ಭಾವ ಸುರಭಿ

ಒಲವಿನ ಕವಿತೆಗಳ ಸಂಕಲನ ‘ಭಾವ ಸುರಭಿ’ ಯನ್ನು ಹೊರತಂದಿದ್ದಾರೆ ಎಂ ವಿ ಷಡಕ್ಷರಿ. `ಭಾವ ಸುರಭಿ’ ಕವನ ಸಂಕಲನವು ದೇಶಪ್ರೇಮ, ಪ್ರಕೃತಿ ಹಾಗೂ ಮನುಷ್ಯ ಬದುಕಿನ ಪ್ರೀತಿಯ ಕುರಿತ ಒಲವಿನ ಕವಿತೆಗಳಿರುವ ಕೃತಿಯಾಗಿದೆ. ಇಲ್ಲಿರುವ ೬೦ ಕವಿತೆಗಳನ್ನು ಓದುತ್ತಾ ಹೋದಂತೆ ಭಾವ ನಮ್ಮೊಳಗೆ ಪ್ರವಹಿಸುತ್ತವೆ. ಈ ಕೃತಿಗೆ ಕವಿ, ಕಲಾವಿದರಾದ ಬಾಗೂರು ಮಾರ್ಕಂಡೇಯ ಅವರು ಬರೆದ ಮುನ್ನುಡಿ ಸಾಲುಗಳು ನಿಮ್ಮ ಓದಿಗಾಗಿ… 

“ಮಟಮಟ ಮಧ್ಯಾಹ್ನ ನನ್ನ ಜಂಗಮವಾಣಿ ರಿಂಗಣಿಸುತ್ತದೆ. ಆ ಕಡೆಯಿಂದ ನಮಸ್ಕಾರ ಸರ್. ಎನ್ನುವ ಗೌರವದ ಧ್ವನಿಯು ಕೇಳಿಸುತ್ತೆ. ಒಮ್ಮೆಗೆ ಸ್ತಬ್ದವಾದಂತೆ ನನ್ನೊಳಗೆ ಯಾರಪ್ಪ ಇದು ಎಂದುಕೊಳ್ಳುವಷ್ಟರಲ್ಲೆ, 'ಸರ್ ನಾನು ಷಡಕ್ಷರಿ ಎಂದು ತಮ್ಮ ಒಂದು ಕವಿತೆ ಕಳುಹಿಸಿಕೊಟ್ಟರೆ ಸ್ವರ ಸಂಯೋಜನೆ ಮಾಡಿಸುವೆ. ನಮ್ಮ ನಾಡಿನ ಅನೇಕ ಕವಿಗಳ ಕವಿತೆಗಳನ್ನು ಒಂದೆಡೆ ಸೇರಿಸುವ ಸಂಕಲ್ಪ ಮಾಡಿ ಹಾಡಿಸಿ ಪುಸ್ತಕ ರೂಪ ಕೊಡಬೇಕೆಂದುಕೊಂಡಿದ್ದೇನೆ' ಎನ್ನುವ ನಮ್ರವಾದ ಮಾತು. ಮಾತುಗಳಲ್ಲಿ ನಿಖರವಾದ ದೃಢ ನಿರ್ಧಾರ, ಸ್ಪಷ್ಟತೆ. 'ಆಗಲಿ' ಎಂದು ಕವಿತೆ ಕಳುಹಿಸಿದ್ದೆ. ಷಡಕ್ಷರಿಯವರಿಗೆ ಕಾವ್ಯ ಪ್ರಕಾರ ಕವಿಗಳ ಮೇಲಿನ ಗೌರವ ಗಮನಿಸಿದೆ ನಿಜಕ್ಕೂ ಮೆಚ್ಚುಗೆಯಾಗಿದ್ದರಿಂದ ಆ ಯುವ ತರುಣನ ಜೊತೆ ಈಗಿನ ಸುಗಮ ಸಂಗೀತದ ಪರಿಸ್ಥಿತಿಯ ಬಗ್ಗೆ ಮುಕ್ತವಾಗಿ ಮಾತನಾಡಲು ಸಾಧ್ಯವಾಯಿತು. ಹತ್ತಿರವಾದಂತೆ ಭಾಸವಾಯಿತು.

ಇತ್ತೀಚಿನ ದಿನಗಳಲ್ಲಿ ಯುವ ತರುಣರ ಗುಂಗುಗಳೇ ಬೇರೆ ಇರುವಾಗ ಷಡಕ್ಷರಿಯವರು ಕಾವ್ಯ ಪ್ರಕಾರಕ್ಕೆ ಮರುಳಾಗಿ ಅದನ್ನೇ ಹವ್ಯಾಸವಾಗಿಸಿಕೊಂಡು ಅದರಲ್ಲಿ ಪ್ರಪುಲ್ಲವಾದ ಬೆಳೆ ಬೆಳೆದೇ ತೀರುತ್ತೇನೆ ಎಂದು ಹಠ ಹಿಡಿದಿರುವುದು ನನಗಂತು ಸೋಜಿಗದ ಸಂಗತಿಯೂ ಆಗಿದೆ. ಅವರಿಗೆ ಅವರು ನೆನೆದಂತೆ ಸರಿದಾರಿಗಳು ತೆರೆದುಕೊಂಡು ಸುಗಮ ಸಂಗೀತವು ಸುಗಮವಾಗಿ ಮುನ್ನಡೆಯನು ಕರುಣಿಸಲಿ ಎಂದು ಹಾರೈಸುವೆ. ಇತ್ತೀಚೆಗಂತೂ ಕವಿತೆ, ಕತೆ, ಕಾದಂಬರಿಗಳನ್ನು ಓದುವವರು ಬರೆಯುವವರು ಸಂಗ್ರಹಿಸುವವರು, ಗೌರವಿಸುವವರು ವಿರಳಾತಿವಿರಳವೆಂದೇ ಹೇಳಬಹುದಾದ ಸನ್ನಿವೇಶದಲ್ಲಿ ಕಾವ್ಯದ ಪ್ರಕಾರಕ್ಕೆ ತನ್ನನ್ನು ಸಮರ್ಪಿಸಿಕೊಂಡವನಂತೆ ಮಾತು ಆಡುವುದ ಕೇಳಿ ನಿಬ್ಬೆರಗಾದೆ. ಮತ್ತು ಆ ವ್ಯಕ್ತಿಯ ಬಗ್ಗೆ ಒಂದು ಅಭಿಮಾನವು ಹಿರಿಮೆಯು ಮೂಡಿತು ಎಂದರೆ ತಪ್ಪಿಲ್ಲ. 'ಸರ್ ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದು ಕೊಡಿ' ಎಂದರು. 'ಆಗಲಿ' ಎಂದಿದ್ದೆ. ೬೦ ಕವಿತೆಗಳಿರುವ ಭಾವ ಸುರಭಿಯನ್ನು ಓದುತ್ತಾ ಓದಂತೆ ಭಾವ ಪ್ರವಹಿಸುವ ಕವನಗಳು ಎಂತವರಿಗೂ ಮೆಚ್ಚಿಕೆಯಾಗುತ್ತವೆ.

ನಾವು ಮಾಗುವುದು ಹೆಚ್ಚು ಹೆಚ್ಚು, ಹಲವು ಸಾಹಿತ್ಯ ಪ್ರಕಾರಗಳನ್ನು ಓದಿ ಮನನ ಮಾಡಿಕೊಂಡಾಗ. ಇಲ್ಲವಾದಲ್ಲಿ ಪದಗಳ ಕೊರತೆ. ನಮಗೆ ಪ್ರಾಸ ಗೀತೆಗಳನ್ನು ಬರೆಯಲು ಕಷ್ಟವಾಗಿಸುತ್ತದೆ. ಯಾವಾಗ ಹೆಚ್ಚು ತಿಳುವಳಿಕೆ, ಅನುಭವಗಳು ನಮ್ಮ ಜೊತೆಯಲ್ಲಿರುತ್ತದೋ, ಆವಾಗ ಕವಿತೆ ಬರೆಯಲು, ಪರಕಾಯ ಪ್ರವೇಶ ಮಾಡಲು ಸುಲಭವಾಗಬಹುದು. ಕಲ್ಪನೆಯಂತೆಯೇ ಕವಿತೆಗಳನ್ನು ಕಟ್ಟಿಕೊಡಬಹುದು. ಶ್ರೇಷ್ಠ ಭಾವಗೀತೆಗಳಿಗೆ ಕಾರಣರಾಗಬಹುದು ಎಂಬುದು ನನ್ನ ನಂಬಿಕೆಯಾಗಿದೆ.

ಈ ಯುವ ತರುಣನ ಕವಿತೆಗಳ ಮೇಲೆ ಕಣ್ಣಾಡಿಸುತ್ತಾ ಹೋದಂತೆ, ಅವರಲ್ಲಿರುವ ದೇಶಭಕ್ತಿಯನ್ನು ಮತ್ತು ನಿಜವಾದ ಭಾರತೀಯನನ್ನು ಕಂಡುಕೊಂಡೆ, ಹಾಗೆಯೆ ಆ ಕವಿತೆ ನನಗೆ ಇಷ್ಟವಾಯಿತು.

ತಾಯಿ ಭಾರತಿ

ಬಾ.... ರಥವನ್ನೇರು ತಾಯೇ

ಭಾರತ ಮಾತೆಯೇ

ಹಲವು ದಿಕ್ಕುಗಳು ಹಲವು ರಾಜ್ಯಗಳು

ಹಲವು ಭಾಳೆಗಳು ಹಲವು ಬಣ್ಣಗಳು

ನಿನ್ನ ಮಡಿಲು ಮಾತ್ರ ಒಂದೇ

ನೂರು ನದಿಗಳ

ಮಿಲನ ಮಂದಿರವೇ ಕಡಲು 

ಹಲವು ಮತ್ಸಗಳು ಹಲವು ಹಡಗುಗಳು 

ಹಲವು ಭೇದಗಳು ಹಲವು ಹೊಳಹುಗಳು

ನಿನ್ನೊಡಲು ಮಾತ್ರ ಒಂದೇ.....

ಇಲ್ಲಿನ ಭಾವೈಕ್ಯತೆಯು ಓದುಗನನ್ನು ಪುಟಿದೇಳುವಂತೆ ಮಾಡುವುದರಲ್ಲಿ ಸಂದೇಹವಿಲ್ಲ. ಮತ್ತೆ ಓದಿಸಿಕೊಂಡು ಗುನುಗುವಂತೆಯೂ ಮಾಡುತ್ತವೆ ಕೆಲವು ಸಾಲುಗಳು.

ಈ ಕವಿಗೆ…

ಕೇಳಿಸಿಕೊಳ್ಳುವ ಕಿವಿಗೆ. 

ಒಲವಿನ ಅಂತರ 

ಬೆಚ್ಚುತ್ತಿದೆ ಎದೆ ಬಾನೀಗ 

ಮುಚ್ಚಿ ಮನದ ಬಾಗಿಲು 

ಹುಚ್ಚು ನಗೆಯೊಂದಿಗೆ 

ಚುಚ್ಚುತಿದೆ ಮನ ಮುಗಿಲು 

ತಂಪಾದ ಶಶಿ ಮರುಳಾಗಿ 

ತಬ್ಬಿದನು ಸುಡುವ ಕಾರಿರುಳ 

ಬಿಡುವಿರದೆ ದುಮುಕಿರುವ

ದುಃಖ ಹಿಂಡುತಿದೇ ಕರುಳ

ಆಹಾ.... ಎಂಥಾ ಕಲ್ಪನೆ ನಿಜಕ್ಕು ಬೆಂದ ಹೃದಯದ ದನಿಯಂತೆ ಪ್ರತಿಧ್ವನಿಸುತ್ತಿದೆ. ನುಡಿಯೇ ಚುಚ್ಚುವುದು ನಮಗೆ ನಮ್ಮ ಭಾವನೆಗಳಿಗೆ ನಾಟುತ್ತದೆ. ದುಃಖ ಹಿಂಡುತ್ತಿದೆ. ಕರುಳ ಎಂದರೆ ಈ ಭಾವ ತೀವ್ರತೆಯಲಿ ಕವಿ ಚೆನ್ನಾಗಿಯೇ ಬೆಂದುಬಿಟ್ಟಿದ್ದಾನೆ ಎನ್ನಿಸುತ್ತದೆ. ಕವಿಗೆ ಆಗುವ ಅನುಭವವೇ ಕವಿತೆಯಾದಾಗ ಅದರ ನೋವು ಓದುಗನನ್ನು ಮುಟ್ಟುತ್ತವೆ. ಗೆಲ್ಲುತ್ತವೆ. ನೋವನ್ನು ಪ್ರಕಟಿಸುವ ಇವರ ಶೈಲಿ ಮೆಚ್ಚಿಕೆಯಾಗುತ್ತದೆ. ಹೆಚ್ಚು ಪ್ರೇಮಗೀತೆಗಳ ನಡುವೆ ತಾಯಿಯ ಬಗ್ಗೆ, ಭಾರತಮಾತೆಯ ಬಗ್ಗೆ, ಪ್ರಕೃತಿಯ ಬಗ್ಗೆ ಕವಿತೆಗಳು ಓದುಗನನ್ನ ಸೆಳೆಯುತ್ತವೆ ಅಲ್ಲದೆ ನಮ್ಮದೇ ಭಾವನೆಯೂ ಆಗಿವೆಯಲ್ಲ ಎನ್ನುವಷ್ಟು ಸರಳ ಸುಂದರವು ಆಗಿವೆ ನಮ್ಮ ಹೃದಯದ ಹತ್ತಿರಕ್ಕೂ ಬರುತ್ತವೆ.

ಎಲ್ಲ ಕವಿತೆಗಳನ್ನು ಓದುತ್ತಾ ಓದುತ್ತಾ ಏನೋ ಮುದದ ಆಲೋಚನೆಗಳು ನನಗೆ ನನ್ನ ಹರೆಯವನ್ನು ನೆನಪಿಸುತ್ತಿದ್ದವು. ಷಡಕ್ಷರಿಯವರ ಸಾಹಸ ಮತ್ತು ಕನಸು ಕಲ್ಪನೆಗೆ ಜೀವ ಬರಲಿ, ಅವರ ಭಾವ ತೀವ್ರತೆಯು ಉತ್ತಮ ಕಾವ್ಯ ಮತ್ತು ಭಾವಗೀತೆಗಳಿಗೆ ಸ್ವರ ಸಂಯೋಜನೆಯಾಗಿ ನಾಡಿನಾದ್ಯಂತ ಜನಪ್ರಿಯವಾಗಲಿ ಎಂದು ಹಾರೈಸುವೆ.”