ಅಡ್ಡೂರಿನ ಹಿರಿಯರ ಮನೆಯಲ್ಲಿ - ನಂತರ ಪಡ್ಪಿನ ನನ್ನ ಮನೆಯಲ್ಲಿ
ಅಡ್ಡೂರಿನಲ್ಲಿ ಕೃಷಿ ಅಭಿವೃದ್ದಿಗಾಗಿ ಪಂಪುಸೆಟ್, ಹಲ್ಲರ್ ಮುಂತಾದ ಕೃಷಿ ಪರಿಕರಗಳನ್ನು ಅಮ್ಮ ಹೊಂದಿಸಿಕೊಟ್ಟಿದ್ದಳು. “ಒಂದು ಕಳಸೆ ಗದ್ದೆಯಲ್ಲಿ ಮೂರು ಮುಡಿ ಭತ್ತ ಬೆಳೆಯುವವನು ಐದು ಮುಡಿ ಬೆಳೆದರೆ ಸುಖದಿಂದ ಇರಲು ಸಾಧ್ಯವಿಲ್ಲವೇ?” ಈ ವಿಚಾರ ನನ್ನನ್ನು ಮಾಹಿತಿ ಸಂಗ್ರಹಕ್ಕಾಗಿ ಪ್ರೇರೇಪಿಸಿತು. ವೈಜ್ಞಾನಿಕ ಕೃಷಿಯ ಸಂದೇಶಗಳನ್ನು ಕೃಷಿಕರಿಗೆ ತಲುಪಿಸಬೇಕು, ಜನರ ಸಂಶಯಗಳನ್ನು ಕೃಷಿ ವಿಜ್ಞಾನಿಗಳಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು, ಸುಮಾರು ಮೂರರಿಂದ ಐದು ಎಕ್ರೆಯ ಸಾಮಾನ್ಯ ಕೃಷಿಕನಾಗಿ ಒಂದು ಮಾದರಿ ಕೃಷಿ ಕ್ಷೇತ್ರವನ್ನು ನಿರ್ಮಿಸಬೇಕು – ಹೀಗೆ ಹಲವು ಆಲೋಚನೆ, ನಿರೀಕ್ಷೆಗಳು ನನ್ನ ಮನದಲ್ಲಿ ಸುತ್ತುತ್ತಿದ್ದುವು.
1955ರಲ್ಲಿ ಕೃಷ್ಣ ಜನಿಸಿದ. 1958ರಲ್ಲಿ ಸೂರ್ಯನಾರಾಯಣ ಹುಟ್ಟಿದ. ಪತ್ನಿ ಸುಶೀಲ ಮಂಗಳೂರಿನ ಬೊಕ್ಕಪಟ್ಣದ ಶಾಲೆಯಲ್ಲಿ ಸೇವೆಯಲ್ಲಿದ್ದಳು. ಇಬ್ಬರು ಮಕ್ಕಳು ಅವಳೊ೦ದಿಗೆ ಇದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಲೋಶಿಯಸ್ ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿದ ಕೃಷ್ಣ ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜನ್ನು ಬಿ.ಎಸ್ಸಿ.(ಕೃಷಿ) ಪದವಿ ಶಿಕ್ಷಣಕ್ಕಾಗಿ ಆಯ್ದುಕೊಂಡ. ಅನಂತರ ಸಣ್ಣ ಮಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ ಕಲಿತ.
ಮಡದಿ ಮಕ್ಕಳು ಒಂದೆಡೆ, ನಾನು ಇನ್ನೊಂದೆಡೆ – ಇದು ನನ್ನ ಕುಟುಂಬ ಜೀವನ. ಅವಳು ಶಾಲೆಯಲ್ಲಿ ಉತ್ತಮ ಶಿಕ್ಷಕಿಯಾಗಿ ಒಳ್ಳೆಯ ಹೆಸರು ಪಡೆದಳು. ಈಗಿನ ಕಾಂಗ್ರೆಸ್ ನಾಯಕ ಶ್ರೀ ಜನಾರ್ದನ ಪೂಜಾರಿ ಅವಳ ಶಿಷ್ಯ. ಅವಳ ಸೇವೆಯನ್ನು ಗುರುತಿಸಿದ ಕರ್ನಾಟಕ ರಾಜ್ಯ ಸರಕಾರವು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವಳ ವೃತ್ತಿ ಸಾಧನೆಗೊಂದು ಮನ್ನಣೆ ಬಂತು.
ಮೊದಲಿನಿಂದಲೂ ನಾವಿಬ್ಬರೂ ಒಂದೇ ಸೂರಿನಡಿ ಹೆಚ್ಚು ಕಾಲ ಜೀವಿಸಿದ್ದು ಕಡಿಮೆ. ಏಕಾಂಗಿ ಜೀವನವೇ ಅಧಿಕ. ಆಗಾಗ್ಗೆ ನಾನು ಮಂಗಳೂರಿನ ಬೋಳೂರಿನ ಬಿಡಾರಕ್ಕೆ ಹೋಗುತ್ತಿದ್ದೆ. ಕೃಷಿಕನಾದವನಿಗೆ ಹೆಂಡತಿ, ಮಕ್ಕಳು ಮನೆಯಲ್ಲಿದ್ದುಕೊಂಡು, ಕೃಷಿಗೆ ಸಹಾಯ ಮಾಡಿಕೊಂಡಿದ್ದರೇನೇ ಸಂತೃಪ್ತಿ, ಸಮಾಧಾನ, ಖುಷಿ. ಆ ಭಾಗ್ಯ ನನಗಿರಲಿಲ್ಲ. ಶಾಲೆಗೆ ಬೇಸಗೆ ರಜೆ ಇದ್ದಾಗ ಹೆಂಡತಿ, ಮಕ್ಕಳು ಅಡ್ಡೂರಿನ ಮನೆಗೆ ಬಂದು ಜೊತೆಗಿರುತ್ತಿದ್ದದ್ದು ಸಮಾಧಾನ.
1960ರಲ್ಲಿ ನಮ್ಮ ಕುಟುಂಬದ ಆಸ್ತಿ ನಾವು ಐವರು ಸೋದರರ ನಡುವೆ ಪಾಲಾಗಿ, ಅಡ್ಡೂರಿನ ಐದು ಎಕ್ರೆಯ ಮುಳಿಪಡ್ಪು ನನ್ನ ಪಾಲಿಗೆ ಬಂತು. ಹಾಗಾಗಿ ನನಗೆ “ಪಡ್ಪು ದೊಡ್ಡಪ್ಪ” ಎಂಬ ಹೆಸರೂ ಇದೆ (ಕುಟುಂಬದಲ್ಲಿ). ಇದರಲ್ಲಿ ತೋಟ ಮಾಡಿದರೆ ಹೇಗೆ? “ಅಲ್ಲಿಂದ ಎಲ್ಲ ಕದ್ದುಕೊಂಡು ಹೋದಾರು. ನಿನಗೇನೂ ಸಿಕ್ಕದು” ಎಂದು ಅಮ್ಮ ಹೇಳಿದಳು. ಮುಳಿಪಡ್ಪಿನ ಮಣ್ಣು ಫಲವತ್ತಾಗಿರಲಿಲ್ಲ. ಅಲ್ಲಿನದು ಮುರ (ಜಂಬಿಟ್ಟಿಗೆ) ಮಣ್ಣು. ಅಡಿಕೆ ಬೆಳೆಯಲ್ಲಿ ನನಗೆ ವಿಶ್ವಾಸವಿರಲಿಲ್ಲ. ಹೊಸ ಹೊಸ ಬೆಳೆಗಳ ಮತ್ತು ತಳಿಗಳ ಬಗ್ಗೆ ತುಂಬ ಆಸಕ್ತಿಯಿತ್ತು.
ಕಾಸರಗೋಡಿನ ಸಿಪಿಸಿಆರ್ಐಗೆ ಭೇಟಿ ನೀಡಿದೆ. ಆಗ ಸಣ್ಣಣ್ಣ ಡಾ.ಸುಬ್ಬರಾವ್ ಸಂಸದನಾಗಿದ್ದ. ಸರಕಾರದ ತೆಂಗು ಮಂಡಳಿಯಲ್ಲಿ ಸದಸ್ಯನೂ ಆಗಿದ್ದ. ಸಿಪಿಸಿಆರ್ಐ ಆಡಳಿತ ಮಂಡಳಿಯಲ್ಲಿ ಅವನಿಗೆ ಸ್ಥಾನವಿತ್ತು. ಆದ್ದರಿಂದ ನನಗೆ ಬೇಕಾದ ತೆಂಗಿನ ತಳಿಗಳನ್ನು ಆಯ್ಕೆ ಮಾಡಲು ಸುಲಭವಾಯಿತು. ಅಧಿಕಾರಿಗಳು ಸಹಕರಿಸಿದ್ದರು. “ಮಣ್ಣು ಪಕ್ವವಾಗಿಲ್ಲದ ಕಾರಣ ಮತ್ತು ಮುರಕಲ್ಲಿನ ಪ್ರದೇಶವಾದ್ದರಿಂದ ಬೇರೆ ಕಡೆ ಸಿಗುವ ಫಸಲು ಬರಲಿಕ್ಕಿಲ್ಲ “ಎಂದೂ ಹೇಳಿದ್ದರು.
ಗಂಗಬೊಂಡಂ, ಜಾವಾ, ಪಿಲಿಪೈನ್ಸ್, ಲಕ್ಷಾಡೀವ್, ಲಕ್ಷದ್ವೀಪ-ಮೈಕ್ರೋ, ಅಂಡಮಾನ್ ಜಾಯಂಟ್, ಕಪ್ಪಡಂ, ಕೈತತಾಳಿ, ಮಲೇಶಿಯಾ, ನ್ಯೂಗಿನಿಯಾ….. ಈ ತೆಂಗಿನ ತಳಿಗಳನ್ನು ಪಡ್ಪಿನಲ್ಲಿ ಬೆಳೆಸಿದೆ. ಇದರಲ್ಲಿ ಗಂಗಬೊಂಡಂ ತಳಿ ಬಹಳ ಚೆನ್ನಾಗಿ ಬಂತು. ಅದರ ಎಳನೀರು ಒಳ್ಳೆಯ ರುಚಿ. ಸಸಿಗಳಿಗೆ ತುಂಬಾ ಬೇಡಿಕೆ. ರೋಗ ಕಡಿಮೆ. ನಾಲ್ಕುನೂರಕ್ಕೂ ಹೆಚ್ಚು ಸಸಿಗಳನ್ನು ಮಾಡಿ ಆಸಕ್ತರಿಗೆ ನೀಡಿದ್ದೇನೆ. ಅಂತೂ ಮುಳಿಪಡ್ಪಿನಲ್ಲಿ ತೋಟ ಆಯಿತು! ಅಪಕ್ವ ಮಣ್ಣಿನಲ್ಲೂ ಮರವೊಂದರ 72 – 75 ತೆಂಗಿನ ಕಾಯಿಗಳು ಹಿಡಿದವು.
ಮನೆಗೆ ಬಂದವರಿಗೆ ಹಣ್ಣು ಕೊಡುವುದಕ್ಕಾಗಿ ಹಣ್ಣುಗಳ ಅಭಿವೃದ್ಡಿಗೆ ಮುಂದಾದೆ. ಮಾವಿನ ಗಿಡಗಳಿಗಾಗಿ ಹುಡುಕಾಟ. ಮಂಗಳೂರಿನ ಪಡೀಲ್ ನರ್ಸರಿಯಲ್ಲಿ ನಾಲ್ಕು ತಳಿ ಸಿಕ್ಕಿದವು. ಕಾಳಪ್ಪಾಡಿ, ಬೆನೆಟ್ ಆಲ್ಪಾನ್ಸೋ, ಆಲ್ಪಾನ್ಸೋ, ಬಾದಾಮಿ, ಪೈರಿ, ಬಂಗನಪಲ್ಲಿ, ಮಲ್ಲಿಕಾ, ಚೆರುಕುರಸಂ..
ಇವು ಉತ್ತಮ ಫಸಲಿನ ಮಾವಿನ ತಳಿಗಳು. ಇದರಲ್ಲಿ ಬಂಗನಪಲ್ಲಿ ಬಹುಬೇಗ ಹಣ್ಣುಕೊಟ್ಟಿತು. ತೆಂಗಿನ ಮಧ್ಯದಲ್ಲಿ ಎಡೆಸಸಿಯಾಗಿ ಗೇರು, ಚಿಕ್ಕು, ದೀವಿಹಲಸು, ಪುನರ್ಪುಳಿ, ಬಾಳೆ, ಬಾರ್ಬಡೋಸ್ ಚೆರ್ರಿ, ಮಲೇಶಿಯನ್ ಸ್ಟಾರ್ ಆಪಲ್, ಜಾಯಿಕಾಯಿ, ಲವಂಗ, ಜಾಂಬುಳು, ಸಕ್ಕರೆಕಂಚಿ, ತೋಟದ ಒಂದು ಮೂಲೆಯಲ್ಲಿ ಬಿದಿರು, ಲೆಂಕಿರಿ ಬೆಳೆಸಿದೆ. ಇವುಗಳಿಗೆಲ್ಲಾ ನಾನು ಯಥೇಷ್ಟ ಗೊಬ್ಬರವೇನೂ ನೀಡಲಿಲ್ಲ. ಅವುಗಳಷ್ಟಕ್ಕೇ ಬೆಳೆದು ಫಲನೀಡಿದವು. ಗೊಬ್ಬರ ಕ್ರಮಗಳನ್ನು ಅನುಸರಿಸಿ ಸಾರಾಸಗಟಾಗಿ ಕೊಡುತ್ತಿದ್ದರೆ ಹೆಚ್ಚಿನ ಫಲ ನಿರೀಕ್ಷಿಸಬಹುದಿತ್ತೇನೋ?
1971ರಲ್ಲಿ ಅತಿ ಕಿರಿಯ ತಮ್ಮ ಡಾ: ರಾಂಮೋಹನ ಅಡ್ಡೂರಿನ ಹಿರಿಯರ ಮನೆಗೆ ಬಂದು ನೆಲೆಸಿದ. ಅನಂತರ ಅಲ್ಲಿಂದ ಎರಡು ಕಿ.ಮೀ. ದೂರದಲ್ಲಿರುವ ನನ್ನ ಪಾಲಿನ ಮುಳಿಪಡ್ಪಿನಲ್ಲಿ ನಾನು ಮನೆ ಕಟ್ಟಿದೆ. ಅಲ್ಲಿನ ತೋಟಕ್ಕೆ “ಕೃಷ್ಣಾ ಫಾರ್ಮ್” ಎಂಬ ಹೆಸರಿಟ್ಟೆ. ಆ ಮನೆಗೆ ಮಣ್ಣಿನ ಗೋಡೆ, ಮುಳಿಮಾಡು. 1974ರಲ್ಲಿ ಫಲ್ಗುಣಿ ನದಿಯಲ್ಲಿ ದೊಡ್ಡನೆರೆ ಬಂದು ಆ ಮನೆ ನೆಲಸಮವಾಯಿತು. ನೆರೆ ನೀರು ತೋಟದಲ್ಲಿ ನನ್ನ ಸೊಂಟದೆತ್ತರಕ್ಕೆ ಏರಿತ್ತು. ನೆರೆಯಲ್ಲಿ ನನ್ನ ಅಪೂರ್ವ ಸಂಗ್ರಹದ ಕೆಲವು ಪುಸ್ತಕಗಳು ಹಾಳಾಗಿ ಹೋದವು. ಅನಂತರ ಅಲ್ಲಿಯೇ ಕಲ್ಲಿನ ಗೋಡೆಯ, ಹಂಚಿನ ಛಾವಣಿಯ ಮನೆ ಕಟ್ಟಿದೆ. ಈ ಮನೆಗೆ ನನ್ನ ಸೊಂಟದೆತ್ತರದ ಅಡಿಪಾಯ ಹಾಕಿದ್ದೆ.
ಫೋಟೋ: ಅಡ್ಡೂರಿನ “ಕೃಷ್ಣಾ ಫಾರ್ಮ್”ನ ಮನೆಯೆದುರು ಶಿವಶಂಕರರಾಯರು
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!