ನೀರಿನ ಕುರಿತಾಗಿ ನಮಗೆ ಗೊತ್ತಿರುವ ವಿಷಯ ತುಂಬಾನೇ ಅಲ್ಲವೇ? ನೀರು ಮತ್ತು ತಾಯಿ ಈ ಎರಡನ್ನೂ ನಾವು ಟೇಕಿಟ್ ಫಾರ್ ಗ್ರ್ಯಾಂಟೆಡ್ ಮನೋಭಾವದಲ್ಲೇ ತೆಗೆದುಕೊಳ್ಳುತ್ತೇವೆ. ಅಷ್ಟು ಸುಲಭ ಲಭ್ಯ ಅವು. ಅಣ್ವಸ್ತ್ರ ತಯಾರಿಕೆಯಿಂದ ಔಷಧ ತಯಾರಿಕೆಯವರೆಗೂ ಎಲ್ಲಕ್ಕೂ ನೀರೇ ಬೇಕು. ಒಂದು ಕಾಲಕ್ಕೆ ಮಂಗಳನ ತುಂಬೆಲ್ಲ ಹೇರಳವಾಗಿ ತುಂಬಿಕೊಂಡಿದ್ದ ನೀರು, ಅಲ್ಲಿ ಇಲ್ಲವಾಗಿ ಇಡೀ ಮಂಗಳವೇ ಕೆಂಪು ಉಂಡೆಯಂತಾದುದು ಹೇಗೆ? ನಮ್ಮ ಆಹಾರ – ಪಾನೀಯಗಳಿಗೆಲ್ಲ ವೈವಿಧ್ಯಮಯ ರುಚಿಕೊಡುವ ಈ ಹೈಡ್ರೋಜನ್ ಬಾಂಡಿಂಗ್ ಅಂದರೇನು? ನಮ್ಮ ದೇಹ ಮತ್ತು ಭೂಮಿಯನ್ನು ಈ ನೀರೆಂಬ ಕೌತುಕ ಹೇಗೆ ಸಮತೋಲನದಲ್ಲಿಟ್ಟಿದೆ? ಸಮತೋಲನ ತಪ್ಪಿದರೆ?
ಇನ್ನು ನಮ್ಮದೇ ಶರೀರದಲ್ಲಿ ನೀರಿನ ಒಟ್ಟಾರೆ ಸಮತೋಲನದ ರಹಸ್ಯವೇನು? ನಾವು ಕುಡಿಯುವ ಕಾಫಿ, ಟೀ, ಹಾಲು ಇತ್ಯಾದಿ ಪಾನೀಯಗಳು ಹೇಗೆ ಹೈಡೋಜನ್ ಬಾಂಡಿಂಗ್ ಮೇಲೆ ಅವಲಂಬಿಸಿದೆ? ಮಾತ್ರವಲ್ಲ, ಒಂದು ಜಲಬಿಂದು ಮತ್ತೊಂದರೊಟ್ಟಿಗೆ ಸೇರಿ ಸಿಂಧುವಾಗಲು ಹೈಡೋಜನ್ ಬಾಂಡಿಂಗ್ ಹೇಗೆ ಕಾರಣ? ನಾವು ತಿನ್ನುವ ಆಹಾರಕ್ಕೆ ರುಚಿ ಬರಬೇಕೆಂದರೆ ಉಪ್ಪು ಅತ್ಯಗತ್ಯ, ಅಂತಹ ಉಪ್ಪು ಆಹಾರಕ್ಕೆ ಸಮವಾಗಿ ಸೇರಬೇಕೆಂದರೆ ನೀರಿನ ಅಣುಗಳ ರಚನಾ ವಿನ್ಯಾಸ ಹಾಗೂ ಅಣುಗಳ ನಡುವಿನ ಜ್ಯಾಮಿತಿ ಹೇಗೆ ಕಾರಣ? ಇಂತಹ ಪ್ರಶ್ನೆಗಳು ನಮ್ಮಲ್ಲಿ ಮೂಡಿದರೆ ಅದು ನಮ್ಮ ಅರಿವಿನ ಪರಿಧಿ ವಿಕಾಸವಾಗುವುದರ ಲಕ್ಷಣ. ನಿಮಗೂ ಇಂತಹ ಪ್ರಶ್ನೆಗಳು ಖಂಡಿತಾ ಒಂದಲ್ಲಾ ಒಂದು ಹಂತದಲ್ಲಿ ಮೂಡಿರುತ್ತವೆ. ಇಂತಹ ಪ್ರಶ್ನಾ-ಸಾಗರವನ್ನು ಪರಿಕ್ರಮಿಸಲು ಈ 'ಪುಸ್ತಕ ಒಂದು ವೈಜ್ಞಾನಿಕ ಕೌತುಕದ ನಾವೆ. ಓದುವ ಸುಖಾನುಭೂತಿ ನಿಮ್ಮದು!
ನೀರಿನ ಕುರಿತು ನಮಗೆ ಗೊತ್ತಿರುವುದೆಲ್ಲ ತೀರ ಅಲ್ಪ ಎಂಬ ಅರಿವಾಗುವುದೇ ಅಮೇರಿಕೆಯ ವಾಸಿ, ಕನ್ನಡಿಗ, ವಿಜ್ಞಾನಿ ಡಾ॥ ಡಿ ಎಮ್ ಸಾಗರ್ ಅವರ “ ವಿಲಕ್ಷಣ ಜಲಜಾಲ- ನೀರಿನ ಕುರಿತು ವೈಜ್ಞಾನಿಕ ಕೌತುಕಗಳು” ಎಂಬ ಹೊಚ್ಚಹೊಸತಾದ ಕೃತಿಯನ್ನೋದಿದಾಗ! ನಾಲ್ಕು ಬಣ್ಣಗಳಲ್ಲಿ ಸುರಸುಂದರವಾಗಿ ಹೊರಬಂದಿರುವ ಈ ಕೃತಿಯ ಸುಲಲಿತ ಸೊಗಸಾದ ಕನ್ನಡವನ್ನು ಓದುವ ಆಹ್ಲಾದವೇ ಒಂದು ಹಿತಾನುಭವ! ನೀವೂ ಓದಿ, ಮನೆಮಂದಿಗೆಲ್ಲ, ಮುಖ್ಯವಾಗಿ ನಿಮ್ಮ ಮಕ್ಕಳಿಗೆ ಓದಲು ಕೊಡಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!