ಕರುಳ ಬಳ್ಳಿಯ ತಡವುತ್ತಾ

‘ಸಂಪದ’ ಜಾಲ ತಾಣಕ್ಕೆ ನಿರಂತರವಾಗಿ ತಮ್ಮ ಬರಹಗಳನ್ನು ಬರೆಯುತ್ತಿರುವ ಮಾನವೀಯ ಮೌಲ್ಯಗಳ ಹೋರಾಟಗಾರ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ವಿವೇಕಾನಂದ ಎಚ್ ಕೆ ಇವರು ಕೆಲವು ದಿನಗಳ ಹಿಂದೆ ತಮ್ಮ ಲೇಖನದಲ್ಲಿ ‘ಕರುಳ ಬಳ್ಳಿಯ ತಡವುತ್ತಾ’ ಕೃತಿಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈಗ ಪುಸ್ತಕ ಸುಂದರವಾಗಿ ಮುದ್ರಿತಗೊಂಡು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕೃತಿಯ ಬಗ್ಗೆ ಈಗಾಗಲೇ ವಿವೇಕಾನಂದರು ಮಾಹಿತಿ ಹಂಚಿಕೊಂಡಿದ್ದಾರೆ. 

“ಮನುಷ್ಯನ ಜೀವನವೆಂದರೆ ಕೇವಲ ಬದುಕಿನ ಓಟವಲ್ಲ; ಅದು ಸಂಬಂಧಗಳ ಹಗ್ಗದ ಮೇಲೆ ನಿಂತಿರುವ ಸಂವೇದನಾಶೀಲ ಸಮತೋಲನ. ಕಾಲದ ಗತಿಯಲ್ಲೂ, ಅಗತ್ಯಗಳ ಗೊಂದಲದಲ್ಲೂ, ಸ್ವಾರ್ಥದ ಅಲೆಗಳಲ್ಲೂ ನಾವು ನಿಧಾನವಾಗಿ ಕಳೆದುಕೊಳ್ಳುವುದು ನಮ್ಮ ಮಾನವೀಯ ಮೌಲ್ಯಗಳನ್ನು. ಆದರೆ ಅವೇ ಮೌಲ್ಯಗಳು ನಮ್ಮ ಅಸ್ತಿತ್ವಕ್ಕೆ ಅರ್ಥ ನೀಡುತ್ತವೆ.

ಕರುಳ ಬಳ್ಳಿಯ ತಡಗುತ್ತಾ ಎಂಬ ಈ ಕಥಾ ಸಂಕಲನ, ಮನುಷ್ಯನೊಳಗಿನ ಮೌನ ವೇದನೆ, ಅಡಗಿದ ಪ್ರೀತಿ, ಮುರಿದ ಸಂಬಂಧಗಳು ಮತ್ತು ಅವುಗಳನ್ನು ಮತ್ತೆ ಬೆಸೆಯುವ ಅಂತರಂಗದ ಹೋರಾಟವನ್ನು ಚಿತ್ರಿಸುತ್ತದೆ. ಇಲ್ಲಿ ಪ್ರತಿಯೊಂದು ಕಥೆಯೂ ಬದುಕಿನ ಯಾವುದೋ ಒಂದು ಕ್ಷಣದಲ್ಲಿ ನಮ್ಮನ್ನೇ ಎದುರು ನಿಲ್ಲಿಸುವ ಕನ್ನಡಿಯಂತಿದೆ.

ಕುಟುಂಬ, ಸಮಾಜ, ವೃತ್ತಿ ಮತ್ತು ಆತ್ಮಸಾಕ್ಷಿಯ ನಡುವಿನ ಸಂಘರ್ಷಗಳಲ್ಲಿ ಸಿಲುಕಿದ ಮನುಷ್ಯನ ಮನಸ್ಥಿತಿಯನ್ನು ಈ ಕಥೆಗಳು ಸೂಕ್ಷ್ಮವಾಗಿ ಅನಾವರಣ ಗೊಳಿಸುತ್ತವೆ. ನೈತಿಕತೆಯ ಪ್ರಶ್ನೆಗಳು, ಸಂಬಂಧಗಳ ಹೊಣೆಗಾರಿಕೆ ಮತ್ತು ಮಾನವೀಯತೆಯ ಉಳಿವಿನ ಚಿಂತೆ-ಇವೆಲ್ಲವೂ ಈ ಸಂಕಲನದ ಮೂಲ ತಂತುಗಳು.

ಈ ಕಥೆಗಳು ಉಪದೇಶಿಸುವುದಕ್ಕಿಂತಲೂ ಅನುಭವಿಸಲು ಆಹ್ವಾನಿಸುತ್ತವೆ. ಓದುಗರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಮೂಡಿಸಿ, ಉತ್ತರಗಳನ್ನು ಅವರೊಳಗೇ ಹುಡುಕುವಂತೆ ಪ್ರೇರೇಪಿಸುತ್ತವೆ. ಬದುಕಿನ ಗದ್ದಲದಲ್ಲಿ ಕ್ಷಣಕಾಲ ನಿಂತು, ನಮ್ಮೊಳಗಿನ ಮನುಷ್ಯನನ್ನು ಮತ್ತೆ ಹುಡುಕುವ ಪ್ರಯತ್ನವೇ ಈ ಕೃತಿಯ ಉದ್ದೇಶ. ಈ ಕಥೆಗಳು ಓದುಗರ ಹೃದಯವನ್ನು ಸ್ಪರ್ಶಿಸಿ, ಸಂಬಂಧಗಳ ಮೌಲ್ಯವನ್ನು ಮತ್ತೊಮ್ಮೆ ನೆನಪಿಸುವುದಾದರೆ, ಈ ಬರಹಕ್ಕೆ ಸಾರ್ಥಕತೆ ಸಿಕ್ಕಂತೆ.” ಎಂದು ಬೆನ್ನುಡಿಯಲ್ಲಿ ಬರೆಯಲಾಗಿದೆ. 

ಈ ಕೃತಿಯಲ್ಲಿ ೪೪ ಮನೋಜ್ಞ ಕಥೆಗಳಿವೆ. ಎಲ್ಲವೂ ಪುಟ್ಟ ಪುಟ್ಟ ಕಥೆಗಳು. ಎಲ್ಲಾ ಕಥೆಗಳು ಭಾವನಾತ್ಮಕ, ನೈಜ ಸನ್ನಿವೇಶಗಳನ್ನು ಒಳಗೊಂಡಿವೆ. ಈ ಪುಸ್ತಕದಲ್ಲಿರುವ ‘ಕುರಿಗಳು ಸರ್ ಕುರಿಗಳು’ ಕಥೆಯನ್ನು ನಿಮ್ಮ ಓದಿಗಾಗಿ ನೀಡಲಾಗಿದೆ.

“ಅವರ ಮೇಲೆ ಇವರು, ಇವರ ಮೇಲೆ ಅವರು. ಪರಿವರ್ತನೆ ಎಲ್ಲಿಂದ ಪ್ರಾರಂಭಿಸೋಣ. ದಯವಿಟ್ಟು ತಿಳಿಸಿ.

ಪ್ರಯಾಣಿಕನೊಬ್ಬ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆ. ಅರ್ಧಗಂಟೆ ಲೇಟಾಗಿ ಬಂದ ಬಸ್ಸು ಎಂದಿನಂತೆ ನಿಲ್ದಾಣದಲ್ಲಿ ನಿಲ್ಲಿಸದೆ ಸುಮಾರು ದೂರ ಹೋಗಿ ನಿಲ್ಲುತ್ತದೆ. ಬಸ್ಸು ಹತ್ತಲು ಓಡಿದ ಪ್ರಯಾಣಿಕ. ಇನ್ನೇನು ಬಸ್ಸು ಹತ್ತಬೇಕೆನ್ನುವಷ್ಟರಲ್ಲಿ ಮುಂದಕ್ಕೆ ಚಲಿಸುತ್ತದೆ. ಈತ ಬಸ್ಸಿನ ಬಾಗಿಲ ಕಂಬಿ ಹಿಡಿದವನು ಕೈ ಜಾರಿ ದೊಪ್ಪನೆ ಕೆಳಗೆ ಬೀಳುತ್ತಾನೆ. ಕಾಲಿಗೆ ಬಲವಾದ ಪೆಟ್ಟಾಗುತ್ತದೆ. ಡ್ರೈವರ್‌ಅನ್ನು ಶಪಿಸುತ್ತಾ ಮತ್ತೆ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುತ್ತಾನೆ.

ಅದೇ ಬಸ್ಸಿನ ಡ್ರೈವರ್ ತನ್ನ ಮಗನನ್ನು ಒಂದು ಖಾಸಗಿ ಶಾಲೆಗೆ ಸೇರಿಸಲು ಹೋಗುತ್ತಾನೆ. ಅಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿ ಹಿಂಸಿಸಿದ ಪ್ರಿನ್ಸಿಪಾಲರು ಕೊನೆಗೆ ಹೆಚ್ಚಿನ ಡೊನೇಷನ್ ಕಟ್ಟಿಸಿಕೊಂಡು ಶಾಲೆಗೆ ಸೇರಿಸಿಕೊಳ್ಳುತ್ತಾರೆ. ಪ್ರವೇಶ ಮುಗಿಸಿ ಹೊರಬಂದ ಡ್ರೈವರ್ ಸುಲಿಗೆ ಮಾಡಿದ್ದಕ್ಕಾಗಿ ಶಾಲೆಯನ್ನು ಬಯ್ಯುತ್ತಾ ಮನೆಕಡೆ ಹೊರಡುತ್ತಾನೆ.

ಅದೇ ಶಾಲೆಯ ಪ್ರಿನ್ಸಿಪಾಲರು ಜ್ವರದ ಕಾರಣಕ್ಕಾಗಿ ಒಂದು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಆಸ್ಪತ್ರೆಯ ಸಿಬ್ಬಂದಿ ಅನೇಕ ಪರೀಕ್ಷೆಗಳನ್ನು ಮಾಡಿ-ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿ, ಏನೂ ತೊಂದರೆ ಇಲ್ಲ ಎಂದು ಹೇಳಿ ದುಬಾರಿ ಶುಲ್ಕ ಪಾವತಿಸಿಕೊಂಡು ಕಳಿಸುತ್ತಾರೆ. ಆ ಪ್ರಿನ್ಸಿಪಾಲರು ಅನವಶ್ಯಕವಾ ದುಬಾರಿ ಹಣ ತೆತ್ತಿದ್ದಕ್ಕಾಗಿ ಆಸ್ಪತ್ರೆಯನ್ನು ಶಪಿಸುತ್ತಾ ಶಾಲೆಯ ಕಡೆ ಹೊರಡುತ್ತಾನೆ. 

ಅದೇ ಆಸ್ಪತ್ರೆಯ ಡಾಕ್ಟರ್ ತಮ್ಮ ಒಂದು ಹೊಸ ಮನೆಯ ನೊಂದಣಿಗಾಗಿ ಸಬ್‌ರಿಜಿಸ್ಟ್ರಾರ್ ಆಫೀಸಿಗೆ ಬರುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ಕಾದು ಸಾವಿರಾರು ರೂಪಾಯಿ ಲಂಚ, ಕಮೀಷನ್ ಕೊಟ್ಟು, ಇಡೀ ದಿನ ಸಮಯ ವ್ಯರ್ಥ ಮಾಡಿಕೊಂಡು ಕೊನೆಗೆ ನೊಂದಣಿ ಮುಗಿಸಿ ಆಚೆ ಬರುವಾಗ ಮನಸ್ಸಿನಲ್ಲಿ ಸಬ್‌ರಿಜಿಸ್ಟ್ರಾರನ್ನು ಬಾಯಿಗೆ ಬಂದತೆ ಟೀಕಿಸುತ್ತಾ ಆಸ್ಪತ್ರೆಯ ಕಡೆ ಹೊರಡುತ್ತಾನೆ.

ಅದೇ ಸಬ್‌ರಿಜಿಸ್ಟ್ರಾರ್ ಒಂದು ಮನೆ ಕಟ್ಟಿಸುತ್ತಿರುತ್ತಾನೆ. ಆ ಜಾಗದ ಬಗ್ಗೆ ತಕರಾರು ಉದ್ಭವಿಸಿ ರೌಡಿಗಳ ಪ್ರವೇಶವಾಗಿ ತುಂಬಾ ತೊಂದರೆ ಆಗುತ್ತಿರುತ್ತದೆ. ಆ ಬಗ್ಗೆ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿ ಆ ಜಾಗವನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಂಡು ರೌಡಿಗಳನ್ನು ಹೊರಹಾಕಿ ಸಮಸ್ಯೆ ಪರಿಹರಿಸಿಕೊಳ್ಳಲು ಪೋಲೀಸ್ ಅಧಿಕಾರಿಗೆ ಅಪಾರ ಲಂಚ ಕೊಟ್ಟು ಹೈರಾಣಾಗುತ್ತಾನೆ. ಕೊನೆಗೆ ಹೇಗೋ ಸಮಸ್ಯೆ ಬಗೆಹರಿಸಿಕೊಂಡು ತನ್ನ ಬಳಿಯೇ ಲಂಚ ತಿಂದಿದ್ದಕ್ಕೆ ಪೊಲೀಸರಿಗೆ ಶಾಪ ಹಾಕುತ್ತಾ ಕಚೇರಿ ಕಡೆ ಹೊರಡುತ್ತಾನೆ.

ಅದೇ ಪೊಲೀಸ್ ಅಧಿಕಾರಿಯ ಮಗ ಪೋಲಿಬಿದ್ದು ಯಾವುದೋ ಡ್ರಗ್ ಕೇಸಲ್ಲಿ ಸಿಕ್ಕಿ ಬೀಳುತ್ತಾನೆ. ಅವನನ್ನು ಬಿಡಿಸಿಕೊಳ್ಳಲು ಪ್ರಖ್ಯಾತ ಕ್ರಿಮಿನಲ್ ಲಾಯರನ್ನು ಸಂಪರ್ಕ ಮಾಡುವ ಅಧಿಕಾರಿ ಅಪಾರ ದುಡ್ಡು, ತನ್ನ ಪ್ರಭಾವಗಳನ್ನೆಲ್ಲಾ ಬಳಸಿ ಕೊನೆಗೆ ಹೇಗೋ ಜಾಮೀನಿನ ಮೇಲೆ ಮಗನನ್ನು ಹೊರತರುತ್ತಾನೆ. ಈ ಅಧಿಕಾರಿಯ ಬಗ್ಗೆ ಗೊತ್ತಿದ್ದ ಲಾಯರ್ ದೊಡ್ಡ ಮೊತ್ತದ ಹಣ ಕೀಳುತ್ತಾನೆ. ಮಗನನ್ನು ಬಂಧನದಿಂದ ಬಿಡಿಸಿಕೊಂಡು ಬರುವ ಅಧಿಕಾರಿ ತನ್ನ ಬಳಿಯೇ ಅಪಾರ ಹಣ ಕಿತ್ತ ಲಾಯರನ್ನು ಶಪಿಸುತ್ತಾನೆ.

ಇದೇ ಲಾಯ‌ರ್ ಸರ್ಕಾರದ ಯಾವುದಾದರೂ ನಿಗಮ-ಮಂಡಳಿಗೆ ಅಧ್ಯಕ್ಷನಾಗಲು ಪ್ರಭಾವೀ ರಾಜಕಾರಣಿಯ ಬಳಿ ಹೋಗುತ್ತಾನೆ. ಆತ ದೆಹಲಿ, ಹೈಕಮಾಂಡ್, ಅದು ಇದು ಎಂದು ಸುತ್ತಾಡಿಸಿ ಚೆನ್ನಾಗಿ ದುಡ್ಡು ಕಿತ್ತು ಕೊನೆಗೆ ಒಂದು ಕೆಲಸಕ್ಕೆ ಬಾರದ ಮಂಡಳಿಯ ಸದಸ್ಯತ್ವ ಕೊಡಿಸುತ್ತಾನೆ. ನಿರೀಕ್ಷಿತ ಅಧಿಕಾರ ಕೊಡಿಸದಿದ್ದರೂ ಅಪಾರ ಹಣ ಕಿತ್ತಿದ್ದಕ್ಕಾಗಿ ಲಾಯ‌ರ್ ರಾಜಕಾರಣಿಯನ್ನು ಶಪಿಸುತ್ತಾನೆ.

ಇದೇ ರಾಜಕಾರಣಿ ಅಪಾರ ಹಣ ಖರ್ಚು ಮಾಡಿ ಪಕ್ಷದ ಟಿಕೆಟ್ ಗಿಟ್ಟಿಸಲು ಹೈರಾಣಾಗುತ್ತಾನೆ. ಕೊನೆಗೆ ಒಂದು ಕ್ಷೇತ್ರದ ಟಿಕೆಟ್ ಗಿಟ್ಟಿಸಿ ಚುನಾವಣೆಗೆ ನಿಲ್ಲುತ್ತಾನೆ. ಜನರ ಬಳಿ ಮತಯಾಚನೆಗೆ ಹೋಗುತ್ತಾನೆ. ಆಗ ಮತದಾರರು ಸಹಜವಾಗಿ ಎಂದಿನಂತೆ ಯಾವ ಪಕ್ಷದವರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ನಮ್ಮ ಓಟು ಎನ್ನುತ್ತಾರೆ. ಕೊನೆಗೆ ಈ ರಾಜಕಾರಣಿ ಅಪಾರ ಹಣ ಮತದಾರರಿಗೆ ಕೊಡುತ್ತಾನೆ. ಮನಸ್ಸಿನಲ್ಲಿ ಮತದಾರರನ್ನು ಶಪಿಸುತ್ತಾನೆ.

ಅದೇ ರಾಜಕಾರಣಿಯಿಂದ ಪಡೆದ ಹಣದೊಂದಿಗೆ ತಾನು ಬ್ಯಾಂಕ್‌ನಿಂದ ಪಡೆದ ಸಾಲದ ಕಂತು ತುಂಬಲು ಈಗ ಬಸ್‌ನಿಲ್ದಾಣದಲ್ಲಿ ಗಾಯಗೊಂಡು ನಿಂತಿರುವ ಪ್ರಯಾಣಿಕನೇ ಆ ಮತದಾರ.

ನರಿಯಾಗಲು ಹೋಗಿ ಕುರಿಯಾಗಿ ನಿರಾಸೆಯಿಂದ, ಬದಲಾವಣೆ ಎಲ್ಲಿಂದ ಪ್ರಾರಂಭಿಸುವುದು ಎಂದು ಯೋಚಿಸುತ್ತಲೇ ಇರುವ ಮತದಾರನೂ ಅವನೇ.”

ಹೇಗಿದೆ ಕಥೆ? ಇಂತಹ ಹಲವಾರು ಕಥೆಗಳು ಈ ಕೃತಿಯಲ್ಲಿವೆ. ೧೮೮ ಪುಟಗಳ ಈ ಕೃತಿಯನ್ನು ವಿವೇಕಾನಂದರು “ನನ್ನ ರಕ್ತ ಸಂಬಂಧಿಗಳೆಂದೇ ಭಾವಿಸುವ ಜಗತ್ತಿನ ಎಲ್ಲಾ ಹೊಟ್ಟೆಪಾಡಿನ ವೇಶ್ಯೆಯರಿಗೆ…” ಅರ್ಪಣೆ ಮಾಡಿದ್ದಾರೆ.