ಲೇಖಕ ರವಿ ಅಂಬೋಜಿ ಅವರ ʻಗುಲಾಬಿ ಸೇನೆʼ ಕಾದಂಬರಿಯು ಆಶಾ ಕಾರ್ಯಕರ್ತೆಯರ ಜೀವನ ಸಂಕೋಲೆಗಳನ್ನು ಬಿತ್ತರಿಸಿದೆ. ಇದೊಂದು ಹೆಣ್ಣು ಮಗಳ ಜೀವನದೊಂದಿಗಿನ ಹೋರಾಟದ ಜೀವಂತ ಕಥೆ. ಓದುವಾಗ ಗಲ್ಲವರಳಿಸಿ ನಗಿಸುವ, ಹಿಂದಿನದೇನೋ ನೆನಪಿಸುವ, ಮನಸ್ಸು ಭಾರವಾಗಿ ಕಣ್ಣು ತೇವ ಮಾಡುವ, ದಬ್ಬಾಳಿಕೆಗೆ ರಕ್ತ ಕುದಿಸುವ ತಾಕತ್ತು ಈ ಕೃತಿಯೊಳಗಿನ ಅಕ್ಷರಗಳಿಗಿದೆ ಎನ್ನುತ್ತಾರೆ ಡಿ. ನಾಗಲಕ್ಷ್ಮಿ, ರಾಜ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ. ಇವರು ಕೃತಿಗೆ ಬರೆದ ಬೆನ್ನುಡಿ ಸಾಲುಗಳು ನಿಮ್ಮ ಓದಿಗಾಗಿ ಹೀಗಿದೆ:
“ಒಬ್ಬ ಕಾರ್ಮಿಕನ ಕೂಗು ಆಳುವವನಿಗೆ, ಬಂಡವಾಳಶಾಹಿಗೆ, ಅಧಿಕಾರಿಗೆ ಕೇಳಿಸದಷ್ಟು ಬಲಹೀನವಾಗಿರುತ್ತದೆ. ಅವನ ಬೇಡಿಕೆಗೆ ಯಾವುದೇ ಕಿಮ್ಮತ್ತಿಲ್ಲದಂತಾಗಿರುತ್ತದೆ. ಆದರೆ ಅದೇ ಕಾರ್ಮಿಕ ಸಂಘಟಿತನಾಗಿ ಒಕ್ಕೊರಲಿನಿಂದ ಬಂದಾಗ ಮೂಡುವ ಧ್ವನಿ ಘರ್ಜನೆಯಂತೆ ಮುಂದಿನವರ ಎದೆ ನಡುಗಿಸುತ್ತದೆ.
ಆದರೆ "ಗುಲಾಬಿ ಸೇನೆ" ಕೇವಲ ಒಂದು ನಿರ್ದಿಷ್ಟ ಗುಂಪಿನ ಹೋರಾಟವಲ್ಲ. ಇದೊಂದು ಹೆಣ್ಣು ಮಗಳ ಜೀವನದೊಂದಿಗಿನ ಹೋರಾಟದ ಜೀವಂತ ಕಥೆ. ಓದುವಾಗ ಗಲ್ಲವರಳಿಸಿ ನಗಿಸುವ, ಹಿಂದಿನದೇನೋ ನೆನಪಿಸುವ, ಮನಸ್ಸು ಭಾರವಾಗಿ ಕಣ್ಣು ತೇವ ಮಾಡುವ, ದಬ್ಬಾಳಿಕೆಗೆ ರಕ್ತ ಕುದಿಸುವ ತಾಕತ್ತು ಈ ಕೃತಿಯೊಳಗಿನ ಅಕ್ಷರಗಳಿಗಿದೆ. ಯಾವುದೇ ಕೃತಿ ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯ ಕೈಗನ್ನಡಿಯಾಗಿ ನಿಂತಾಗ ಸಹಜವಾಗಿ ಇಂತಹ ಕೃತಿಗಳ ಅನಿವಾರ್ಯತೆ ಸಾಹಿತ್ಯ ಲೋಕಕ್ಕೆ ಇದೆ ಎನಿಸದಿರದು.
ಬೆವರು ಸಂಸ್ಕೃತಿಗೆ ಬೆಲೆ ಸಿಗಲಿ ಎನ್ನುವ ಏಕೈಕ ಧ್ಯೇಯದೊಂದಿಗೆ ಲೇಖನಿ ಹಿಡಿದ ರವಿ ಅಂಬೋಜಿಯವರ ಈ ಕೃತಿ ಶ್ರಮಿಕ ವರ್ಗದ ವಾಸ್ತವ ಸತ್ಯದ ಚಿತ್ರಣದ ಜೊತೆಗೆ, ಸಾಮಾಜಿಕ ಭರವಸೆ ತುಂಬುವ ಕಾದಂಬರಿಯಾಗಿ ಮೂಡಿಬಂದಿದೆ.”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!