ಶಕುನದ ಹಕ್ಕಿ

ಲೇಖಕ, ಕತೆಗಾರ ಹೇಮಂತ್ ಪಾರೇರ ಅವರ ʻಶಕುನದ ಹಕ್ಕಿʼ ಕಾದಂಬರಿಯು ರೋಚಕ ಕಥಾ ಹಂದರವಿರುವ ಕೃತಿಯಾಗಿದೆ. ಪ್ರೀತಮ್‌ ಹಾಗೂ ಆತನ ಗೆಳಯರು ಎಂಬ ಪಾತ್ರವರ್ಗದ ಸುತ್ತಲೂ ಸಂಭವಿಸುವ ಸ್ವಾರಸ್ಯಕರ ಘಟನಾವಳಿಗಳು ಓದುಗರನ್ನು ತಲ್ಲಣಿಸುತ್ತದೆ ಎನ್ನುತ್ತಾರೆ ಕಿಗ್ಗಾಲು ಎಸ್ ಗಿರೀಶ್. ಈ ಕೃತಿಗೆ ಅವರು ಬರೆದ ಮುನ್ನುಡಿ ಸಾಲುಗಳು ನಿಮ್ಮ ಓದಿಗಾಗಿ ಹೀಗಿದೆ…

“ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಕವನ ಸಂಕಲನ ಕಿರುಗಥೆ ಪ್ರಬಂಧ ಸಂಕಲನಗಳು ಇತ್ತೀಚಿನ ದಿನಗಳಲ್ಲಿ ಹೊರ ಬರುತ್ತಿದ್ದರೂ ಕಾದಂಬರಿಗಳ ಸಂಖ್ಯೆಯು ತುಸು ಕಡಿಮೆ ಎಂದೇ ಹೇಳಬಹುದು. ಆಧುನಿಕ ವಿದ್ಯುನ್ಮಾನಗಳ ಆವಿಷ್ಕಾರದಿಂದಾಗಿ ಮುದ್ರಿತ ಪುಸ್ತಕಗಳನ್ನು ಓದುವ ಓದುಗರ ಸಂಖ್ಯೆಯು ಕುಸಿಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎನಿಸುತ್ತದೆ. ಆದರೂ ಅಪರೂಪದ ಕೆಲವು ಉತ್ಕೃಷ್ಟ ಕಾದಂಬರಿಗಳು ಬೆಳಕನ್ನು ಕಂಡಾಗ ಅಂತಹ ಕಾದಂಬರಿಗಳನ್ನು ಸಾಹಿತ್ಯಾಸಕ್ತ ಓದುಗರು ಓದಿ ತಮ್ಮ ಮೆಚ್ಚುಗೆಯನ್ನು ತೋರುತ್ತಾರೆ. ಇಂತಹ ಅಪರೂಪದ ಕಾದಂಬರಿಗಳಲ್ಲಿ ಕೃತಿಕಾರ ಹೇಮಂತ್ ಪಾರೇರಾರವರ 'ಶಕುನದ ಹಕ್ಕಿ' ಎನ್ನುವುದು ಒಂದಾಗಿದೆ.

ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುವ ಕಥಾನಾಯಕ ಪ್ರೀತಮ್ ಬೆಂಗಳೂರಿಗೆ ಹೋಗಬೇಕಾದ ದಿನದ ಹಿಂದಿನ ರಾತ್ರಿ ಬಾವಿಯ ಸಮೀಪದಿಂದ ಹಕ್ಕಿಯೊಂದು ವಿಕಾರವಾಗಿ ಕೂಗಿದಾಗ ಪ್ರೀತಮ್ ನ ಮನಸ್ಸು ವಿಹ್ವಲಗೊಳ್ಳುತ್ತದೆ ಎನ್ನುವ ಹಂತದಿಂದ ಕಥೆಯು ಆರಂಭಗೊಳ್ಳುತ್ತದೆ. ಈ ಹಕ್ಕಿಯ ಕೂಗು ತನ್ನ ಮುಂದಿನ ನಡೆಗೆ ಬರಬಹುದಾದ ವಿಪತ್ತನ್ನು ಸೂಚಿಸುತ್ತದೆಯೇ ಎಂದು ಪ್ರೀತಮ್ ದಿಗಿಲುಗೊಳ್ಳುತ್ತಾನೆ. ಆದರೂ ಬೆಂಗಳೂರಿಗೆ ಹೋಗಲೇಬೇಕಾದ ಅನಿವಾರ್ಯತೆಯು ಅವನಿಗಿದ್ದಿದ್ದರಿಂದ ಬೆಳಗಿನ ಹೊತ್ತು ಪ್ರೀತಮ್ ಕಾರಿನಲ್ಲಿ ಬೆಂಗಳೂರಿಗೆ ಹೋಗುವನು. ಅಲ್ಲಿ ಸಮಾರಂಭವು ಜರುಗುತ್ತಿದ್ದಾಗ ಅವನ ಗೆಳೆಯನೊಬ್ಬ ಪ್ರೀತಮ್ ಗೆ ಕರೆಯನ್ನು ಮಾಡಿ ಕೂಡಲೇ ಊರಿಗೆ ಬರಬೇಕೆಂದು ತಿಳಿಸುವನು.

ಬಹಳ ಆತಂಕದಿಂದ ಮರಳಿದ ಪ್ರೀತಮ್ ಗೆ ಹರೀಶನ ತೋಟದ ಮನೆಯಲ್ಲಿ ಗೆಳೆಯರು ಇಸ್ಪೀಟ್ ಆಟದಲ್ಲಿ ತೊಡಗಿದ್ದಾಗ ಪೊಲೀಸರು ಬಂದು ದಾಳಿ ಮಾಡಿರುವುದು ತಿಳಿದು ಬರುತ್ತದೆ. ಆ ದಾಳಿಯಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಆಗುವ ಸಂದರ್ಭಗಳನ್ನು ಬಹಳ ರಸವತ್ತಾಗಿ ಕಥೆಯಲ್ಲಿ ಚಿತ್ರಿಸಲಾಗಿದೆ. ಹಾಗೆ ಮುಂದುವರೆದು ನಮಗರಿವಿಲ್ಲದಂತೆಯೇ ಮಾದೇವನೆಂಬ ಪಾತ್ರಧಾರಿಯ ಪ್ರವೇಶದಿಂದ ಕಾದಂಬರಿಯ ರೋಚಕತೆ ಹೆಚ್ಚಾಗುತ್ತದೆ. ಇಸ್ಪೀಟ್ ಆಟದಿಂದ ಪ್ರಾರಂಭವಾಗುವ ಕಥೆಯು ಉಪಕಥೆಯೊಂದಿಗೆ ಹೆಣೆದುಕೊಂಡು ಮುಂದೆ ಅದೇ ಕಾದಂಬರಿಯ ಭಾಗವಾಗುವುದು ಓದುಗರನ್ನು ಇನ್ನಿಲ್ಲದಂತೆ ಸೆಳೆಯುತ್ತದೆ. ಒಟ್ಟಿನಲ್ಲಿ ಮುಂಜಾನೆಯಲ್ಲಿ ಶಕುನದ ಹಕ್ಕಿಯು ಕೂಗಿ ಈ ಎಲ್ಲಾ ಅನರ್ಥಗಳ ಸೂಚನೆಯನ್ನು ನೀಡಿತು ಎಂದು ಕಥಾನಾಯಕನು ಭಾವಿಸುವನು. ಕಾದಂಬರಿಕಾರರು ಓದುಗನ ಎದುರು ಅತ್ಯದ್ಭುತವಾದ ಕಥೆಯೊಂದನ್ನು ತೆರೆದು ಇರಿಸಿರಿವರು.

ಯಾವುದೇ ಒಂದು ಕಾದಂಬರಿಯೂ ಯಶಸ್ಸನ್ನು ಕಾಣಬೇಕು, ಓದುಗರನ್ನು ಸೆಳೆಯಬೇಕು ಎಂದಿದ್ದರೆ ಆ ಕಾದಂಬರಿಯು ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿರಬೇಕು. ಶಕುನದ ಹಕ್ಕಿ ಕಾದಂಬರಿಯನ್ನು ಒಮ್ಮೆ ಓದಲು ಪುಟಗಳನ್ನು ತೆರೆದರೆ ಓದುಗನು ಅದನ್ನು ಬಹಳ ಆಸಕ್ತಿಯಿಂದ ಓದಲು ತೊಡಗುವಂತೆ ಕಾದಂಬರಿಯನ್ನು ಹೆಣೆಯಲಾಗಿದೆ. ಶಕುನದ ಹಕ್ಕಿಯಲ್ಲಿ ಕಥಾನಾಯಕನ ಪಾತ್ರವು ಓದುಗನನ್ನು ಆಕರ್ಷಿಸುತ್ತದೆ. ಈ ಪಾತ್ರವನ್ನು ತನಗಾಗಿ ಹೆಣೆಯಲಾಗಿದೆಯೇ ತಾನೇ ಕಥೆಯ ಮುಖ್ಯ ಪಾತ್ರದಾರಿಯೇ ಎಂದು ಓದುಗನಿಗೆ ಅನಿಸಿಬಿಡುತ್ತದೆ. ಕಾದಂಬರಿಯಲ್ಲಿ ಬಳಸಿದ ಭಾಷೆಯು ಓದುಗನಿಗೆ ಪ್ರಿಯವೆನಿಸಬಹುದು. ಎಲ್ಲಿಯೂ ಕಠಿಣ ಪದಗಳಿಲ್ಲದೆ ನಿತ್ಯವೂ ನಾವಾಡುವ ಭಾಷೆಯಲ್ಲಿಯೇ ರಚಿತಗೊಂಡಿರುವುದರಿಂದ ಓದುಗನು ಕಾದಂಬರಿಯನ್ನು ಇಷ್ಟಪಡುತ್ತಾನೆ. ಅಲ್ಲದೆ ನಮ್ಮ ಬದುಕಿನಲ್ಲಿ ಬರುವ ಘಟನೆಗಳನ್ನೇ ಪ್ರಧಾನವಾಗಿ ಇರಿಸಿಕೊಂಡು ಪಾತ್ರಗಳನ್ನು ಸೃಷ್ಟಿಸಿರುವುದರಿಂದ ಕಥೆಯು ತೀರ ಸಹಜವೆಂದು ಓದುಗರು ಭಾವಿಸುವರು.

ಕನ್ನಡದಲ್ಲಿ ಹೊಸತಾಗಿ ಹೊರಬರುತ್ತಿರುವ ಕಾದಂಬರಿಗಳ ಸಂಖ್ಯೆಯು ಕ್ಷೀಣಿಸುತ್ತಿರುವ ಈ ಕಾಲಘಟ್ಟದಲ್ಲಿ ಶಕುನದ ಹಕ್ಕಿ ಹೆಸರಿನ ಕಾದಂಬರಿಯು ಕನ್ನಡ ಸಾರಸ್ವತಲೋಕಕ್ಕೆ ಒಂದು ಅಮೂಲ್ಯ ಕೊಡುಗೆ ಎಂದೆ ಹೇಳಬಹುದು. ಇಂತಹ ಕಾದಂಬರಿಯೊಂದು ಕನ್ನಡಿಗನ ಮನೆಯ ಪುಸ್ತಕ ಭಂಡಾರದಲ್ಲಿ ಇದ್ದರೆ ಅದರ ಮೌಲ್ಯವು ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ. ಓದುಗರು ಕೊಂಡು ಈ ಕಾದಂಬರಿಯನ್ನು ಓದಿದಲ್ಲಿ ಲೇಖಕರಿಗೆ ಇನ್ನಷ್ಟು ಪುಸ್ತಕಗಳನ್ನು ಹೊರ ತರಲು ಪ್ರೋತ್ಸಾಹವನ್ನು ಕೊಟ್ಟಂತಾಗುವುದಲ್ಲದೆ ಕನ್ನಡ ಸಾಹಿತ್ಯದ ಬೆಳವಣಿಗೆಗೂ ಇದು ಅಡಿಪಾಯವಾಗಬಹುದು.”