ಕೃಷಿಯೆಂಬ ಓಪನ್‌ ಯೂನಿರ್ವಸಿಟಿ

ಈ ಹಿಂದೆ “ITಯಿಂದ ಮೇಟಿಗೆ” ಎನ್ನುವ ಕೃತಿಯನ್ನು ಬರೆದು ಬಹು ಜನರ ಮೆಚ್ಚುಗೆಗೆ ಪಾತ್ರರಾದವರು ವಸಂತ ಕಜೆ. ಇವರು ಇದೇ ಕೃತಿಯ ಎರಡನೇ ಭಾಗವಾಗಿ “ಕೃಷಿಯೆಂಬ ಓಪನ್ ಯೂನಿವರ್ಸಿಟಿ” ಯನ್ನು ಹೊರತಂದಿದ್ದಾರೆ. ಈ ಕೃತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ಅವರು ಹಂಚಿಕೊಂಡದ್ದು ಹೀಗೆ…

“"ಕೃಷಿಯೊಂದು ತೆರೆದ ಪಾಠಶಾಲೆ, ಉನ್ನತ ಶಿಕ್ಷಣದ ಯುನಿವರ್ಸಿಟಿ. ನಿತ್ಯದ ಬಟ್ಟೆಯೇ ಯುನಿಫಾರ್ಮು. ನಮ್ಮ ಶ್ರಮವೇ ಫೀಸು. ಕಣ್ಣಿಗೆ ಕಾಣದೆಯೂ ಆಗಾಗ ಏಟು ನೀಡುವ ಗುರುಗಳು. ಮಕ್ಕಳು, ಕುಟುಂಬಿಕರೊಂದಿಗೆ ಆಟ, ಪಾಠ, ಬೇಕಾದಷ್ಟು ವಿರಾಮ. ಆಕಾಶಕ್ಕೆ ಕಣ್ತೆರೆದ ನೆಲವೇ ಉತ್ತರಪತ್ರಿಕೆ. ನಮ್ಮ ಕಾಳಜಿಯ ಪಾಲನೆಯೇ ಪರೀಕ್ಷೆ, ಪ್ರಾಕ್ಟಿಕಲ್ಲು, ವೈವಾ. ವಾಲ್ಯುವೇಶನ್ ಮಾಡಲು ಪ್ರಕೃತಿಯ ನೂರೊಂದು ನಿಯಂತ್ರಕ ಶಕ್ತಿಗಳು - ಶಿಲೀಂಧ್ರ, ಕೀಟ, ಪಕ್ಷಿ, ಹಂದಿ, ನವಿಲುಗಳೆಲ್ಲ. ತುಂಬಿದ ಹೊಟ್ಟೆ, ದಿಂಬಿಗೆ ತಲೆಯಿಟ್ಟರೆ ನಿದ್ದೆ, ಖರ್ಚಿಗೆ ಕಡಿಮೆಯಾಗದಷ್ಟು ಕಾಸು ಬಂದರೆ ಪಾಸು. ಅನುಭವವೇ ಡಿಗ್ರಿ. Admission Open ಎಂದರೆ ಯಾರೂ ಬರಲೊಲ್ಲರಲ್ಲ?!"

ಈ ಮೇಲಿನ ಸಂವೇದನೆಯಿಂದ ಈ ಪುಸ್ತಕವನ್ನು ಬರೆಯಲಾಗಿದೆ. ಕೃಷಿಯು ಅನುಭವಗಳ ಆಗರ. ಐಟಿ ವೃತ್ತಿಯನ್ನು ಬಿಟ್ಟು ಕೃಷಿಯನ್ನು ಆಯ್ದುಕೊಳ್ಳಲು ಕಾರಣವೇನೆಂಬುದನ್ನು ದೀರ್ಘಕಾಲ ಪರಾಮರ್ಶಿಸಿ ಈ ಹಿಂದೆ "ITಯಿಂದ ಮೇಟಿಗೆ" ಎಂಬ ಪುಸ್ತಕವನ್ನು ಬರೆದಿದ್ದೆ. ಅದಾಗಿ ಸುಮಾರು ಒಂದು ದಶಕಗಳಲ್ಲಿ ಸಂಗ್ರಹಗೊಂಡ ಕೃಷಿ ಅನುಭವಗಳ ಸಂಗ್ರಹವೇ ಈ ಪುಸ್ತಕದ ವಸ್ತು. ಇದರಲ್ಲಿ ಕೃಷಿ ಆಯ್ಕೆಯ ಮೊದಲು ಕೈಗೊಳ್ಳಬೇಕಾದ ಮುಂಜಾಗರೂಕತೆಗಳು, ಭತ್ತ/ಅನ್ನದ ಬೆಳೆಯ ಸಿಹಿಕಹಿ ಅನುಭವಗಳು, ಕೃಷಿವಸ್ತುಗಳ ಮಾರುಕಟ್ಟೆಯ ಏಳುಬೀಳುಗಳು, ಜಲಸಂರಕ್ಷಣೆಯ ಹತ್ತಾರು ದಾರಿಗಳು, ಕೃಷಿ ಮತ್ತು ಕಲೆ, ಕೃಷಿಕನಾಗಬೇಕಾದರೆ ಕಲಿಯಬೇಕಾದ ಹತ್ತಾರು ವಿದ್ಯೆಕೌಶಲಗಳು, ಬಿದಿರು ಕೃಷಿ, ಹೋಮ್ ಸ್ಕೂಲಿಂಗ್, ಸಂಸ್ಕೃತಭಾಷಾ ಕಲಿಕೆ, ಕೃಷಿ ಪ್ರವಾಸೋದ್ಯಮ - ಇತ್ಯಾದಿ ಹತ್ತು ಹಲವು ವಿಷಯಗಳ ಬಗೆಗಿನ ಪ್ರಬಂಧಗಳು ಇವೆ.”

ಕೃಷಿ ಹಾಗೂ ಅದರ ತಂತ್ರಜ್ಞಾನಗಳು ನಿಂತ ನೀರಲ್ಲ. ಪ್ರತೀ ದಿನ, ಪ್ರತೀ ಸಂದರ್ಭಕ್ಕೆ ಬದಲಾಗುತ್ತಾ ಇರುತ್ತದೆ. ನಮಗೆ ಸೂಕ್ತವೆನಿಸಿ ಲಾಭ ತಂದುಕೊಟ್ಟ ಕೃಷಿ ಕ್ರಮ, ಬೇರೊಬ್ಬ ಕೃಷಿಕನಿಗೆ ನಷ್ಟದಲ್ಲಿ ಮುಳುಗಿಸೀತು. ಕೃಷಿಯೊಂದು ಜಾಣ್ಮೆಯ ಲೆಕ್ಕಾಚಾರ ಎನ್ನುವ ಸಂಗತಿಯನ್ನು ಸರಳವಾಗಿ ೧೫೦ ಪುಟಗಳಲ್ಲಿ ಓದುಗರ ಜೊತೆ ಹಂಚಿಕೊಂಡಿದ್ದಾರೆ.