ಚಳುವಳಿ, ಭೂಗತ ಬದುಕು, ಅನಿಶ್ಚಿತ ಆಹಾರ ಸೇವನೆಗಳಿಂದಾಗಿ ಮೂತ್ರಪಿಂಡದ ಸಮಸ್ಯೆ ತಲೆದೋರಿತು. ವೈದ್ಯರು ಪರೀಕ್ಷಿಸಿ “ಕ್ಯಾನ್ಸರ್” ಎಂದು ತೀರ್ಪು ನೀಡಿದರು. ನಾನು ದಂಗಾದೆ. ಅಣ್ಣ – ತಮ್ಮಂದಿರು ಕಂಗಾಲಾದರು. ಮದ್ರಾಸಿನ ಡಾ: ರಾಘವಾಚಾರಿ ಎಂಬವರಲ್ಲಿ ಮುಂದಿನ ಚಿಕಿತ್ಸೆಗಾಗಿ ದಾಖಲಾದೆ. ರಕ್ತ ಹೆಪ್ಪುಗಟ್ಟಿರುವುದೇ ವೈದ್ಯರಿಗೆ ಕ್ಯಾನ್ಸರಾಗಿ ಕಂಡದ್ದು ಆಶ್ಚರ್ಯ!
1952ರಲ್ಲಿ ಮಹಾ ಚುನಾವಣೆ ಬಂತು. ರಾತ್ರಿ ಹಗಲೆನ್ನದೆ ದುಡಿದೆ. ಅದರ ಬಗ್ಗೆ ಪೂರ್ತಿ ಸಮಾಧಾನವಿದೆ. ಹಳ್ಳಿ ಹಳ್ಳಿಗೆ ಹೋಗಿ ಚುನಾವಣಾ ಪ್ರಚಾರ ಮಾಡಿದ್ದರಿಂದಾಗಿ ಸಂಪರ್ಕದ ವ್ಯಾಪ್ತಿ ಹೆಚ್ಚಾಯಿತು. ಆದರೆ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಕ್ಷ ಸೋತಿತು.
ಮು೦ದೆ ಪುಸ್ತಕದ ಅಂಗಡಿ ತೆರೆದೆ. ಲಾಭವಾಗಲಿಲ್ಲ. ಪುಸ್ತಕವನ್ನು ಸಗಟಾಗಿ ಖರೀದಿಸುವ ಸವಾಲು ಮುಂದಿತ್ತು. ಆರ್ಥಿಕ ಅಡಚಣೆ ಮತ್ತು ಪುಸ್ತಕವನ್ನು ಕಾಪಿಡುವ ಸಮಸ್ಯೆಯಿತ್ತು. ನಾನು ಹೇಳುವ ಪುಸ್ತಕ ಜನರಿಗೆ ಬೇಡ. ಜನರಿಗೆ ಬೇಕಾದುದನ್ನು ಒದಗಿಸಲು ನನಗೆ ಕಷ್ಟವಾಯಿತು. ಹಾಗಾಗಿ ಪುಸ್ತಕದಂಗಡಿಗೆ ಬಾಗಿಲು ಬಿತ್ತು!
ಮುದ್ರಣಾಲಯದಲ್ಲಿ ಮುಂದಿನ ಜೀವನ. ಅಲ್ಲಿ ಕೆಲಸಕ್ಕೆ ‘ಇಂತಿಷ್ಟೇ ಅವಧಿ’ ಎಂದಿಲ್ಲ. ಕೆಲಸ ಮುಗಿಯುವಾಗ ರಾತ್ರಿ ಗಂಟೆ ಹತ್ತಾದರಾಯಿತು ಅಥವಾ ಮುಂಜಾವು ಗಂಟೆ ಎರಡಾದರೂ ಆಯಿತು. ಕೆಲಸ ಮಾಡಲೇ ಬೇಕು. ನನಗೂ ಅದರಲ್ಲಿ ಖುಷಿಯಿತ್ತು. ಒಮ್ಮೆ ರಾತ್ರಿ ಗಂಟೆ ಎರಡು ಕಳೆದಿರಬಹುದು. ಮುದ್ರಣಾಲಯದ ಕೆಲಸ ಮುಗಿಸಿ ನಡೆದುಕೊಂಡೇ ಮನೆಕಡೆಗೆ ಹೊರಟಿದ್ದೆ. ಮೂರು ದೈತ್ಯನಾಯಿಗಳು ನನ್ನನ್ನು ಅಡ್ಡಗಟ್ಟಿ ಕಚ್ಚಲು ಬಂದುವು. ಎಷ್ಟು ತಪ್ಪಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಯಾರಿಗೂ ಹೆದರದ, ಯಾವುದಕ್ಕೂ ಹೆದರದ ನಾನು ಅಂದು ನಾಯಿಗೆ ಹೆದರಿದ್ದೆ! ಹೇಗೋ ಪಾರಾಗಿ ಮನೆಗೆ ಬಂದೆ. ಆದರೆ ನಾಯಿಯ ಭಯ ಗರ್ಭದಲ್ಲಿ ಕುಳಿತಿತ್ತು! ಮುದ್ರಣಾಲಯಕ್ಕೆ ವಿದಾಯ ಹೇಳಿದೆ.
ಆಗಲೇ ನನ್ನಲ್ಲಿ ಸಾಕಷ್ಟು ಪುಸ್ತಕಗಳಿದ್ದವು. ವಾಚನಾಲಯ ಶುರುಮಾಡಿದೆ. ಅಲ್ಲಿ ವಾರ್ತಾಪತ್ರಿಕೆ, ಸಾಪ್ತಾಹಿಕಗಳು ಮತ್ತು ಸಾಮಾನ್ಯಜ್ಞಾನ, ವಿಜ್ಞಾನ ಮೊದಲಾದ ಪುಸ್ತಕಗಳನ್ನು ಓದಲು ಒದಗಿಸಿದರೂ ಚೆನ್ನಾಗಿ ನಡೆಯಲಿಲ್ಲ. ಪುಸ್ತಕ ಓದಲು ಆಸಕ್ತಿ ಇಲ್ಲದವರೇ (ಸಮಯ ಕಳೆಯಲು) ಅಲ್ಲಿಗೆ ಬರುವವರಾದ್ದರಿಂದ ವಾಚನಾಲಯದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು.
ಅಷ್ಟರಲ್ಲಿ “ಊರಿಗೆ ಬರಬೇಕೆಂದು” ಅಮ್ಮನ ಕರೆ. ಮಂಗಳೂರಿನಲ್ಲಿ ಕಮ್ಯೂನಿಸ್ಟ್ ಆಂದೋಲನಕ್ಕಾಗಿ ಇಷ್ಟೆಲ್ಲಾ ತೊಡಗಿಸಿಕೊಂಡವನು ಊರಿಗೆ ಹೋದರೆ ಮುಂದಿನ ದಾರಿಯೇನು? ಎಂಬ ಪ್ರಶ್ನೆ. ಆದರೆ ಯಾಕೋ ಏನೋ ಚಳುವಳಿಯನ್ನು ಮುನ್ನಡೆಸಲು ನನ್ನಿಂದ ಅಸಾಧ್ಯವೆಂಬ ಭಾವನೆ ಮನದೊಳಗೆ ತಳವೂರಿತ್ತು. ಕೊನೆಗೆ ಮನೆಯನ್ನಾದರೂ ಉಳಿಸೋಣ, ಕುಟುಂಬದವರೊಂದಿಗೆ ಬೆರೆಯೋಣ ಎಂಬ ಆಶೆಯು ಮಂಗಳೂರು ತಾಲೂಕಿನಲ್ಲಿ ನಮ್ಮ ಕುಟುಂಬದ ಮನೆಯಿದ್ದ ಅಡ್ಡೂರಿಗೆ ನನ್ನನ್ನು ಸೆಳೆದಿತ್ತು.
ನಾನು ರಾಜಕೀಯ ಜೀವನವನ್ನು ‘ಜನಸೇವೆ’ ಎಂದೇ ತಿಳಿದವನು. ಆ ನಂಬಿಕೆಯಿಂದ ತೀವ್ರವಾಗಿ ಬದುಕಿದ್ದ ದಿನಗಳಿಗೆ ವಿದಾಯ ಹೇಳಲು ನಿರ್ಧರಿಸಿದೆ. ಇನ್ನು ನನ್ನೂರಿನಲ್ಲಿದ್ದು ಸಮಾಜ ಸೇವೆ ಮಾಡೋಣ, ಕೃಷಿ-ವಿಚಾರಗಳನ್ನು ಜನರಿಗೆ ಹಂಚೋಣ ಎಂಬ ಆಶಯದಿಂದ ಅಡ್ಡೂರಿನಲ್ಲಿ ಬದುಕಿನ ಹೊಸ ಅಧ್ಯಾಯ ಆರಂಭಿಸಿದೆ.
ಫೋಟೋ: ಮಂಗಳೂರಿನ ಬಾವುಟಗುಡ್ಡೆಯ ದೀಪಸ್ತಂಭ
ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!