ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್

“ಕಾಲ ಸರಿದಂತೆಲ್ಲಾ ಆಧುನಿಕ ಭಾರತ ಅಭಿವೃದ್ಧಿ ಹೊಂದುತ್ತಾ ಸಾಗಿದಂತೆ ಇಲ್ಲಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ, ಸಂವಿಧಾನಾತ್ಮಕ ಚಟುವಟಿಕೆಗಳ ಬಗ್ಗೆ ವಿಮರ್ಶೆಗಳು, ವ್ಯಾಖ್ಯಾನಗಳು, ಆಯಾಮಗಳು, ದೃಷ್ಟಿಕೋನಗಳು ಮತ್ತೆ ಮತ್ತೆ ಹೊಸ ಅರ್ಥವನ್ನು ಪಡೆಯುತ್ತಾ ಸಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳನ್ನು ಒಳನೋಟದೊಂದಿಗೆ ಮತ್ತೆ ಪುನ‌ರ್ ವಿಮರ್ಶಿಸುವ, ಹೊಸ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನವೇ ಈ ಪುಸ್ತಕ. ಇಲ್ಲಿ ಮುಖ್ಯವಾಗಿ ಇತಿಹಾಸಕ್ಕಿಂತ ವರ್ತಮಾನದಲ್ಲಿ ಅವರ ಚಿಂತನೆಗಳು ಎಷ್ಟು ಪ್ರಸ್ತುತವಾಗಬೇಕು, ಅವರ ಚಿಂತನೆಗಳಿಗೆ ಯಾವ ಪ್ರಾಮುಖ್ಯತೆ ಸಿಗಬೇಕು, ದಿನನಿತ್ಯದ ಚಟುವಟಿಕೆಗಳಲ್ಲಿ ಹೇಗೆ ಅದನ್ನು ಅಳವಡಿಸಿಕೊಳ್ಳಬೇಕು ಎಂಬುದರ ಸುತ್ತಲೇ ಹೆಚ್ಚು ಗಮನ ಕೇಂದ್ರೀಕರಿಸಲಾಗಿದೆ.

ಬಾಬಾ ಸಾಹೇಬ್ ಅವರ ಸಾಮಾಜಿಕ ಹೋರಾಟಗಳು ಮತ್ತು ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಸಂವಿಧಾನ ನಮಗೆ ಹೇಗೆಲ್ಲಾ ಮಾರ್ಗದರ್ಶನ ಮಾಡುತ್ತಿದೆ, ೭೮ ವರ್ಷಗಳ ನಂತರವೂ ಹೇಗೆ ಒಂದು ಬೃಹತ್, ಬಲಿಷ್ಠ, ವೈವಿಧ್ಯಮಯ ದೇಶವನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಿಕೊಂಡು ಹೋಗುತ್ತಿದೆ, ಅದಕ್ಕೆ ಅವರ ಹೋರಾಟಗಳು ಮತ್ತು ಅದರಿಂದ ಮೂಡಿದ ಚಿಂತನೆಗಳು ಹೇಗೆ ಕಾರಣವಾಗಿವೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಅಂಬೇಡ್ಕ‌ರ್ ಅವರ ಸಾಮಾಜಿಕ ಹೋರಾಟಗಳಿಗೆ ನಿಜಕ್ಕೂ ಹೊಸ ದೃಷ್ಟಿಕೋನವನ್ನು ನೀಡಿ, ಸರಳವಾಗಿ ಅರ್ಥ ಮಾಡಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಮುಖ್ಯವಾಗಿ ಶೋಷಿತ ಸಮುದಾಯಗಳಿಗಿಂತ ಮೇಲ್ವರ್ಗದ ಸಮುದಾಯಗಳು ಹೇಗೆ ಬಾಬಾ ಸಾಹೇಬರವರಿಗೆ ಕೃತಜ್ಞರಾಗಿರಬೇಕು ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವು ಇಲ್ಲಿದೆ. ದಯವಿಟ್ಟು ಸೂಕ್ಷ್ಮವಾಗಿ ಗಮನಿಸಿ ಮತ್ತು ಇದನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ತಲುಪಿಸಲು ಪ್ರಯತ್ನಿಸಿ. ಈ ಪ್ರಯತ್ನ ಯಶಸ್ವಿಯಾಗಲಿ.” ಎಂಬ ಬೆನ್ನುಡಿಯ ಈ ಮಾತುಗಳು ಭಾರತದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳ ಒಳನೋಟಗಳನ್ನು ಬಿಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. 

ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಮನಸ್ಸುಗಳ ಅಂತರಂಗದ ಚಳುವಳಿಗಳ ಹೋರಾಟಗಾರ ವಿವೇಕಾನಂದ ಎಚ್ ಕೆ ಇವರು ಬರೆದ ಬಾಬಾ ಸಾಹೇಬ್ ಅಂಬೇಡ್ಕರ್ ಕೃತಿಗೆ ಅವರ ಮನದಾಳದ ನುಡಿಗಳು ಹೀಗಿವೆ…

“ಈ ಇಡೀ ಪುಸ್ತಕದ ಅಕ್ಷರಗಳು, ಪದಗಳು, ವಾಕ್ಯಗಳು ಕೇವಲ ಭಾಷೆ, ಭಾವ, ಮಾಹಿತಿಗಳ ಬರಹವಲ್ಲ. ಸಾಮಾನ್ಯ ಓದುಗರೆದೆಯೊಳಗೆ ಒಂದು ಕೃತಜ್ಞತಾ ಭಾವ ಮೂಡಿ ತನ್ನ ತಾನರಿಯುವ, ಆ ಮೂಲಕ ಸಾಮಾಜಿಕ ಪರಿವರ್ತನೆಗೆ, ಪ್ರಗತಿಪರತೆಗೆ, ತಾನು ನಿರ್ವಹಿಸಬಹುದಾದ ಪಾತ್ರದ ಪ್ರೇರಣೆಗೆ ದಾರಿ ದೀಪವಾಗುವ ಬರಹವಾಗಬೇಕು ಎಂಬ ಆಶಯದೊಂದಿಗೆ....

ಏಕೆಂದರೆ ಪುಸ್ತಕಗಳು, ಭಾಷಣಗಳು, ಉಪನ್ಯಾಸಗಳು ಕೇವಲ ತಿಳುವಳಿಕೆಗಾಗಿ ಮಾತ್ರ ಉಪಯೋಗವಾಗದೆ ಅದು ನಡವಳಿಕೆಯಾಗಿ ಪರಿವರ್ತನೆಯಾದಾಗ ಮಾತ್ರ ಅವು ಸಾರ್ಥಕತೆ ಪಡೆಯುತ್ತವೆ. ಅದರಲ್ಲೂ ಪ್ರಾಕೃತಿಕ ಸಂಪನ್ಮೂಲಗಳು, ಮಾನವೀಯ ಮೌಲ್ಯಗಳು, ಜೀವನ ವಿಧಾನಗಳು ತಲೆಮಾರುಗಳಿಗೆ ವರ್ಗಾವಣೆಯಾಗುವುದೇ ಆಧುನಿಕ ಕಾಲದ ಶಿಕ್ಷಣ ವ್ಯವಸ್ಥೆಯ ಮಹತ್ವದ ಭಾಗ. ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಾಗ, ಭಾರತೀಯರ ಜನ ಜೀವನದ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಿದ ಐತಿಹಾಸಿಕ ವ್ಯಕ್ತಿಯೊಬ್ಬರ ಸಮಾಜಮುಖಿ ಹೋರಾಟದ ಬಗ್ಗೆ ಬರೆಯುವಾಗ, ಲೇಖಕರ ತಳಮಳಕ್ಕೆ ಒಂದಷ್ಟು ಕಾರಣವಾಗುತ್ತದೆ. ಏಕೆಂದರೆ ಇದು ಕಾಲ್ಪನಿಕವೂ ಅಲ್ಲ, ಪುರಾಣವೂ ಅಲ್ಲ, ಅತಿಮಾನುಷ ಶಕ್ತಿಯೂ ಅಲ್ಲ. ಕ್ರಿಯಾತ್ಮಕವಾದ ಹೊಸ ಸೃಷ್ಟಿಯೂ ಅಲ್ಲ, ಇದೊಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಮಾನವ ಘನತೆಯ ಬದುಕಿಗಾಗಿ ಹೋರಾಡಿದ ಅತ್ಯದ್ಭುತ ಮಾನವೀಯ ವ್ಯಕ್ತಿಯೊಬ್ಬರ ಜೀವನ ಪಯಣ. ಸಾವಿರಾರು ಬರಹಗಾರರು, ಕೋಟ್ಯಂತರ ಓದುಗರು, ಸಾಮಾನ್ಯ ಜನರು ಪ್ರತಿನಿತ್ಯ ತಮ್ಮ ಜೀವನಶೈಲಿಯಲ್ಲಿ ಅನುಸರಿಸುತ್ತಿರುವ ಬಹುತೇಕ ನೀತಿನಿಯಮಗಳ ಸಂವಿಧಾನ ರಚನಾ ಶಿಲ್ಪಿಯ ಹೋರಾಟಗಳನ್ನು ವಿಮರ್ಶಾತ್ಮಕವಾಗಿ ದಾಖಲಿಸುವುದು, ಅಧ್ಯಯನ ಯೋಗ್ಯ ಮಾಡುವುದು, ಓದುಗರಿಗೆ ಮನವರಿಕೆ ಮಾಡಿಕೊಡುವುದು ಒಂದು ಸವಾಲು.

ಪ್ರಜ್ಞಾ ಪೂರ್ವಕವಾಗಿ ಸೃಷ್ಟಿಯ ಮೂಲದಿಂದ ನನ್ನೆಲ್ಲಾ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಮತ್ತು ಗ್ರಹಿಸಬೇಕು, ಅದರ ನಂತರ ಸೃಷ್ಟಿಯಾದ ಯಾವುದೇ ಜಾತಿ, ಧರ್ಮ, ಭಾಷೆ, ಪ್ರದೇಶ ಎಲ್ಲವನ್ನೂ ಮೀರಿ ವಿಶಾಲ ಮನೋಭಾವದಿಂದ ಈ ಜಗತ್ತನ್ನು ನೋಡಬೇಕು ಎಂದು ಸದಾ ಚಿಂತಿಸುವ ನನಗೆ, ಅದಕ್ಕಾಗಿ ತಮ್ಮ ಇಡೀ ಬದುಕನ್ನು ಸವೆಸಿದ ಬಾಬಾ ಸಾಹೇಬರ ಬಗ್ಗೆಯೇ ಬರೆಯಲು ಸಿಕ್ಕ ಅವಕಾಶ ಮತ್ತಷ್ಟು ಪ್ರೇರಣೆಯಾಯಿತು.

"ಅವಶ್ಯಕತೆ ಮತ್ತು ಅನಿವಾರ್ಯತೆಗಳೇ ಎಲ್ಲಾ ಸಂಶೋಧನೆಗಳ ಮೂಲತಾಯಿ" ಎಂಬ ಮಾತಿನಂತೆ ಇಂದು ಮನುಷ್ಯ ತನ್ನ ಅವಶ್ಯಕತೆ ಮತ್ತು ಅನಿವಾರ್ಯತೆಗಳನ್ನು ಮೀರಿ ತನ್ನ ಜೀವನದ ಸುಖಲೋಲುಪತೆಗಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಬಹುತೇಕ ಎಲ್ಲವನ್ನೂ ಪಡೆದಿದ್ದಾನೆ ಮತ್ತು ಇನ್ನೂ ಸಾಕಷ್ಟು ಪಡೆಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾನೆ. ಈ ನಡುವೆ ಅವನ ಪಡೆಯುವಿಕೆಯ ವೇಗ ಮತ್ತು ಸ್ಪರ್ಧೆ ವಸ್ತು ಸಂಸ್ಕೃತಿಗೆ ಸೀಮಿತವಾಗಿ, ಮಾನವೀಯ ಮೌಲ್ಯಗಳು, ನಾಗರಿಕ ಸಮಾಜದ ಗುಣಲಕ್ಷಣಗಳು ಮರೆಯಾಗುತ್ತಿವೆ. ಅದನ್ನು ಗಳಿಸಲು ಮತ್ತು ಉಳಿಸಲು ಹೋರಾಡಿದ ಮಹಾತ್ಮರ ಶ್ರಮವನ್ನು ಆತ ನಿರ್ಲಕ್ಷಿಸುತ್ತಿದ್ದಾನೆ. ಈಗ ಆಧುನಿಕ ಕಾಲದಲ್ಲಿ ನಾವಿರುವಂತಹ ಸಂದರ್ಭ, ಸನ್ನಿವೇಶದಲ್ಲಿ ಈ ನೆಲದಲ್ಲಿಯೇ ಹುಟ್ಟಿ ಬೆಳೆದ ಅಂಬೇಡ್ಕರ್ ಎಂಬ ಮಹಾನ್ ಮಾವನತಾವಾದಿಯ ವ್ಯಕ್ತಿತ್ವ ಮತ್ತು ಹೋರಾಟಗಳ ಮರುನೆನಪು ಮತ್ತು ಮರು ಚಿಂತನೆ ಇಂದಿನ ಅತ್ಯಗತ್ಯತೆಗಳಲ್ಲಿ ಒಂದು.

ಬಾರ್ ಸಂಸ್ಕೃತಿ, ಮಾಲ್ ಸಂಸ್ಕೃತಿ, ಡಾಬಾ ಸಂಸ್ಕೃತಿ, ಕೃತಕ ಬುದ್ಧಿಮತ್ತೆಯ ಸಂಸ್ಕೃತಿಗಳ ನಡುವೆ ಮರೆಯಾಗುತ್ತಿರುವ ಗ್ರಂಥಾಲಯ ಸಂಸ್ಕೃತಿ ಅರ್ಥಾತ್ ಓದುವ ಸಂಸ್ಕೃತಿಯನ್ನು ಪುನರುಜ್ಜಿವನಗೊಳಿಸುವ, ಅದರಲ್ಲೂ ಮೌಲ್ಯಯುತ ಮಾನವೀಯ ಸಂಬಂಧಗಳ, ಶೋಷಣಾ ಮುಕ್ತ ನಾಗರಿಕತೆಯ, ಸಮಸಮಾಜಕ್ಕಾಗಿ ನಡೆದ ಹೋರಾಟಗಳನ್ನು ಯುವ ಪೀಳಿಗೆಗೆ ಸತ್ವಯುತವಾಗಿ ಮತ್ತು ಸರಳವಾಗಿ ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಮಗಿದೆ.”

೨೪ ಸತ್ವಪೂರ್ಣ ಅಧ್ಯಾಯಗಳ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳ ಒಳನೋಟವನ್ನು ಬಿಚ್ಚಿಡುವ ಪ್ರಾಮಾಣಿಕ ಯತ್ನವನ್ನು ಮಾಡಿದ್ದಾರೆ. ಸುಮಾರು ೧೧೦ ಪುಟಗಳ ಈ ಕೃತಿಯನ್ನು ವಿವೇಕಾನಂದ ಅವರು ‘ಹೊಟ್ಟೆಪಾಡಿನ ಬಾಲಕಾರ್ಮಿಕರಿಗೆ’ ಅರ್ಪಣೆ ಮಾಡಿದ್ದಾರೆ.