರು ಎಂದು ಕಾಡುವ ಕುತೂಹಲ, ಅಪರಾಧಿ ಯಾರೆಂದು ಹುಡುಕಿದ ಪತ್ತೇದಾರ ಅಥವಾ ಪೋಲೀಸ್ ನ ಚತುರತೆ ಎಲ್ಲವೂ ನಮ್ಮ ಕಣ್ಣ ಮುಂದೆ ಬರುತ್ತದೆ. ಕೆಲವು ದಶಕಗಳ ಹಿಂದೆ ಕಾಲಕಳೆಯಲು ನಮಗೆಲ್ಲಾ ಇದ್ದ ಅತ್ಯಂತ ದೊಡ್ದ ಸಾಧನ ಎಂದರೆ ಅದು ಪುಸ್ತಕವೇ ಆಗಿತ್ತು. ಮಹಿಳೆಯರಿಗೆ ತ್ರಿವೇಣಿ, ಸಾಯಿಸುತೆ, ಉಷಾ ನವರತ್ನರಾಮ್ ಹಿಡಿಸಿದರೆ ಪುರುಷರಿಗೆ ಅದರಲ್ಲೂ ಹದಿಹರೆಯದ ಹುಡುಗರು ಕ್ರೈಂ, ಪತ್ತೇದಾರಿ ಕಾದಂಬರಿಗಳಿಗೆ ಮುಗಿ ಬೀಳುತ್ತಿದ್ದರು. ಎನ್ ನರಸಿಂಹಯ್ಯ, ಕಾಕೋಳು ರಾಮಯ್ಯ, ಮಾ ಭೀ ಶೇ, ಬಿ ವಿ ಅನಂತರಾಮ್, ಸುದರ್ಶನ ದೇಸಾಯಿ ಹೀಗೆ ಹತ್ತು ಹಲವಾರು ಕಾದಂಬರಿಕಾರರ ನಡುವೆ ಕೆಲವು ಆಂಗ್ಲ ಭಾಷೆಯ ಅನುವಾದಿತ ಕೃತಿಗಳೂ ಹೊರಬರುತ್ತಿದ್ದವು. ಜೇಮ್ಸ್ ಹ್ಯಾಡ್ಲಿ ಚೇಸ್, ಶರ್ಲಾಕ್ ಹೋಮ್ಸ್ ಹೀಗೆ… ಪತ್ತೇದಾರಿ ಕಾದಂಬರಿಗಳನ್ನು ಓದುವುದೇ ದೊಡ್ಡ ಥ್ರಿಲ್ ಆಗಿತ್ತು.
ಇತ್ತೀಚಿನ ದಿನಗಳಲ್ಲಿ ಹಲವು ಹೊಸ ಮುಖಗಳು ಪತ್ತೇದಾರಿ ಕಾದಂಬರಿ ಬರೆಯುವತ್ತ ಮನಸ್ಸು ಮಾಡಿವೆ. ಅವರಲ್ಲಿ ಒಬ್ಬರು, ಪತ್ರಕರ್ತರಾದ ಬಿ ವಿ ಮನೋಹರ್. ತಮ್ಮ ಪತ್ರಕರ್ತ ಜೀವನದ ೧೭ ವರ್ಷಗಳಲ್ಲಿ ಕಂಡ, ಅನುಭವಿಸಿದ ಕೆಲವೊಂದು ಘಟನೆಗಳನ್ನು ಅಕ್ಷರ ರೂಪಕ್ಕೆ ತಂದು ಅದಕ್ಕೆ ‘ಕಪ್ಪು ಹುಂಜ’ ಎನ್ನುವ ಹೆಸರು ನೀಡಿದ್ದಾರೆ. ಇದೊಂದು ಪುಟ್ಟ ಪತ್ತೇದಾರಿ ಕಾದಂಬರಿ. ಈ ಕಾದಂಬರಿಯನ್ನು ಬರೆಯಲು ಪ್ರೇರಣೆಯಾದ ಸಂಗತಿಗಳ ಕುರಿತು ‘ಲೇಖಕರ ಮಾತು’ ಇಲ್ಲಿ ಅವರು ಹೇಳಿರುವುದು ಹೀಗೆ…
“ಪ್ರತೀ ಸಲ ಪುಸ್ತಕ ಕೊಳ್ಳಲು ಹೋದಾಗ 'ನೀವೇನೂ ಬರೆಯಲ್ವಾ' ಅನ್ನೋ ಪ್ರಶ್ನೆಯೊಂದಿಗೆ ನಗುಮುಖದಲ್ಲಿ ಬರಮಾಡಿಕೊಳ್ತಿದ್ದ ಸ್ನೇಹ ಬುಕ್ ಹೌಸ್ ಮಾಲೀಕರಾದ ಶ್ರೀಯುತ ಕೆ.ಬಿ ಪರಶಿವಪ್ಪನವರ ಕಾಳಜಿಯುತ ಪ್ರಶ್ನೆಗೆ ಉತ್ತರಿಸಲಾಗದೇ ಮುಗುಳು ನಕ್ಕು ಪುಸ್ತಕ ಕೊಂಡು ಹೊರಬರುತ್ತಿದ್ದ ನನಗೆ, ನನ್ನಲ್ಲೂ ಒಬ್ಬ ಕಥೆಗಾರ ಇರಬಹುದು ಅನ್ನೋ ಸಣ್ಣ ಭರವಸೆ ಮೂಡಿದ್ದು 'ಕಪ್ಪು ಹುಂಜ' ಎಂಬ ಈ ಸಸ್ಪೆನ್ಸ್ ಥಿಲ್ಲರ್ ಬರೆಯಲು ಕುಳಿತಾಗ.
ಕಳೆದ ೧೭ ವರ್ಷಗಳ ಕಾಲ ನಾಡಿನ ಹಲವು ಹೆಸರಾಂತ ಸುದ್ದಿ ವಾಹಿನಿಗಳ ಬೆಂಗಳೂರು ಬ್ಯೂರೋದಲ್ಲಿ ಅಪರಾಧ ವರದಿಗಾರಿಕೆ ಮತ್ತು ಸ್ಕ್ರಿಪ್ಟ್ ರೈಟರ್ ಆಗಿ ಕೆಲಸಮಾಡಿದ ಅನುಭವ ಹೊಂದಿರುವ ನಾನು, ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರಗಳಿಗೆ ಸಂಬಂಧಿಸಿದ ಕನಿಷ್ಠವೆಂದರೂ ಸಾವಿರಾರು ಕ್ರೈಂ ಸೀನ್ಗಳಿಗೆ (ಅಪರಾಧ ಸನ್ನಿವೇಶಗಳಿಗೆ) ಪ್ರತ್ಯಕ್ಷ ಸಾಕ್ಷಿ ಆಗಿದ್ದೇನೆ. ಹಲವು ನುರಿತ ಪೊಲೀಸ್ ತನಿಖಾಧಿಕಾರಿಗಳ ಜೊತೆಗೆ ಮುಖಾಮುಖಿಯಾಗಿ ಕುಳಿತು ಅವುಗಳ ಕುರಿತ ಮಾಹಿತಿ ಸಂಗ್ರಹಿಸಿದ್ದೇನೆ. ಅಪರಾಧ ತನಿಖೆಯ ರೋಚಕತೆಗಳನ್ನು ಕಣ್ಣಾರೆ ಕಂಡು ವರದಿ ಮಾಡಿದ್ದೇನೆ.
ಆ ಅನುಭವಗಳೆಲ್ಲವೂ ನನಗೆ ಈ ಕಾದಂಬರಿ ಹೆಣೆಯಲು ಮೂಲ ದ್ರವ್ಯವಾಗಿ ಸಹಾಯಮಾಡಿದೆ. ಹೀಗಾಗಿ ಈ ಪತ್ತೇದಾರಿ ಕಾದಂಬರಿಯಲ್ಲಿ ಬರುವ ಬಹುತೇಕ ಸನ್ನಿವೇಶಗಳು ಹಾಗೂ ಪಾತ್ರಗಳು ನಾನು ಕಣ್ಣಾರೆ ಕಂಡು, ಕೇಳಿ, ವರದಿಮಾಡಿದ ಅಂತಹ ಸನ್ನಿವೇಶಗಳಿಂದ ಸ್ಫೂರ್ತಿಪಡೆದಿದ್ದಾಗಿದೆ. ಓದುವ ಹವ್ಯಾಸ ವಿದ್ಯಾರ್ಥಿ ದೆಸೆಯಿಂದಲೇ ನನ್ನ ಆಸಕ್ತಿಗಳಲ್ಲೊಂದು.”
‘ಕಪ್ಪು ಹುಂಜ’ ಮೊದಲೇ ಹೇಳಿರುವಂತೆ ಒಂದು ಸಸ್ಪೆನ್ಸ್ ಥ್ರಿಲ್ಲರ್. ಶವಾಗಾರದಲ್ಲಿ ಕೆಲಸ ಮಾಡುವ ನಟರಾಜ್, ಹೋಟೇಲ್ ಉದ್ಯಮಿ ಗಿರಿಯಪ್ಪ, ಕೋಳಿ ಮಾರಾಟಗಾರ ಇಷಾಕ್ ಒಂದೊಂದಾಗಿ ನಡೆದ ಇವರೆಲ್ಲರ ಕೊಲೆಯ ರಹಸ್ಯವನ್ನು ಬಯಲಿಗೆಳೆಯಲು ಹೊರಟ ಇನ್ಸ್ ಪೆಕ್ಟರ್ ಗಿರಿಧರ್, ಸಬ್ ಇನ್ಸ್ ಪೆಕ್ಟರ್ ವಿಜೇತ್, ಗಿರಿಯಪ್ಪನ ಸಹಾಯಕ ಪಾತರಾಜು, ಇವುಗಳ ಜೊತೆ ನಿರಂತರವಾಗಿ ಕಾಡುವ ಕಪ್ಪು ಹುಂಜದ ರಹಸ್ಯ ಇದು ನೀವು ಈ ಪುಸ್ತಕದಲ್ಲಿ ಕಾಣಬಹುದಾದ ಪ್ರಮುಖ ಅಂಶಗಳು. ಹೋಟೇಲ್ ಉದ್ಯಮಿ ಗಿರಿಯಪ್ಪನಿಗೆ ವಾಮಾಚಾರದ ಹುಚ್ಚು. ನಿಧಿ ಸಿಗುತ್ತದೆ ಎನ್ನುವ ಆಸೆಗೆ ಬಲಿಯಾಗಿದ್ದ ಗಿರಿಯಪ್ಪ ಅದಕ್ಕೆ ಅಗತ್ಯವಾಗಿ ಬೇಕಾದ ಹಸಿ ಬಾಣಂತಿಯ ಕೈಯ ಮೂಳೆಯನ್ನು ಸಂಪಾದಿಸಲು ಹಾಸನದ ಆಸ್ಪತ್ರೆಯೊಂದರ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ನಟರಾಜ್ ಅನ್ನು ಸಂಪರ್ಕಿಸುತ್ತಾನೆ. ಇದರ ನಡುವೆ ಕೋಳಿ ಮಾರಾಟಗಾರ ಇಷಾಕ್ ಸೇರಿಕೊಳ್ಳುತ್ತಾನೆ. ಗಿರಿಯಪ್ಪನ ಕೆಲಸಗಳಿಗೆ ಸಹಾಯ ಮಾಡುವ ಆತನ ಹೋಟೇಲ್ ನೌಕರ ಪಾತರಾಜು.
ಮೊದಲಿಗೆ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದ ಇಷಾಕ್ ಕೊಲೆಯಾಗುತ್ತದೆ. ನಂತರ ಗಿರಿಯಪ್ಪ ತನ್ನದೇ ಹೋಟೇಲ್ ನ ನೀರಿನ ಟಾಂಕಿಯಲ್ಲಿ ಮುಳುಗಿ ಸಾಯುತ್ತಾನೆ. ನಂತರ ತಿಳಿಯುತ್ತದೆ ಗಿರಿಯಪ್ಪನ ಸಾವು ನೀರಿನಲ್ಲಿ ಮುಳುಗಿ ಆದದ್ದಲ್ಲ ಅದು ಕರೆಂಟ್ ಸಂಪರ್ಕದಿಂದ ಸತ್ತದ್ದು ಎಂದು. ಗಿರಿಯಪ್ಪನ ನಂತರ ಆತನಿಗೆ ಕೈಯ ಮೂಳೆಯನ್ನು ಸರಬರಾಜು ಮಾಡುತ್ತಿದ್ದ ಹಾಸನದ ನಟರಾಜು ಮಹಿಳೆಯ ವೇಷ ಧರಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಂತರ ತಿಳಿಯುತ್ತದೆ ಅದು ಆತ್ಮಹತ್ಯೆಯಲ್ಲ, ಕೊಲೆ ಎಂದು. ಈ ಮೂರೂ ಕೊಲೆಗಳಲ್ಲಿ ಸಾಮಾನ್ಯ ಸಂಗತಿ ಇದ್ದುದು ಕಪ್ಪು ಹುಂಜದ ರೆಕ್ಕೆಗಳು ಮತ್ತು ಕೊಲೆಗಳು ನಡೆದದ್ದು ಅಮವಾಸ್ಯೆಯ ದಿನವೇ. ಈ ಎಲ್ಲಾ ಸಂಗತಿಗಳನ್ನು ತಿಳಿದು ಅಪರಾಧಿಯ ಪತ್ತೆಗೆ ಹೊರಡುವ ಇನ್ಸ್ ಪೆಕ್ಟರ್ ಗಿರಿಧರ್ ಗೆ ಎದುರಾಗುವ ಸವಾಲುಗಳು ಹಲವಾರು. ಕೊಲೆಗಾರ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿರುವುದಿಲ್ಲ. ಹಲವಾರು ಅಪಾಯಗಳ ನಡುವೆ ಕೊನೆಗೂ ಗಿರಿಧರ್ ಅಪರಾಧಿಯನ್ನು ಪತ್ತೆಹಚ್ಚುತ್ತಾನೆ. ಕೊಲೆಗಾರ ಅಥವಾ ಕೊಲೆಗಳ ಹಿಂದೆ ಇದ್ದ ಮಾಸ್ಟರ್ ಮೈಂಡ್ ಯಾರಿರಬಹುದು? ಆತ ಆ ಕೊಲೆಗಳನ್ನು ಮಾಡಿಸಿದ ಕಾರಣವೇನು? ಈ ಕೊಲೆಗಳಲ್ಲಿ ಕಪ್ಪು ಹುಂಜದ ಪಾತ್ರವೇನು? ಇವನ್ನೆಲ್ಲಾ ತಿಳಿಯಲು ಈ ಪುಟ್ಟ ಪತ್ತೇದಾರಿ ಕಾದಂಬರಿಯನ್ನು ನೀವು ಓದಲೇ ಬೇಕು.
ಮನೋಹರ್ ಅವರು ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಬಹಳಷ್ಟು ಯಶಸ್ಸು ಕಂಡಿದ್ದಾರೆ. ತುಂಬಾ ಸುದೀರ್ಘವಾದ ಕಾದಂಬರಿಯನ್ನು ಬರೆಯಲು ಹೋಗದೇ ತಮ್ಮ ಮಿತಿಯಲ್ಲೇ ಚಿಕ್ಕದಾಗಿ ಚೊಕ್ಕದಾದ ಕಾದಂಬರಿಯನ್ನು ಬರೆದಿದ್ದಾರೆ. ಓದುವಾಗ ಗಿರಿಧರ್ ಅವರ ಇನ್ಸ್ ಪೆಕ್ಟರ್ ಪಾತ್ರ ಇನ್ನಷ್ಟು ಬಿಗಿಯಾಗಿರಬೇಕಿತ್ತು, ಹಲವು ಕಡೆ ಇನ್ಸ್ ಪೆಕ್ಟರ್ ವಿಷಯಗಳನ್ನು ಗ್ರಹಿಸುವಲ್ಲಿ ಸೋಲುತ್ತಿದ್ದಾರೆ ಅನಿಸುತ್ತದೆ. ಗಿರಿಧರ್ ಗೆ ಗಿರಿಯಪ್ಪನ ಮನೆಯಲ್ಲಿ ಸಿಕ್ಕಿದ ವಾಮಾಚಾರದ ಸಾಹಿತ್ಯದಲ್ಲಿ ಬರೆದ ವಿಷಯಗಳನ್ನು ತನಿಖೆಯ ಸಮಯದಲ್ಲಿ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಓದುಗರಿಗೆ ಅನಿಸುವ ಸಾಧ್ಯತೆ ಇದೆ. ಉಳಿದಂತೆ ಸರಾಗವಾಗಿ ಓದುತ್ತಾ ಹೋಗಬಹುದಾದ ಈ ಕಾದಂಬರಿ ಬರೆಯುವಲ್ಲಿ ಮನೋಹರ್ ಅವರು ತುಂಬಾ ಶ್ರಮ ವಹಿಸಿದ್ದಾರೆ. ದಕ್ಷಿಣ ಕನ್ನಡ ಸಾಂಪ್ರದಾಯಿಕ ಕೋಳಿ ಕಟ್ಟ ಅಥವಾ ಕೋರಿದ ಕಟ್ಟದ ಬಗ್ಗೆ, ಅದರಲ್ಲಿನ ಕೋಳಿಗಳ ವೈವಿಧ್ಯಮಯ ಹೆಸರುಗಳನ್ನು ಸಂಗ್ರಹಿಸುವಲ್ಲಿ ಅವರ ಆಸಕ್ತಿ ಮೆಚ್ಚುವಂತಹದ್ದು. ಮೊದಲ ಪ್ರಯತ್ನದಲ್ಲಿ ಕೆಲವು ಕಡೆ ಸಣ್ಣ ಸಣ್ಣ ತೊಡರುಗಳಲ್ಲಿ ಸಿಕ್ಕಕೊಂಡರೂ ರೋಚಕವಾದ ಕಾದಂಬರಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಬಿ ವಿ ಮನೋಹರ್.
ಬಹಳ ಆಕರ್ಷಕ ಮುಖಪುಟದ ‘ಕಪ್ಪು ಹುಂಜ’ ಕಾದಂಬರಿಯನ್ನು ಬಿ ವಿ ಮನೋಹರ್ ಇವರು “ತಮ್ಮ ನೂರು ಕಷ್ಟಗಳ ನಡುವೆಯೂ ಜಗತ್ತಿನ ಸುಖವನ್ನೆಲ್ಲಾ ಸುರಿದು ಸಾಹಿ ಬೆಳೆಸಿ, ಮಗನ ಏಳಿಗೆ ನೋಡುವ ಮೊದಲೇ ಕಣ್ಮರೆಯಾದ ಅಣ್ಣ (ಅಪ್ಪ) ಮತ್ತು ಅಮ್ಮನಿಗೆ..” ಅರ್ಪಣೆ ಮಾಡಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!