ಬರಹಗಾರ ಸಂತೋಷ್ ಅನಂತಪುರ ಇವರು ‘ತೃಷೆ’ ಎನ್ನುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಇದರಲ್ಲಿ ಆಧುನಿಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಟ್ಟುಪಾಡುಗಳಿಲ್ಲದ ರೀತಿಯಲ್ಲಿ ವಿಜೃಂಭಿಸುವ ಕಾಮ - ಮೋಹ ಸಂಬಂಧಗಳ ಸುತ್ತ ಹೆಣೆದಿರುವ ಹತ್ತು ಕಥೆಗಳು ಇವೆ. ವರ್ಷಗಳ ಬಳಿಕ ಭೇಟಿಯಾಗುವ ಕಾರ್ಪೊರೇಟ್ ಜಗತ್ತಿನ ಗಂಡು ಹೆಣ್ಣುಗಳ ಸುಪ್ತ ಮಿಲನವಾಂಛ( ಕಥೆ:ಅಂಚು), ಸಾಫ್ಟ್ವೇರ್ ಕ್ಷೇತ್ರದ ಬಿನ್ನ ಸಂಸ್ಕೃತಿಗಳ ಉದ್ಯೋಗಿಗಳ ನಡುವಿನ ಆಕರ್ಷಣೆ ಕಾಲಾಂತರದಲ್ಲಿ ಪಡೆಯುವ ರೂಪಾಂತರ(ಕಥೆ:ಕಾಲ), ವಲಸೆ ಕಾರ್ಮಿಕರ ಮಗಳು ಆರ್ಥಿಕ ಸಬಲರ ಕಾಮತೃಪೆಗೆ ಬಲಿಯಾದ ದುರಂತ (ಕಥೆ:ಗುಳೆ), ವಿವಾಹೇತರ ಸಂಬಂಧದಲ್ಲಿ ಹುಟ್ಟುವ ಮಗನ ಕೈಯಲ್ಲಿ ತನ್ನ ಮಾಜಿ ಪ್ರಿಯಕರನಿಗೆ ಉಡುಗೊರೆ ಕಳಿಸಿಕೊಟ್ಟು ಇಹಪ್ರಯಾಣ ಮುಗಿಸುವ ಮಾಗಿದ ಮನಸ್ಸಿನ ಕಾರ್ಮಿಕ ಮಹಿಳೆ (ಕಥೆ:ಮಫ್ಲರ್), ನೆರೆಮನೆಯವನ ಪತ್ನಿಯನ್ನು ಬುಟ್ಟಿಗೆ ಹಾಕಿಕೊಂಡುದು ಸಾಲದೆಂಬಂತೆ ಕಾಮಾಟಿಪುರದ ಹೆಣ್ಣಿನ ವ್ಯಾಮೋಹದ ಪರಾಕಾಷ್ಠೆಯಲ್ಲಿ ಹೆಣ್ಣನದ ಘನತೆಯನ್ನು ಮರೆತು ತಪರಾಕಿ ತಿನ್ನುವ ಮಧ್ಯವಯಸ್ಕ (ನೀಲಿ), ಗಂಡ ತನ್ನ ಮೇಲಿನ ಆಕರ್ಷಣೆ ಕಳೆದುಕೊಂಡಾಗ ಹತಾಶಳಾಗಿ ಅಭಿಮಾನಿಯೊಬ್ಬನ ತೆಕ್ಕೆ ಬಯಸುವ ಕಲಾವಿದೆ (ಸ್ನೇಹಾ) ಮುಂತಾದ ಪಾತ್ರಗಳನ್ನು ಕಥೆಗಾರರು ಈ ರಚನೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. 'ಕಾಮನೆಗೆ ಲಿಂಗ ತಾರತಮ್ಯವಿಲ್ಲ; ಪ್ರೇಮದ ಕಾನ್ಸೆಪ್ಟ್ ರೂಢಿಗತವಾದದ್ದು; ಪ್ರೀತಿ ಹಾಗಲ್ಲ; ಪ್ರೀತಿಸುವ ವ್ಯಕ್ತಿ ಬದಲಾದರೆ ಜಗತ್ತೇ ಬದಲಾಗಿಬಿಡುತ್ತದೆ; ಒಂದೇ ಪ್ರೀತಿಯ ಕಟ್ಟಿಗೆ ಜೋತು ಬೀಳದೆ ಹಲವು ಪ್ರೀತಿಗೆ ಸೋಲುವ ದೇಹವಾಗಬಾರದೇಕೆ' ಎಂಬ ಅನುಕಂಪಪೂರ್ಣ ಸಲಹೆಯೊಂದನ್ನು 'ಸ್ನೇಹಾ' ಕಥೆಯ ನಾಯಕಿಗೆ ಗೆಳತಿಯೊಬ್ಬಳು ನೀಡಿ ಸಂತೈಸುತ್ತಾಳೆ. ಸೌಲಭ್ಯಗಳ ಕೊರತೆಯಿಲ್ಲದ, ಔದ್ಯೋಗಿಕ ವಲಯದಲ್ಲಿ ಸಮರ್ಥರೆನಿಸಿಕೊಂಡ,ಸಾಮಾಜಿಕ ವಲಯದಲ್ಲಿ ಗಣ್ಯರೆನಿಸಿಕೊಂಡ ಸ್ತ್ರೀ-ಪುರುಷರ ಮನದಾಳದಲ್ಲಿ ಅಡಗಿರುವ ವಿಶೃಂಖಲತೆಯ ವಾಂಭೆಯ ವಿವಿಧ ವರ್ಣಚ್ಛಾಯೆಗಳನ್ನು ಕುರಿತು ಚಿಂತಿಸುವ ಅಗತ್ಯವಿಲ್ಲವೇ ಎಂಬ ಪ್ರಶ್ನೆಯನ್ನು ಈ ಕಥೆಗಳು ಓದುಗರ ಮುಂದೆ ಇರಿಸಿವೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!