೧೯೬೭ರಲ್ಲಿ ಬರೆದ ತಮಿಳು ಕಥಾಲೋಕದ ವಿಶಿಷ್ಟ ಧ್ವನಿ, ಕಥೆಗಾರ ವಿಂದನ್ ಅವರ ಸಣ್ಣ ಕಥೆಗಳ ಕನ್ನಡಾನುವಾದಿತ ಕೃತಿ `ವಿಂದನ್ ಕಿರು ಕಥೆಗಳು’. ಕೆ. ನಲ್ಲತಂಬಿ ಇವರು ಅನುವಾದಿಸಿರುವ ಈ ಕೃತಿಯಲ್ಲಿ “ಕಾಲ ಚಿಕ್ಕದು, ಕನಸುಗಳು ದೊಡ್ಡದು. ವ್ಯಥೆ ಪಡುವುದೇಕೆ ಮನಸ್ಸೇ?” ಎನ್ನುವ ಮೂಲ ಲೇಖಕ ವಿಂದನ್ ರ ಮಾತುಗಳು ನಿಮ್ಮ ಓದಿಗಾಗಿ ಹೀಗಿದೆ:
“ಕಾಲ ಚಿಕ್ಕದು! ಈ ಶೀರ್ಷಿಕೆಯನ್ನು ಕಂಡ ಕೂಡಲೇ, "ಅನ್ಯಾಯ, ಅಕ್ರಮ! ವೈದ್ಯಕೀಯ ವಸತಿಗಳು ಹೆಚ್ಚಾದರೂ ಹೆಚ್ಚಾಯಿತು. ಮನುಷ್ಯನ ಆಯುಷ್ಕಾಲ ಹನುಮಂತನ ಬಾಲದಂತೆ ಬೆಳೆದುಬಿಟ್ಟಿದೆ. ಅವನು ಶೀಘ್ರದಲ್ಲಿ ಸಾಯುವುದಿಲ್ಲ ಅನ್ನುತ್ತಾನಲ್ಲಾ, ಕನಿಷ್ಠ ಮಕ್ಕಳು ಮರಿಗಳನ್ನು ಹೆರುವುದನ್ನಾದರೂ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಎಂದರೆ ಕೇಳುವುದಿಲ್ಲ ಎನ್ನುತ್ತಾರೆ" ಎಂದು ನಾವು ಅವಸ್ಥೆ ಪಡುತ್ತಿರುವಾಗ 'ಕಾಲವಾದರೂ ಚಿಕ್ಕದು?' ಎಂದು ಆಹಾರ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಪ್ರಾಣ ಬಿಡುತ್ತಿರುವ ರಾಜಕೀಯ ವ್ಯಕ್ತಿಗಳು ದಯವಿಟ್ಟು ಕಿಬ್ಬೊಟ್ಟೆಯನ್ನು ಬಡಿದುಕೊಳ್ಳಬೇಡಿ. ಇದು ಅಂತಹ ಜಗತ್ತಿನ ಬಗ್ಗೆಯಲ್ಲ; ಸಾಹಿತ್ಯ ಜಗತ್ತಿನ ಬಗ್ಗೆ 'ಕಾಲ ಚಿಕ್ಕದು!' ನಾನು ಇಲ್ಲಿ ಯಾಕೆ ಹೇಳಲು ಬಂದೆನೆಂದರೆ, ಇದು ಸಿನಿಮಾ ಯುಗ. ಈ ಯುಗದಲ್ಲಿ ಎಂತಹ ಲೇಖಕನೂ, ಯಾವುದಕ್ಕಾದರೂ ಉದಾಹರಣೆಯನ್ನು ಕೊಡುವ ಸಂದರ್ಭ ಬಂದರೆ ಯಾವುದನ್ನು ತೋರಿಸುತ್ತಾನೆ? ಕಂಬನನ್ನೇ ಅವನ ಕವಿತೆಯನ್ನೇ ಈ ನವ್ವ ಸಂಪ್ರದಾಯವನ್ನು ಹಿಂಬಾಲಿಸಿ ನಾನೂ ಸಹ ಒಂದು ಸಿನಿಮಾ ಹಾಡನ್ನು ಇಲ್ಲಿ ಉದಾಹರಣೆಯಾಗಿ ನೀಡುತ್ತೇನೆ.
"ಕಾಲ ಚಿಕ್ಕದು, ಕನಸುಗಳು ದೊಡ್ಡದು. ವ್ಯಥೆ ಪಡುವುದೇಕೆ ಮನಸ್ಸೇ?"
ಕವಿತೆ ಮುಗಿಯಿತು. ಮುಗಿಯಿತು ಉದಾಹರಣೆ! ಚಿಕ್ಕದರಲ್ಲೂ ಚಿಕ್ಕದಾದ ಈ ಕಾಲದಲ್ಲಿ ಕನಸುಗಳು ದೊಡ್ಡದಾಗಿವೆಯೇನೋ ತಿಳಿಯದು ಕಥೆಗಳು ದೊಡ್ಡದಾಗಿವೆ. ಉದಾಹರಣೆಗೆ ಈಗ ಬರುವ ಸಣ್ಣ ಕಥೆಗಳನ್ನೇ ತೆಗೆದುಕೊಳ್ಳಿ -
ಕಥೆ ನಡೆಯುವ ಸಮಯವನ್ನು ಸೂಚಿಸಲು ಒಂದು ಪುಟ: ವಾತಾವರಣವನ್ನು ವಿವರಿಸಲು ಎರಡು ಪುಟಗಳು: ಕಥಾ ಪಾತ್ರಗಳ ಗುಣಲಕ್ಷಣಗಳನ್ನು 'ಚಿತ್ರಿಸಲು' ನಾಲ್ಕು ಪುಟಗಳು: ಕಥೆಯನ್ನು ಪ್ರಾರಂಭಿಸಿ, ಮುಂದುವರೆಸಿ, ಮುಗಿಸಲು ಎಂಟು ಪುಟಗಳು - ಹಾಗಲ್ಲವೇ ಈ ಕಾಲದಲ್ಲಿ ಸಣ್ಣಕಥೆ, ಸಾಹಿತ್ಯ ಬೆಳೆಯುತ್ತಿದೆಯೋ ಇಲ್ಲವೋ, ಅದರ ಪುಟಗಳು ಹೆಚ್ಚಾಗುತ್ತಿವೆ. 'ಪುಟದ ಹಸಿವು' ಹೆಚ್ಚಾಗಿರುವ ಪತ್ರಕರ್ತರಿಗೆ ಇದು ಬಹಳ ಉಪಯೋಗವಾಗಿರುವುದರೊಂದಿಗೆ, ಕೆಲವು ಸಮಯ ಅದನ್ನೇ 'ಕಿರು ಕಾದಂಬರಿ' ಎಂದು ಬಡಾಯಿ ಕೊಚ್ಚಿಕೊಳ್ಳಲೂ, ಹೊತ್ತು ಕಳೆಯಲಾಗದವರಿಗೆ ಸಮಯ ಕಳೆಯುವುದಕ್ಕೂ ನೆರವಾಗುತ್ತದೆ.
ಆದರೂ ಅವು ಕೆಲವರಿಗೆ 'ಆಕಳಿಸುವ ಕಥೆ'ಗಳಾಗಿ, ಅಂದರೇ ಓದಲು ಪ್ರಾರಂಭಿಸುವಾಗಲೇ ಆಕಳಿಕೆ ಮೇಲೆ ಆಕಳಿಕೆ ಬರುವಂತೆ ಮಾಡುವ ಕಥೆಗಳಾಗಿ ಬಿಡುವುದೂ ಉಂಟು!
ಅದರಲ್ಲೂ ಒಳಿತು ಇದ್ದೇ ಇದೆ; 'ಆಪತ್ತಿಲ್ಲದ ನಿದ್ರೆ ಗುಳಿಗೆಗಳಾಗಿ' ಅವು ಉಪಯೋಗಕ್ಕೆ ಬರುತ್ತವೆಯಲ್ಲವೇ?
ಅಂತಹ ತೊಂದರೆಗಳೆಲ್ಲಾ ಈ ಪುಟಾಣಿ ಕಥೆಗಳಿಂದಾಗುವುದಿಲ್ಲ. ಆದ್ದರಿಂದ ಈ ಅಲ್ಪಾವಧಿಯಲ್ಲಿ, ಆಪೂರ್ವದಲ್ಲೂ ಅಪೂರ್ವವಾದ ತಮ್ಮ ಸಮಯವನ್ನು ವ್ಯರ್ಥ ಮಾಡಲು ಬಯಸದ ಓದುಗರು ಹಲವರಿಗೆ ಕಾದಂಬರಿಗಳಿಗಿಂತ, ಸಣ್ಣ ಕಥೆಗಳಿಗಿಂತ, ಪುಟಾಣಿ ಕಥೆಗಳು ಬಹಳ ಹಿಡಿಸುತ್ತವೆ. ಯಾಕೆಂದರೆ, ಅವನ್ನು ಓದುವುದಕ್ಕಾಗಿ ಅವರು ವ್ಯಯ ಮಾಡುವ ಸಮಯ ಕಡಿಮೆ: ಪಡೆಯುವ ಫಲವೋ ಹೆಚ್ಚು.
ಇದು ರಸಿಕರ ಸ್ಥಿತಿ; ಲೇಖಕರ ಸ್ಥಿತಿಯೋ ಕಾದಂಬರಿ ಬರೆಯುವುದಕ್ಕಿಂತ, ಸಣ್ಣಕಥೆ ಬರೆಯುವುದಕ್ಕಿಂತ, ಪುಟ್ಟ ಕಥೆಗಳನ್ನು ಬರೆಯುವುದು ಕಠಿಣ. ಆದರೆ, ಪತ್ರಿಕೆಗಳು ಅವಕ್ಕೆ ಕೊಡುವ ಸಂಭಾವನೆ ಬಹಳ ಕಡಿಮೆ!
ಆದರೂ, ಕಾಲದಿಂದ ಅಳಿಸಲಾಗದ ಈ ಕಥೆಗಳೊಂದಿಗೆ ಇವನ್ನೂ ಬರೆಯುವ ಲೇಖಕನೂ ಕಾಲದೊಂದಿಗೆ ಅಳಿದು ಹೋಗುವುದಿಲ್ಲ ಎಂಬುದು ಮಾತ್ರ ಸತ್ಯ.
ಆ ಹೆಮ್ಮೆ ಈ ಸೇವಕನಿಗೂ ಗಿಟ್ಟಬಹುದು. ಯಾವಾಗ ಸತ್ತ ಮೇಲೆ!
ಅಲ್ಲಿಯವರೆಗೆ… ಜೀವ ಸಮೇತ ಸಾಯತ್ತಿರುವ ಸೋಜಿಗವೇ ನನ್ನಂತಹ ಲೇಖಕನಿಗೆ ಕರಗತವಾದ ಕಲೆಯಾಗಿದೆಯಲ್ಲ!”
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!