ವೃತ್ತಿಯಲ್ಲಿ ಶಿಕ್ಷಕಿ ಹಾಗೂ ಆಪ್ತ ಸಮಾಲೋಚಕಿಯಾಗಿರುವ ರಮ್ಯ ಎಸ್ ಇವರು ಬರೆದ ‘ಪರಿಕ್ರಮ’ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ಮುಖ್ಯ ಪ್ರಬಂಧಕರಾದ ವೀಣಾ ನಾಯಕ್. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅನಿಸಿಕೆಗಳು…
“ಪರಿಕ್ರಮ ಈ ಕಾದಂಬರಿಯ ಲೇಖಕಿ, ಶ್ರೀಮತಿ ರಮ್ಯ ಎಸ್ ಅವರು ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಉದಯೋನ್ಮುಖ ಪ್ರತಿಭೆ. ಇವರು ಇದುವರೆಗೆ ಮೂರು ವಿಭಿನ್ನ ಕಾದಂಬರಿಗಳನ್ನು ಮತ್ತು ಒಂದು ಕಥಾ ಸಂಕಲನವನ್ನು ಬರೆದು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇವರ ಕಾದಂಬರಿ 'ವರ್ಣತಂತು' ಹೆಚ್ಚಿನ ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದು, ೨೦೨೫ರ, ಪ್ರತಿಷ್ಠಿತ "ಚಡಗ ಕಾದಂಬರಿ ಪ್ರಶಸ್ತಿ" ಯನ್ನು ಪಡೆದಿದೆ.
ಪ್ರಸ್ತುತ ಕಾದಂಬರಿ, 'ಪರಿಕ್ರಮ' ಇವರ ಐದನೆಯ ಸಾಹಿತ್ಯ ಕೃತಿ. ಇದು ಒಂದು ಸಾಮಾಜಿಕ ಕಾದಂಬರಿ. ಈ ಕಾದಂಬರಿಯಲ್ಲಿ ಒಂದು ಮೌಲ್ಯಯುತ ಕೌಟುಂಬಿಕ ಜೀವನದ ಪೂರ್ಣ ರೂಪವಿದೆ. ಎಳೆಯ ವಯಸ್ಸಿನ ಪ್ರೇಮಿಯ ನಿಷ್ಠೆಯು ಅಚಲವಾಗಿ ಮುಂದುವರೆಯುತ್ತ, ಮಧುರ ದಾಂಪತ್ಯದಲ್ಲಿ ಪರಿಪಕ್ವವಾಗುವ ಸುಂದರ ಕಥಾಹಂದರವಿದೆ. ಇಷ್ಟೇ ಅಲ್ಲ, ದಾಂಪತ್ಯ ಜೀವನದ ಸಾಮಾಜಿಕ ಚೌಕಟ್ಟನ್ನು ದಾಟಿ ಹೋದ ಪ್ರಣಯವಿದೆ, ಪ್ರೌಢ/ವೃದ್ಧ ದಂಪತಿಗಳ ಸರಸ, ವಿರಸ ಎಲ್ಲವೂ ಇದೆ. ಆದರೆ ಕಾದಂಬರಿಯ ನಿರೂಪಣೆಯಲ್ಲಿ ಎಲ್ಲೂ ಅತಿರೇಕವಿಲ್ಲ.
ದಂಪತಿಗಳಾದ ಅಭಿರಾಮ ವಸಿಷ್ಠ ಮತ್ತು ಅರುಂಧತಿ ವಸಿಷ್ಠ 'ಪರಿಕ್ರಮ'ದ ಮುಖ್ಯ ಪಾತ್ರಗಳು. ಇವರು ೩೦ ವರ್ಷಗಳ ಸುದೀರ್ಘ, ಸಾರ್ಥಕ ದಾಂಪತ್ಯ ಜೀವನವನ್ನು ಪೂರೈಸಿದವರು. ಸುಖವಾಗಿ ತನ್ನ ಬದುಕಿನ 60 ವರ್ಷಗಳನ್ನು ದಾಟುತ್ತಿರುವ ಹಂತದಲ್ಲಿ, ಪ್ರೀತಿಯ ಪತ್ನಿ, ಅಕ್ಕರೆಯ ಮಗ, ಮಗಳು ಹಾಗೂ ಮೊಮ್ಮಗಳ ಜೊತೆಗೆ ಸಂಭ್ರಮ ಪಡಬೇಕೆಂದು ಅಭಿರಾಮ ಆತುರಪಡುತ್ತಿರುವಾಗ ಕಥೆಯಲ್ಲಿ ಒಂದು ಅನಿರೀಕ್ಷಿತ ತಿರುವು ಬರುತ್ತದೆ. ಪತ್ನಿ ಅರುಂಧತಿಯ ಸೂಕ್ಷ್ಮ ಮನಸ್ಸು ತನ್ನ ಪತಿಯನ್ನು ಶಂಕಿಸಿ ತವರು ಮನೆಗೆ ಹೋಗುವಂತೆ ಪ್ರೇರೇಪಿಸುತ್ತದೆ. ಅದೇನು? ಎಂಬ ಕುತೂಹಲವೆ ಮುಂದಿನ ಕಥೆಯನ್ನು ಆಸಕ್ತಿಯಿಂದ ಓದುವಂತೆ ಮಾಡುತ್ತದೆ.
ದಾಂಪತ್ಯವೆಂದರೆ ಒಂದು ಅಪೂರ್ವ ಸಂಬಂಧ. ಪರಸ್ಪರ ನಂಬಿಕೆ, ಗೌರವ ಇದರ ಬುನಾದಿ. ಆರಂಭದಲ್ಲಿ ವಯಸ್ಸಿಗೆ ಸಹಜವಾದ ದೈಹಿಕ ಆಕರ್ಷಣೆ ಪ್ರಧಾನವಾಗಿದ್ದರೂ ಮುಂದಿನ ದಾರಿ ಸಾಗುತ್ತ ಜೀವನದ ಹಲವು ಮಗ್ಗುಲುಗಳನ್ನು ದಾಟುತ್ತ ಹೋದಂತೆ, ಮಾನಸಿಕ ಸಾಹಚರ್ಯ ಬೆಳೆಯುತ್ತದೆ. ಈ ಹಂತದಲ್ಲಿ ದಂಪತಿಗಳ ಮಧ್ಯೆ ಅನ್ಯೋನ್ಯತೆ ಬೆಳೆದು ತಾವಿಬ್ಬರೂ ಒಂದೇ ಎಂಬ ತಾದಾತ್ಮ್ಯ ಹುಟ್ಟುತ್ತದೆ; ಸತಿಪತಿ ಇಬ್ಬರಿಗೂ ಸಹಬಾಳ್ವೆಯ ಅರ್ಥ ತಿಳಿಯುತ್ತದೆ. ಈ ಸಂದರ್ಭದಲ್ಲಿ ನೆನಪಾದ ಕಗ್ಗವಿದು:-
ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ ಮೊದಲು।
ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ।।
ಬಾಳನೀ ಜಗದ ಮಂತುವು ಕಡೆಯಲೇಳುವುದು।
ಆಳದಿಂದಾತ್ಮಮತಿ -- ಮಂಕುತಿಮ್ಮ ।।
ನಂಬಿಕೆ ಇದ್ದಲ್ಲಿ ಸಂಶಯ ಬರುವುದಿಲ್ಲ. ಆದರೆ ಯಾವುದೋ ಒಂದು ಸನ್ನಿವೇಶದಲ್ಲಿ ಪತ್ನಿಗೆ, ಪತಿ ವಂಚನೆ ಮಾಡಿದರೇನೋ ಎಂದು ಅನಿಸಿದರೆ ಆ ನೋವನ್ನು ಸಹಿಸುವುದು ಬಹಳ ಕಷ್ಟ. ಆಗ ಪ್ರೀತಿಯ ಜಾಗದಲ್ಲಿ ರೋಷ, ದುಃಖ ಎರಡರ ಮೇಲುಗೈ ಆಗುವುದು ಸಹಜ. ಇದು ಅವರಲ್ಲಿ ಪರಸ್ಪರ ಬೆಳೆದು ಬಂದಿರುವ ಒಲವಿನ ತೀವ್ರತೆಯ ಅನುಪಾತದಲ್ಲಿಯೇ ಹೊರಹೊಮ್ಮುತ್ತದೆ. ಇದರ ಪರಿಣಾಮವೆ ದುಡುಕಿನ ನಿರ್ಧಾರ. ಅರುಂಧತಿಯ ಈ ಸ್ವಭಾವಕ್ಕೆ ಕಾರಣವೇನು ಎಂಬ ಎಳೆಯನ್ನು ಹಿಡಿದು, ಲೇಖಕಿಯವರು, ಅವಳ ಬಾಲ್ಯದ ವಿವರಗಳನ್ನು ನೀಡುತ್ತ ಕಥೆಯನ್ನು ಹಿಗ್ಗಿಸುತ್ತ, ಸಾಮಾನ್ಯವಾಗಿ ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಸೂಕ್ಷ್ಮತೆಯ ಬಗ್ಗೆಯೂ ತಿಳಿಸುತ್ತಾರೆ. ಮುಂದೆ ಅರುಂಧತಿಯು ಉತ್ತಮ ಗೃಹಿಣಿಯಾಗಿ, ತನ್ನ ಪತಿ ಮತ್ತು ಮಕ್ಕಳಿಗೆ ಮಾತ್ರವಲ್ಲ, ಕುಟುಂಬದ ಇತರ ಸದಸ್ಯರಿಗೂ ವಾತ್ಸಲ್ಯಮಯಿಯಾಗಿ ಬೆಳೆದು ಸಾರ್ಥಕ್ಯ ಪಡೆಯುತ್ತಾಳೆ.
ಇದು ಈ ಕಾದಂಬರಿಯ ಕಥಾವಸ್ತು. ಮೇಲ್ನೋಟಕ್ಕೆ ಬಹಳ ಸರಳ ವಿಷಯದಂತೆ ಕಾಣುವ ಈ ಕಥೆಯಲ್ಲಿ ಜೀವನದ ಮುಖ್ಯ ಭಾವನೆಗಳ ಮೆರವಣಿಗೆ ಇದೆ. ಕೆಲವು ಕಡೆ ಪ್ರಧಾನ ಕಥಾಪಾತ್ರಗಳಲ್ಲಿ ಭಾವುಕತೆಯ ಅಂಶ ಸ್ವಲ್ಪ ಹೆಚ್ಚಾಯಿತೇನೋ ಎಂದು ಅನಿಸುವ ಸಾಧ್ಯತೆ ಇದೆ. ಆದರೆ ಕಾದಂಬರಿಯು ಮುಂದೆ ಸಾಗಿದಂತೆ ಉದ್ಭವಿಸುವ ಸನ್ನಿವೇಶಗಳಿಗೆ ಇದು ಅಗತ್ಯವಾಗಿದೆ ಎಂದು ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ.
ನಿಜ ಜೀವನದಲ್ಲಿ ಮಾತ್ರವಲ್ಲ, ಮಾಧ್ಯಮಗಳಲ್ಲಿ ಕೂಡ ಪ್ರತಿನಿತ್ಯ ಹದಗೆಟ್ಟ ಸಂಬಂಧಗಳು, ಮೋಸ, ಕಪಟ, ಕ್ರೌರ್ಯವನ್ನೇ ಕಾಣುವ ಈ ದಿನಗಳಲ್ಲಿ ಈ ಕಾದಂಬರಿಯು ಶುದ್ಧ, ಆರೋಗ್ಯಕರ ಓದಿಗೆ ಸಹಾಯಕವಾಗುವುದು ಖಚಿತ. ಶ್ರೀಮತಿ ರಮ್ಯ ಅವರ ಬರೆವಣಿಗೆ ಯಶಸ್ವಿಯಾಗಿ ಮುಂದುವರೆಯಲಿ.” ೧೯೬ ಪುಟಗಳ ಈ ಕಾದಂಬರಿಯು ನಮ್ಮ ಸಮಾಜದಲ್ಲಿ ಬೇರೂರಿರುವ ಹಲವು ಕೆಟ್ಟ ಆಚರಣೆಗಳನ್ನು ಹೊರತರುವಲ್ಲಿ ಸಹಕಾರಿಯಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!