ದ ಈಡಿಯಟ್

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ರಷ್ಯಾದ ಸಾಹಿತಿ ಫ್ಯೋದರ್ ದಾಸ್ತೋವ್ಸ್ಕಿ (Fyodor Dostoevsky) ಅವರ ಮೇರು ಕೃತಿ 'ದ ಈಡಿಯಟ್' (The Idiot). ಈಗ ಅತ್ಯುತ್ತಮ ಕನ್ನಡ ಅನುವಾದದಲ್ಲಿ ಲಭ್ಯವಿದೆ. ಹಿರಿಯ ಲೇಖಕ, ಅನುವಾದಕರಾದ ಕೆ. ಶ್ರೀನಾಥ್ ಅವರು ರಷ್ಯನ್ ಕ್ಲಾಸಿಕ್ ಸಾಹಿತ್ಯದ ಈ ಅದ್ಭುತ ಬೃಹತ್ ಕಾದಂಬರಿಯನ್ನು ಅತ್ಯಂತ ಸೊಗಸಾದ ಶೈಲಿಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಅಂಕಿತ ಪುಸ್ತಕ ಪ್ರಕಾಶನದಿಂದ ಹೊರಬಂದಿರುವ ಈ ಬೃಹತ್ ಕೃತಿಯು ಗಂಭೀರ ಓದುಗರು ತಪ್ಪಿಸಿಕೊಳ್ಳಬಾರದ ಸಾಹಿತ್ಯಿಕ ಮೈಲಿಗಲ್ಲು.

ಕಾದಂಬರಿಯ ಒಳನೋಟ ಮತ್ತು ಮುಖ್ಯಾಂಶಗಳು:

* ಒಳಿತಿನ ಮತ್ತು ಕೆಡುಕಿನ ನಿರಂತರ ಸಂಘರ್ಷ: ಈ ಕಾದಂಬರಿಯು ಕೇವಲ ಬಾಹ್ಯ ಸಂಘರ್ಷಗಳನ್ನಷ್ಟೇ ಅಲ್ಲದೆ, ಮನುಷ್ಯನ ಅಂತರಂಗದ ಒಳ-ಹೋರಾಟಗಳನ್ನು ಆಳವಾಗಿ ಶೋಧಿಸುತ್ತದೆ.

* ಪ್ರಿನ್ಸ್ ಮೂಯಿಷಿನ್ನ ಪಾತ್ರ: ಸಮಾಜದ ಕುಹಕತನದ ನಡುವೆಯೂ ಎಲ್ಲಾ ಮನುಷ್ಯರಲ್ಲಿನ ಮೂಲಭೂತ ಒಳಿತನ್ನು ಪ್ರಶ್ನಾತೀತವಾಗಿ ನಂಬುವ ನಾಯಕ ಮೂಯಿಷಿನ್ನ ಮುಗ್ಧತೆ ಮತ್ತು ಮೌಲ್ಯಗಳು ಸೆಂಟ್ ಪೀಟರ್ಸಬರ್ಗ್ನ ಸ್ಥಾಪಿತ ನಿಯಮಗಳೊಂದಿಗೆ ಹೇಗೆ ಸಂಘರ್ಷಕ್ಕಿಳಿಯುತ್ತವೆ ಎಂಬ ಕಥೆ ಇಲ್ಲಿದೆ.

* ಕಾಲಾತೀತ ಕೃತಿ: ವ್ಯಕ್ತಿ ಮತ್ತು ಸಮಾಜದ ನಡುವಿನ ಉದ್ವಿಗ್ನತೆಗಳನ್ನು ಅತ್ಯಂತ ಸಂಕೀರ್ಣವಾಗಿ ಚಿತ್ರಿಸಿರುವುದರಿಂದಲೇ ಇದು ಜಾಗತಿಕ ಸಾಹಿತ್ಯದ ಅತ್ಯುನ್ನತ ಕೃತಿಯಾಗಿ ಇಂದಿಗೂ ಪ್ರಸ್ತುತವಾಗಿದೆ.

* ಲೇಖಕರ ಹಿನ್ನೆಲೆ: ಯೌವ್ವನದಲ್ಲೇ ಸೈಬೀರಿಯಾಗೆ ಗಡಿಪಾರಾಗಿದ್ದ ದಾಸ್ತೋವ್ಸ್ಕಿ ಅವರ ಅಲ್ಲಿನ ಕಠಿಣ ಅನುಭವಗಳು, ಅವರ ಬರವಣಿಗೆಯಲ್ಲಿನ ದಟ್ಟ ಮಾನವತಾವಾದಕ್ಕೆ ಹೇಗೆ ಪ್ರೇರಣೆಯಾದವು ಎಂಬುದನ್ನು ಈ ಕೃತಿಯ ಪ್ರತಿ ಪುಟದಲ್ಲೂ ಕಾಣಬಹುದು.

ಅನುವಾದಕರಾದ ಕೆ.ಶ್ರೀನಾಥ್ ಅವರು ಈ ಕಾದಂಬರಿಯ ಬಗ್ಗೆ ಹೇಳುವುದು ಹೀಗೆ…ಮಾಸ್ಕೊನಲ್ಲಿ 1821 ರಲ್ಲಿ ಹುಟ್ಟಿದ, ರಷ್ಯಾದ ಸಣ್ಣ ಕಥೆಗಾರ, ಕಾದಂಬರಿಕಾರ, ಪತ್ರಿಕೋದ್ಯಮಿ ಮತ್ತು ತತ್ವಜ್ಞಾನಿಯಾಗಿದ್ದ ಫ್ಯೋದರ್ ದಾಸ್ತೋವ್ಸ್ಕಿ (೧೧ನೇ ನವಂಬರ್ ೧೮೨೧ - ೯ ಫಬ್ರವರಿ ೧೮೮೧) ಕೃತಿಗಳು ಕೂಲಂಕುಷವಾಗಿ ಅನ್ವೇಷಿಸಿದ್ದು ಕ್ಷೋಭೆಗೆ ಈಡಾಗಿದ್ದ, ರಾಜಕೀಯ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾದಂತಹ ೧೯ನೇ ಶತಮಾನದಲ್ಲಿನ ಮನಶಾಸ್ತ್ರೀಯ ತುಮುಲಗಳಿಂದ ಕೂಡಿದ ಸನ್ನಿವೇಶಗಳನ್ನು. ಅದಲ್ಲದೇ ಅವನು ಬೇರೆ ಬೇರೆಯ ರೀತಿಯ ತಾತ್ವಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಅಧ್ಯಯನದಲ್ಲಿ ಕಾರ್ಯನಿರತನಾಗಿದ್ದ.

ಅವನ ಅತ್ಯಂತ ಪ್ರಖ್ಯಾತಿಗಳಿಸಿದ್ದ ಕೃತಿಗಳೆಂದರೆ ʻಪೂರ್ ಪೋಕ್ಸ್ʼ, (೧೮೪೬ ರಲ್ಲಿ ಪ್ರಕಟಗೊಂಡಿದ್ದು, ಆಗ ಅವನಿಗೆ ಬರೀ ೨೫ ವರ್ಷ ವಯಸ್ಸಾಗಿತ್ತು), ಕಿರು ಕಾದಂಬರಿ ʻನೋಟ್ಸ್ ಫ್ರಮ್ ದಿ ಅಂಡರ್ ಗೌಂಡ್ʼ, ʻಕ್ರೈಮ್ ಅಂಡ್ ಪನಿಷ್ಮೆಂಟ್, ʻದ ಈಡಿಯಟ್ʼ, ʻದ ಬ್ರದರ್ಸ್ ಕರಮಜೊವ್ʼ. ಅವನ ಸಂಪೂರ್ಣವಾದ ಸಮಗ್ರ ಕೃತಿಗಳೆಂದರೆ ಹನ್ನೊಂದು ಕಾದಂಬರಿಗಳು, ಮೂರು ಕಿರುಕಾದಂಬರಿಗಳು, ಹದಿನೇಳು ಸಣ್ಣ ಕಥೆಗಳು ಮತ್ತು ಅನೇಕ ಬೇರೆ ಬೇರೆ ವಿಷಯಗಳ ಬಗ್ಗೆ ವಿಸೃತವಾದ ಬರಹಗಳಾಗಿದ್ದವು.

ಅನೇಕ ಸಾಹಿತ್ಯ ವಿಮರ್ಶಕರುಗಳು ಸಾಹಿತ್ಯ ಕ್ಷೇತ್ರದಲ್ಲಿನ ಅತ್ಯುನ್ನತವಾದ ಮನಶ್ಶಾಸ್ತ್ರಜ್ಞರಲ್ಲಿ ಫ್ಯೋದರ್ ದಾಸ್ತೋವ್ಸ್ಕಿ  ಒಬ್ಬ ಎಂದು ಬಣ್ಣಿಸುತ್ತಾರೆ. ಅವನ ಅಂತ್ಯದವರೆಗೂ ಅವನೊಬ್ಬ ಅತ್ಯಧಿಕ ಓದುಗಾರರನ್ನು ಪಡೆದಿದ್ದ ಲೇಖಕನಾಗಿದ್ದ. ಇದಕ್ಕೆ ಸಾಕ್ಷಿ ಎಂದರೆ ಅವನ ಕೃತಿಗಳು ಪ್ರಪಂಚದಾದ್ಯಂತ ನೂರಎಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡಿವೆ.

ಎಲ್ಲದಕ್ಕಿಂತಲೂ ಹೆಚ್ಚಾಗಿ ದಾಸ್ತೊವಿಸ್ಕಿಯು ಬಹುಸಂಖ್ಯೆಯ ಸಾಹಿತಿಗಳ ಮತ್ತು ತತ್ವಜ್ಞಾನಿಗಳ ಮೇಲೆ ತನ್ನ ಪ್ರಭಾವವನ್ನು ಬೀರಿದ್ದ. ಆಂಟೋನ್ ಚೆಕಾವ್ ನಿಂದ ಹಿಡಿದು ಹೆಮಿಂಗ್ವೇನವರೆಗೂ, ಫ್ರೆಡ್ರಿಕ್ ನೀಷೆ ಮತ್ತು ಸಾರ್ತ್ರರ್ ಕೂಡ ಅವನ ಪ್ರಭಾವಕ್ಕೆ ಒಳಗಾಗಿದ್ದರು.

ಮೂಲಭೂತವಾಗಿ ಫ್ಯೋದರ್ ದಾಸ್ತೋವ್ಸ್ಕಿಯನ್ನು ರಷ್ಯದ ಅತ್ಯಂತ ಸೂಕ್ಷ್ಮ ಭಾವುಕ ಮತ್ತು ಸಂಪೂರ್ಣತೆಯಿಂದ ಕೂಡಿದ ತಲ್ಲಣವನ್ನು ಹುಟ್ಟಿಸುವಂತಹ ಕವಿ ಎಂದು ಕರೆಯಲಾಗುತ್ತಿತ್ತು. ಅವನೊಬ್ಬ ಅನಾಥನಾಗಿ ಜನ್ಮ ತಾಳಿದ ಮತ್ತು ಅದಲ್ಲದೇ ಸಂಬಧಿಕರುಗಳು ತಮ್ಮ ನಡುವೆ ಅವನನ್ನು ಒಬ್ಬರಿಂದ ಇನ್ನೊಬ್ಬರ ಬಳಿಗೆ ಪಲ್ಲಟಗೊಳಿಸುತ್ತಿದ್ದರು. ಇವೆಲ್ಲದರಿಂದ ಅವನು ಪಲಾಯನವಾಗುತ್ತಿದ್ದುದು ಪುಸ್ತಕಗಳ ಮೊರೆ ಹೋಗಿ, ಮತ್ತು ಸದಾಕಾಲ ಕೊಲೆಯ ಬಗ್ಗೆ ಮತ್ತು ಮಾನಸಿಕ ಅಸ್ವಸ್ಥತೆಯ ಬಗ್ಗೆ ಗುನುಗುಟ್ಟುತ್ತಲೇ ಇರುತ್ತಿದ್ದ, ಮತ್ತು ಆ ಆಲೋಚನೆಗಳು ಒಂದು ಮೇರು ಸಾಹಿತಿಕ ಕೃತಿಯಾಗಿ ಪರಿವರ್ತನೆಗೊಂಡಿತು.

ಶಾಲೆಯಲ್ಲೇನೂ ಅವನು ಹೇಳಿಕೊಳ್ಳುವಂತಹ ಪ್ರತಿಭಾವಂತನಾಗಿರಲಿಲ್ಲ. ಅವನು ಸದಾಕಾಲ ಹಿಂಸೆಗೊಳಗಾದ ಆತ್ಮಗಳ ಕಡೆಗೆ ತನ್ನ ಆಲೋಚನೆಗಳ ಲಹರಿಯನ್ನು ಕನಸಿನೋಪಾದಿಯಲ್ಲಿ ಹರಿಸುತ್ತಿದ್ದ. ಅವನಿಗೆ ನಂತರ ಜೂಜಿನ ಚಟ ಅಂಟಿಕೊಂಡಿತು ಮತ್ತು ತದನಂತರ ದಟ್ಟ ದಾರಿದ್ಯದ ಸ್ಥಿತಿಯನ್ನು ತಲುಪಿದ.

ಇದೇ ಸಂದರ್ಭದಲ್ಲಿ ಅವನು ತನ್ನ ಈಡಿಯಟ್ ಪುಸ್ತಕವನ್ನು ಬರೆದಿದ್ದು. ಮತ್ತು ಹೇಗೋ ಒಂದು ಅವಕಾಶ ಸಿಕ್ಕಿದಾಗ ಯೂರೋಪ್ ನ ಪ್ರವಾಸವನ್ನು ಕೈಗೊಳ್ಳುತ್ತಾನೆ. ಅವನು ಆ ಸಮಯದಲ್ಲಿ ತನ್ನ ಬಲ ಮಗನಾದ ಇಸ್ಸಾಯೆವ್ ಗೆ ಜಿನೀವಾದಿಂದ ಪತ್ರವೊಂದನ್ನು ಬರೆಯುತ್ತಾನೆ. "ದಯವಿಟ್ಟು ನನ್ನ ಬಗ್ಗೆ ಕೋಪಿಸಿಕೊಳ್ಳ ಬೇಡ, ನಾನು ನನ್ನ ಮಗಳಿಗೆ ನೂರು ರೂಬಲ್ ಕಳುಹಿಸಿದೆ ಮತ್ತು ನಿನಗೆ ಮಾತ್ರ ಬರೀ ಐವತ್ತು ರೂಬಲ್ ಕಳುಹಿಸಿದೆ ಎಂದು. ನಾನು ನನ್ನ ಸಂಪೂರ್ಣವಾದ ಭರವಸೆಯನ್ನು ನನ್ನ ಹೊಸ ಕಾದಂಬರಿಯ ಮೇಲೆ ಇಟ್ಟಿದ್ದೇನೆ. ಅದೇನಾದರೂ ಯಶಸ್ಸನ್ನು ಕಂಡರೆ ನಾನು ಅದರ ಹಕ್ಕನ್ನು ಮಾರಿದ ನಂತರ ನನ್ನ ಸಾಲಗಳನ್ನೆಲ್ಲಾ ತೀರಿಸಿ ರಷ್ಯಗೆ ಹಿಂದಿರುಗುತ್ತೇನೆ. ಆ ಕಾದಂಬರಿಯು ವಿಫಲವಾಗುವುದಿಲ್ಲ ಎಂದು ನಂಬಿದ್ದೇನೆ. ಆ ಕಾದಂಬರಿಯ ಹೆಸರು "ದ ಈಡಿಯಟ್" ಅಂತ. ಅದು ಏನಾದರೂ ಯಶಸ್ಸನ್ನು ಕಂಡರೆ ಅದಕ್ಕಿಂತ ಶ್ರೇಷ್ಟವಾದದ್ದು ಇನ್ನೊಂದಿಲ್ಲ."

ದ ಈಡಿಯಟ್ ಎನ್ನುವ ಕಾದಂಬರಿಯು ಮುಗ್ಧತೆ ಮತ್ತು ನೈತಿಕತೆಯ ಹಾದಿಯಲ್ಲಿನ ಒಂದು ಪಯಣ. ದ ಈಡಿಯಟ್ ನಲ್ಲಿ ಮಂತ್ರಮುಗ್ಧಗೊಳಿಸುವಂತಹ ಒಳ್ಳೆಯದು ಮತ್ತು ಕೆಟ್ಟದರ, ಮುಗ್ಧತೆ ಮತ್ತು ಅನುಭವದ ಬಗ್ಗೆ ಪರಿಶೋಧನೆಯನ್ನು ಮಾಡಲಾಗಿದೆ. ಈ ಕಥೆಯನ್ನು ೧೯ ನೇ ಶತಮಾನದ ಸೆಂಟ್ ಪೀಟರ್ಸ್ಬರ್ಗ್ ನ ಹಿನ್ನೆಲೆಯಲ್ಲಿ ಹೆಣೆಯಲಾಗಿದೆ. ಈ ಕಾದಂಬರಿಯ ಪ್ರಮುಖ ನಾಯಕ ಪ್ರಿನ್ಸ್ ಲೆವ್ ಮೂಯಿಷ್ಕಿನ್, ಒಬ್ಬ ಕರುಣಾಮಯಿ ಅಪಸ್ಮಾರೆಯಿಂದ ಬಳಲುತ್ತಿದ್ದವನು ಸ್ವಿಟ್ಜರ್ಲೆಂಡಿನ ಸ್ಯಾನೊಟೋರಿಯಮ್ ನಿಂದ ರಷ್ಯಾಗೆ ವಾಪಸ್ಸಾದ ವ್ಯಕ್ತಿ.

ಆಗಾಗ್ಗೆ ಮೂಯಿಷ್ಕಿನ್ ನನ್ನೇ "ದ ಈಡಿಯಟ್" ಎಂದು ಕಾದಂಬರಿಯಲ್ಲಿ ಕರೆಯಲ್ಪಡುವುದು. ಅದಕ್ಕೆ ಕಾರಣ ಎಂದರೆ ಅವನ ನಿಷ್ಕಪಟತನ, ಸಂಪ್ರದಾಯಬದ್ಧವಲ್ಲದ ವರ್ತನೆ ಮತ್ತು ಚರ್ಯೆ. ಮತ್ತು ಪದೇ ಪದೆ ಅವನ ಸುತ್ತ ಮುತ್ತಲೂ ಇರುವವರ ಜೀವನವನ್ನು ಪ್ರಕ್ಷುಬ್ಧತೆಗೆ ತಳ್ಳುತ್ತಿರುತ್ತಾ ಇರುವುದು. ಅವನ ಅಚಲವಾದ ಸಹಾನುಭೂತಿಯನ್ನು ತೋರಿಸುವ ಸ್ವಭಾವ ಮತ್ತು ಜನಗಳ ಮೂಲಭೂತವಾದ ಒಳ್ಳೆಯತನದ ಬಗ್ಗೆಗಿನ ನಂಬಿಕೆಯು ಆಗ ಚಾಲ್ತಿಯಲ್ಲಿದ್ದ ಸೆಂಟ್ ಪೀಟರ್ಸ್ ಬರ್ಗಿನ ಸಮಾಜದ ಸಿನಿಕತನ ಮತ್ತು ಭ್ರಷ್ಟತೆಗೆ ಸವಾಲನ್ನು ಒಡ್ಡುತ್ತದೆ.

ಮೂಯಿಷ್ಕಿನ್ ಇಬ್ಬರು ಹೆಂಗಸರ ಜೀವನದ ಜೊತೆಯಲ್ಲಿ ಸಿಕ್ಕಿ ಹಾಕಿಕೊಂಡು ಬಿಡುತ್ತಾನೆ. ಅವನ ಇರುವು ಅಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ಎದುರಿಸುತ್ತದೆ ಮತ್ತು ಬೇರೆಯವರಲ್ಲಿ ಅವರದೇ ಆದ ನ್ಯೂನತೆಗಳಿಗೆ ಮತ್ತು ದುರಾಸೆಗಳಿಗೆ ಕನ್ನಡಿ ಹಿಡಿದು ತೋರಿಸುತ್ತದೆ.

ಈ ಕಾದಂಬರಿಯು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ನಿರಂತರ ಹೋರಾಟದ ಬಗ್ಗೆ ಆಳವಾಗಿ ಪರಿಶೋಧಿಸುತ್ತದೆ. ಆ ಹೋರಾಟವು ಭಾಹ್ಯದ ಹೋರಾಟವಷ್ಟೇ ಆಗಿರದೇ ಪಾತ್ರಗಳ ಆಂತರಿಕ ಹೋರಾಟಗಳ ಬಗ್ಗೆಯೂ ಕೂಡ ವಿಷದವಾಗಿ ಪರಿಶೀಲಿಸುತ್ತದೆ. ಮೂಯಿಷ್ಕಿನ್ ನ ಬೇರೆಯವರಲ್ಲಿನ ಒಳ್ಳೆಯದರ ಬಗ್ಗೆಗಿನ ಪ್ರಶ್ನಾತೀತವಾದ ನಂಬಿಕೆಯು ನಿರಂತರವಾಗಿ ಬೇರೆಯವರ ನಡೆಗಳಿಂದ ಒರೆಗಲ್ಲಿನ ಪರೀಕ್ಷೆಗೆ ಗುರಿಯಾಗುತ್ತಿರುತ್ತದೆ.

ದ ಈಡಿಯಟ್ ಒಂದು ಮಾನವನ ಸ್ವಭಾವದೊಳಗಡೆಗೆ ಆಳವಾಗಿ ಪಯಣಿಸುವಂತಹ ಕೃತಿ, ಸಹಾನುಭೂತಿಗೆ ಇರುವಂತಹ ಶಕ್ತಿಯ ಪ್ರತೀಕ, ಮತ್ತು ಸಾಮಾಜಿಕ ಭ್ರಷ್ಟಾಚಾರದ ಬಗ್ಗೆ ಬಾರಿಸುವ ಎಚ್ಚರಿಕೆಯ ಗಂಟೆ. ಕೊನೆಯ ಪುಟವನ್ನು ಓದಿದ ನಂತರ ನಿಮ್ಮನ್ನು ಬಹಳ ಕಾಲ ಯೊಚನಾಮಗ್ನರನ್ನಾಗಿ ಮಾಡುವ ಒಂದು ಕಾದಂಬರಿ.

ಇದೇ ಕಾರಣಕ್ಕೆ ಈ ಕಾದಂಬರಿಯನ್ನು ಓದಿ ಮುಗಿಸಿದ ನಂತರ ನನ್ನ ಮಾತೃಭಾಷೆಗೆ ಅನುವಾದಿಸಲು ನಾನು ನಿರ್ಧರಿಸಿದ್ದು.”