ಸೊಬಗಿನ ಬೆನ್ನೇರಿದಾಗ

ಕವಿ, ಲೇಖಕ ಪದ್ಮಣ್ಣ ಹಿರೇಗಿಡ್ಡಪ್ಪನವರ ಅವರ ಕವನ ಸಂಕಲನ ʻಸೊಬಗಿನ ಬೆನ್ನೇರಿದಾಗʼ ಕೃತಿಯು ಭಾವ ತುಡಿತಗಳಿಂದ ಕೂಡಿದ ಕವಿತೆಗಳಾಗಿದೆ. ಇಲ್ಲಿಯ ಪ್ರತಿಯೊಂದು ಕಾವ್ಯಗಳನ್ನು ಸಹ ಪರಿಪೂರ್ಣವಾಗಿ ಅನುಭವಿಸಿಯೇ ರಚಿಸಲಾಗಿದ್ದು, ವಾಸ್ತವತೆಯನ್ನು ಬಿಟ್ಟು ಆಚೆ ಈಚೆ ಹೋಗಿಲ್ಲ ಎನ್ನುತ್ತಾರೆ ಕೃತಿಕಾರರು. ಕೃತಿಯಲ್ಲಿನ ಅವರದೇ ಮಾತುಗಳು ನಿಮ್ಮ ಓದಿಗಾಗಿ ನೀಡಲಾಗಿದೆ… 

“ಕಾವ್ಯ ಅಂತರಂಗದ ಬೆಳಕು. ಬಹಿರಂಗದ ಹೊಳಪು. ಕವಿತಾ ಗುಣಾರ್ಣವತೆಯನ್ನು ಮೈಗೂಡಿಸಿಕೊಂಡ ಕವಿಗೆ ಕಾವ್ಯಸರಸ್ವತಿಯ ಬಹಿರೂಪಗಳು ದರ್ಶನಗೊಳ್ಳುತ್ತವೆ. ಮತ್ತು ಕಾವ್ಯ ಮಡಿವಂತಿಕೆಯ ಸಂಸ್ಕಾರದ ಜೊತೆಗೆ ಕಾಯ, ಕಾಯಕದ ಬದ್ಧತೆ ಸಿದ್ಧಿಸುತ್ತದೆ. ಕಾಣುವ ಕಣ್ಮನಗಳ ದೂರದೃಷ್ಟಿಯ ಆಳಪ್ರಜ್ಞೆಗೆ ಕಾವ್ಯವು ಕವಿಯನ್ನು ಕರೆದುಕೊಂಡು ಸಾಗುತ್ತದೆ. ಅಲ್ಲಿ ಆತ ಅನಂತ ವೈಚಾರಿಕ ಪ್ರಜ್ಞೆಯ ಲೀಲಾವಿಲಾಸಗಳನ್ನು ಕಾಣಬಲ್ಲ. ಮತ್ತು ಒಳಗೊಳಗೆ ಸದಾ ಅನುಭವಿಸವಲ್ಲ. ಅದೊಂದು ರೀತಿಯ ಮುಕ್ತ ಬಿಡುಗಡೆ ಪಡೆದ ನೈಜ ಹೃದಯಾನಂದ. ಅಲ್ಲಿ ಆನಂದಕ್ಕೆ ಪಾರವೇ ಇಲ್ಲ. ಅನುಭವಿಸಿದ್ದೆಲ್ಲವೂ ಅಮೃತವಾಗಿ ಪರಿಣಮಿಸುತ್ತದೆ. ಅಮೃತವೆಲ್ಲವೂ ರಸವತ್ತಾದ ಕಾವ್ಯವಾಗಿ ಸೃಷ್ಟಿಗೊಳ್ಳುತ್ತದೆ. ಇಂತಹ ಅನಂತಮೂಲ ಜನ್ಯದ ಭಾವ ಸೃಷ್ಟಿಯೇ ಕಾವ್ಯ. ಇಲ್ಲಿಯ ಪ್ರತಿಯೊಂದು ಕಾವ್ಯಗಳನ್ನು ಸಹ ಪರಿಪೂರ್ಣವಾಗಿ ಅನುಭವಿಸಿಯೇ ರಚಿಸಲಾಗಿದೆ.

'ಅದು ರತಿರೂಪರಸಗಂಧಗಳಾಗಿರಬಹುದು, ಆತ್ಮಲೋಕನದ ಆಧ್ಯಾತ್ಮವಾಗಿರಬಹುದು, ದೈವ ಪರಚಿಂತನೆಗೊಳಗಾಗಿರಬಹುದು, ಭಕ್ತಿಯ ಪರಕಾಷ್ಠೆಯಾಗಿರಬಹುದು. ದುಃಖ, ಈರ್ಶೆ, ಭಯ, ಶೃಂಗಾರ, ಗಾಂಭೀರ್ಯ, ಧೈರ್ಯ ಹೀಗೆ ಸಾಲು ಸಾಲು ಯಾವುದೇ ರಸ ಪರಿಕಲ್ಪನೆಗಳಾಗಿರಬಹುದು. ಎಲ್ಲವೂ ಮೂರ್ತ ಕವಿಯೊಡಲ ಭಾವದಿಂದಲನು ಭವಿಸಿಯೇ ಸೃಜನಾತ್ಮಕವಾಗಿ ರಚಿಸಲ್ಪಟ್ಟುಗಳಾಗಿವೆ. ಇಲ್ಲಿಯ ಕಾವ್ಯಗಳಲ್ಲಿ ಕೆಳವೆಡೆ ಛಂದೋಬದ್ಧತೆಗನುಗುಣವಾಗಿ ಮತ್ತು ಕೆಲವೆಡೆ ಸರಳ, ಸುಂದರ, ನೇರ, ಸಾಮಾನ್ಯ ಆಶಯಗಳನ್ನೂ ಒಳಗೊಂಡಂತೆ ರಚಿಸಲಾಗಿದೆ. ಒಂದು ವಿಧವಾದ ನಾವಿನ್ಯತೆಯನ್ನು ಸೃಷ್ಟಿಸುವಲ್ಲಿ ಮತ್ತು ಹೊಸ ಪ್ರಯೋಗಗಳನ್ನು ಕಂಡುಕೊಳ್ಳುವಲ್ಲಿಯೂ ಕೂಡ ಪ್ರಯತ್ನಿಸಲಾಗಿದೆ. ಈ "ಸೊಬಗಿನ ಬೆನ್ನೇರಿದಾಗ" ಎಂಬ ಕವನ ಸಂಕಲನದ ಕೃತಿಯು ಒಟ್ಟಾರೆ ನೂರೊಂದು ಕವಿತೆಗಳ ಸುಂದರ "ಗುಚ್ಛ" ಎಂದರೆ ತಪ್ಪಾಗಲಾರದು. ಕೆಲವು ಪ್ರೇಮ ಕಾವ್ಯಗಳು ತನ್ನದೇ ಭಾವ ತುಡಿತಗಳನ್ನು ಒಳಗೊಂಡಂತೆ ಕೆಲವು ವ್ಯಕ್ತಿಚಿತ್ರಣಗಳ, ವಸ್ತುಚಿತ್ರಣಗಳ ನಾನಾ ಸಮಷ್ಠಿಗಳಿಂದ ಪಡಿಮೂಡಿವೆ ಹೊಸತನದ ಕಾವ್ಯ ಪ್ರವೇಶಕ್ಕಾಗಿ ಕೆಲವೆಡೆ ಹಾತೊರೆದದ್ದೂ ಉಂಟು. ವಾಸ್ತವತೆಯನ್ನು ಬಿಟ್ಟು ಕಾವ್ಯಗಳು ಎಲ್ಲೂ ಆಚೆ ಈಚೆ ಹೋಗಿಲ್ಲ. ಹಾಗೆಯೇ ಕೆಲವೆಡೆ ಕಲ್ಪನೆಗಳೇ ವಾಸ್ತವದ ಕೊಂಡಿಯಾಗಿಯೂ ಪರಿವರ್ತಿತಗೊಂಡಿದೆ. ಕೆಲ ಪ್ರೇಮ ಕಾವ್ಯಗಳಲ್ಲಂತೂ, ಗೆಳೆಯರಾದ ಜಿ. ಕುಮಾರಸ್ವಾಮಿ, ಮಹೇಂದ್ರ ಕೆ. ಎಸ್. ಇಸ್ತಿಕೋಟಿ, ಹೇಮಗಿರಿಯವರ ಜೊತೆ ಹರಟಿದ ಭಾವ ತುಡಿತಗಳೇ ಇಲ್ಲಿಯ ಕಾವ್ಯರೂಪಗಳಾಗಿವೆ ಎಂದರೆ ಅತಿಶಯೋಕ್ತಿಯೇನೂ ಇಲ್ಲವೆನಿಸುತ್ತದೆ. ನನ್ನ ಚೊಚ್ಚಲ ಕೃತಿಯಾದ ಭಾವಸಂಗಮದ ಜೊತೆಗಾರ ಹರ್ಷವರ್ಧನ ಜಿ. ಬಿ. ಯವರನ್ನು ಮರೆಯುವ ಹಾಗಿಲ್ಲ. ಇನ್ನುಳಿದಂತೆ ನನ್ನೆಲ್ಲ ಕಾವ್ಯಗಳು ಗರ್ಭಕಟ್ಟಿದ್ದು ಎಂದರೆ ಇಂದು ಅಂಗಳ, ಇದರ ಸಂಸ್ಥಾಪಕಾಧ್ಯಕ್ಷರಾದ ಶ್ರೀಯುತ ಹೆಚ್. ಎನ್. ಸಂತೋಷ್ ಕುಮಾರ್ ಸರ್ ರವರಗೆ ನಾನು ಸದಾ ಋಣಿಯಾಗಿದ್ದೇನೆ. ಸೊಬಗಿನ ಬೆನ್ನೇರಿದಾಗಿನ ಸರ್ವಸಹೃದಯರ ಎದೆಯಾಳದಲ್ಲಿಳಿದು ನುತಿಗೊಳ್ಳಲಿ ಎಂಬುದೇ ನನ್ನ ಮಹಾದಾಶಯವಾಗಿದೆ.”