ನಮ್ಮ ಆಂದೋಲನಗಳಲ್ಲಿ ಗೇಯಪದಗಳು ಜನಸಾಮಾನ್ಯರಿಗೆ ಸ್ಪೂರ್ತಿ ನೀಡುತ್ತಿದ್ದವು. ಅವು ಕೇಳುಗರಿಗೆ ಮೋಡಿ ಮಾಡಿ ಅವರನ್ನು ಕ್ರಿಯಾಶೀಲರನ್ನಾಗಿಸುತ್ತಿದ್ದವು. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಪಡೆದ ಬಳಿಕ ಸಾರ್ವಜನಿಕ ಸಭೆಗಳಲ್ಲಿ ಸಭೆ ಆರಂಭವಾಗುವ ಮೊದಲು ಜನರ ಗಮನ ಸೆಳೆಯಲಿಕ್ಕಾಗಿ ಗೇಯಪದಗಳನ್ನು ಹಾಡುತ್ತಿದ್ದೆವು. ಕಮ್ಯೂನಿಸ್ಟ್ ಪಕ್ಷದ ಅನೇಕ ಸಭೆಗಳಲ್ಲಿ ಗೇಯಪದಗಳನ್ನು ಹಾಡುವ ಹೊಣೆಗಾರಿಕೆಯನ್ನು ನಾನೇ ನಿರ್ವಹಿಸುತ್ತಿದ್ದೆ. ಆಗ ಈಗಿನಂತೆ ಧ್ವನಿವರ್ಧಕಗಳು ಇರಲಿಲ್ಲ. ಹಾಗಾಗಿ ಧ್ವನಿಯೇರಿಸಿ ಹಾಡಬೇಕಾಗುತ್ತಿತ್ತು.

ಕಾರ್ಮಿಕ ಸಂಘಟಣೆಯ ಪ್ರಾರಂಭದ ದಿನಗಳಲ್ಲಿ ನಾವು ಹಾಡುತ್ತಿದ್ದ ಗೇಯಪದಗಳನ್ನು ನೆನಪು ಮಾಡಿಕೊಂಡಾಗ ಇಂದಿಗೂ ರೋಮಾಂಚನವಾಗುತ್ತದೆ.

ಬನ್ನಿ ಬನ್ನಿ ಬನ್ನಿರೆಲ್ಲ ಸಂಘವನ್ನು ಸೇರುವ/

ನಮ್ಮ ನಮ್ಮ ಹಕ್ಕಿಗಾಗಿ ಒಂದುಗೂಡಿ ಸಾಗುವಾ//

ಕಾಸರಗೋಡಿನ ಕಯ್ಯೂರು ಗ್ರಾಮದ ಹುತಾತ್ಮರನ್ನು ಗಲ್ಲಿಗೇರಿಸಿದ ಸಮಯದಲ್ಲಿ ರೋಷದಿಂದ ನಮ್ಮ ರಕ್ತ ಕುದಿಯುತ್ತಿತ್ತು. “ಕಯ್ಯೂರ ಧೀರ ಸೋದರರಂತಿಮ…” ಎಂಬ ಹಾಡಿನ ಮೂಲಕ ನಾವು ಸಭೆಗಳಲ್ಲಿ ಅವರಿಗೆ ನಮನ ಸಲ್ಲಿಸುತ್ತಿದ್ದೆವು. ಬಂಗಾಲದ ಭೀಕರ ಬರಗಾಲಕ್ಕೆ ಸಾವಿರಾರು ಜನರು ಬಲಿಯಾದರು. ಬಂಗಾಳದ ಜನತೆಗೆ ನೆರವು ನೀಡಲಿಕ್ಕಾಗಿ ಈ ಹಾಡಿನ ಮೂಲಕ ಜನರಿಗೆ ಕರೆ ನೀಡುತ್ತಿದ್ದೆವು: 

ಬಂಗಾರ ಬಂಗಾಲ ಬಂದಿದೆ ಬರಗಾಲ/

ತಂದಿದೆ ಬರಗಾಲ ಕಂಗಾಲ// 

ಮೈಸೂರಿನಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಹೋರಾಟ ನಡೆದಾಗ, ಅಲ್ಲಿನ ಹೋರಾಟಗಾರರ ಬೆಂಬಲಕ್ಕಾಗಿ ಮಂಗಳೂರಿನಿಂದ ಜಾಥಾ ಹೊರಟಾಗ, 

“ಮೈಸೂರು ಚಲೋ ಚಲೋ ಮೆರೆಯಲಿ ಘೋಷ” ಎಂಬ ಎಸ್.ಎನ್.ಹೊಳ್ಳರ ಗೇಯಪದದ ಘೋಷ ಮೊಳಗುತ್ತಿತ್ತು. ಬಂದರ (ಪೋರ್ಟ್) ಕೆಲಸಗಾರರು ಸಂಘಟಿತರಾಗಿ ಹೋರಾಟಕ್ಕೆ ಇಳಿದಾಗ, ಅವರ ಮುಷ್ಕರಕ್ಕೆ ಬೆಂಬಲವಾಗಿ ಜರುಗಿದ ಸಾರ್ವಜನಿಕ ಸಭೆಗಳಲ್ಲಿ ಕಾಂದಿಲ್ಕರ್ ವೆಂಕಟ್ರಾವ್ ಬರೆದ ಈ  ಗೇಯಗೀತೆಯ ರಾಗಬದ್ಧ ಸೊಲ್ಲು ಮೈನವಿರೇಳಿಸುತ್ತಿತ್ತು.

“ದಂ ದಂ ದಂ ದಂ ದಂ ದಂ ದಂ ದಂ ದಮ್ಮು ಕಟ್ಟಿತ್ತ ತಮ್ಮ ದಮ್ಮು ಕಟ್ಟಿತ್ತ…..”

ಕಮ್ಯೂನಿಸ್ಟ್ ಪಕ್ಷದಿಂದ ರೈತರ ಸಂಘಟನೆ ಆರಂಭವಾದಾಗ, ಹಳ್ಳಿಹಳ್ಳಿಗಳಲ್ಲಿ ರೈತ ಹೋರಾಟದ ಕಹಳೆ ಮೊಳಗಿಸಿದ ಎಸ್.ಎನ್.ಹೊಳ್ಳರ ಜನಪ್ರಿಯ ಗೇಯಪದ ಇಂದಿಗೂ ಪ್ರಸ್ತುತ.

ಹಂಡೆ ಹಂಡೆ ಮೈ ಬೆವರನು ಸುರಿಸಿ

ಖಂಡುಗ ಖಂಡುಗ ಧಾನ್ಯವ ಬೆಳೆಸಿ

ಹೊಲದ ಮಣ್ಣಿನೊಳು ಮೈಯಗೂಡಿಸುವ

ಒಲವಿ೦ ಜನತೆಯ ತಣಿಯುಣ ಬಡಿಸುವ

ಬೋರೇಗೌಡಗೆ ಎ೦ಟೌ೦ಸು ನಾರು ಬೇರು ಎಲೆ ಪುಡಿಗೆಣಸು

ಲಾವಣಿ ತೆತ್ತು ಲೇವಿಯನ್ನಿತ್ತು

ಕಾವು ಕೊಟ್ಟು ಇಟ್ಟಟ್ಟದಿ ಬಿತ್ತು

ಕಣಜವ ಕಿತ್ತಿನ್ನಿಲ್ಲೆ೦ದತ್ತು

ಒಣಗುವ ಬಾಯಿಗೆ ಇಲ್ಲವೆ ತುತ್ತು

ಬೋರೇಗೌಡಗೆ ಕ೦ಟ್ರೋಲು ಯಾರು ಕೇಳ್ವರು೦ಟೀ ಗೋಳು

ದುಡಿಯಲರಿತವನು ತಿನ್ನಲರಿಯನಾ

ಬಡವನೆ ರೈತನು ನಾಡಿನ ಹಿರಿಯ

ದುಡಿವನೆ ಒಡೆಯನೆನ್ನುತ ಸಾರಿ

ಒಡನೆಯೆ ರೈತನು ಸ೦ಘವ ಸೇರಿ

ಬೋರೇಗೌಡನೆ ಹೊಲದೊಡೆಯ 

ಬೇರಿನ್ನಾವನು ನೆಲದೊಡೆಯ

ಮೊದಲನೆಯ ಮಹಾ ಚುನಾವಣೆಯ ಸ೦ದರ್ಭದಲ್ಲಿ ಕಮ್ಯೂನಿಸ್ಟ್ ಪಕ್ಷದ ಪ್ರಚಾರದ ಗೇಯಪದವೊ೦ದು ಬಹಳ ಕಾಲ ಜನಸಾಮಾನ್ಯರ ನಾಲಿಗೆಯಲ್ಲಿ ಕುಣಿದಾಡುತ್ತಿತ್ತು.

ನಮ್ಮ ಬಾಗಿಲಿಗೆ ಬರುವವರು ಓಟುಗಳ ಕೇಳುವವರು ನೀವಲ್ಲವೇ

ನಿಮ್ಮ ಪಾಪಗಳ ಮುಚ್ಚಲಿಕೆ ಬಿಳಿ ಖಾದಿಯನು ತೊಟ್ಟು

ಬಾಗಿಲಿಗೆ ಬರುವವರು ನೀವಲ್ಲವೇ

ಕರ್ಪೂರ ವೆ೦ಕಟ್ರಾಯರು ರಚಿಸಿದ ಗೇಯಪದ ಇದು. ಅವರ ಅನೇಕ ಹಾಡುಗಳನ್ನು ನಾವು ನಮ್ಮ ಸಭೆಗಳಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿದ್ದೆವು.

1942ರ ಚಳವಳಿಯ ಸಂದರ್ಭದ ಪ್ರಭಾತ್ ಪೇರಿಯಲ್ಲಿ ನಮ್ಮಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸುತ್ತಿದ್ದ ಗೇಯಗೀತೆ:

ಭಾರತಾಂಬೆ ನಮ್ಮ ಮಾತೆ ಜೀವಕಿಂತ ಮೇಲು

ಜೀವಕ್ಕಿಂತ ಮೇಲು ನಮ್ಮ ಪ್ರಾಣಕಿಂತ ಮೇಲು

ದಿ: ರಾಮರಾಜ ಕಿಣಿಯವರ ಇ೦ಪಾದ ಸ್ವರದಲ್ಲಿ ಮೂಡಿಬರುತ್ತಿದ್ದ ಆ ಹಾಡು ನೆನೆದರೆ ಈಗಲೂ ರೋಮಾಂಚನ.

ಗೇಯ ಪದಗಳನ್ನು ಹಾಡಿ ಸಭೆ ಸಮಾರಂಭಗಳನ್ನು ಆರಂಭಿಸುವ ವಾಡಿಕೆ ಈಗ ಕಡಿಮೆಯಾಗಿದೆ. ಆಯಾ ಸನ್ನಿವೇಶಕ್ಕೆ ಹೊಂದುವ ಗೇಯಪದಗಳು ರಚನೆಯಾದರೆ ಸಭೆ ಸಮಾರಂಭಗಳಲ್ಲಿ ಅವುಗಳ ಬಳಕೆಯನ್ನು ಪುನರುಜ್ಜೀವನಗೊಳಿಸಬಹುದು. ಜನರನ್ನು ಹುರಿದುಂಬಿಸಲು, ಪ್ರತಿಭಟನೆಗೆ ಅಣಿಗೊಳಿಸಲು ಗೇಯಪದಗಳು ಸಮರ್ಥ ಸಾಧನಗಳು.

ಪ್ರಾತಿನಿಧಿಕ ಫೋಟೋ: ಭಾರತದಲ್ಲಿ ಸಮೂಹ ಗಾಯನ 

ಆಕರ ಪುಸ್ತಕ: ಅಡ್ಡೂರು ಶಿವಶಂಕರರಾಯರ ಎಂಬತ್ತರ ಕೊಯ್ಲಿನ ಕಾಳುಗಳು

ನಿರೂಪಣೆ: ಅಡ್ಡೂರು ಕೃಷ್ಣ ರಾವ್ 

ಸಂಪಾದನೆ: ನಾ. ಕಾರ೦ತ ಪೆರಾಜೆ