ಮನುವಾದಿಗಳು-ಮನುವಾದಿಗಳು ಎಂದು ಟೀಕಿಸುವ ವಿಚಾರವಾದಿಗಳ ಸಂಖ್ಯೆ ವಿಪುಲವಾಗಿಯೇ ಇದೆ. ಹಾಗೆ ಟೀಕೆಗೊಳಗಾಗುತ್ತಿರುವವರ ಸಂಖ್ಯೆಯೂ ದೊಡ್ಡದೇ. ಆದರೆ, ಈ ಎರಡೂ ವರ್ಗದ ಜನ ಮನುಸ್ಮೃತಿಯನ್ನು ಓದಿದವರೇ? ಏನದು ಮನುವಾದ ಎಂದರೆ ಹೇಳಬಲ್ಲವರೇ? ಖಂಡಿತ ಇಲ್ಲ. ಸುಮ್ಮನೆ ಕ್ಲೀಷೆಗಾಗಿ ಮಾತಾಡುವವರೇ ಎಲ್ಲ.
ಡಾ. ಬಿ. ಭಾಸ್ಕರ್ ರಾವ್ ಬರೆದ ‘ಮನುಸ್ಮೃತಿ’ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ. ಅವರು ಬೆನ್ನುಡಿಯಾದ 'ನೆನಪುಗಳನ್ನು ಮೀರಬೇಕಿದೆ' ಇಲ್ಲಿ ಬರೆಯುತ್ತಾರೆ…
“ಚಿಂತನಶೀಲ ವಿದ್ವಾಂಸ ಗೆಳೆಯ ಭಾಸ್ಕರರಾಯರು ಪ್ಲೇಟೋನ ಬರಹಗಳಲ್ಲಿ ಚಾತುರ್ವಣ್ಯ್ರದ ಚಹರೆಗಳನ್ನು ಕಂಡು ಮನುಸ್ಮೃತಿಯ ಅಧ್ಯಯನಕ್ಕೆ ಉತ್ಸುಕರಾದವರು. ಚಾತುರ್ವಣ್ಯ್ರದ ಕುರಿತಂತೆ ಪೂರ್ವ-ಪಶ್ಚಿಮಗಳ ನಡುಮ ಇರುವ ಈ ಸಾಮ್ಯವು ಎಡ್ವರ್ಡ್ ಸೈದ್, ಬಾಲಗಂಗಾಧರರಂಥ ಸಂಶೋಧಕ ವಿದ್ವಾಂಸರು ಮಂಡಿಸುವ ಪ್ರಮೇಯಗಳಿಗಿಂತ ಭಿನ್ನವಾಗಿ ಇನ್ನಷ್ಟು ಆಳವಾದ ಅಧ್ಯಯನಕ್ಕೆ ಪ್ರೇರಕವಾಗಿದೆ. ಪಶ್ಚಿಮದ ದೃಷ್ಟಿಕೋನದಿಂದ ಪೂರ್ವ ದೇಶಗಳ ಸಮಾಜವನ್ನು ನೋಡಿದ್ದರಿಂದ ಮೂಲಭೂತವಾಗಿ ಅನೇಕ ಬಗೆಯ ತಪ್ಪು ತಿಳಿವಳಿಕೆಗಳುಂಟಾಗಿದೆ ಎಂದು ಮೇಲೆ ಹೆಸರಿಸಿದ ವಿದ್ವಾಂಸರು ಸಾಧಿಸುತ್ತಾರೆ. ಆದರೆ, ಪಶ್ಚಿಮದ ದೃಷ್ಟಿ-ಪೂರ್ವ 'ದೇಶಗಳ ದೃಷ್ಟಿ ಮೂಲತಃ ಅಷ್ಟು ಭಿನ್ನವೇ? ಮನುಷ್ಯ ಜನಾಂಗದ ಮೂಲ ಪ್ರವೃತ್ತಿಗಳು ಎಲ್ಲೆಡೆ ಒಂದೇ. ಆಗಿಲ್ಲವೆ? ಸಮಾನವೂ ಆಗಿಲ್ಲವೆ? ಹಾಗಲ್ಲದಿದ್ದರೆ ಮೂಲಪ್ರವೃತ್ತಿಗಳೆಂದು ಗುರುತಿಸುವ ಹೊಳಹಾದರೂ ಹೇಗೆ "ಉಂಟಾಗುವುದು ಎಂಬ ಪ್ರಶ್ನೆಗಳನ್ನು ಕೇಳಿಕೊಂಡೇ ಭಿನ್ನತೆಗಳ ಅಧ್ಯಯನ ಮಾಡಬೇಕೆನಿಸುತ್ತದೆ. ಅಂದರೆ ನಮ್ಮ ಮೆಥಡಾಲಜಿಯನ್ನು ವಿಸ್ತರಿಸುತ್ತಲೇ ಅಧ್ಯಯನ ಮುಂದುವರಿಸುವ ಅಗತ್ಯವಿದೆ.
ಶ್ರುತಿ ಮತ್ತು ಸ್ಮೃತಿ ಎಂಬ ಎರಡು ಪ್ರಸ್ಥಾನಗಳಲ್ಲಿ ಭಾರತೀಯ ಚಿಂತನೆಗಳು ಹರಿದುಬಂದಿವೆ. ಶ್ರುತಿ ಎಂದರೆ ಕೇಳಿದ್ದು ನಾವು ಕೇಳಿದ್ದು. ಇದು Original! ಕೃತಿ ಎಂದರೆ ನೆನಪಿನಲ್ಲಿ ಉಳಿದುಬಂದದ್ದು. ನೆನಪೆನ್ನುವುದೇ ಮತ್ತೆ ಮತ್ತೆ ಕಾಣಿಸುವ ಸ್ವಭಾವದ್ದಾಗಿ continuityಯನ್ನು ಬಯಸುತ್ತದೆ, ಅಂದರೆ, ನೆನಪೆನ್ನುವುದು ವ್ಯವಸ್ಥಾತ್ಮಕ ಸ್ವರೂಪದ್ದಾಗಿರಬಹುದು. ನಮ್ಮ ಸಂಸ್ಕೃತಿಯ ಮೂಲ ನೆಲೆ ಈ ನೆನಪುಗಳು, ದೀರ್ಘಕಾಲ ಬಾಳಿಬಂದ ಈ ಸಂಸ್ಕೃತಿಯಲ್ಲಿ ನೆನಪುಗಳು ದಟ್ಟವಾಗಿವೆ. ಪ್ರಜ್ಞೆಯ ಆಳದಲ್ಲಿ ಬೇರುಬಿಟ್ಟಿದೆ. ಆದುದರಿಂದಲೇ ನಾವೀಗ ಶ್ರುತಿಯನ್ನು ಕೇಳಲಾರದವರಾಗಿರುವೆವು. ನೆನಪುಗಳನ್ನೇ ಮತ್ತೆ ಮತ್ತೆ ಮೆಲುಕಾಡುತ್ತಿರುವೆವು. ನಾವು ಇನ್ನೊಮ್ಮೆ 'ಶ್ರುತಿ'ಯನ್ನು ಕೇಳಬೇಕಾದರೆ ನೆನಪುಗಳನ್ನು ಮೀರಲೇಬೇಕಾಗಿದೆ. ನೆನಪುಗಳಿರುವುದು ಮೀರುವುದಕ್ಕಾಗಿ ಮೀರಲಾಗದಿದ್ದರೆ ನೆನಪುಗಳೆಲ್ಲ 'ಉದಾತ್ತ ಸುಳ್ಳು'ಗಳಾಗಿ ಪರಿಣಮಿಸಬಹುದು! ರಾಗದ್ವೇಷಗಳಿಲ್ಲದ ಸಮತೋಲನದ ಅಧ್ಯಯನ ಮಾತ್ರ ನಮ್ಮನ್ನು ನೆನಪುಗಳನ್ನು ಮೀರುವಂತೆ ಮಾಡಬಲ್ಲುದು. ಅಂಥ ಅಧ್ಯಯನದ ಒಂದು ಮಾದರಿ ಇಲ್ಲಿದೆ.”
ಮನುಸ್ಮೃತಿಯಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ಮಾತೂ ಜಾತಿ ಶ್ರೇಣೀಕರಣದ ವ್ಯಾಖ್ಯಾನ ಮಾತ್ರವೇ ಇದೆಯೇ? ಇಲ್ಲ. ಈಗ ಮೂರುಸಾವಿರ ವರ್ಷಗಳ ಹಿಂದಿನ ಇಡೀ ರಾಜಕೀಯ-ಸಾಮಾಜಿಕ-ಧಾರ್ಮಿಕ-ಆರ್ಥಿಕ-ಶೈಕ್ಷಣಿಕ-ಕಾನೂನು ಕಟ್ಟಳೆ- ವೈದ್ಯಕೀಯ- ಆರೋಗ್ಯ-ಕೃಷಿ-ಪಶುಸಾಕಣೆ-ಮಾನವ ಸ್ವಭಾವದ ವಿಶ್ಲೇಷಣೆ ಹೀಗೆ ಇಂಥ ವಿಷಯವೇ ಅಲ್ಲಿಲ್ಲ ಎಂಬುದಿಲ್ಲವಲ್ಲ? ಸಮಗ್ರ ಭರತಖಂಡದ ವಿಶ್ವಕೋಶವೇ ಅದಾಗಿತ್ತೇ? ಆದ್ದರಿಂದಲೇ ಪಾಶ್ಚಾತ್ಯ ವಿದ್ವಾಂಸರು , ಮನುಸ್ಮೃತಿಯನ್ನು ಅಧ್ಯಯನ ಮಾಡದಿದ್ದರೆ ಭಾರತ ಅರ್ಥವಾಗುವುದೇ ಅಸಾಧ್ಯ – ಎಂದು ಅಭಿಪ್ರಾಯಪಟ್ಟುದಲ್ಲವೇ? ವಿಚಾರವಾದಿ- ಸಂಸ್ಕೃತ ಪಂಡಿತರೂ ಆಗಿದ್ದ ಚಿಂತಕರಾದ ಅಂಬೇಡ್ಕರ್ ಅವರು ಆ ಗ್ರಂಥವನ್ನು ಸಾರ್ವಜನಿಕವಾಗಿ ದಹನಮಾಡಿದ ಹಿನ್ನೆಲೆ ಏನಿದ್ದಿರಬಹುದು? ಆ ಗ್ರಂಥದ ನ್ಯೂನತೆಗಳೇನು? ಯಾವ ಕಾರಣಕ್ಕಾಗಿ ಅದನ್ನ ಅಧ್ಯಯನ ಮಾಡಬೇಕು? – ಎಂಬುದನ್ನೆಲ್ಲವನ್ನೂ ಈ ಪುಟ್ಟ ವೈಚಾರಿಕ ಪುಸ್ತಕ – “ಮನುಸ್ಮೃತಿ: ಒಂದು ವಿಶಿಷ್ಟ ಕೃತಿ”ಯಲ್ಲಿ ತಾರ್ಕಿಕ ವಿಶ್ಲೇಷಣೆಗೆ, ಯಾವ ಪೂರ್ವಾಗ್ರಹವೂ ಇಲ್ಲದ ಮನಸ್ಥಿತಿಯಿಂದಲೇ ಒಳಪಡಿಸಿದ್ದಾರೆ- ಸಂಸ್ಕೃತ ಕನ್ನಡ ಇಂಗ್ಲಿಷ್ ಭಾಷಾತಜ್ಞರೂ ವಿದೇಶದ ಯೂನಿವರ್ಸಿಟಿಗಳಲ್ಲಿ ಅಧ್ಯಯನ ಮತ್ತು ಅಧ್ಯಾಪನ ಮಾಡಿದವರೂ ಸಂಸ್ಕೃತಿ ವಿಶ್ಲೇಷಕರೂ ಆಗಿ ಹೆಸರಾಗಿರುವ ಡಾ. ಬಿ. ಭಾಸ್ಕರ ರಾವ್ ಅವರು. ನಿಜಕ್ಕೂ ಎಲ್ಲ ಚಿಂತಕರೂ ಓದಲೇಬೇಕಾದ ವೈಚಾರಿಕ ಪುಸ್ತಿಕೆ ಈ “ಮನುಸ್ಮೃತಿ: ಒಂದು ವಿಶಿಷ್ಟ ಕೃತಿ”!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!